varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 11 Feb, 2018

ಸೋನಿಯಾ ವಾಪಸ್ ಇಲ್ಲ

ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಸೋನಿಯಾಗಾಂಧಿ ಬಹುತೇಕ ರಾಜಕೀಯ ಚಟುವಟಿಕೆಗಳಿಂದ ಹಿಂದೆ ಸರಿದಿದ್ದಾರೆ. ಆದರೆ ಅವರು ಇತ್ತೀಚೆಗೆ ವಿರೋಧ ಪಕ್ಷಗಳ ಸಭೆ ಕರೆದಾಗ ಹಲವು ಮುಖಂಡರಿಗೆ ಅಚ್ಚರಿಯಾಗಿತ್ತು. ಆದರೆ ಹಲವು ಮಂದಿ ವಿರೋಧ ಪಕ್ಷಗಳ ಹಿರಿಯ ಮುಖಂಡರು ಅವರಿಗೆ ನಾಯಕತ್ವದ ಹೊಣೆ ಹೊರುವಂತೆ ಮನವೊಲಿಸಿದ ಬಳಿಕವಷ್ಟೇ ಈ ಜವಾಬ್ದಾರಿ ಒಪ್ಪಿಕೊಂಡರು. ರಾಹುಲ್‌ಗಾಂಧಿಯವರ ನಾಯಕತ್ವಕ್ಕೆ ಯಾರ ಪ್ರತಿರೋಧವೂ ಇಲ್ಲದಿದ್ದರೂ, ಸೋನಿಯಾ ಸ್ಥಾನಮಾನವೇ ಬೇರೆ ಎನ್ನುವುದು ಇವರ ಸಮರ್ಥನೆ. ಮುಖಂಡರೊಬ್ಬರ ಪ್ರಕಾರ, ಯಾವುದೇ ಪಕ್ಷದವರಿಗೆ ಕೂಡಾ ಸೋನಿಯಾ ಹೇಳಿದಾಗ ಇಲ್ಲ ಎನ್ನುವುದು ಸಾಧ್ಯವಿಲ್ಲ. ಹಾಗೆಂದು ಇದು ರಾಹುಲ್ ಅವರ ಪರಮಾಧಿಕಾರವನ್ನು ಕೀಳಂದಾಜು ಮಾಡಿದಂತಲ್ಲ ಎನ್ನುವುದು ಅವರ ಸಮುಜಾಯಿಷಿ. ಉದಾಹರಣೆಗೆ ಹಿರಿಯರು- ಕಿರಿಯರು ಅಂತರವನ್ನು ಕಾಂಗ್ರೆಸ್ ಅಧ್ಯಕ್ಷರ ವಿಚಾರದಲ್ಲಿ ಬದಿಗಿಡಬೇಕು ಎಂದು ಹಿರಿಯ ಎನ್‌ಸಿಪಿ ಮುಖಂಡ ಶರದ್ ಪವಾರ್ ಕೆಲ ಮುಖಂಡರಲ್ಲಿ ಹೇಳಿದ್ದಾರೆ. ಈ ಭರವಸೆ ದೊರಕಿದ ಬಳಿಕವಷ್ಟೇ ಸೋನಿಯಾಗಾಂಧಿ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಹೊಣೆ ನಿಭಾಯಿಸಲು ಒಪ್ಪಿಕೊಂಡಿದ್ದಾರೆ. ರಾಹುಲ್ ಅವರನ್ನು ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ಸಂಪೂರ್ಣವಾಗಿ ತೊಡಗಿಸಲಾಗುತ್ತದೆ.

ಬಜೆಟ್ ಬಳಿಕ ರಾಹುಲ್ ಮೌನ

ಲೋಕಸಭೆಯಲ್ಲೊ ಬಜೆಟ್ ಮಂಡನೆಗೆ ಸ್ವಲ್ಪವೂ ಸ್ಪಂದಿಸದೇ ಹೊರನಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕ್ರಮದಿಂದ ಹಲವರಿಗೆ ಭ್ರಮನಿರಸನವಾಗಿದೆ. ಹಲವು ವಿರೋಧಿ ರಾಜಕಾರಣಿಗಳ ಅಭಿಪ್ರಾಯದಂತೆ ಸರಕಾರ ಅತ್ಯುತ್ತಮ ಬಜೆಟ್ ಮಂಡಿಸಿದೆ. ಕನಿಷ್ಠ ಬೆಂಬಲ ಬೆಲೆ ಏರಿಕೆ ಮತ್ತು ಸಾರ್ವತ್ರಿಕ ಆರೋಗ್ಯವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಇದು ಒಳಗೊಂಡಿದೆ. ಬಹುಶಃ ರಾಹುಲ್ ಅವರಿಗೆ ಕೂಡಾ ಈ ಬಗ್ಗೆ ಹೆಚ್ಚು ಹೇಳುವಂಥದ್ದೇನಿಲ್ಲ ಅನಿಸಿರಬೇಕು. ಆದರೆ ಬಹಳಷ್ಟು ಮಂದಿ ರಾಹುಲ್ ತಮಗೆ ದೊರಕಿದ ಅವಕಾಶವನ್ನು ಹಾಳು ಮಾಡಿಕೊಂಡರು ಎಂದು ಹೇಳುತ್ತಾರೆ. ರಾಹುಲ್‌ಗಾಂಧಿಯವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಜತೆಗೂಡಿಸಿಕೊಂಡು, ರಚನಾತ್ಮಕವಾಗಿ ಸ್ಪಂದಿಸಬೇಕಿತ್ತು ಎನ್ನುವುದು ಹಲವು ಮಂದಿ ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ. ಚಿದಂಬರಂ ಬಜೆಟ್ ಟೀಕಿಸಿದರು. ರಾಹುಲ್ ಬಳಿಕ ಹೇಳಿಕೆ ನೀಡಿದರು. ಆದರೆ ತಕ್ಷಣದ ಪ್ರತಿಕ್ರಿಯೆ ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು.

ಮುಂದೆ ಸಿಂಧಿಯಾ ಉದಯ!

ಕಾಂಗ್ರೆಸ್ ಪಕ್ಷ, ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿದ ರಾಜಸ್ಥಾನ ಉಪಚುನಾವಣೆಯ ಫಲಿತಾಂಶ, ಯುವ ಲಾಬಿಯ ಉತ್ಸಾಹಕ್ಕೆ ಕಾರಣವಾಗಿದೆ. ಈ ಹಳೆಯ ಪಕ್ಷದಲ್ಲಿ 40ರ ಆಸುಪಾಸಿನಲ್ಲಿರುವ ಮುಖಂಡರಿಗೆ ರೋಮಾಂಚನವಾಗಿದೆ. ಅಲ್ವರ್, ಅಜ್ಮೀರ್ ಮತ್ತು ಮಂಗಲಗಢದಲ್ಲಿ ಗೆಲುವು ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷ ಸಚಿನ್ ಪೈಲಟ್‌ಗೆ ಅನಿವಾರ್ಯವಾಗಿತ್ತು. ನೆರೆಯ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮುಂದಿನ ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಕೂಗಿಗೆ ಮತ್ತೆ ಧ್ವನಿ ಬಂದಿದೆ. ಆದರೆ ಈ ತಿಂಗಳ ಅಂತ್ಯದಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ನಡೆಯುವ ಮತ್ತೆರಡು ಉಪ ಚುನಾವಣೆಗಳ ಫಲಿತಾಂಶಕ್ಕೆ ಸಿಂಧಿಯಾ ಕಾಯಬೇಕಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಸ್ವಲ್ಪಮಟ್ಟಿಗೆ ಧಾರ್ಷ್ಟ್ಯದ ವ್ಯಕ್ತಿ ಎನಿಸಿಕೊಂಡಿರುವ ಸಿಂಧಿಯಾಗೆ ಇದು ಸ್ವಲ್ಪ ಕಷ್ಟವಾಗಬಹುದು. ಆದರೆ ರಾಹುಲ್‌ಗಾಂಧಿ, ಸಿಂಧಿಯಾಗೆ ಮುಕ್ತ ಅವಕಾಶ ನೀಡಿ, ಪಕ್ಷಕ್ಕೆ ಸರಿ ಎನಿಸಿದ್ದನ್ನು ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಶ್ನೆಯೆಂದರೆ, ಪಕ್ಷದ ಎಲ್ಲ ಬಣಗಳೂ ಕೆಲಸ ಮಾಡುವಂತೆ ಸಿಂಧಿಯಾ ಮಾಡಬಹುದೇ? ಇದು ಸಾಧ್ಯವಾದರೆ ಉತ್ತಮ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಬಹುದು.

ಸ್ಮತಿ ಬದ್ಧತೆ

ಲೋಕಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಬಿಜೆಪಿ ಸಚಿವರು ಮತ್ತು ಮುಖಂಡರು, ಬಜೆಟ್ ಯೋಜನೆಗಳ ಪ್ರಸ್ತಾವ ಕುರಿತ ಟಿಪ್ಪಣಿ ಪಡೆಯಲು ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಕೊಠಡಿಗೆ ಧಾವಿಸಿದರು. ಜನಸಾಗರದಲ್ಲಿ ಎದ್ದುಕಂಡವರೆಂದರೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ. ಇದು ಹಿಂದೆ ಅರುಣ್ ಜೇಟ್ಲಿಯವರೇ ನಿರ್ವಹಿಸಿದ್ದ ಖಾತೆ. ಇತರ ಸಚಿವರು ಹಣಕಾಸು ಸಚಿವರಿಂದ ಸಂಕ್ಷಿಪ್ತ ವಿವರ ಪಡೆದು ಕೊಠಡಿ ತೆರವು ಮಾಡಿದಾಗಲೂ ಸ್ಮತಿ ಇರಾನಿ ಕುಳಿತೇ ಇದ್ದರು. ಜೇಟ್ಲಿಯವರಿಗೆ ಬೆಂಗಾವಲಾಗಿಯೇ ಇದ್ದ ಸ್ಮತಿ ಇರಾನಿ, ಪ್ರತೀ ಬಾರಿಯೂ ಅವರ ಪಕ್ಕದಲ್ಲೇ ಕಾಣಿಸಿಕೊಂಡಿದ್ದರು. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಏಕೆ ಜೇಟ್ಲಿಯವರ ಬೆನ್ನು ಬಿದ್ದಿದ್ದಾರೆ ಎಂದು ಎಲ್ಲರೂ ಅಚ್ಚರಿಪಡುವಂತಾಗಿತ್ತು. ಆ ಬಳಿಕ ಬಹಿರಂಗವಾದ ವಿಚಾರವೆಂದರೆ, ಮೊತ್ತಮೊದಲ ಬಜೆಟ್ ಸಂದರ್ಶನ ನೀಡಲು ದೂರದರ್ಶನ ಸ್ಟುಡಿಯೋಗೆ ಜೇಟ್ಲಿ ಬರುವುದನ್ನು ಖಾತ್ರಿಪಡಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಅದರಂತೆ ಜೇಟ್ಲಿ ನಡೆದುಕೊಂಡರು. ಆ ಬಳಿಕವಷ್ಟೇ ಇತರ ಚಾನಲ್‌ಗಳು ಅವಕಾಶ ಪಡೆದವು. ಸರಕಾರಿ ಚಾನಲ್‌ಗಾಗಿ ಇರಾನಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು.

ಆಪ್ ಸಂಜಯ್ ಅಥವಾ ಕಾಂಗ್ರೆಸ್ ಸಂಜಯ್?

ಹೊಸದಾಗಿ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದಾಗ, ಕಾಂಗ್ರೆಸ್ ಸದಸ್ಯರು ಹುರಿದುಂಬಿಸುತ್ತಿದ್ದರು. ಬಿಜೆಪಿ ಮೇಲೆ ಸಿಂಗ್ ವಾಗ್ದಾಳಿ ಮಾಡುತ್ತಿದ್ದರೆ, ವಿರೋಧ ಪಕ್ಷಗಳ ಬಹುತೇಕ ಸದಸ್ಯರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸುತ್ತಿದ್ದರು. ಯಾವ ಕಾಂಗ್ರೆಸ್ ಸದಸ್ಯರೂ ಅಷ್ಟೊಂದು ಬೆಂಬಲ ಅಥವಾ ಉತ್ತೇಜಕ ಸ್ಪಂದನೆ ಪಡೆಯಲಿಲ್ಲ. ಎರಡನೇ ಸಾಲಿನಲ್ಲಿ ಕುಳಿತಿದ್ದ ಕಾಂಗ್ರೆಸ್‌ನ ಪ್ರಮೋದ್ ತಿವಾರಿ, ಹಿಂದಿನ ಸಾಲಿಗೆ ಸರಿದು ಸಿಂಗ್ ಅವರನ್ನು ಹುರಿದುಂಬಿಸಿದರು. ಬಿಜೆಪಿ ಸದಸ್ಯರು ಸಿಂಗ್ ಅವರನ್ನು ಅಡ್ಡಿಪಡಿಸಿದಾಗ, ಎಲ್ಲ ಕಾಂಗ್ರೆಸ್ ಸದಸ್ಯರು ಒಂದಾಗಿ ಎದ್ದುನಿಂತು ಸಿಂಗ್ ಬೆಂಬಲಕ್ಕೆ ನಿಂತರು. ಸಿಂಗ್ ಅವರ ಚೊಚ್ಚಲ ಭಾಷಣ ಅವರಿಗೆ ಸ್ಮರಣೀಯವಾಗುವಂತೆ ಮಾಡಿದರು. ಇನ್ನಷ್ಟು ಮಾತನಾಡುವಂತೆ ಉತ್ತೇಜನ ಕೊಟ್ಟರು. ಅವರಿಗೆ ಹಂಚಿಕೆ ಮಾಡಿದ್ದ 15 ನಿಮಿಷಗಳ ಅವಧಿ ಮುಗಿದಾಗ ಕುಳಿತುಕೊಳ್ಳುವಂತೆ ಸೂಚಿಸಿದಾಗ, ಸಭಾಪತಿಯ ಜತೆಗೆ ವಾಗ್ವಾದ ಮಾಡಿದರು. ಕೊನೆಗೆ ಸಿಂಗ್ ಭಾಷಣ ಮುಗಿಸಿದಾಗ, ತಿವಾರಿ ಅವರತ್ತ ತೆರಳಿ ಅಭಿನಂದನೆ ಹೇಳಿದರು. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಬಗ್ಗೆ ಅಷ್ಟೊಂದು ಗಾಢ ನಂಟು ಏಕೆ? ಅಥವಾ ಇದು ಹೊಸ ಸದಸ್ಯರನ್ನು ಉತ್ತೇಜಿಸುವ ಸಲುವಾಗಿಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)