varthabharthi

ಅಂತಾರಾಷ್ಟ್ರೀಯ

ರಾಜಿ ಮಾತುಕತೆಗೆ ಸೌಹಾರ್ದ ವಾತಾವರಣದ ಬಳಕೆ: ಕಿಮ್

ವಾರ್ತಾ ಭಾರತಿ : 13 Feb, 2018

  ಸಿಯೋಲ್ (ದಕ್ಷಿಣ ಕೊರಿಯ), ಫೆ. 13: ದಕ್ಷಿಣ ಕೊರಿಯದೊಂದಿಗೆ ಈಗ ಹೊಂದಿರುವ ಪೂರಕ ಹಾರ್ದಿಕ ಪರಿಸರವನ್ನು ರಾಜಿ ಮಾತುಕತೆಗೆ ಬಳಸಿಕೊಳ್ಳಲು ತಾನು ಬಯಸಿದ್ದೇನೆ ಎಂದು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮಂಗಳವಾರ ಹೇಳಿದ್ದಾರೆ.

ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳಿದ್ದ ತನ್ನ ದೇಶದ ಉನ್ನತ ಮಟ್ಟದ ನಿಯೋಗವೊಂದು ಹಿಂದಿರುಗಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೊರಿಯದ ಪ್ಯಾಂಗ್‌ಚಾಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ವೀಕ್ಷಣೆಗೆ ಕಿಮ್ ಜಾಂಗ್ ಉನ್‌ರ ತಂಗಿ ಕಿಮ್ ಯೊ ಜಾಂಗ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ತೆರಳಿತ್ತು.

ನಿಯೋಗವು 3 ದಿನಗಳ ಪ್ರವಾಸವನ್ನು ಮುಗಿಸಿ ಸ್ವದೇಶಕ್ಕೆ ವಾಪಸಾದ ಬಳಿಕ, ಕಿಮ್ ಜಾಂಗ್ ಉನ್, ದಕ್ಷಿಣ ಕೊರಿಯದೊಂದಿಗೆ ಮಾತುಕತೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಉತ್ತರ ಕೊರಿಯದ ಸರಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಒಲಿಂಪಿಕ್ಸ್ ನಂತರ ದಕ್ಷಿಣ ಮತ್ತು ಉತ್ತರ ಕೊರಿಯಗಳ ನಡುವಿನ ಗಂಭೀರ ಮಾತುಕತೆ ಪ್ರಸ್ತಾಪಕ್ಕೆ ಅಮೆರಿಕವೂ ಒಪ್ಪಿಗೆ ನೀಡಿದೆಯೆನ್ನಲಾಗಿದೆ. ಈ ಮಾತುಕತೆಗಳು ಯಶಸ್ವಿಯಾಗಿ ಸಾಗಿದರೆ ಮುಂದೆ ಅಮೆರಿಕದ ಮತ್ತು ಉತ್ತರ ಕೊರಿಯಗಳ ನಡುವಿನ ಮಾತುಕತೆ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.

ಉ. ಕೊರಿಯ ಜೊತೆ ಮಾತುಕತೆಗೆ ಅಮೆರಿಕ ಮುಕ್ತ: ದ. ಕೊರಿಯ ಅಧ್ಯಕ್ಷ

ಉತ್ತರ ಕೊರಿಯದೊಂದಿಗೆ ಮಾತುಕತೆ ನಡೆಸುವ ವಿಷಯದಲ್ಲಿ ಅಮೆರಿಕ ಮುಕ್ತ ಭಾವನೆ ಹೊಂದಿದೆ ಎಂಬುದಾಗಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ ಇನ್ ಮಂಗಳವಾರ ಹೇಳಿದ್ದಾರೆ ಎಂದು ಅವರ ವಕ್ತಾರರೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‘ಕೊರಿಯಗಳ ನಡುವಿನ ಮಾತುಕತೆಯನ್ನು ಅಮೆರಿಕ ಧನಾತ್ಮಕ ದೃಷ್ಟಿಯಲ್ಲಿ ನೋಡಿದೆ ಹಾಗೂ ಉತ್ತರ ಕೊರಿಯದೊಂದಿಗಿನ ಮಾತುಕತೆಗೆ ತಾನು ಮುಕ್ತ ಮನಸ್ಸು ಹೊಂದಿರುವುದಾಗಿಯೂ ಅದು ಹೇಳಿದೆ’’ ಎಂದು ಲಾತ್ವಿಯದ ಅಧ್ಯಕ್ಷ ರೈಮಂಡ್ಸ್ ವೆಜೊನಿಸ್‌ರಿಗೆ ಮೂನ್ ಹೇಳಿದ್ದಾರೆ ಎಂದು ವಕ್ತಾರರು ಹೇಳಿದರು.

 ಅದೇ ವೇಳೆ, ಉತ್ತರ ಕೊರಿಯ ತನ್ನ ಪರಮಾಣು ಕಾರ್ಯಕ್ರಮದಿಂದ ಹೊರಬರುವಂತೆ ಮಾಡಲು ಅದರ ವಿರುದ್ಧದ ಕಠಿಣ ಅಂತಾರಾಷ್ಟ್ರೀಯ ದಿಗ್ಬಂಧನಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂಬುದಾಗಿ ಅಮೆರಿಕದ ಅಧಿಕಾರಿಗಳು ಬಯಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)