varthabharthi


ಇ-ಜಗತ್ತು

ಚಾಲಕರಹಿತ ಕಾರುಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಾರ್ತಾ ಭಾರತಿ : 1 Feb, 2018

ನಮ್ಮ ಪ್ರಯಾಣದ ರೀತಿಯನ್ನೇ ಬದಲಿಸುವ ಚಾಲಕರಹಿತ ಕಾರುಗಳು ಬರುತ್ತಿವೆ. ಅಮೆರಿಕದ ಸಿಲಿಕಾನ್ ವ್ಯಾಲಿಯ ಸ್ಟಾರ್ಟ್‌ಅಪ್ ನ್ಯುರೋ ತನ್ನ ಸ್ವಯಂಚಾಲಿತ ಡೆಲಿವರಿ ವಾಹನವನ್ನು ರಸ್ತೆಗಿಳಿಸಲು ಈಗಾಗಲೇ 92 ಮಿ.ಡಾ.ನಿಧಿಯನ್ನು ಒಟ್ಟುಗೂಡಿಸಿದೆ. ಸ್ಥಳೀಯ ವಾಣಿಜ್ಯೋದ್ಯಮಗಳ ಬಳಕೆಗಾಗಿ ಹಲವಾರು ಕಂಪನಿಗಳು ಚಾಲಕರಹಿತ ಕಾರುಗಳ ತಯಾರಿಕೆಗೆ ಶ್ರಮಿಸುತ್ತಿವೆ. ನ್ಯೂರೊದ 18 ತಿಂಗಳುಗಳ ಪರಿಶ್ರಮದ ಫಲವಾಗಿ ರೂಪುಗೊಂಡಿರುವ ಚಾಲಕರಹಿತ ವಾಹನ ಈ ವರ್ಷದ ಅಂತ್ಯದಲ್ಲಿ ರಸ್ತೆಗಿಳಿಯಲಿದೆ.

ಇಲ್ಲಿದೆ ಇಂತಹ ಕೆಲವು ಚಾಲಕರಹಿತ ಕಾರುಗಳ ಒಂದು ಕಿರುನೋಟ....

► ಮರ್ಸಿಡಿಸ್

ಮರ್ಸಿಡಿಸ್‌ನನ ಎರಡು ಆಸನಗಳ ಪುಟ್ಟ ಅಚ್ಚರಿ ಇಕ್ಯೂ ಫೋರ್ಟೊವೊ ಕಾರ್ ಶೇರಿಂಗ್‌ನಲ್ಲಿ ಹೊಸ ಮನ್ವಂತರವನ್ನು ತರಲಿದೆ. ಇದು ತನ್ನ ಪ್ರಯಾಣಿಕರನ್ನು ಸ್ವತಃ ಹುಡುಕಿಕೊಂಡು ಅವರು ಸೂಚಿಸಿದ ತಾಣಕ್ಕೆ ತೆರಳಿ ಅವರನ್ನು ಹತ್ತಿಸಿಕೊಳ್ಳುತ್ತದೆ.

► ಜಿಂಗ್‌ಡಾಂಗ್

ಚೀನಾದ ಇ-ಕಾಮರ್ಸ್ ಕಂಪನಿ ಜೆಡಿ ಡಾಟ್ ಕಾಮ್(ಜಿಂಗ್‌ಡಾಂಗ್) ತನ್ನ ಚಾಲಕರಹಿತ ಡೆಲಿವರಿ ವಾಹನಗಳನ್ನು ಇತ್ತೀಚಿಗೆ ತಿಯಾನ್‌ಜಿನ್‌ನಲ್ಲಿ ಯಶಸ್ವಿ ಪರೀಕ್ಷೆಗೊಳಪಡಿಸಿದೆ. ಒಮ್ಮೆ ಪೂರ್ಣವಾಗಿ ಚಾರ್ಜ್ ಆದರೆ 30 ಕಿ.ಮೀ.ದೂರವನ್ನು ಕ್ರಮಿಸಬಲ್ಲ ಈ ವಾಹನಗಳು 150 ಕೆ.ಜಿ.ತೂಕದ ಭಾರವನ್ನು ಸಾಗಿಸಬಲ್ಲವು.

► ಪ್ಯಾನಾಸೋನಿಕ್

ಪ್ಯಾನಾಸೋನಿಕ್ ಅಭಿವೃದ್ಧಿಗೊಳಿಸಿರುವ ಚಾಲಕರಹಿತ ಕಾರನ್ನು ಇತ್ತೀಚಿಗೆ ಲಾಸ್‌ವೆಗಾಸ್‌ನಲ್ಲಿ ನಡೆದ ಸಿಇಎಸ್ 2018ರಲ್ಲಿ ಪ್ರದರ್ಶಿಸಲಾಗಿತ್ತು. ನಾಲ್ಕು ಆಸನಗಳನ್ನು ಹೊಂದಿರುವ ಈ ಕಾರಿನ ಒಳಾಂಗಣ ಥೇಟ್ ಕಟ್ಟಿಗೆಯಂತೆ ಕಾಣಿಸುತ್ತದೆ ಮತ್ತು ವಿವಿಧ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

► ನಿಸ್ಸಾನ್

ನಿಸ್ಸಾನ್ ಐಎಂಎಕ್ಸ್ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು,ಂದು ಬಾರಿಗೆ 600 ಕಿ.ಮೀ.ಗೂ ಅಧಿಕ ಚಲಿಸಬಲ್ಲುದು. ಇದು ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶವನ್ನೂ ಕಲ್ಪಿಸಿದೆ.

► ಟೊಯೊಟಾ

ಟೊಯೊಟಾದ ‘ಇ-ಪ್ಯಾಲೆಟ್’ನ್ನು ಪ್ರಯಾಣಿಕರ ಸವಾರಿ ಮತ್ತು ಪಾರ್ಸೆಲ್ ಡೆಲಿವರಿ ಸೇವೆಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಇದು ಮುಕ್ತ ಒಳಾಂಗಣ ವಿನ್ಯಾಸವನ್ನು ಹೊಂದಿರುವುದರಿಂದ ಬಳಕೆದಾರನ ಅಗತ್ಯಗಳಿಗೆ ತಕ್ಕಂತೆ ಪರಿವರ್ತಿಸಬ ಹುದಾಗಿದೆ.

► ಲೋಕಲ್ ಮೋಟರ್ಸ್

ಲೋಕಲ್ ಮೋಟರ್ಸ್ ಅಭಿವೃದ್ಧಿಗೊಳಿಸಿರುವ ಸ್ವಯಂಚಾಲಿತ ಮಿನಿಬಸ್ ‘ಓಲಿ’ ಕೆಲವು ಸಮಯದಿಂದ ವಾಷಿಂಗ್ಟನ್‌ನ ರಸ್ತೆಗಳಲ್ಲಿ ಸಂಚರಿಸುತ್ತಿದೆ. ಐಬಿಎಮ್‌ನ ವಾಟ್ಸನ್ ತಂತ್ರಜ್ಞಾನವನ್ನು ಹೊಂದಿರುವ ಈ ಬಸ್ ಪ್ರಯಾಣಿಕರು ತಾವೆಲ್ಲಿಗೆ ತಲುಪಬೇಕು ಎನ್ನುವುದನ್ನು ಹೇಳಲು ಅವಕಾಶ ನೀಡುತ್ತದೆ ಮತ್ತು ಬಸ್ ಹೇಗೆ ಚಲಾಯಿಸಲ್ಪಡಬೇಕು ಎನ್ನುವುದನ್ನು ತಿಳಿದುಕೊಳ್ಳಲು ಅವರಿಗೆ ಪ್ರಶ್ನೆಗಳನ್ನೂ ಕೇಳುತ್ತದೆ.

►  ನೇವಿಯಾ

ನೇವಿಯಾ ನಿರ್ಮಿಸಿರುವ ಆಟೊನಾಮ್ ಕ್ಯಾಬ್‌ನ್ನು ಮಾರುಕಟ್ಟೆಯಲ್ಲಿನ ಪ್ರಥಮ ರೋಬೊ ಚಾಲಿತ ಟ್ಯಾಕ್ಸಿಯೆಂದೇ ಬಣ್ಣಿಸಲಾಗುತ್ತಿದೆ. ಈ ಟ್ಯಾಕ್ಸಿಯನ್ನು ಹತ್ತಿದ ಪ್ರಯಾಣಿಕರು ತಮ್ಮ ಕಚೇರಿ ಕೆಲಸವನ್ನು ಮಾಡಬಹುದು, ಹಾಡುಗಳನ್ನು ಕೇಳಬಹುದು, ಸಿನೆಮಾ ಅಥವಾ ಮ್ಯೂಝಿಯಂ ಟಿಕೆಟ್‌ಗಳನ್ನೂ ಖರೀದಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)