ದೀಪಿಕಾ ಈಗ ಲೇಡಿ ಡಾನ್
ವಿವಾದಗಳ ನಡುವೆಯೂ ಗೆಲುವಿನ ಪತಾಕೆ ಹಾರಿಸಿರುವ ‘ಪದ್ಮಾವತ್’ ಚಿತ್ರದ ಬಳಿಕ ದೀಪಿಕಾ ಪಡುಕೋಣೆ, ಬಯೋಪಿಕ್ ಚಿತ್ರವೊಂದರಲ್ಲಿ ನಟಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಇದು ಅಂತಿಂತಹ ಕಥೆಯಲ್ಲ. ಮುಂಬೈ ಪಾತಕಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಫಿಯಾ ರಾಣಿ ಸ್ವಪ್ನ ದೀದಿಯ ಜೀವನ ಕಥೆಯಿಂದ ಪ್ರೇರಿತವಾದ ಚಿತ್ರ ಇದಾಗಿದೆ. ಇರ್ಫಾನ್ ಖಾನ್ ನಾಯಕನಾಗಿರುವ ಈ ಚಿತ್ರಕ್ಕೆ ವಿಶಾಲ್ ಭಾರಧ್ವಾಜ್ ನಿರ್ದೇಶಕರು. ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಎಂಬ ಹೆಸರಿನ ಆಂಗ್ಲ ಕೃತಿಯನ್ನು ಆಧರಿಸಿದ ಈ ಚಿತ್ರದ ಕಥೆಯು ದೀಪಿಕಾಗೆ ಅಪಾರವಾಗಿ ಹಿಡಿಸಿದೆಯಂತೆ. ಕೆಲವು ಸಮಯದ ಹಿಂದೆ ದೀಪಿಕಾ ಅವರಿಗೆ ನಿರ್ದೇಶಕ ವಿಶಾಲ್ ಭಾರಧ್ವಾಜ್ ಚಿತ್ರಕಥೆ ವಿವರಿಸಿದ್ದಾಗಿನಿಂದ ಅದು ತನ್ನನ್ನು ಕಾಡುತ್ತಲೇ ಇತ್ತೆಂದು ದೀಪಿಕಾ ಹೇಳುತ್ತಾರೆ.
‘ಪೀಕು’ ಚಿತ್ರದ ಬಳಿಕ ಇರ್ಫಾನ್ ಖಾನ್ ಹಾಗೂ ದೀಪಿಕಾ, ಈ ಚಿತ್ರದಲ್ಲಿ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈ ಪಾತಕಲೋಕದ ಲೇಡಿಡಾನ್ ಎನಿಸಿಕೊಂಡಿದ್ದ ಸ್ವಪ್ನಾ ದೀದಿಯ ನಿಜವಾದ ನಾಮಧೇಯ ಅಶ್ರಫ್ ಖಾನ್ ಎಂದಾಗಿತ್ತು. ಆಕೆಯ ಪತಿ ದಾವೂದ್ನ ಗ್ಯಾಂಗ್ ಸದಸ್ಯನಾಗಿದ್ದನು. ಆನಂತರ ಆತ ದಾವೂದ್ನ ಅನುಚರರಿಂದಲೇ ಹತ್ಯೆಯಾಗಿದ್ದ. ತನ್ನ ಪತಿಯ ಕೊಲೆಗಾಗಿ ದಾವೂದ್ ವಿರುದ್ಧ ಪ್ರತೀಕಾರ ತೀರಿಸಲು ಸ್ವಪ್ನಾ, ದಾವೂದ್ನ ಶತ್ರುಗಳಲ್ಲೊಬ್ಬನಾದ ಹುಸೈದ್ ಇಸ್ತರ್ ಜೊತೆ ಕೈಜೋಡಿಸುತ್ತಾಳೆ. ಬೈಕ್ ಓಡಿಸಲು, ಬಂದೂಕುಗಳನ್ನು ಉಪಯೋಗಿಸುವುದನ್ನು ಕಲಿತುಕೊಂಡಿದ್ದ ಆಕೆ, ಪೊಲೀಸರಿಗೆ ದಾವೂದ್ ಗ್ಯಾಂಗ್ನ ವಿರುದ್ಧ ಮಾಹಿತಿದಾರಳಾಗಿಯೂ ಕೆಲಸ ಮಾಡುತ್ತಾಳೆ. ಆದರೆ ಶಾರ್ಜಾದ ಕ್ರೀಡಾಂಗಣದಲ್ಲಿ ದಾವೂದ್ನ ಹತ್ಯೆಗೂ ಆಕೆ ಸಂಚು ಹೂಡಿದ್ದಳು. ಆದರೆ ಆಕೆ ಆನಂತರ ಅತ್ಯಂತ ಬರ್ಬರವಾಗಿ ಹತ್ಯೆಗೀಡಾಗುತ್ತಾಳೆ. ಈ ವರ್ಷದ ಮಧ್ಯದ ವೇಳೆಗೆ ಶೂಟಿಂಗ್ ಆರಂಭಗೊಳ್ಳಲಿದ್ದು, ಉಳಿದ ಪಾತ್ರವರ್ಗದ ಆಯ್ಕೆಯೂ ಆರಂಭಗೊಂಡಿದೆ.