varthabharthi

ಅಂತಾರಾಷ್ಟ್ರೀಯ

ನದಿ ಸಮೀಪ 2ನೆ ಮಹಾಯುದ್ಧ ಕಾಲದ ಬಾಂಬ್ ಪತ್ತೆ: ವಿಮಾನ ನಿಲ್ದಾಣ ಬಂದ್

ವಾರ್ತಾ ಭಾರತಿ : 12 Feb, 2018

ಲಂಡನ್, ಫೆ. 12: ಎರಡನೆ ಮಹಾಯುದ್ಧದ ಬಾಂಬೊಂದು ಇಲ್ಲಿನ ಥೇಮ್ಸ್ ನದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸಮೀಪದಲ್ಲೇ ಇರುವ ಲಂಡನ್ ನಗರ ವಿಮಾನ ನಿಲ್ದಾಣವನ್ನು ರವಿವಾರ ಮುಚ್ಚಲಾಯಿತು.

ಲಂಡನ್‌ನ ಮಧ್ಯ ಭಾಗದಲ್ಲಿರುವ ವಿಮಾನ ನಿಲ್ದಾಣದ ರನ್‌ವೇಗೆ ಸಮೀಪದಲ್ಲೇ ಇರುವ ಕಿಂಗ್ ಜಾರ್ಜ್ ಡಾಕ್‌ನಲ್ಲಿ ಬಾಂಬ್ ಪತ್ತೆಯಾಗಿದೆ.

 ‘‘ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು 214 ಮೀಟರ್ ತ್ರಿಜ್ಯದ ವ್ಯಾಪ್ತಿಯನ್ನು ಅಪಾಯ ವಲಯದಲ್ಲಿರಿಸಿದ್ದಾರೆ. ಹಾಗಾಗಿ, ಲಂಡನ್ ನಗರ ವಿಮಾನ ನಿಲ್ದಾಣವನ್ನು ಪ್ರಸಕ್ತ ಮುಚ್ಚಲಾಗಿದೆ’’ ಎಂದು ವಿಮಾನ ನಿಲ್ದಾಣವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಲಂಡನ್ ನಗರ ವಿಮಾನ ನಿಲ್ದಾಣದಿಂದ ಸೋಮವಾರ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ.

ನಗರ ವಿಮಾನ ನಿಲ್ದಾಣದಿಂದ ಕಿರು ವ್ಯಾಪ್ತಿಯ ವಿಮಾನಗಳು ಹಾರಾಟ ನಡೆಸುತ್ತವೆ.

ರವಿವಾರ ಮುಂಜಾನೆಯ ವೇಳೆಗೆ ಬಾಂಬ್ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಹಾಗೂ ಬಳಿಕ ಅಪಾಯ ವಲಯವನ್ನು ಗುರುತಿಸಲಾಯಿತು ಎಂದು ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದರು.

ಎರಡನೆ ಮಹಾಯುದ್ಧದ ವೇಳೆ, 1940 ಸೆಪ್ಟಂಬರ್ ಮತ್ತು 1941 ಮೇ ನಡುವಿನ ಅವಧಿಯಲ್ಲಿ ಜರ್ಮನಿ ವಾಯು ಪಡೆಯು ಲಂಡನ್ ನಗರದ ಮೇಲೆ ಸಾವಿರಾರು ಬಾಂಬ್‌ಗಳನ್ನು ಹಾಕಿದೆ.

 

Comments (Click here to Expand)