varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 4 Feb, 2018

ರಾಜೇ ಗರ್ವಭಂಗ, ಶಾಗೆ ಅರ್ಧಖುಷಿ
ರಾಜಸ್ಥಾನ ಉಪಚುನಾವಣೆ ಫಲಿತಾಂಶದಿಂದ ಮುಖ್ಯಮಂತ್ರಿ ವಸುಂಧರಾರಾಜೇ ಅವರಿಗೆ ಮುಖಭಂಗವಾಗಿದೆ. ಏಕೆಂದರೆ ಇಬ್ಬರು ಲೋಕಸಭಾ ಅಭ್ಯರ್ಥಿಗಳು ಹಾಗೂ ಒಬ್ಬ ವಿಧಾನಸಭಾ ಅಭ್ಯರ್ಥಿಯನ್ನು ಸ್ವತಃ ಅವರೇ ಆಯ್ಕೆ ಮಾಡಿದ್ದರು ಹಾಗೂ ಪ್ರಚಾರ ಕಾರ್ಯದಲ್ಲಿ ಇಡೀ ಸಂಪುಟ ಅಜ್ಮೀರ್ ಮತ್ತು ಅಲ್ವಾರ್‌ನಲ್ಲಿ ತೊಡಗಿಸಿಕೊಂಡಿತ್ತು. ಆದರೆ ಎಲ್ಲವೂ ನಿಷ್ಪ್ರಯೋಜಕವಾಗಿದೆ. ಈ ಬೆಳವಣಿಗೆ, ರಾಜ್ಯದಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಕಳವಳಕ್ಕೆ ಕಾರಣವಾಗಿದೆಯೇ ಎಂದು ಯೋಚಿಸಿದರೆ ಅವರಿಗೆ ಚಿಂತೆ ಆಗಿರಲೂಬಹುದು; ಆಗದಿರಲೂಬಹುದು. ಸಿಂಧಿಯಾ ಸರ್ವಾಧಿಕಾರಿ ಧೋರಣೆಗೆ ಹೆಸರಾದವರು. ಪಕ್ಷದ ಹೈಕಮಾಂಡ್‌ಗೆ ಓಗೊಡುವುದಿಲ್ಲ ಎಂಬ ಆರೋಪವೂ ಇದೆ. ಈ ಫಲಿತಾಂಶ ರಾಜೇಗೆ ಪಾಠ ಕಲಿಸಲು ಶಾ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ ಎನ್ನುವುದು ಪಕ್ಷದ ಒಳಗಿನವರ ಅಭಿಪ್ರಾಯ. ಕಳೆದ ಕೆಲ ವರ್ಷಗಳಿಂದ ವರ್ತಿಸಿದಂತೆ ಸ್ವತಂತ್ರವಾಗಿ ತಮ್ಮ ಮನಸೋ ಇಚ್ಛೆ ನಿರ್ಧಾರಗಳನ್ನು ಕೈಗೊಳ್ಳಲು ಸಿಂಧಿಯಾಗೆ ಈ ದುರ್ಬಲ ಪರಿಸ್ಥಿತಿಯಲ್ಲಿ ಅವಕಾಶವಾಗಲಾರದು. ಈ ಸೋಲಿನ ಬಳಿಕ ಶಾ ಹಾಗೂ ಮೋದಿ ಮಾತನ್ನು ಕೇಳಲೇಬೇಕಾಗುತ್ತದೆ. ಅಮಿತ್ ಶಾ ಜಗತ್ತಿನಲ್ಲಿ ಎಲ್ಲ ಸೋಲುಗಳೂ ಕೆಟ್ಟದಲ್ಲ!


ಪೈಲಟ್ ಗಗನಮುಖಿ!
ರಾಜಸ್ಥಾನದ ಉಪಚುನಾವಣೆಯ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಬಂದಿರುವುದು ಸಚಿನ್ ಪೈಲಟ್‌ಗೆ. ಅವರು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಂತೆ ಅವರು ರಾಜಸ್ಥಾನ ಚುನಾವಣೆಯಲ್ಲಿ ಎಷ್ಟು ತೊಡಗಿಸಿಕೊಂಡಿದ್ದರು ಎಂದರೆ ಬಹುತೇಕ ದಿಲ್ಲಿಯ ಮಾರ್ಗವೇ ಅವರಿಗೆ ಮರೆತುಹೋಗಿದೆ. ಇದು ಅಕ್ಷರಶಃ ಸತ್ಯವೂ ಇರಬಹುದು. ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಶಿಕ್ಷೆ ಎನಿಸುವಷ್ಟು ಬ್ಯುಸಿ ವೇಳಾಪಟ್ಟಿಯನ್ನು ಸಚಿನ್ ಸಿದ್ಧಪಡಿಸಿದ್ದರು. ಚುನಾವಣೆ ನಡೆದ ಮೂರು ಕ್ಷೇತ್ರಗಳ ಪ್ರತೀ ಗ್ರಾಮಗಳಿಗೆ ಅವರು ಭೇಟಿ ನೀಡಿದ್ದರು. ಫಲಿತಾಂಶ ಬಂದಾಗ ಎಲ್ಲರೂ ರಾಜಸ್ಥಾನವನ್ನು ಅಚ್ಚರಿಯಿಂದ ನೋಡುವಂತಾಯಿತು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಎಲ್ಲ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಇಂದಿಗೂ ಅವರನ್ನು ರಾಜ್ಯ ಕಾಂಗ್ರೆಸ್‌ನ ಅತ್ಯುನ್ನತ ನಾಯಕ ಎಂದೇ ಪರಿಗಣಿಸಲಾಗುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ. ಪೈಲಟ್ ಅವರ ಏಳ್ಗೆ ಬಹುಶಃ ಅವರಿಗೆ ಅಷ್ಟೊಂದು ಸಂತಸ ತಂದಿರದು. ಇಬ್ಬರ ನಡುವಿನ ಪೈಪೋಟಿ ಬಹುಶಃ ರಾಹುಲ್‌ಗಾಂಧಿಗೆ ತಲೆನೋವಾಗಬಹುದು. ಆದರೆ ಇದು ಬಹುತೇಕ ಧನಾತ್ಮಕ. ಕ್ರೀಡಾಭಾಷೆಯಲ್ಲಿ ಹೇಳುವುದಾದರೆ ಇಬ್ಬರು ಪ್ರಬಲ ಆಟಗಾರರು ಒಂದೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಇದು ಇಡೀ ತಂಡದ ಪಾಲಿಗೆ ಖುಷಿಯ ತಲೆನೋವು. ಈ ಹಿತವಾದ ತಲೆನೋವು ಕಾಂಗ್ರೆಸ್ ಪಕ್ಷದ ಪಾಲಿಗೆ ಸದ್ಯಕ್ಕಂತೂ ಮುದ ನೀಡಬಹುದು.


ರಾಹುಲ್ ಕಾಲದಲ್ಲಿ ಪುನಶ್ಚೇತನ
ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಕೇಂದ್ರ ಕಚೇರಿ ಗತವೈಭವದ ಪುನಶ್ಚೇತನಕ್ಕೆ ಸಜ್ಜಾಗಿದೆ. ಹೊಸದಾಗಿ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, 1978ರಿಂದಲೂ ಪಕ್ಷದ ಕೇಂದ್ರ ಕಚೇರಿಯಾಗಿರುವ 24, ಅಕ್ಬರ್ ರಸ್ತೆಯಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೀಗೆ ವಾರಕ್ಕೆ ಎರಡು ದಿನವನ್ನು ಕಳೆಯಲು ನಿರ್ಧರಿಸಿದ್ದಾರೆ. ಎಐಸಿಸಿ ಮುಖ್ಯಸ್ಥರಾಗಿದ್ದ ಇಂದಿರಾಗಾಂಧಿ, ರಾಜೀವ್‌ಗಾಂಧಿ, ಸೀತಾರಾಂ ಕೇಸರಿಯವರಂಥ ನಾಯಕರು ನಿಯತವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ ಪಿ.ವಿ.ನರಸಿಂಹರಾವ್ ಮತ್ತು ಸೋನಿಯಾ ಅವಧಿಯಲ್ಲಿ ಈ ಸಂಪ್ರದಾಯ ಕೊನೆಗೊಂಡಿತ್ತು. ಈ ಕಚೇರಿಯ ವೈಭವಕ್ಕೆ ಮಬ್ಬು ಕವಿದಿತ್ತು. ಉಭಯ ನಾಯಕರು ತಮ್ಮ ಅನುಕೂಲಕ್ಕಾಗಿ ಪಕ್ಷದ ವ್ಯವಹಾರಗಳನ್ನು ತಮ್ಮ ನಿವಾಸದಿಂದಲೇ ನಿರ್ವಹಿಸುತ್ತಿದ್ದರು. ರಾವ್ ಅವರ ಇಡೀ ಅಧಿಕಾರಾವಧಿಯಲ್ಲಿ ಅವರು ಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು ಒಂದು ಬಾರಿ ಮಾತ್ರ. ಅದು ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸೋತಾಗ. ಸೋನಿಯಾ ಕೂಡಾ ಇದೇ ಚಾಳಿ ಮುಂದುವರಿಸಿದರು. ಸೋನಿಯಾ ತಮ್ಮ ಸುದೀರ್ಘ ಅಧ್ಯಕ್ಷಾವಧಿಯಲ್ಲಿ ತಿಂಗಳಲ್ಲಿ, ಬಹುಶಃ ವರ್ಷದಲ್ಲಿ ಕೆಲ ಗಂಟೆಗಳನ್ನು ಮಾತ್ರ 24, ಅಕ್ಬರ್‌ನಲ್ಲಿ ಕಳೆದಿದ್ದರು. ಆದರೆ ಪಕ್ಷದ ಮುಖಂಡರು ಹೇಳುವಂತೆ ನಿಶ್ಚಿತವಾಗಿ ರಾಹುಲ್ ಭಿನ್ನ. ಅಕ್ಬರ್ ರಸ್ತೆಯ 24ನೇ ಸಂಖ್ಯೆಯ ಕಟ್ಟಡಕ್ಕೆ ಕಳೆ ಬಂದಿರುವ ಬಗ್ಗೆ ಪಕ್ಷ ಎಲ್ಲರಿಗೆ ಖುಷಿ ಇದೆ; ಅಲ್ಲಿ ಕ್ಯಾಂಟೀನ್ ನಡೆಸುವವರನ್ನು ಹೊರತಾಗಿ. ರಾಹುಲ್ ಅವರ ಬಿಗಿಭದ್ರತೆ ಮತ್ತು ಪ್ರವೇಶ ನಿರ್ಬಂಧದಿಂದಾಗಿ ಗ್ರಾಹಕರ ಸಂಖ್ಯೆ ಕುಸಿದೀತು ಎಂಬ ಭೀತಿ ಅವರದ್ದು. ಅತ್ಯುತ್ತಮ ದೋಸೆ ಹಾಗೂ ವಡೆಗೆ ಈ ಜಾಗ ಹೆಸರುವಾಸಿ!


ಸೂಕ್ಷ್ಮ ದೃಷ್ಟಿಯ ಸುಶ್ಮಾ
ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಸಿಯಾನಾ ಸದಸ್ಯದೇಶಗಳ 10 ಮಂದಿ ಗಣ್ಯರನ್ನು ಕರೆತರುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಒಂದರ್ಥದಲ್ಲಿ ಕ್ಷಿಪ್ರಕ್ರಾಂತಿಯನ್ನೇ ಮಾಡಿದ್ದಾರೆ. ಈ ಮೆಗಾ ಸಮಾರಂಭದ ವೇಳೆ ಎಲ್ಲ ವಿದೇಶಿ ಗಣ್ಯರಿಗೆ ಚಹಾಕೂಟವನ್ನೂ ಆಯೋಜಿಸಿದ್ದರು. ಆಯಾ ಗಣ್ಯರ ಹೋಟೆಲ್ ಕೀ ಕಾರ್ಡ್‌ಗಳಲ್ಲಿ ಆಯಾ ದೇಶದ ರಾಷ್ಟ್ರಧ್ವಜ ಅಳವಡಿಸುವಂತೆ, ಅವರ ದಿಂಬಿನಲ್ಲಿ ಅವರ ಹೆಸರು ಮುದ್ರಿಸುವಂತೆ ಹೀಗೆ ಸಣ್ಣ ಪುಟ್ಟ ವಿಷಯಗಳ ಬಗೆಗೂ ಸುಶ್ಮ್ಮಾ ಸೂಕ್ಷ್ಮ ಗಮನ ಹರಿಸಿದ್ದರು. ಸಮಾರಂಭದ ದಿನ, ರಾಜಪಥ್‌ನಲ್ಲಿ ಮೈಕೊರೆಯುವ ಚಳಿ ಇರುತ್ತದೆ ಎನ್ನುವುದನ್ನು ಮನಗಂಡು, ಈ ಅಧ್ಯಕ್ಷೀಯ ವಿಭಾಗವನ್ನು ಬೆಚ್ಚಗಿಡುವ ವ್ಯವಸ್ಥೆ ಇದ್ದರೂ ಮುಖಂಡರನ್ನು ಬೆಚ್ಚಗಿರಿಸುವ ಸಲುವಾಗಿ ಶಾಲುಗಳನ್ನೂ ವ್ಯವಸ್ಥೆ ಮಾಡಿದ್ದರು. ಇದು ಸುಶ್ಮಾ ಅವರ ವಿಐಪಿ ಟ್ರೀಟ್‌ಮೆಂಟ್ ವೈಖರಿ.


ಆಂಧ್ರಕ್ಕಾದ ಅನ್ಯಾಯಕ್ಕೆ ಕಾಂಗ್ರೆಸ್ ಹೋರಾಟ
ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದ ಕೆವಿಪಿ ರಾಮಚಂದ್ರ ರಾವ್, ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ ಎಂದು ಆಪಾದಿಸಿ ರಾಜ್ಯಸಭೆಯಲ್ಲಿ ಅಧ್ಯಕ್ಷಪೀಠದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ಸದಸ್ಯರ ಸಲಹೆ ಪಡೆಯುತ್ತಿದ್ದರೆ, ಆಂಧ್ರಕ್ಕೆ ನ್ಯಾಯ ದೊರಕಿಸಲು ಹೋರಾಟ ನಡೆಸಬಲ್ಲ ಸಮರ್ಥ ಪಕ್ಷ ಎಂದು ಕಾಂಗ್ರೆಸ್ ಬಿಂಬಿಸಿಕೊಂಡಿತು. ರಾಜ್ಯಸಭೆ ಉಪಸಭಾಪತಿ ಸಂಸದರನ್ನು ನಿಂದಿಸುತ್ತಿದ್ದಾರೆ ಎನಿಸಿದರೂ, ರಾವ್ ‘ಆಂಧ್ರವನ್ನು ರಕ್ಷಿಸಿ’ ಎಂಬ ನಾಮಫಲಕ ಹಿಡಿದು ಅಧ್ಯಕ್ಷ ಕುರ್ಚಿಯ ಪಕ್ಕ ನಿಂತಿದ್ದರು. ಅಧ್ಯಕ್ಷಪೀಠದಲ್ಲಿದ್ದ ಪಿ.ಜೆ.ಕುರಿಯನ್, ಕೋಪದಿಂದ ರಾವ್ ಅವರಿಗೆ ನಾಚಿಕೆಯಾಗಬೇಕು; ಸದನದ ಅಧ್ಯಕ್ಷಪೀಠದ ಬಳಿ ನಿಲ್ಲುವ ಮೂಲಕ ಕೆಟ್ಟ ಹೆಸರು ತಂದಿದ್ದಾರೆ ಎಂದು ಗುಡುಗಿದರು. ಆದರೆ ರಾವ್ ಕದಲಲಿಲ್ಲ. ಕುರಿಯನ್ ಕಲಾಪ ಮುಂದೂಡಿದರು. ಸಂಸತ್ತಿನಿಂದ ಹೊರಬರುವಾಗ ರಾವ್ ಪ್ರಕಾಶಿಸುತ್ತಿದ್ದರು. ಆಂಧ್ರದಲ್ಲಿ ತಮ್ಮ ಪಕ್ಷ ಪ್ರಭಾವಿ ಅಲ್ಲದಿದ್ದರೂ, ರಾಜ್ಯಕ್ಕೆ ನ್ಯಾಯ ಒದಗಿಸಲು ಹೋರಾಟ ಮಾಡಲು ತಮ್ಮ ಪಕ್ಷ ಸಿದ್ಧವಿದೆ ಎಂದು ರಾಜ್ಯದ ಜನತೆಗೆ ಬಿಂಬಿಸಬಹುದು ಎನ್ನುವುದನ್ನು ಪಕ್ಷದ ಹೈಕಮಾಂಡ್‌ಗೆ ತೋರಿಸಿಕೊಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)