varthabharthi

ಅಂತಾರಾಷ್ಟ್ರೀಯ

ಮಾಸ್ಕೋದಲ್ಲಿ ರಶ್ಯಾದ ವಿಮಾನ ಪತನ : 71 ಸಾವು

ವಾರ್ತಾ ಭಾರತಿ : 11 Feb, 2018

ಮಾಸ್ಕೊ,ಫೆ.11: 71 ಮಂದಿಯನ್ನು ಕೊಂಡೊಯ್ಯುತ್ತಿದ್ದ ವಿಮಾನವೊಂದು ರವಿವಾರ ಮಾಸ್ಕೊ ಸಮೀಪ ಪತನಗೊಂಡಿದ್ದು, ಅವರೆಲ್ಲರೂ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ರಶ್ಯದ ಆಂತರಿಕ ವಾಯುಯಾನ ಸಂಸ್ಥೆ ಸಾರಾತೊವ್ ಏರ್‌ಲೈನ್ಸ್‌ಗೆ ಸೇರಿದ ಆ್ಯಂಟೊನೊವ್ ಎಎನ್-148 ವಿಮಾನವು ಉರಾಲ್ಸ್ ಪರ್ವತಶ್ರೇಣಿ ಪ್ರದೇಶದ ನಗರವಾದ ಓರ್ಸ್‌ಕ್‌ಗೆ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆಯೆಂದು ರಶ್ಯನ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಮಾಸ್ಕೊದ ಡೊಮೊಡೆಡೊವೊ ವಿಮಾನನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದು ಪತನಗೊಂಡಿತೆಂದು ಮೂಲಗಳು ತಿಳಿಸಿವೆ.

ಬೆಂಕಿ ಹತ್ತಿ ಉರಿಯುತ್ತಿದ್ದ ವಿಮಾನವು ಆಗಸದಿಂದ ಪತನಗೊಂಡಿದ್ದನು ತಾವು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸಿಬ್ಬಂದಿ ಸಹಿತ ವಿಮಾನದಲ್ಲಿದ್ದ ಯಾರೂ ಕೂಡಾ ಬದುಕುಳಿದಿರುವ ಸಾಧ್ಯತೆಯಿಲ್ಲವೆಂದು ರಶ್ಯದ ತುರ್ತು ಸೇವಾ ಸಂಸ್ಥೆಗಳು ತಿಳಿಸಿವೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್, ವಿಮಾನದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತನ್ನ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

   ದುರಂತಕ್ಕೀಡಾದ ವಿಮಾನವು 7 ವರ್ಷಗಳಷ್ಟು ಹಳೆಯದಾಗಿದ್ದು, ರಶ್ಯದಲ್ಲಿ ನಿರ್ಮಾಣಗೊಂಡಿದೆ. ಇನ್ನೊಂದು ರಶ್ಯನ್ ಏರ್‌ಲೈನ್ ಸಂಸ್ಥೆಯ ಒಡೆತನದಲ್ಲಿದ್ದ ಈ ವಿಮಾನವನ್ನು ಒಂದು ವರ್ಷದ ಹಿಂದೆ ಸಾರಾತೊವ್ ಏರ್‌ಲೈನ್ಸ್ ಖರೀದಿಸಿತ್ತು.

ದುರಂತದ ಕಾರಣಗಳು ತಕ್ಷಣವೇ ತಿಳಿದುಬಂದಿಲ್ಲವಾದರೂ ಈ ನಿಟ್ಟಿನಲ್ಲಿ ರಶ್ಯದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.

ಈ ಮಧ್ಯೆ ರಶ್ಯದ ಸಾರಿಗೆ ಸಚಿವರು ಹೇಳಿಕೆಯೊಂದನ್ನು ನೀಡಿ, ಪ್ರತಿಕೂಲ ಹವಾಮಾನ ಅಥವಾ ಮಾನವ ಪ್ರಮಾದಗಳಂದಾಗಿ ಈ ಆಘಾತ ಸಂಭವಿಸಿರುವ ಸಾಧ್ಯತೆಯಿದೆಯೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)