varthabharthi

ನೇಸರ ನೋಡು

‘ಮೊದಲು ಮಾನವನಾಗು’ ಎಂದ ಕಾವ್ಯಾನಂದ

ವಾರ್ತಾ ಭಾರತಿ : 4 Feb, 2018
ಜಿ.ಎನ್.ರಂಗನಾಥ ರಾವ್

‘ಮೊದಲು ಮಾನವನಾಗು’ ಕವಿತೆ ಕನ್ನಡಿಗರಿಗೆ ಹೃದ್ಗತವಾಗಿರುವುದು ಕವಿ ಕಾವ್ಯಾನಂದರಿಗೆ ಇವೆಲ್ಲಕ್ಕೂ ಮಿಗಿಲಾಗಿ ಸಂದಿರುವ ಪ್ರೀತಿ, ಗೌರವ. ‘ಮೊದಲು ಮಾನವನಾಗು’ ಎನ್ನುವುದು ಪುರಾಣಿಕರ ಜೀವನ ಮತ್ತು ಸಾಹಿತ್ಯಗಳ ಪಲ್ಲವಿ ಎನ್ನುವ ಹಾ. ಮಾ. ನಾಯಕರ ಮಾತು ಅತಿಶಯೋಕ್ತಿಯಲ್ಲ.ಮನುಷ್ಯ ಮನುಷ್ಯನಾಗುವುದಕ್ಕಿಂತ ದೊಡ್ಡವನಾಗಬೇಕಿಲ್ಲ ಎಂಬುದೇ ಸಿದ್ಧಯ್ಯ ಪುರಾಣಿಕರ ಸಾಹಿತ್ಯದ ಸಂದೇಶ. ಪ್ರಸಿದ್ಧ ಗಾಯಕ ಹುಕ್ಕೇರಿ ಬಾಳಪ್ಪನವರು ಯಾವುದೋ ಒಂದು ಸಮಾರಂಭದಲ್ಲಿ ‘ಮೊದಲು ಮಾನವನಾಗು’ ಹಾಡಿದಾಗ ಇಡೀ ಸಭೇ ಮಂತ್ರಮುಗ್ಧವಾಯಿತಂತೆ! ಅಂದೇನು, ಇಂದಿಗೂ ಅಂಥ ಶಕ್ತಿ ಈ ಗೀತೆಯಲ್ಲಿದೆ.ಆದರೆ ಮಂತ್ರಮುಗ್ಧರಾಗಿ ಮೈಮರೆಯದೆ ಅದನ್ನು ಅಕ್ಷರಶ: ಅನುಸರಿಸಬೇಕಾದದ್ದು ಇಂದಿನ ಜರೂರಾಗಿದೆ.

‘ಏನಾದರು ಆಗು ನೀ
ಮೊದಲು ಮಾನವನಾಗು’
ಇತ್ತೀಚಿನ ದಿವಸಗಳಲ್ಲಿ ನಾವೆಲ್ಲ ಅತ್ಯವಶ್ಯಕವಾಗಿ ಮನನ ಮಾಡಬೇಕಾಗಿರುವ,ಮಾನವತ್ವದ ದಿವ್ಯ ಸಂದೇಶ ಸಾರುವ ಈ ಎರಡು ಮಹತ್ವಪೂರ್ಣ ಸಾಲುಗಳು ರಾರಾಜಿಸುವ ಫಲಕಗಳನ್ನು ನಾವು ಸಭೆ ಸಮಾರಂಭಗಳ ದ್ವಾರಗಳಲ್ಲಿ, ಬೆಂಗಳೂರು ಮಹಾನಗರದ ಪ್ರಮುಖಸ್ಥಳಗಳ ಗೋಡೆಬರಹಗಳಲ್ಲಿ, ಅಷ್ಟೇಕೆ ನಾವು ನೀವು ಪ್ರತಿನಿತ್ಯ ಸಂಚರಿಸುವ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಕಾಣುತ್ತೇವೆ. ಈ ಸಾಲುಗಳು ನೂರಾರು ಸಾವಿರಾರು ಮಂದಿಯ ಗಮನಸೆಳೆಯುತ್ತವೆ.ಅವರಲ್ಲಿ ಹಲವರನ್ನಾದರೂ ಚಿಂತನಮಂಥನಕ್ಕೆ ಹಚ್ಚುತ್ತವೆ.ಆದರೆ ಅವರಲ್ಲಿ ಬಹುತೇಕ ಮಂದಿಗೆ ಈ ಸಾಲುಗಳ ಕರ್ತೃ ಯಾರೆಂಬುದು ತಿಳಿಯದು.
ಅವರು ‘ಕಾವ್ಯಾನಂದ’ ಸಿದ್ಧಯ್ಯ ಪುರಾಣಿಕರು.

ಕವಿಯಾಗಿ, ದಕ್ಷ ಆಡಳಿತಗಾರರಾಗಿ ಕರ್ನಾಟಕದ ಸಾರ್ವತ್ರಿಕ ಜೀವನದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಮೂಡಿಸಿರುವ ಸಿದ್ಧಯ್ಯ ಪುರಾಣಿಕರು ಹೈದರಾಬಾದ್ ಕರ್ನಾಟಕದ ಕನ್ನಡ ಕಾವ್ಯ ಪರಂಪರೆಯಲ್ಲಿ ಮುಖ್ಯರು. ಜನಿಸಿದ್ದು 1918ರ ಜೂನ್ 18ರಂದು, ರಾಯಚೂರು ಜಿಲ್ಲೆಯ(ಈಗಿನ ಕೊಪ್ಪಳ ಜಿಲ್ಲೆ) ಯಲಬುರ್ಗಿ ತಾಲೂಕಿನ ಕುಗ್ರಾಮ ದ್ಯಾಂಪುರದಲ್ಲಿ. ಶಾಲೆಗಳಲ್ಲಿ ಉರ್ದು ಶಿಕ್ಷಣ ಮಾಧ್ಯಮ. ಕನ್ನಡ ಅನಾಥ. ಇಂಥ ಸ್ಥಿತಿಯಲ್ಲಿ ತಂದೆ ಕಲ್ಲಿನಾಥ ಶಾಸ್ತ್ರೀ ಪುರಾಣಿಕರೇ ಮೊದಲ ಗುರು. ತಾಯಿ ಶ್ರೀಮತಿ ದಾನಮ್ಮ ಪುರಾಣಿಕರು.

ಕಲಿಯಲೇ ಬೇಕಾಗಿದ್ದ ಭಾಷೆಯಾದ್ದರಿಂದ ಪ್ರಾಥಮಿಕದಲ್ಲೇ ಉರ್ದು ಕಲಿತರು. ಕನ್ನಡ ತಾಯಿನುಡಿ. ಹುಟ್ಟಿದೂರಿನಲ್ಲಿ ಮಾಧ್ಯಮಿಕದವರೆಗೆ ಶಿಕ್ಷಣ ಮುಗಿಸಿ ಪ್ರೌಢ ಶಾಲಾ ಶಿಕ್ಷಣಕ್ಕಾಗಿ ಕಲಬುರ್ಗಿಗೆ (ಆಗಿನ ಗುಲಬರ್ಗಾ)ಬಂದರು. ಉನ್ನತ ಶಿಕ್ಷಣ ಹೈದರಾಬಾದಿನಲ್ಲಿ. ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಮೂರನೆಯ ರ್ಯಾಂಕ್ ಗಳಿಸಿ ಮೆಟ್ರಿಕ್ ಪಾಸಾದರು. ಇಂಗ್ಲಿಷ್, ಕನ್ನಡಗಳಲ್ಲಿ ಮೊದಲನೆಯ ಸ್ಥಾನ. ಬಿ.ಎ.ಪರಿಕ್ಷೆಯಲ್ಲೂ ಮೊದಲ ರ್ಯಾಂಕ್ ಗಳಿಸಿ ಸ್ನಾತಕರಾದರು. 1943ರಲ್ಲಿ ತಹಶೀಲ್ದಾರ್ ಆಗಿ ಸರಕಾರಿ ವೃತ್ತಿಜೀವನ ಆರಂಭಿಸಿದ ಸಿದ್ಧಯ್ಯ ಪುರಾಣಿಕರು ಮುಂದೆ ಐಎಎಸ್‌ಗೆ ಭಡ್ತಿ ಪಡೆದು ಕೊಡಗು ಮತ್ತು ಬೆಳಗಾವಿ ಜಿಲ್ಲಾಧಿಕಾರಿಯಾದರು. 1972ರಲ್ಲಿ ಕಾರ್ಮಿಕ ಇಲಾಖೆ ಕಮಿಷನರ್ ಆಗಿ ನಿವೃತ್ತಿ ಹೊಂದಿದರು. ಮೂರು ದಶಕಗಳ ಸರಕಾರಿ ಸೇವೆಯಲ್ಲಿ, ಹಳೆಯ ಹೈದರಾಬಾದ್ ಮತ್ತು ಹೊಸ ಮೈಸೂರು ರಾಜ್ಯಗಳೆರಡರಲ್ಲೂ ವಿವಿಧ ಇಲಾಖೆಗಳಲ್ಲಿ ಉನ್ನತಾಧಿಕಾರಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸಿ ದಕ್ಷ ಅಧಿಕಾರಿ ಎಂದು ಸಾರ್ವಜನಿಕ ಮರ್ಯಾದೆಗೆ ಪಾತ್ರರಾದರು. ಸರಕಾರಿ ಸೇವೆ ಮತ್ತು ಸಾಹಿತ್ಯ ಸೃಷ್ಟಿ ಎರಡರಲ್ಲೂ ಕಾಲದ ಬೇಡಿಕೆಗಳ ಜೊತೆಯಲ್ಲಿ ತಮ್ಮ ದಕ್ಷತೆ ಮತ್ತು ಪ್ರತಿಭೆಗಳನ್ನು ತೊಡಗಿಸಿದ್ದ ಪುರಾಣಿಕರದು ಸೃಜನಶೀಲ ಮನಸ್ಸು.

ಮೂವತ್ತರ ಪ್ರಾಯದಲ್ಲೇ ಸಿದ್ಧಯ್ಯ ಪುರಾಣಿಕರು 1947ರಲ್ಲಿ ಹರಪನಹಳ್ಳಿಯಲ್ಲಿ ನಡೆದ ಮುವತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯಗೋಷ್ಠಿಯೊಂದರ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಮಾಸ್ತಿಯವರು ಪುರಾಣಿಕರನ್ನು ಹೀಗೆ ಪರಿಚಯಿಸಿದ್ದರಂತೆ: ‘‘ಈ ಹುಡುಗನಲ್ಲಿ ಪ್ರತಿಭೆಯಿದೆಯೆಂದು ಇವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಗುರುತಿಸಿದ್ದೆ. ನನ್ನೆಣಿಕೆ ಹುಸಿಯಾಗಲಿಲ್ಲ. ಹುಡುಗ ನನ್ನ ನಿರೀಕ್ಷೆಯಂತೆಯೇ ಬೆಳೆದಿದ್ದಾನೆ. ಇವನು ಬರಿಯ ಲೇಖಕನಲ್ಲ, ಚಿಂತಕನೂ ಕೂಡ.’’ ಆಗ ತಾನೇ ಸರಕಾರದಲ್ಲಿ ಅಧಿಕಾರದ ಹುದ್ದೆ ವಹಿಸಿಕೊಂಡಿದ್ದ ಪುರಾಣಿಕರು ಮಾಸ್ತಿಯವರಿಗೆ ಹೀಗೆ ಹೇಳುತ್ತಾರೆ: ‘‘ಸರ್,ನಾನು ತಹಸೀಲ್ದಾರನಾಗಿ ಆಯ್ಕೆಯಾದಾಗ ‘ಇದು ಕನ್ನಡಕ್ಕೊಂದು ನಷ್ಟ’ ಎಂದು ತಾವು ಹೇಳಿದಿರಂತೆ. ನಾನು ಕನ್ನಡದ ಕೈ ಬಿಡುವುದಿಲ್ಲ. ತಮ್ಮ ಆಶೀರ್ವಾದವಿದ್ದರೆ, ಸರಕಾರಿ ಸೇವೆಯಲ್ಲಿದ್ದೇ ತಾವು ಕನ್ನಡವನ್ನು ಶ್ರೀಮಂತ ಗೊಳಿಸಿದಂತೆ ನಾನೂ ಕೈಲಾದಷ್ಟು ಕನ್ನಡದ ಸೇವೆಯನ್ನು ಮಾಡುತ್ತೇನೆ....’’ ಆಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಿ.ಕೆ.ವೆಂಕಟರಾಮಯ್ಯನವರು, ‘‘ನಿಶ್ಚಯವಾಗಿಯೂ ನೀನು ನಿನ್ನ ಮಾತನ್ನು ನಡೆಸುತ್ತೀಯೆ. ನಿನಗೆ ನಮ್ಮ ಆಶೀರ್ವಾದವಿದೆ’’ ಎಂದು ತರುಣ ಪುರಾಣಿಕರನ್ನು ಹರಸಿದ್ದರಂತೆ.

ಹಿರಿಯರ ಹರಕೆ ಸುಳ್ಳಾಗಲಿಲ್ಲ. ಪುರಾಣಿಕರು ಸರಕಾರಿ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಲೇ ಕನ್ನಡದ ಸೇವೆ ಮಾಡುತ್ತ ಕವಿಯಾಗಿ ಬೆಳೆದರು. ಸಾಹಿತ್ಯಾಸಕ್ತಿ ಸಿದ್ಧಯ್ಯ ಪುರಾಣಕರಿಗೆ ವಂಶವಾಹಿಯಾಗಿ ಬಂದದ್ದು. ಅವರ ತಾತ ಚೆನ್ನಕವಿಗಳು ಷಟ್ಪದಿಯಲ್ಲಿ ಅಗ್ರಗಣ್ಯರೆನಿಸಿಕೊಂಡ ಕವಿಗಳು. ತಂದೆ ಕಲ್ಲಿನಾಥ ಶಾಸ್ತ್ರಿಗಳೂ ಕವಿಗಳೇ. ಬೇಂದ್ರೆಯವರು ‘ಜಲಪಾತ’ ಮೊದಲ ಕವನ ಸಂಕಲನಕ್ಕೆ ಬರೆದಿರುವ ಮುನ್ನುಡಿಯಲ್ಲಿ ಹೇಳಿರುವಂತೆ, ಸಿದ್ಧಯ್ಯನವರ ಕೌಟುಂಬಿಕ ವಾತಾವರಣದಲ್ಲಿ ಮಹಾಕಾವ್ಯದ ಧ್ವನಿಗಳು ಅವರ ಬಾಲ್ಯದಿಂದಲೇ ದುಂದುಭಿಸುತ್ತಿದ್ದವು. ಇಂತಹ ವಾತಾವರಣದಲ್ಲಿ ಬೆಳೆದ ಹುಡುಗನೆದೆಯಲ್ಲಿ ಕಾವ್ಯ ಸಹಜವಾಗಿ ಹೊಮ್ಮಿತು. ಗುಲಬರ್ಗಾದಲ್ಲಿ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗಲೇ ಅಲ್ಲಿನ ಕನ್ನಡ ಸಂಘವೊಂದು ಏರ್ಪಡಿಸಿದ್ದ ಸ್ಪರ್ಧೆಗೆ ಕವಿತೆಯೊಂದನ್ನು ರಚಿಸಿ ಮೊದಲನೆಯ ಬಹುಮಾನ ಗಳಿಸಿದರು ಹೀಗೆ ಶುರುವಾದ ಕಾವ್ಯ ಕೃಷಿಗೆ ‘ಜಯಕರ್ನಾಟಕ’ ನಿಯತಕಾಲಿಕ ನೀರೆರದು ಪೋಷಿಸಿ ಬೆಳೆಸಿತು. ‘ಕಾವ್ಯದೇವಿ’ ಪುರಾಣಿಕರ ಪ್ರಾರಂಭಿಕ ರಚನೆಗಳಲ್ಲೊಂದು. ಅದರಲ್ಲಿ ಅವರ ಕವಿ ಹೃದಯದ ಈ ಇಂಗಿತವ ಗಮನಿಸಿ:
ನಿನ್ನಾತ್ಮವಾನಂದ; ನನ್ನಾತ್ಮ ಕಾವ್ಯ
ಇಂತು ಕಾವ್ಯಾನಂದ ನಾಮ ಸುಶ್ರಾವ್ಯ
ಹೀಗೆ ಸಿದ್ಧಯ್ಯ ಪುರಣಿಕರು ಕವಿ ‘ಕಾವ್ಯಾನಂದ’ರಾದರು.  

ಸಿದ್ಧಯ್ಯ ಪುರಾಣಿಕರ ಸೃಜನಶೀಲ ಪ್ರತಿಭೆ ಕಾವ್ಯ, ನಾಟಕ, ಕಥೆ, ಕಾದಂಬರಿ, ಶಿಶು ಸಾಹಿತ್ಯ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಂಡಿದೆ.ಮೂವತ್ತಕ್ಕೂ ಹೆಚ್ಚು ಗ್ರಂಥಗಳ ಕರ್ತೃವಾದ ಪುರಾಣಿಕರು ಕವಿ ‘ಕಾವ್ಯಾನಂದ’ರೆಂದೇ ಸುಪ್ರಸಿದ್ಧರು. ಅವರು ರಚಿಸಿದ ಮೊದಲ ಕೃತಿ ನಾಟಕ ‘ಆತ್ಮಾರ್ಪಣ’. ಬಸವಣ್ಣನವರ ಬದುಕನ್ನಾಧರಿಸಿದ ಮೂರಂಕಿನ ಈ ನಾಟಕ ಪ್ರಕಟಗೊಂಡಾಗ ಅವರಿಗೆ ಇಪ್ಪತ್ನಾಲ್ಕು ವರ್ಷ ವಯಸ್ಸು(1942). ‘ಜಲಪಾತ’ ಪ್ರಥಮ ಕವನ ಸಂಕಲನ(1953). ‘ಕರುಣಾ ಶ್ರಾವಣ’, ‘ಮಾನಸ ಸರೋವರ’, ‘ಮೊದಲು ಮಾನವನಾಗು’, ‘ಚರಗ’ ಹಾಗೂ ಅನುಭಾವದ ಮೊನಚಿನ ‘ಕಲ್ಲೋಲ ಮಾಲೆ’ ಮುಖ್ಯ ಕವನ ಸಂಕಲನಗಳು. ‘ತುಪ್ಪರೊಟ್ಟಿ ಗೇ ಗೇ ಗೇ’ ‘ಅಜ್ಜನ ಕೋಲಿದು ಎನ್ನಯ ಕುದುರೆ’ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಕನ್ನಡ ಮಕ್ಕಳನ್ನು ಆಕರ್ಷಿಸಿದ ಜನಪ್ರಿಯ ಶಿಶು ಪ್ರಾಸಗಳು. ‘ಗಿಲ್ ಗಿಲ್ ಗಿಲಗಚ್ಚಿ’/,‘ತಿರುಗೆಲೆ ತಿರುಗೆಲೆ ತಿರುಗುಯ್ಯಿಲೆ’, ‘ನ್ಯಾಯ ನಿರ್ಣಯ’, ‘ಮಕ್ಕಳ ಲೋಕ ಸಂಚಾರ’ ಮತ್ತು ‘ಬಣ್ಣಬಣ್ಣದ ಓಕುಳಿ’ ಶಿಶು ಸಾಹಿತ್ಯ ಕೃತಿಗಳು. ‘ತುಷಾರ ಹಾರ’ ಕಥಾ ಸಂಕಲನವಾದರೆ, ‘ತ್ರಿಭುವನ ಮಲ್ಲ’ ಕಾದಂಬರಿ. ‘ನನ್ನ ನಿನ್ನೆಗಳೊಡನೆ ಕಣ್ಣುಮುಚ್ಚಾಲೆ’ ಆತ್ಮವೃತ್ತ. ಶಿವಶರಣರ ಸ್ಫಟಿಕ ಜೀವನವನ್ನು ನಿರೂಪಿಸುವ ‘ಶರಣ ಚರಿತಾಮೃತ’(1964,77) ಹೆಬ್ಬೊತ್ತಿಗೆ ಪುರಾಣಿಕರ ಗದ್ಯ ಸಾಹಿತ್ಯದಲ್ಲಿ ಶಿಖರಪ್ರಾಯವಾದದ್ದು ಎಂದು ವಿಮರ್ಶಕರ ಅಂಬೋಣ. ಅನುಭಾವಿ ಕವಿ ಕಾವ್ಯಾನಂದರು ಆಧುನಿಕ ವಚನಕಾರರಾಗಿಯೂ ಕನ್ನಡ ವಿಮರ್ಶೆಯ ಗಮನ ಸೆಳೆದವರು. ‘ವಚನೋದ್ಯಾನ’(1977), ‘ವಚನ ನಂದನ’(1983) ಮತ್ತು ‘ವಚನಾರಾಮ’(1992) ಎಂಬ ಮೂರು ವಚನ ಸಂಕಲನಗಳನ್ನು ಪುರಾಣಿಕರು ಪ್ರಕಟಿಸಿದ್ದಾರೆ.

ಸಂವೇದನಾಶೀಲ ವಚನಕಾರನೊಬ್ಬನ ಆತ್ಮಗೀತಗಳಂತಿವೆ ಎಂಬುದು ಅವರ ವಚನಗಳಿಗೆ ಸಂದಿರುವ ಗೌರವ. ಆಧುನಿಕ ವಚನಕಾರರಲ್ಲಿ ಮಹತ್ವದ ಸ್ಥಾನವನ್ನು ಪುರಾಣಿಕರು ಪಡೆದುಕೊಂಡಿದ್ದಾರೆ ಎನ್ನುವ ಮಾತು ಉತ್ಪ್ರೇಕ್ಷೆಯದಲ್ಲ. ‘ಸ್ವತಂತ್ರಧೀರ ಸಿದ್ಧೇಶ್ವರ’ ಎನ್ನುವುದು ಪುರಾಣಿಕರ ವಚನಗಳ ಅಂಕಿತ. ಪುರಾಣಿಕರ ವಚನಗಳು ಆಧುನಿಕ ಬದುಕಿನ ಮುಖ್ಯ ಲಕ್ಷಣಗಳಾದ ಸ್ವಾತಂತ್ರ್ಯ ಪ್ರಿಯತೆಯನ್ನೂ ಧೀರಗುಣಗಳನ್ನೂ ಆರ್ಥಪೂರ್ಣವಾಗಿ, ಶಕ್ತಿಯುತವಾಗಿ ಪ್ರಕಟಿಸುವುದನ್ನು ನಾವು ಕಾಣುತ್ತೇವೆ.ಕವಿಯ ಕಾಲದೃಷ್ಟಿಯನ್ನು ಬಿಂಬಿಸುವ ವಚನವೊಂದರ ಕೆಳಗಿನ ಸಾಲುಗಳನ್ನು ಮೇಲಿನ ಮಾತಿಗೆ ನಿದರ್ಶನವಾಗಿ ಗಮನಿಸಬಹುದು:

ಗತಕಾಲವೆ, ನಿನ್ನನ್ನು ಪ್ರೀತಿಸಬಲ್ಲೆ ಪೂಜಿಸಲಾರೆ;
ವರ್ತಮಾನವೆ, ನಿನ್ನನ್ನು ಆದರಿಸಬಲ್ಲೆ ಅರ್ಚಿಸಲಾರೆ ನಾನು;
ಭವಿಷ್ಯತ್ತೆ ನಿನ್ನನ್ನು ಸ್ವಾಗತಿಸಬಲ್ಲೆ ಸಮಾರಾಧಿಸೆ ನಾನು;
ಕಾಲವೆ, ನಿನ್ನ ಕೆಳೆ ಬೇಕು, ಆಳಿಕೆ ಬೇಡ ನನಗೆ!
ನಿನ್ನ ಪ್ರವಾಹಕೊಂಡೊಯ್ದತ್ತ ತೇಲಲು
ಸತ್ತ ಮೀನಲ್ಲ ನಾನು,
ನಿನಗೆ ಬೇಕಾದತ್ತ ನೀನೆಳೆ, ನನಗೆ ಬೇಕಾದತ್ತ ನಾನೀಸುವೆ!

‘ವಚನೋದ್ಯಾನ’-ಕೋಲ್ಕತಾದ ಭಾರತೀಯ ಭಾಷಾ ಪರಿಷತ್ತು ಆರಂಭಿಸಿದ ಭಿಲ್ವಾರ ಪ್ರಶಸ್ತಿಯನ್ನು (1980) ಪ್ರಪ್ರಥಮವಾಗಿ ಕನ್ನಡಕ್ಕೆ ತಂದುಕೊಟ್ಟ ಕೃತಿ. ಅಧಿಕಾರ ಬಲ, ಪ್ರತಿಭಾಶಕ್ತಿ, ಪ್ರಭಾವಗಳನ್ನು ಹೇರಳವಾಗಿ ಹೊಂದಿದ್ದ ಸಿದ್ಧಯ್ಯ ಪುರಾಣಿಕರು ತಮ್ಮ ಜೀವಿತಾವಧಿಯಲ್ಲೇ ‘ವಿನಯವಂತ’, ‘ಸುಸಂಸ್ಕೃತ’, ‘ಪ್ರತಿಭಾಶೀಲ ಸತ್ಪರುಷ’(ಇದು ಕುವೆಂಪು ಮಾತು) ಗುಣವಿಶೇಷಗಳಿಂದ ಜನರ ಪ್ರೀತಿಯನ್ನು ಗಳಿಸಿಕೊಂಡದ್ದು ಒಂದು ಅಪರೂಪದ ಸಂಗತಿ. ಕನ್ನಡಿಗರ ಪ್ರೀತಿ ಪ್ರಶಸ್ತಿ ಪುರಸ್ಕಾರಗಳ ರೂಪದಲ್ಲೂ ಪ್ರಕಟಗೊಂಡಿರುವುದುಂಟು.ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್(1976), ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ(1978), ಮಾಳವಾಡ ಪ್ರಶಸ್ತಿ(1981), ಕಲಬುರ್ಗಿಯಲ್ಲಿ(1987) ನಡೆದ ಅಖಿಲ ಭಾರತ ಐವತ್ತೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ; ಹೀಗೆ ಕನ್ನಡಿಗರು ಸಿದ್ಧಯ್ಯ ಪುರಾಣಿಕರ ಸೇವೆ, ಸಾಧನೆಗಳಿಗಾಗಿ ಅನೇಕ ಗೌರವ ಪುರಸ್ಕಾರಗಳನ್ನು ಸಲ್ಲಿಸಿದ್ದಾರೆ.

‘ಮೊದಲು ಮಾನವನಾಗು’ ಕವಿತೆ ಕನ್ನಡಿಗರಿಗೆ ಹೃದ್ಗತವಾಗಿರುವುದು ಕವಿ ಕಾವ್ಯಾನಂದರಿಗೆ ಇವೆಲ್ಲಕ್ಕೂ ಮಿಗಿಲಾಗಿ ಸಂದಿರುವ ಪ್ರೀತಿ, ಗೌರವ. ‘ಮೊದಲು ಮಾನವನಾಗು’ ಎನ್ನುವುದು ಪುರಾಣಿಕರ ಜೀವನ ಮತ್ತು ಸಾಹಿತ್ಯಗಳ ಪಲ್ಲವಿ ಎನ್ನುವ ಹಾ. ಮಾ. ನಾಯಕರ ಮಾತು ಅತಿಶಯೋಕ್ತಿಯಲ್ಲ.ಮನುಷ್ಯ ಮನುಷ್ಯನಾಗುವುದಕ್ಕಿಂತ ದೊಡ್ಡವನಾಗಬೇಕಿಲ್ಲ ಎಂಬುದೇ ಸಿದ್ಧಯ್ಯ ಪುರಾಣಿಕರ ಸಾಹಿತ್ಯದ ಸಂದೇಶ. ಪ್ರಸಿದ್ಧ ಗಾಯಕ ಹುಕ್ಕೇರಿ ಬಾಳಪ್ಪನವರು ಯಾವುದೋ ಒಂದು ಸಮಾರಂಭದಲ್ಲಿ ‘ಮೊದಲು ಮಾನವನಾಗು’ ಹಾಡಿದಾಗ ಇಡೀ ಸಭೇ ಮಂತ್ರಮುಗ್ಧವಾಯಿತಂತೆ! ಅಂದೇನು, ಇಂದಿಗೂ ಅಂಥ ಶಕ್ತಿ ಈ ಗೀತೆಯಲ್ಲಿದೆ.ಆದರೆ ಮಂತ್ರಮುಗ್ಧರಾಗಿ ಮೈಮರೆಯದೆ ಅದನ್ನು ಅಕ್ಷರಶ: ಅನುಸರಿಸಬೇಕಾದದ್ದು ಇಂದಿನ ಜರೂರಾಗಿದೆ.

ಭರತ ವಾಕ್ಯ:

ಸಿದ್ಧಯ್ಯ ಪುರಾಣಿಕರು ಅಧ್ಯಯನ ಮಾಡುತ್ತಿದ್ದಾಗ ಅವರಿಗೆ ನೆರವಾದವರು ಒಬ್ಬಿಬ್ಬರಲ್ಲ. ಅವರಲ್ಲಿ ಮುಖ್ಯವಾದವರು ಅಲಿಬನ್ ಗಾಲಿಬ್ ಸಾಹೇಬರು, ಮೀನಾಯಿ ಸಾಹೇಬರು, ಇಮಾಮ್ ಸಾಹೇಬರು, ಅಝೀಝ್ ಖಾನ್ ಸಾಹೇಬರು, ಹಕ್ಕನಿ ಸಾಹೇಬರು ಮತ್ತು ಹುಸೈನ್ ಅಲೀಖಾನ್ ಸಾಹೇಬರು, ಇವರ ದೊಡ್ಡ ಗುಣಗಳನ್ನು ಸಿದ್ಧಯ್ಯನವರು ಮತ್ತೆಮತ್ತೆ ನೆನೆಯುತ್ತಾರೆ. ಅವರ ಬದುಕಿನಲ್ಲಿ ಅದರಲ್ಲೂ ಅವರು ತಹಶೀಲ್ದಾರರಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಹುಸೈನ್ ಅಲೀಖಾನರು ಸ್ವಂತ ಮಗನನ್ನು ಬಿಟ್ಟು ಇವರ ಬಗ್ಗೆ ಮಾಡಿದ ಶಿಫಾರಸನ್ನು ಅಷ್ಟೇ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಕವಿ ಸಿದ್ಧಯ್ಯ ಪುರಾಣಿಕರ ಬದುಕಿನ ಈ ಸಂಗತಿ,ಕೋಮು ದ್ವೇಷ ಬಿತ್ತುತ್ತಿರುವ ಇಂದಿನ ಸಾಮಾಜಿಕ ಸಂದರ್ಭದಲ್ಲಿ ನಾವೆಲ್ಲ ಮನನ ಮಾಡಬೇಕಾದ ವಿಚಾರ ಎಂದರೆ ಅನುಚಿತವಾಗದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)