ಬರುತ್ತಿದ್ದಾರೆ ಲೈಲಾ ಮಜ್ನೂ
‘ಜಬ್ ವಿ ಮೆಟ್, ಹೈವೇ’ ಖ್ಯಾತಿಯ ಇಮ್ತಿಯಾಝ್ ಅಲಿ ಈಗ ಅಮರ ಪ್ರೇಮ ಕಥಾನಕವೊಂದನ್ನು ಚಿತ್ರ ಮಾಡಲು ಹೊರಟಿದ್ದಾರೆ. ಜನಪ್ರಿಯ ಟಿವಿ ಧಾರಾವಾಹಿ, ಸಿನೆಮಾ ನಿರ್ಮಾಪಕಿ ಏಕತಾ ಕಪೂರ್ ಅವರು ಈ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.
ಇತಿಹಾಸದ ಅಮರಪ್ರೇಮಿಗಳಾದ ಲೈಲಾ ಮಜ್ನೂ ಅವರ ಪ್ರೇಮಕಥೆಯನ್ನಾಧರಿಸಿದ ಈ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರರಸಿಕರ ಗಮನ ಸೆಳೆದಿದೆ. ಹಿಮಚ್ಛಾದಿತ ಶಿಖರಗಳ ಮೇಲೆ ಲೈಲಾಮಜ್ನೂ ಹತಾಶೆಯಿಂದ ಅಗಸೆದೆಡೆಗೆ ನೋಡುತ್ತಿರುವ ದೃಶ್ಯವಿರುವ ಈ ಪೋಸ್ಟರ್ ಚಿತ್ರಪ್ರೇಮಿಗಳನ್ನು ಕಾತರಕ್ಕೀಡು ಮಾಡಿದೆ.
ಅಂದಹಾಗೆ ಲೈಲಾ ಮಜ್ನೂಗೆ ಇಮ್ತಿಯಾಝ್ ಅಲಿ ಚಿತ್ರಕಥೆ ಬರೆದಿದ್ದು, ಅವರ ಅತ್ತಿಗೆ ಪ್ರೀತಿ ಅಲಿ, ಚಿತ್ರವನ್ನು ಏಕತಾ ಕಪೂರ್ ಅವರ ಬಾಲಾಜಿ ಪ್ರೊಡಕ್ಷನ್ಸ್ ನ ಸಹಭಾಗಿತ್ವದೊಂದಿಗೆ ನಿರ್ಮಿಸುತ್ತಿದ್ದಾರೆ. ಆದರೆ ಇಮ್ತಿಯಾಝ್ ಅಲಿ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ. ಬದಲಿಗೆ ಆ ಕೆಲಸವನ್ನು ಅವರು ತನ್ನ ಸಹೋದರ ಸಾಜಿದ್ ಅಲಿಗೆ ವಹಿಸಿದ್ದಾರೆ. ಇಷ್ಟಕ್ಕೂ, ಈ ಚಿತ್ರದ ನಾಯಕ ಮತ್ತು ನಾಯಕಿ ಯಾರೆಂಬುದನ್ನು ಸಾಜಿದ್ ಗುಟ್ಟಾಗಿಟ್ಟಿರುವುದು ಬಾಲಿವುಡ್ನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆದರೆ ಅವರಿಬ್ಬರೂ ಚಿತ್ರರಂಗಕ್ಕೆ ಹೊಸಬರೆಂದು ಈಗ ದೃಢಪಟ್ಟಿದೆ.