varthabharthi

ಆರೋಗ್ಯ

ನೋವು ನಿವಾರಕಗಳು ಅಡ್ಡ ಪರಿಣಾಮ ಬೀರಬಹುದೇ?: ಇಲ್ಲಿದೆ ಮಾಹಿತಿ

ವಾರ್ತಾ ಭಾರತಿ : 9 Feb, 2018

ನಮ್ಮ ಜೀವನದಲ್ಲಿ ನಾವು ಕನಿಷ್ಠ ಕೆಲವು ಬಾರಿಯಾದರೂ ಏನಾದರೊಂದು ದೈಹಿಕ ನೋವನ್ನು ಅನುಭವಿಸಿರುತ್ತೇವೆ. ನಿಜ ಹೇಳಬೇಕೆಂದರೆ ಯಾವುದೇ ವ್ಯಕ್ತಿ ನೋವನ್ನು ಅನುಭವಿಸಿಯೇ ಇಲ್ಲ ಎಂದರೆ ಆತನಿಗೆ ನರಗಳಿಗೆ ಸಂಬಂಧಿಸಿದ ಏನಾದರೊಂದು ಸಮಸ್ಯೆಯಿದೆ ಎಂದೇ ಅರ್ಥ. ನೋವು ಕಾಯಿಲೆಗಳು ಮತ್ತು ಗಾಯಗಳ ಸಾಮಾನ್ಯ ಲಕ್ಷಣವಾಗಿದೆ.

ಕೆಲವು ನೋವುಗಳು ಸೌಮ್ಯವಾಗಿದ್ದು ತಾತ್ಕಾಲಿಕವಾಗಿದ್ದರೆ, ಇನ್ನು ಕೆಲವು ನೋವುಗಳು ತೀವ್ರವಾಗಿದ್ದು ಸುರ್ದೀರ್ಘ ಕಾಲ ನಮ್ಮನ್ನು ಕಾಡಿಸಬಹುದು. ಇಂತಹ ನೋವುಗಳಿಂದ ಪಾರಾಗಲು ಜನರು ಸಾಮಾನ್ಯವಾಗಿ ನೋವು ನಿವಾರಕ ಮಾತ್ರೆಗಳನ್ನು ನುಂಗುತ್ತಿರುತ್ತಾರೆ. ಇದರಿಂದ ತಾತ್ಕಾಲಿಕ ಉಪಶಮನ ದೊರೆಯಬಹುದು. ಆದರೆ ನೋವು ನಿವಾರಕಗಳು ಶಕ್ತಿಶಾಲಿ ಔಷಧಿಗಳಾಗಿದ್ದು, ದೀರ್ಘ ಕಾಲದಲ್ಲಿ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಗಳನ್ನು ಬೀರಬಹುದು. ನೋವು ನಿವಾರಕಗಳ ಕುರಿತು ಕೆಲವು ಮಹತ್ವದ ಮಾಹಿತಿಗಳಿಲ್ಲಿವೆ.

► ನಿಮಗೆ ಅವು ನಿಜಕ್ಕೂ ಅಗತ್ಯವೇ?

 ಎಲ್ಲಕ್ಕೂ ಮೊದಲು, ನೋವು ನಿವಾರಕಗಳ ಬಗ್ಗೆ ಯೋಚಿಸುವ ಮುನ್ನ ನಿಮ್ಮನ್ನು ಕಾಡುತ್ತಿರುವ ನೋವಿನ ತೀವ್ರತೆಯನ್ನು ವಿಶ್ಲೇಷಿಸಿ ಅದಕ್ಕೆ ಔಷಧಿಯ ಸೇವನೆ ಅಗತ್ಯವಿದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಿ. ಹೆಚ್ಚಿನ ನೋವುಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ. ನೋವನ್ನು ಕೆಲವು ದಿನಗಳ ಬಗ್ಗೆ ತಡೆದುಕೊಳ್ಳುವ ವಿಶ್ವಾಸ ನಿಮ್ಮಲ್ಲಿದ್ದರೆ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದೇ ಬೇಡ. ಏಕೆಂದರೆ ಅವು ನಿಮ್ಮನ್ನು ಗುಣಮುಖವಾಗಿಸುವುದಿಲ್ಲ. ಕೇವಲ ತಾತ್ಕಾಲಿಕ ಉಪಶಮನವನ್ನು ನೀಡುತ್ತವೆಯಷ್ಟೇ.

► ಮೂಲಕ್ಕೆ ಚಿಕಿತ್ಸೆ ಅಗತ್ಯ

ಪ್ರತಿಯೊಂದು ನೋವಿಗೂ ಒಂದು ಮೂಲವಿರುತ್ತದೆ. ಅದು ಕಾಯಿಲೆ ಅಥವಾ ಗಾಯದಿಂದ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಅದು ಬೇರೆ ಕಾಯಿಲೆಯ ಲಕ್ಷಣ ವಾಗಿರಬಹುದು. ಹೀಗಾಗಿ ನೋವು ನಿವಾರಕ ಮಾತ್ರೆಗಳನ್ನು ನುಂಗಿ ತಾತ್ಕಾಲಿಕ ಉಪಶಮನವನ್ನು ಪಡೆದುಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸಿ. ಅವರು ನಿಮ್ಮ ನೋವಿನ ಮೂಲವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ. ಇದರಿಂದ ನೋವಿನಿಂದ ಶಾಶ್ವತವಾಗಿ ಪಾರಾಗಲು ಸಾಧ್ಯವಾಗುತ್ತದೆ.

► ತಜ್ಞರನ್ನು ಹುಡುಕಿಕೊಳ್ಳಿ

ಸುದೀರ್ಘ ಕಾಲದ ನೋವಿಗೆ ಕಾರಣವಾಗಿರುವ ರೋಗ ಅಥವಾ ಗಾಯದಿಂದ ನೀವು ಬಳಲುತ್ತಿದ್ದರೆ ಬಹಳ ಸಮಯ ನೋವು ನಿವಾರಕಗಳನ್ನು ನುಂಗುವ ಬದಲು ಪರ್ಯಾಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗಳ ಮೂಲಕ ನಿಮಗೆ ಚಿಕಿತ್ಸೆಯನ್ನು ನೀಡಬಲ್ಲ ತಜ್ಞವೈದ್ಯರನ್ನು ಕಂಡುಕೊಳ್ಳಿ. ಇಂತಹ ತಜ್ಞವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸಿದ ಬಳಿಕ ನೋವು ಗುಣವಾಗಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ನಿರ್ಧರಿಸುತ್ತಾರೆ.

► ಸ್ವಯಂ ಔಷಧಿ ಬೇಡವೇ ಬೇಡ

ವೈದ್ಯರ ಸಲಹೆ ಪಡೆದುಕೊಳ್ಳದೆ ಯಾವುದೇ ಔಷಧಿಗಳ ಸೇವನೆ ಅಪಾಯಕಾರಿ ಅಭ್ಯಾಸವಾಗಿದೆ. ನೋವು ನಿವಾರಕಗಳ ಮಟ್ಟಿಗಂತೂ ಇದು ಅತ್ಯಂತ ಅಪಾಯಕಾರಿ ಯಾಗಿದೆ. ಏಕೆಂದರೆ ನೋವು ನಿವಾರಕಗಳ ಅತಿಯಾದ ಡೋಸ್ ಮಾರಣಾಂತಿಕವೂ ಆಗಬಹುದು. ಹೀಗಾಗಿ ಸ್ವಯಂ ವೈದ್ಯರಾಗಿ ಔಷಧಿ ಅಂಗಡಿಗಳಿಂದ ಮಾತ್ರೆಗಳನ್ನು ಖರೀದಿಸಿ ಸೇವಿಸುವ ಸಾಹಸ ಬೇಡ.

► ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.

 ಇತರ ಹಲವಾರು ಔಷಧಿಗಳಂತೆ ನೋವು ನಿವಾರಕಗಳೂ ಸಾವು ಸೇರಿದಂತೆ ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿವೆ. ಹೀಗಾಗಿ ನೋವು ನಿವಾರಕಗಳನ್ನು ಸೇವಿಸುವ ಮುನ್ನ ಅವುಗಳ ಅಡ್ಡ ಪರಿಣಾಮಗಳು ನಿಮಗೆ ಅಗತ್ಯವಾಗಿ ಗೊತ್ತಿರಬೇಕು. ಜೀರ್ಣ ಸಮಸ್ಯೆಗಳು, ಮಲಬದ್ಧತೆ, ತಲೆ ಸುತ್ತುವಿಕೆ, ದಣಿವು, ಕಡಿಮೆ ರಕ್ತದೊತ್ತಡ, ಹೃದಯಾಘಾತ ಇತ್ಯಾದಿಗಳು ಇಂತಹ ಮಾತ್ರೆಗಳ ಕೆಲವು ಸಾಮಾನ್ಯ ಅಡ್ಡ ಪರಿಣಾಮಗಳಾಗಿವೆ. ಆದರೆ ನೋವು ನಿವಾರಕಗಳನ್ನು ವೈದ್ಯರ ಸಲಹೆಯ ಮೇರೆಗೆ ನಿಗದಿತ ಪ್ರಮಾಣದಲ್ಲಿ ಸೇವಿಸಿದರೆ ಅಡ್ಡ ಪರಿಣಾಮಗಳುಂಟಾಗುವ ಸಾಧ್ಯತೆಗಳು ಕಡಿಮೆಯಿರುತ್ತವೆ.

► ನೋವು ನಿವಾರಕಗಳು ಚಟವೂ ಆಗುತ್ತವೆ

 ನೋವು ನಿವಾರಕಗಳ ಅತ್ಯಂತ ದೊಡ್ಡ ಮತ್ತು ಅತ್ಯಂತ ಅಪಾಯಕಾರಿ ಅಡ್ಡ ಪರಿಣಾಮವೆಂದರೆ ವ್ಯಕ್ತಿ ಅದಕ್ಕೆ ಮಾನಸಿಕವಾಗಿ ದಾಸನಾಗಿಬಿಡಬಹುದು. ವಿಶ್ವಾದ್ಯಂತ ಸಾವಿರಾರು ಜನರು ನೋವು ಕಾಣಿಸಿಕೊಂಡ ಕೂಡಲೇ ಮಾತ್ರೆಯನ್ನು ಸೇವಿಸದಿದ್ದರೆ ಇದು ಗುಣವಾಗುವುದಿಲ್ಲ ಎಂದು ತಮ್ಮಲ್ಲಿ ಮಾನಸಿಕವಾಗಿ ಬೇರೂರಿರುವ ನಂಬಿಕೆಯಿಂದ ಆ ಕೆಲಸವನ್ನು ಮಾಡುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಈ ಮಾನಸಿಕತೆ ಯಿಂದ ಅವರನ್ನು ಮುಕ್ತಗೊಳಿಸಲು ವೈದ್ಯಕೀಯ ನೆರವು ಅಗತ್ಯವಾಗುತ್ತದೆ. ಈ ಮಾತ್ರೆಗಳು ಒದಗಿಸುವ ನೋವು ಉಪಶಮನದ ಭಾವನೆಯಿಂದಾಗಿ ಇಂತಹ ಹೆಚ್ಚಿನವರು ನೋವು ಗುಣವಾದರೂ ಮಾತ್ರೆಗಳ ಸೇವನೆಯನ್ನು ಮುಂದುವರಿಸುತ್ತಾರೆ.

► ಮಾದಕದ್ರವ್ಯಗಳ ಚಟಕ್ಕೂ ಕಾರಣ

ನೋವು ನಿವಾರಕ ಮಾತ್ರೆಗಳಿಗೆ ದಾಸರಾಗಿರುವವರು ಕೊಕೇನ್, ಹೆರಾಯಿನ್ ಮತ್ತು ಮದ್ಯದಂತಹ ಇತರ ಮಾದಕ ವಸ್ತುಗಳ ಸೇವನೆಯ ಚಟವನ್ನೂ ಅಂಟಿಸಿಕೊಳ್ಳಬಹುದು ಎಂದು ಹಲವಾರು ಅಧ್ಯಯನಗಳು ಬೆಟ್ಟು ಮಾಡಿವೆ. ನಿರಂತರ ಸೇವನೆಯಿಂದ ಶರೀರವು ನೋವು ನಿವಾರಕಗಳಲ್ಲಿರುವ ಶಾಮಕ ರಾಸಾಯನಿಕಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುವುದರಿಂದ ಇವುಗಳಿಂದ ಸಾಕಷ್ಟು ‘ನಶೆ’ ಸಿಗುತ್ತಿಲ್ಲ ಎಂಬ ಭಾವನೆ ವ್ಯಕ್ತಿ ಮಾದಕ ದ್ರವ್ಯಗಳತ್ತ ತಿರುಗಲು ಕಾರಣವಾಗಬಹುದು.

► ಅಂಗಾಂಗಗಳಿಗೆ ಹಾನಿ

ಅಂಗಾಂಗಗಳಿಗೆ ಹಾನಿಯು ಸುದೀರ್ಘ ಕಾಲ ಶಕ್ತಿಶಾಲಿ ನೋವು ನಿವಾರಕಗಳ ಸೇವನೆಯ ಇನ್ನೊಂದು ಗಂಭೀರ ಪರಿಣಾಮವಾಗಿದೆ. ಅವುಗಳಲ್ಲಿರುವ ಕೆಲವು ಪ್ರಬಲ ರಾಸಾಯನಿಕಗಳನ್ನು ಹೊರಗೆ ಹಾಕಲು ಶರೀರಕ್ಕೆ ಸಾಧ್ಯವಾಗುವುದಿಲ್ಲ. ಇವುಗಳನ್ನು ವಿಭಜಿಸಲು ಯಕೃತ್ತು ಮತ್ತು ಮೂತ್ರಪಿಂಡದಂತಹ ಪ್ರಮುಖ ಅಂಗಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಹೀಗಾಗಿ ಅವುಗಳು ಕ್ರಮೇಣ ಹಾನಿಗೀಡಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)