varthabharthi

ಬುಡಬುಡಿಕೆ

ಪಕೋಡಾದ ಮೇಲೆ ಶೇ. 28 ಜಿಎಸ್‌ಟಿ ತೆರಿಗೆ

ವಾರ್ತಾ ಭಾರತಿ : 4 Feb, 2018
-ಚೇಳಯ್ಯ chelayya@gmail.com

ಜೆಟ್ ಅಧಿವೇಶನದಲ್ಲಿ ಜೇಟ್ಲಿ ಭಾಷಣ ಓದುತ್ತಿರುವಾಗ ಇತರರು ಯಾರೂ ಮೇಜು ಕುಟ್ಟದೇ ಇರುವುದನ್ನು ನೋಡಿ ಇಡೀ ದಿನ ತಾವೇ ಮೇಜು ಕುಟ್ಟುವ ನೇತೃತ್ವ ವಹಿಸಿಕೊಂಡಿದ್ದ ನರೇಂದ್ರ ಮೋದಿಯವರು ಮರುದಿನ ಕೈಗೆ ಪತಂಜಲಿ ಎಣ್ಣೆ ಹಚ್ಚಿ ವಿಶ್ರಾಂತಿಯಲ್ಲಿರುವಾಗ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿ ವಕ್ಕರಿಸಿದ. ‘‘ಸಾರ್ ಏನು ಬಜೆಟ್ ಸಾರ್? ವಿಶ್ವ ದಿಗ್ಭ್ರಾಂತವಾಗಿ ಭಾರತದತ್ತ ನೋಡುತ್ತಿದೆ ಸಾರ್....’’ ಕಾಸಿ ಪುಂಗಿ ಊದ ತೊಡಗಿದಂತೆಯೇ ಮೋದಿ ಖುಷಿ ಖುಷಿಯಾದರು.

‘‘ಹೌದೇ? ನಿಜಕ್ಕೂ ವಿಶ್ವ ಭಾರತದ ಕಡೆಗೆ ನೋಡುತ್ತಿದಯೇ?’’

‘‘ಹೌದು ಸಾರ್....ಕೈಯಲ್ಲಿ ಹಣವೇ ಇಲ್ಲದೆ ಕೊನೆಗೂ ಗ್ರಾಮೀಣ ಬಜೆಟ್, ರೈತರ ಬಜೆಟ್ ಎಂದು ಮಂಡಿಸಿ ಜನರನ್ನು ನಂಬಿಸುವಲ್ಲಿ ಯಶಸ್ವಿಯಾದರಲ್ಲ...ಎಂದು ವಿಶ್ವ ಆರ್ಥಿಕ ತಜ್ಞರೆಲ್ಲ ನಿಮ್ಮ ಕಡೆ ನೋಡುತ್ತಿದ್ದಾರೆ ಸಾರ್. ಅಂದ ಹಾಗೆ ಈ ಬಜೆಟ್‌ನ ಆರ್ಥಿಕ ಲೆಕ್ಕಾಚಾರ ಅವರಿಗೆ ಯಾವ ಮೂಲೆಯಿಂದ ನೋಡಿದರೂ ಅರ್ಥವಾಗುತ್ತಿಲ್ಲ. ಅಂದ ಹಾಗೆ ತಾವು ಇದಕ್ಕೆ ಯಾವ ಅರ್ಥಶಾಸ್ತ್ರವನ್ನು ಬಳಸಿಕೊಂಡಿದ್ದೀರಿ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.

‘‘ನೋಡ್ರೀ...ಈವರೆಗೆ ಎಲ್ಲ ಸರಕಾರಗಳು ಪಾಶ್ಚಿಮಾತ್ಯರ ಅರ್ಥಶಾಸ್ತ್ರಗಳನ್ನು ಓದಿ ಬಜೆಟ್ ತಯಾರಿಸುತ್ತಿದ್ದರು. ನಾವು ಕೌಟಿಲ್ಯನ ಅರ್ಥಶಾಸ್ತ್ರವನ್ನು ಓದಿ ಅದರಂತೆ ಬಜೆಟ್‌ನ್ನು ಮಂಡಿಸಿದ್ದೇವೆ. ಕೌಟಿಲ್ಯ ಯಾರ್ಯಾರನ್ನು ಎಲ್ಲೆಲ್ಲಿ ಇಡಬೇಕು, ಯಾರ್ಯಾರನ್ನು ಕುಟಿಲತನದಿಂದ ಹೇಗೆ ವಂಚಿಸಬೇಕು ಎನ್ನುವುದನ್ನು ಅದ್ಭುತವಾಗಿ ಬರೆದಿದ್ದಾನೆ ಕಣ್ರೀ....ವಿಶ್ವದ ಮೊತ್ತ ಮೊದಲ ಅರ್ಥಶಾಸ್ತ್ರಜ್ಞನೇ ಕೌಟಿಲ್ಯ. ಅವರು ಹೇಳಿಕೊಟ್ಟಂತೆ ನಾವು ಬಜೆಟ್ ಮಂಡಿಸಿದ್ದೀವಿ...’’ ಮೋದಿ ಗುಟ್ಟು ಬಿಟ್ಟುಕೊಟ್ಟರು.

‘‘ಸಾರ್, ವಿಶ್ವದಲ್ಲೇ ದೊಡ್ಡ ಆರೋಗ್ಯ ವಿಮೆ ಘೋಷಿಸಿದ್ದೀರಂತೆ. ಆದರೆ ಅದಕ್ಕೆ ಇಟ್ಟಿರುವ ಹಣದಲ್ಲಿ ವರ್ಷಕ್ಕೆ ಕ್ರೋಸಿನ್ ಮಾತ್ರೆಯಷ್ಟೇ ಸಿಗತ್ತೆ ಎಂದು ಹೇಳುತ್ತಿದ್ದಾರಲ್ಲ....’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡ್ರೀ...ಈಗ ಎಲ್ಲಿ ನೋಡಿದರೂ ತಲೆನೋವುಗಳೇ ಹೆಚ್ಚಿವೆ. ರಾಜಸ್ಥಾನದಲ್ಲಿ ಮೊನ್ನೆ ನೋಡಿದರೆ ತಲೆನೋವು. ದಿಲ್ಲಿಯಲ್ಲಿ ಕೇಜ್ರಿವಾಲ್ ಎನ್ನುವ ತಲೆನೋವು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಎನ್ನುವ ತಲೆನೋವು. ನಮ್ಮ ಪಕ್ಷದಲ್ಲೇ ನೋಡಿ...ಯಶವಂತ ಸಿನ್ಹಾ, ಶತ್ರುಘ್ನ ಸಿನ್ಹಾ, ಅಡ್ವಾಣಿ ಹೀಗೆ ಹಿರಿಯ ತಲೆನೋವುಗಳೇ ತುಂಬಿವೆ. ದೇಶವನ್ನು ಕಾಡುತ್ತಿರುವ ಅತೀ ದೊಡ್ಡ ಅನಾರೋಗ್ಯ ತಲೆನೋವು. ಆದುದರಿಂದ ನಾವು ತಲೆನೋವಿಗೆ ವಿಮೆ ಮಾಡಿಸಬೇಕೆಂದಿದ್ದೇವೆ. ದೇಶದ ಎಲ್ಲ ಜನರಿಗೆ ಕ್ರೋಸಿನ್ ಮಾತ್ರ ಸಿಗುವ ಹಾಗೆ ಮಾಡಲಿದ್ದೇವೆ....’’ ನರೇಂದ್ರ ಮೋದಿಯವರು ತಮ್ಮ ಯೋಜನೆಯನ್ನು ವಿವರಿಸಿದರು.

‘‘ಸಾರ್ ಬಜೆಟ್‌ನಲ್ಲಿ ಏನೇನೆಲ್ಲ ಘೋಷಿಸಿದ್ದೀರಿ. ಆದರೆ ಎಲ್ಲ ಉದ್ದಿಮೆಗಳು ನಷ್ಟದಲ್ಲಿವೆ....ಯೋಜನೆ ಜಾರಿ ಮಾಡಲು ತೆರಿಗೆ ಹಣ ಯಾರಿಂದ ವಸೂಲಿ ಮಾಡುತ್ತೀರಿ?’’ ಕಾಸಿ ಆತಂಕದಿಂದ ಕೇಳಿದ.

‘‘ನೋಡ್ರಿ...ಇಂದು ದೇಶದಲ್ಲಿ ಉದ್ದಿಮೆ ಎಲ್ಲ ನಾಶ ಆಗಿದೆ ಎನ್ನುವುದು ಸುಳ್ಳು ಆರೋಪ. ನಾವು ಇಷ್ಟೆಲ್ಲ ಪ್ರಯತ್ನಿಸಿದ ಬಳಿಕವೂ ಇನ್ನೂ ನಾಶವಾಗದೆ ಹಲವು ಉದ್ದಿಮೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಇವತ್ತು ಬೀದಿಗಳಲ್ಲಿ ಪಕೋಡಾ ಮಾರುವವರು ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಗಾಡಿ ಅಂಗಡಿಯಿಟ್ಟು ಪಕೋಡಾ ಮಾರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ಸಣ್ಣ ಉದ್ದಿಮೆದಾರರು ಪಕೋಡಾ ಉದ್ಯಮದಲ್ಲಿರುವ ಲಾಭ ಕಂಡು ತಮ್ಮ ಕೈಗಾರಿಕೆಗಳನ್ನು ಮುಚ್ಚಿ ಪಕೋಡಾ ಮಾರುತ್ತಿದ್ದಾರೆ. ಇಡೀ ದೇಶ ಪಕೋಡಾ ಮಾರುವ ಮೂಲಕ ವಿಶ್ವದಲ್ಲೇ ಗುರುತಿಸಿಕೊಳ್ಳಲಿದೆ. ಪಕೋಡಾ ಮಾರಾಟದಿಂದ ದೇಶದ ಆರ್ಥಿಕ ಮಟ್ಟ ಏರಲಿದೆ....ದೇಶದ ಬಜೆಟ್ ಅನುಷ್ಠಾನಕ್ಕೆ ಬೇಕಾದ ಹಣವನ್ನು ನಾವು ಪಕೋಡಾ ಮಾರುವವರಿಂದ ವಸೂಲಿ ಮಾಡುತ್ತೇವೆ’’ ನರೇಂದ್ರ ಘೋಷಿಸಿದರು.

‘‘ಅಂದರೆ ಪಕೋಡಾ ಮಾರಿಯೂ ಜನ ಜೀವನ ಮಾಡಬಾರದು ಎನ್ನುವುದು ತಮ್ಮ ಉದ್ದೇಶವೆ?’’ ಕಾಸಿ ಕೇಳಿದ.

‘‘ನೀವ್ಯಾಕ್ರೀ ಅರವಿಂದ ಕೇಜ್ರಿವಾಲ್ ಥರ ಪ್ರಶ್ನೆ ಮಾಡ್ತೀರಿ? ಪಕೋಡಾ ಉದ್ಯಮದಿಂದ ಈ ದೇಶದ ಜನರು ಶ್ರೀಮಂತರಾಗಿದ್ದಾರೆ. ಅವರು ಪಕೋಡಾ ಮಾರಿದ ಹಣವನ್ನೆಲ್ಲ ಬಚ್ಚಿಟ್ಟಿದ್ದಾರೆ...ಪಕೋಡಾ ಮಾರಿದ ಹಣವನ್ನು ವಸೂಲು ಮಾಡುವುದಕ್ಕಾಗಿ ನಾವು ಶೀಘ್ರದಲ್ಲೇ ಐದು ರೂಪಾಯಿ, ಹತ್ತು ರೂಪಾಯಿ ನೋಟುಗಳನ್ನು ನಿಷೇಧ ಮಾಡಲಿದ್ದೇವೆ...ಆಗ ಇವರು ಬಚ್ಚಿಟ್ಟಿರುವ ಕಪ್ಪು ಹಣವೆಲ್ಲ ಹೊರಗೆ ಬರುತ್ತದೆ....’’ ಎನ್ನುತ್ತಾ ಮೋದಿ ತನ್ನ ಗಡ್ಡ ನೀವತೊಡಗಿದರು.

‘‘ಭಯಾನಕ ಐಡಿಯಾ ಸಾರ್. ಈ ಬಾರಿ ಖಂಡಿತ ಕಪ್ಪು ಹಣವೆಲ್ಲ ಹೊರಗೆ ಬರುತ್ತದೆ....ಸಾರ್. ಈ ದೇಶದ ಹಣವೆಲ್ಲ ಪಕೋಡಾ ಮಾರುವವರ ಕೈಯಲ್ಲೇ ಇದೆ ಎಂದು ಕಂಡು ಹಿಡಿಯಲು ನಿಮಗೆ ಸಹಾಯ ಮಾಡಿದ ಕೌಟಿಲ್ಯನ ಅರ್ಥಶಾಸ್ತ್ರವನ್ನು ವಿಶ್ವಗ್ರಂಥವಾಗಿ ಘೋಷಿಸಬೇಕು ಸಾರ್....’’ ಕಾಸಿ ಭೋಪರಾಕ್ ಜಪಿಸತೊಡಗಿದ.

‘‘ಅಷ್ಟೇ ಅಲ್ಲ, ಪಕೋಡಾಗಳ ಮೇಲೆ ಶೇ.28 ಜಿಎಸ್‌ಟಿ ತೆರಿಗೆಯನ್ನು ಹಾಕಲಾಗುತ್ತದೆ...ಹಾಗೆ ಸಂಗ್ರಹವಾದ ತೆರಿಗೆಯನ್ನು ದೇಶಾದ್ಯಂತ ಕ್ರೋಸಿನ್ ಮಾತ್ರೆಯ ವಿಮೆಗೆ ಬಳಸಲಾಗುತ್ತದೆ....’’ ಮೋದಿಯವರು ಹೇಳಿದರು. ‘‘ಸಾರ್...ಆದರೆ ಜಿಎಸ್‌ಟಿ ತೆರಿಗೆಯನ್ನು ಮುಕ್ತವಾಗಿ ಬೀದಿಯಲ್ಲಿ ಮಾರುವ ಪಕೋಡಾಗಳಿಗೆ ಹಾಕುವುದು ಹೇಗೆ ಸಾರ್? ಪ್ಯಾಕ್ ಮಾಡಿರುವ ವಸ್ತುಗಳಿಗೆ ಮಾತ್ರ ತಾನೆ ಜಿಎಸ್‌ಟಿ ತೆರಿಗೆ ಅನ್ವಯಿಸುವುದು...’’ ಕಾಸಿ ಗೊಂದಲಗೊಂಡ.

‘‘ನೋಡ್ರಿ...ಪಕೋಡಾ ಒಂದು ಲಾಭದಾಯಕ ಉದ್ಯಮ ಎನ್ನುವುದು ಪತಂಜಲಿ ಬಾಬಾ ಅವರಿಗೆ ಗೊತ್ತಾಗಿದೆ. ಆದುದರಿಂದ ನಾವು ತಕ್ಷಣ ಒಂದು ಕಾನೂನು ತರಲಿದ್ದೇವೆ...ಯಾವುದೇ ಪಕೋಡಾಗಳನ್ನು ತೆರೆದ ಅಂಗಡಿಗಳಲ್ಲಿ, ಗೂಡಂಗಡಿಗಳಲ್ಲಿ ಮಾರಬಾರದು. ಆರೋಗ್ಯ ವಿಮೆಗಾಗಿ ಸರಕಾರ ಭಾರೀ ಮೊತ್ತದ ಹಣ ಹೂಡುವುದರಿಂದ, ತೆರೆದ ಪಕೋಡಾ ಮಾರುವುದರಿಂದ ಆರೋಗ್ಯಕ್ಕೆ ಹಾನಿಯಾದರೆ ಸರಕಾರ ವಿಮಾ ಹಣವನ್ನು ತನ್ನ ಜೇಬಿನಿಂದ ಕೊಡಬೇಕಾಗುತ್ತದೆ. ಆದುದರಿಂದ ಬೀದಿಗಳಲ್ಲಿ ಪಕೋಡಾ ಮಾರುವುದನ್ನು ನಿಷೇಧಿಸುವ ಕಾನೂನನ್ನು ಜಾರಿ ಗೊಳಿಸಲಿದ್ದೇವೆ. ...’’

‘‘ಹಾಗಾದರೆ ಜಿಎಸ್‌ಟಿ....’’ ಕಾಸಿ ಪ್ರಶ್ನೆ ಎತ್ತುವುದರೊಂಳಗೆ ಮೋದಿ ನಸುನಗುತ್ತಾ ಉತ್ತರಿಸಿದರು ‘‘ಪತಂಜಲಿ ರಾಮದೇವ್ ಅವರು ಸ್ವದೇಶಿ ಪಕೋಡಾಗಳನ್ನು ಮಾರುಕಟ್ಟೆಗೆ ತರಲಿದ್ದಾರೆ. ಪಕೋಡಾ ಮಾರುವ ಎಲ್ಲ ಹಕ್ಕುಗಳನ್ನು ನಾವು ಪತಂಜಲಿ ಕಂಪೆನಿಗಳಿಗೆ ನೀಡಲಿದ್ದೇವೆ....’’

‘‘ಸಾರ್...ಹಾಗಾದರೆ ಪಕೋಡಾ ಮಾರುವವರು ಏನು ಮಾಡಬೇಕು ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.

‘‘ಪಕೋಡಾ ಮಾರುವವರಿಗೆ ವರ್ಷಕ್ಕೊಮ್ಮೆ ಪತಂಜಲಿ ಬಾಬಾ ಅವರು ಯೋಗವನ್ನು ಪುಕ್ಕಟೆಯಾಗಿ ಹೇಳಿಕೊಡಲಿದ್ದಾರೆ...ಇದರಿಂದ ಅವರ ಆರೋಗ್ಯ ವೃದ್ಧಿಸುತ್ತದೆ. ಮುಂದಿನ ಬಜೆಟ್‌ನಲ್ಲಿ ಬಾಬಾ ಅವರ ಯೋಗಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲಿದ್ದೇವೆ....’’

‘‘ಸಾರ್ ಪಕೋಡಾ ಮಾರುವವರಿಗೆ ಬೇರೆ ಉದ್ಯೋಗ....’’ ಕಾಸಿ ಆತಂಕದಿಂದ ಕೇಳಿದ.

 ‘‘ಏನ್ರೀ...ಇಷ್ಟೆಲ್ಲ ಮಾಡಿದ ಬಳಿಕವೂ ಮತ್ತೆ ಮತ್ತೆ ಉದ್ಯೋಗ ಉದ್ಯೋಗ ಎಂದು ಬೊಬ್ಬೆ ಹೊಡೀತೀರಲ್ಲ....ಈ ದೇಶದ ಸೈನಿಕರು ಗಡಿಯಲ್ಲಿ ತ್ಯಾಗ ಮಾಡುತ್ತಿರುವಾಗ ಪಕೋಡಾ ಮಾರುವವರು ದೇಶಕ್ಕಾಗಿ ಇಷ್ಟೂ ಮಾಡುವುದಕ್ಕಾಗುವುದಿಲವೇ?’’ ಎಂದು ಪ್ರತಿಯಾಗಿ ಕೇಳಿದರು.

ಇನ್ನೊಂದು ಪ್ರಶ್ನೆ ಕೇಳಿದರೆ ತನ್ನ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಾಗುತ್ತದೆ ಎನ್ನುವುದು ಮನವರಿಕೆಯಾಗಿ ಎಂಜಲು ಕಾಸಿ ಬಾಲ ಮಡಿಚಿಕೊಂಡು ಜಾಗ ಖಾಲಿ ಮಾಡಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)