ರೊಹಿಂಗ್ಯಾ ನಿರಾಶ್ರಿತರ ನೆರವಿಗೆ ರೊನಾಲ್ಡೊ ಮನವಿ
ಮ್ಯಾಡ್ರಿಡ್,ಫೆ.16: ಮ್ಯಾನ್ಮಾರ್ನ ರೊಹಿಂಗ್ಯಾ ಮುಸ್ಲಿಂ ಸಂತ್ರಸ್ತರಿಗೆ ನೆರವು ನೀಡುವಂತೆ ಪೋರ್ಚುಗೀಸ್ ಹಾಗೂ ರಿಯಲ್ ಮ್ಯಾಡ್ರಿಡ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ಚಾರಿಟಿವೊಂದರಿಂದ ನಡೆಸಲ್ಪಡುತ್ತಿರುವ ಆರೋಗ್ಯ ಕ್ಲಿನಿಕ್ನಲ್ಲಿದ್ದ ತಂದೆ ಹಾಗೂ ಮಗುವಿನ ಫೋಟೊ ಹಾಗೂ ತನ್ನ ನಾಲ್ವರು ಮಕ್ಕಳೊಂದಿಗೆ ಇರುವ ಫೋಟೊವನ್ನು ತನ್ನ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರೊನಾಲ್ಡೊ ಫೋಟೊದ ಕೆಳಗೆ ‘‘ನಾವು ನಮ್ಮೆಲ್ಲಾ ಮಕ್ಕಳನ್ನು ಪ್ರೀತಿಸುವ ಜಗತ್ತು ಇದು’’ ಎಂದು ಬರೆದಿದ್ದಾರೆ.
2017ರ ಆಗಸ್ಟ್ 25 ರಂದು ಮ್ಯಾನ್ಮಾರ್ನ ರಾಖೆೈನ್ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಸುಮಾರು 656,000 ನಿರಾಶ್ರಿತರು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ಗಡಿಭಾಗದಲ್ಲಿ ಚದುರಿಹೋಗಿದ್ದಾರೆ. ಇದರಲ್ಲಿ 16,695 ಮಕ್ಕಳು 59 ತಿಂಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದು, ಮಕ್ಕಳ ಸ್ಥಿತಿ ಕರುಣಾಜನಕವಾಗಿದೆ. ವಿಶ್ವದ ಶ್ರೀಮಂತ ಅಥ್ಲೀಟ್ ಆಗಿರುವ ರೊನಾಲ್ಡೊ ಹಲವು ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಯುನಿಸೆಫ್ನ ‘ಮಕ್ಕಳನ್ನು ಉಳಿಸಿ’ ಅಭಿಯಾನದ ರಾಯಭಾರಿಯಾಗಿದ್ದಾರೆ. 2011ರಲ್ಲಿ ಯುದ್ಧಪೀಡಿತ ಗಾಝಾ ಪಟ್ಟಣದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಯುರೋಪಿಯನ್ ಗೋಲ್ಡನ್ ಬೂಟ್ ಟ್ರೋಫಿಯನ್ನು 1.2 ಮಿಲಿಯನ್ ಪೌಂಡ್ಗೆಹರಾಜಾಗಿಟ್ಟಿದ್ದರು. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ನೆರವಿಗಾಗಿ 2013ರಲ್ಲಿ ಗೆದ್ದುಕೊಂಡಿದ್ದ ‘ಬ್ಯಾಲನ್ ಡಿ’ಒರ್ ಟ್ರೋಫಿಯನ್ನು ಹರಾಜು ಮಾಡಿದ್ದರು.