varthabharthi

ಅಂತಾರಾಷ್ಟ್ರೀಯ

ಮಾನವ ಹಕ್ಕುಗಳ ಹೋರಾಟಗಾರ್ತಿ ಅಸ್ಮಾ ಜಹಾಂಗೀರ್ ನಿಧನ

ವಾರ್ತಾ ಭಾರತಿ : 11 Feb, 2018

ಲಾಹೋರ್, ಫೆ.11: ಖ್ಯಾತ ನ್ಯಾಯವಾದಿ ಮತ್ತು ಮಾನವಹಕ್ಕುಗಳ ಹೋರಾಟಗಾತಿಯಾಗಿದ್ದ ಅಸ್ಮಾ ಜಹಂಗೀರ್ ಅವರು ವಿಧಿವಶರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 66ರ ಹರೆಯದ ಜಹಂಗೀರ್ ಅವರಿಗೆ ಶನಿವಾರ ತಡರಾತ್ರಿ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ತಮ್ಮ ದಿಟ್ಟ ನಿಲುವಿನಿಂದಾಗಿ ಪಾಕಿಸ್ತಾನದ ಮಾನವಹಕ್ಕುಗಳ ಹೋರಾಟಗಾರರ ಪಾಲಿಗೆ ಆದರ್ಶಪ್ರಾಯರಾಗಿದ್ದ ಅಸ್ಮಾ ಅವರು ಕಳೆದ ಐದು ದಶಕಗಳಿಂದ ಸೇನಾ ಸರ್ವಾಧಿಕಾರ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಸಮರ ಸಾರಿದ್ದರು.

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆಯಾಗಿದ್ದ ಅವರು ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಶನ್‌ನ ಮುಖ್ಯಸ್ಥೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಜಾಸತಾತ್ಮಕರ ಪರವಾಗಿ ಧ್ವನಿಯೆತ್ತಿದ ಕಾರಣಕ್ಕೆ 1983ರಲ್ಲಿ ಜನರಲ್ ಝಿಯಾ ಉಲ್ ಹಕ್ ಅವರ ಸರ್ವಾಧಿಕಾರದ ಸಮಯದಲ್ಲಿ ಅಸ್ಮಾ ಅವರನ್ನು ಜೈಲಿಗೆ ಹಾಕಲಾಗಿತ್ತು.

ನಾಪತ್ತೆಯಾದ ವ್ಯಕ್ತಿಗಳ ಪತ್ತೆಗಾಗಿ ನ್ಯಾಯಾಲಯದಲ್ಲಿ ಉಚಿತವಾಗಿ ವಾದಿಸುತ್ತಿದ್ದ ಅಸ್ಮಾ ಅವರು ಅದೇ ಕಾರಣದಿಂದ ಜನರಲ್ ಪರ್ವೇಝ್ ಮುಶರಫ್ ಅವರ ಬಹಿರಂಗ ಧ್ವೇಷಕ್ಕೆ ತುತ್ತಾಗಿದ್ದರು. ತುಳಿತಕ್ಕೊಳಪಟ್ಟವರ ಪರವಾಗಿ ಹೋರಾಡಿದ ಅಸ್ಮಾ ಜಹಾಂಗೀರ್‌ರನ್ನು ಗೌರವಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬಂದಿವೆ.

ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರಾದ ಮಿಯಾ ಸಾಕಿಬ್ ನಿಸಾರ್ ಹಿರಿಯ ನ್ಯಾಯವಾದಿ ಮತ್ತು ಹೋರಾಟಗಾತಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಆಕೆಯ ಸಾವಿನಿಂದ ಆಘಾತ ಮತ್ತು ದುಃಖವಾಗಿದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಅಧ್ಯಕ್ಷರು, ರಾಜಕಾರಣಿಗಳು, ವಕೀಲರು ಮತ್ತು ಪತ್ರಕರ್ತರು ಅಸ್ಮಾ ಜಹಾಂಗೀರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅನೇಕ ವ್ಯಕ್ತಿಗಳು ಅಸ್ಮಾ ಸಾವಿಗೆ ಕಂಬನಿ ಮಿಡಿದಿದ್ದಾರೆ.

ನಮ್ಮ ಪ್ರಾಂತ್ಯದ ಜನರು ಅಸ್ಮಾರನ್ನು ಬಹಳವಾಗಿ ಗೌರವಿಸುತ್ತಿದ್ದರು ಎಂದು ಬಲೂಚಿಸ್ತಾನ್ ರಾಷ್ಟ್ರೀಯ ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ.

1952ರಲ್ಲಿ ಜನಿಸಿದ ಅಸ್ಮಾ ಜಹಾಂಗೀರ್ ಅವರು ಲಾಹೋರ್‌ನಲ್ಲಿ ಬೆಳೆದರು. ಜೀಸಸ್ ಆ್ಯಂಡ್ ಮೇರಿ ಕಾನ್ವೆಂಟ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದ ಆಕೆ ತನ್ನ ಬಿ.ಎ ಪದವಿಯನ್ನು ಕಿನ್ನೈರ್ಡ್‌ನಲ್ಲಿ ಹಾಗೂ ಎಲ್‌ಎಲ್‌ಬಿಯನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. 1987ರಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವನ್ನು ಸಹಸಂಸ್ಥಾಪನೆ ಮಾಡಿದ ಆಕೆ 1993ರ ವರೆಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಆಕೆ ಆಯೋಗದ ಮುಖ್ಯಸ್ಥೆಯಾಗಿ ಆಯ್ಕೆಯಾದರು.

ಜೈಲಿನಲ್ಲಿರುವ ಅಲ್ಪಸಂಖ್ಯಾತರ, ಮಹಿಳೆಯರ ಮತ್ತು ಮಕ್ಕಳ ಪರ ವಾದಿಸುತ್ತಿದ್ದ ಅಸ್ಮಾ ಮೂಲಭೂತ ಹಕ್ಕುಗಳಿಂದ ವಂಚಿತರನ್ನು ಪ್ರತಿನಿಧಿಸುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)