varthabharthi

ಕರ್ನಾಟಕ

ರೌಡಿ ಶೀಟರ್ ಹತ್ಯೆ: ಪತ್ನಿ, ಅತ್ತೆ ಸೇರಿ ಐವರ ಬಂಧನ

ವಾರ್ತಾ ಭಾರತಿ : 13 Feb, 2018
Varthabharathi

ಶಿವಮೊಗ್ಗ, ಫೆ. 13: ರೌಡಿ ಶೀಟರ್ ಹತ್ಯೆಗೆ ಸಂಬಂಧಿಸಿದಂತೆ ಆತನ ಪತ್ನಿ, ಅತ್ತೆ, ಅಳಿಯ ಸೇರಿದಂತೆ ಐವರನ್ನು ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. 

ಹನುಮಂತನಗರದ ನಿವಾಸಿ ಸಂತೋಷ್ (30) ಕೊಲೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಆತನ ಪತ್ನಿ ನಾಗವೇಣಿ, ಈಕೆಯ ತಾಯಿ ಜಹೀರಾಬಿ ಯಾನೆ ವನಜಾ, ಸಹೋದರ ಜಬಿ, ಈತನ ಸ್ನೇಹಿತರಾದ ಚಂದ್ರು, ರಾಕೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ದೇವರಾಜ್, ಸಬ್ ಇನ್ಸ್ ಪೆಕ್ಟರ್ ಇಮ್ರಾನ್ ಬೇಗ್ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನೆ ಹಿನ್ನೆಲೆ: ಸಂತೋಷ್ ಹಾಗೂ ನಾಗವೇಣಿಯವರು ಹನುಮಂತನಗರದಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದು, ನಂತರ ನಾಗವೇಣಿ ತಾಯಿ ಮನೆಯಲ್ಲಿಯೇ ವಾಸಿಸುತ್ತಿದ್ದಳು. ಆದರೆ ಸೋಮವಾರ ಸಂತೋಷ್ ನಾಗವೇಣಿ ಮನೆಗೆ ಆಗಮಿಸಿ ಪತ್ನಿ ಮತ್ತವರ ಕುಟುಂಬದವರ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದು ಪತ್ನಿಯು ತಾಯಿ, ಸಹೋದರ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಪತಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞೆ ಕಳೆದುಕೊಂಡ ಸಂತೋಷ್‍ನನ್ನು ವಾಹನವೊಂದರಲ್ಲಿ ಹೊರವಲಯ ಅಬ್ಬಲಗೆರೆ ಸಮೀಪ ಕರೆತಂದಿದ್ದಾರೆ. ನಂತರ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಆರೋಪಿಗಳೆಲ್ಲರೂ ಪರಾರಿಯಾಗಿದ್ದರು. 

ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಪತ್ನಿ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಿ, ಕೇಸ್ ದಾಖಲಿಸಿಕೊಂಡಿದ್ದಾರೆ. ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ. 

 

Comments (Click here to Expand)