varthabharthi

ಪ್ರಚಲಿತ

ಎಡ ಚಳವಳಿ ಮತ್ತೆ ಚೇತರಿಸಿತೇ...?

ವಾರ್ತಾ ಭಾರತಿ : 5 Mar, 2018
ಸನತ್ ಕುಮಾರ್ ಬೆಳಗಲಿ

ತ್ರಿಪುರಾದ ಕೆಂಪು ಕೋಟೆಯನ್ನು ಗೆಲ್ಲಲು ಈ ದೇಶದ ಕಾರ್ಪೊರೇಟ್ ಕಂಪೆನಿಗಳಿಂದ ನೂರಾರು ಕೋಟಿ ಹಣ ಅಲ್ಲಿಗೆ ಹರಿದು ಬಂತು. ಅಲ್ಲಿನ ಪ್ರತ್ಯೇಕತಾವಾದಿ ಸಂಘಟನೆಯಾದ ತ್ರಿಪುರಾ ಮೂಲ ನಿವಾಸಿ ಜನಜಾತಿ ರಂಗದೊಂದಿಗೆ ಬಿಜೆಪಿ ಮಾಡಿಕೊಂಡ ಮೈತ್ರಿ ಅದರ ಗೆಲುವಿಗೆ ನೆರವಾಯಿತು. ಕಾಶ್ಮೀರದಲ್ಲಿ ದೇಶವಿರೋಧಿ ಸಂಘಟನೆಯೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡವರಿಗೆ ತ್ರಿಪುರಾದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಕೋಚವೆನಿಸಲಿಲ್ಲ.


ತ್ರಿಪುರಾ ವಿಧಾನಸಭೆ ಚುನಾವಣೆ ಬಗ್ಗೆ ಗೆಳೆಯ ಉಮಾಪತಿಯವರು ಬರೆದಿದ್ದ ‘‘ಕಟ್ಟಕಡೆಯ ಕೆಂಪು ಕಿಲ್ಲೆ ಕುಸಿಯುವುದೇ?’’ ಎಂಬ ಅಂಕಣ ಬರಹ ಓದಿದಾಗಿನಿಂದ ಅಲ್ಲೇನೋ ಬದಲಾವಣೆ ಆಗುತ್ತದೆಂಬ ಸಹಜ ಆತಂಕ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ತ್ರಿಪುರಾಕ್ಕೆ ಭೇಟಿ ನೀಡಿ ಬಂದಿದ್ದ ರಹಮತ್ ತರೀಕೆರೆ ಅವರ ಫೇಸ್ಬುಕ್ ಬರಹವೊಂದು ನನ್ನ ಗಮನ ಸೆಳೆದಿತ್ತು. ಅದನ್ನು ಓದಿದ ನಂತರ ಆತಂಕ ನಿವಾರಣೆಯಾಗಿತ್ತು. ತ್ರಿಪುರಾ ಚುನಾವಣೆ ಫಲಿತಾಂಶ ಬಹುತೇಕ ಉಮಾಪತಿಯವರು ಹೇಳಿದಂತೆ ಆಗಿದೆ. ಹತ್ತೊಂಬತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ತ್ರಿಪುರಾ ಗೆಲ್ಲುವ ಮೂಲಕ ಇಪ್ಪತ್ತು ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡಂತಾಗಿದೆ. ಒಂದು ಕಾಲದಲ್ಲಿ ಇಡೀ ದೇಶವನ್ನು ಆಳುತ್ತಿದ್ದ ಕಾಂಗ್ರೆಸ್ ಈಗ ಶೋಚನೀಯ ಸ್ಥಿತಿಯಲ್ಲಿದೆ. ಕರ್ನಾಟಕ, ಪುದುಚೇರಿ, ಪಂಜಾಬ್‌ನಂತಹ ಕೆಲ ರಾಜ್ಯಗಳನ್ನು ಬಿಟ್ಟರೆ ಅದೆಲ್ಲೂ ಅಧಿಕಾರದಲ್ಲಿಲ್ಲ. ಲೋಕಸಭೆಯಲ್ಲಿ ಕೂಡ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿಲ್ಲ.

ತ್ರಿಪುರಾದಲ್ಲಿ ಎಡರಂಗ ಗೆಲ್ಲಲಿ ಎಂದು ನಮ್ಮಂಥವರ ಹಾರೈಕೆ ಏನೇ ಇರಲಿ, ಅಲ್ಲಿನ ಸೋಲು ಅನಿರೀಕ್ಷಿತವಾಗಿರಲಿಲ್ಲ. ತ್ರಿಪುರಾದ ಕೆಂಪು ಕೋಟೆಯನ್ನು ಗೆಲ್ಲಲು ಈ ದೇಶದ ಕಾರ್ಪೊರೇಟ್ ಕಂಪೆನಿಗಳಿಂದ ನೂರಾರು ಕೋಟಿ ಹಣ ಅಲ್ಲಿಗೆ ಹರಿದು ಬಂತು. ಅಲ್ಲಿನ ಪ್ರತ್ಯೇಕತಾವಾದಿ ಸಂಘಟನೆಯಾದ ತ್ರಿಪುರಾ ಮೂಲ ನಿವಾಸಿ ಜನಜಾತಿ ರಂಗದೊಂದಿಗೆ ಬಿಜೆಪಿ ಮಾಡಿಕೊಂಡ ಮೈತ್ರಿ ಅದರ ಗೆಲುವಿಗೆ ನೆರವಾಯಿತು. ಕಾಶ್ಮೀರದಲ್ಲಿ ದೇಶವಿರೋಧಿ ಸಂಘಟನೆಯೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡವರಿಗೆ ತ್ರಿಪುರಾದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಕೋಚವೆನಿಸಲಿಲ್ಲ.

ತ್ರಿಪುರಾದಲ್ಲಿ ಕಾಲು ಶತಮಾನಕಾಲ ಆಳಿದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಯಾವ ಸಾಧನೆಯನ್ನು ಮಾಡಲೇ ಇಲ್ಲವೆಂದಲ್ಲ. ಹಿಂದೆಲ್ಲ ಹಿಂಸೆಯಿಂದ ತತ್ತರಿಸಿ ಹೋಗಿದ್ದ ಈ ಪುಟ್ಟ ರಾಜ್ಯ ಕಳೆದ ಎರಡು ದಶಕಗಳಿಂದ ನೆಮ್ಮದಿಯಾಗಿದೆ. ರಾಜ್ಯವನ್ನು ಜನಾಂಗೀಯ ಕಲಹ ಮತ್ತು ಪ್ರತ್ಯೇಕತಾವಾದಿಗಳ ದಳ್ಳುರಿಯಿಂದ ಮುಕ್ತಗೊಳಿಸಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರಜಾಪ್ರಭುತ್ವಕ್ಕೆ ಕಳಂಕವಾದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಗೊಳಿಸಿದ್ದು ಸಣ್ಣ ಸಾಧನೆಯೇನಲ್ಲ. ಹಿಂದಿನ ಮುಖ್ಯಮಂತ್ರಿ ನೃಪೇನ್ ಚಕ್ರವರ್ತಿ ಹಾಗೂ ಈಗ ನಿರ್ಗಮಿಸಲಿರುವ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸರಳತೆ, ಪ್ರಾಮಾಣಿಕತೆಯ ಬಗ್ಗೆ ಎರಡು ಮಾತಿಲ್ಲ. ಅದನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೂ ತ್ರಿಪುರಾವನ್ನು ಮತ್ತೆ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಯಾಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಸಿಪಿಎಂ ಕೇಂದ್ರ ಸಮಿತಿ ಪರಾಮರ್ಶಿಸಿ ಹೇಳಿಕೆ ನೀಡಿದೆ. ಏನೇ ಹೇಳಿಕೆ ನೀಡಿದರೂ ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಂತೆ ತ್ರಿಪುರಾದಲ್ಲಿ ಕೂಡ ಸಿಪಿಎಂ ಇನ್ನು ಮುಂದೆ ವಿರೋಧ ಪಕ್ಷವಾಗಿಯೇ ಇರಬೇಕಾಗುತ್ತದೆ. ಮಾಣಿಕ್ ಸರ್ಕಾರ್ ಸ್ಥಾನದಲ್ಲಿ ಆರೆಸ್ಸೆೆಸ್ ಪ್ರಚಾರಕ ಬಿಪ್ಲವ್ ಕುಮಾರ್ ದೇಬ್ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ.

ದೇಶದಲ್ಲಿ ಜಾಗತೀಕರಣದ ಪ್ರವೇಶವಾದ ನಂತರ ಜನರ ಆಶೋತ್ತರಗಳು ಬದಲಾಗಿವೆ. ಅದರಲ್ಲೂ ಮೂವತ್ತರ ಒಳಗಿನ ಯುವಕರ ಕನಸುಗಳೇ ಭಿನ್ನವಾಗಿವೆ. ಈ ಹೊಸ ಪೀಳಿಗೆಗೆ ಹೋರಾಟದ ಹಿನ್ನೆಲೆಯಿಲ್ಲ. ಅವರ ಕಣ್ಣೆದುರಿಗೆ ಮಾರುಕಟ್ಟೆಯ ಥಳಕುಬಳುಕಿನ ಜಗತ್ತು ಅವರನ್ನು ವಿಚಲಿತರನ್ನಾಗಿ ಮಾಡಿದೆ. ಇಂತಹ ಮೂವತ್ತರೊಳಗಿನ ಯುವಕರು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.60 ರಷ್ಟಿದ್ದಾರೆ. ಯಾವುದೇ ಚುನಾವಣೆಯಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಮಾಣಿಕ್ ಸರ್ಕಾರ್ ಅವರಂತಹ ಪ್ರಾಮಾಣಿಕ ಸರಳ ವ್ಯಕ್ತಿಯನ್ನು ತ್ರಿಪುರಾದ ಜನ ಏಕೆ ಮತ್ತೆ ಚುನಾಯಿಸಲಿಲ್ಲ ಎಂಬ ಮುಗ್ಧವಾದ ಆತಂಕ ಅನೇಕ ಗೆಳೆಯರಿಗಿದೆ. ಅಮಿತ್ ಶಾ ರಂತಹ ವ್ಯಾಪಾರಿಗಳು ರಾಜಕೀಯ ನಾಯಕರಾಗಿ ಮೆರೆಯುತ್ತಿರುವ ಇಂದಿನ ಕಾಲದಲ್ಲಿ ವಾಸಕ್ಕೊಂದು ಮನೆಯೂ ಇಲ್ಲದ ಸ್ವಂತ ವಾಹನವಿಲ್ಲದ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಮಾಣಿಕ್ ಸರ್ಕಾರ್ ಜನತೆಯ ಸಹಜ ಆಯ್ಕೆ ಆಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ.

ಈ ದೇಶದ ಕಮ್ಯುನಿಸ್ಟ್ ಚಳವಳಿಯಲ್ಲಿ ಇಂತಹ ಸರಳ ಪ್ರಾಮಾಣಿಕ ನಾಯಕರಿಗೆ ಕೊರತೆಯಿಲ್ಲ. ಈಗ ಅಂಥವರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ಕೂಡ ಹಿಂದಿನ ತಲೆಮಾರಿನಲ್ಲಿ ಇಂತಹ ಅನೇಕ ನಾಯಕರನ್ನು ನಾನು ನೋಡಿದ್ದೇನೆ. 1957 ರಲ್ಲಿ ಕೇರಳದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಇಎಂಎಸ್ ನಂಬೂದರಿ ಪಾಡ್ ಸರಳತೆಗೆ ಹೆಸರಾಗಿದ್ದರು. ಅಧಿಕಾರ ವಹಿಸಿಕೊಂಡಾಗಲೂ ಕೂಡ ಅವರು ಮುಖ್ಯಮಂತ್ರಿಯ ಬಂಗಲೆಗೆ ಹೋಗಲಿಲ್ಲ. ಹಳೆಯ ಬಾಡಿಗೆ ಮನೆಯಲ್ಲಿದ್ದರು. ಅವರು ಸೈಕಲ್ ಮೇಲೆ ವಿಧಾನಸೌಧಕ್ಕೆ ಬರುತ್ತಿದ್ದರೆಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪಒಂದೆಡೆ ಬರೆದಿದ್ದಾರೆ. ಇಂತಹ ಇಎಂಎಸ್ 1972ರಲ್ಲಿ ಬಾಗಲಕೋಟೆಯಲ್ಲಿ ಸಿಪಿಎಂ ಪರವಾಗಿ ಸ್ಪರ್ಧಿಸಿದ್ದ ಎನ್.ಕೆ. ಉಪಾಧ್ಯಾಯರ ಪ್ರಚಾರಕ್ಕೆ ಬಂದಿದ್ದಾಗ ಅವರ ಜೊತೆಗೆ ಓಡಾಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. ಆಗ ನನ್ನ ವಯಸ್ಸು ಇಪ್ಪತ್ತು ದಾಟಿರಲಿಲ್ಲ. ಇಎಂಎಸ್ ಅವರ ಸರಳ ವ್ಯಕ್ತಿತ್ವವನ್ನು ಕಣ್ಣಾರೆ ಕಂಡೆ. ಬಾಗಲಕೋಟೆಗೆ ಬಂದಿದ್ದ ಅವರು ಸಂಜೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಬೆಳಗ್ಗೆ ಬಾದಾಮಿ ಮತ್ತು ಐಹೊಳೆಗಳನ್ನು ನೋಡಿಕೊಂಡು ಬರಬೇಕೆಂದು ಕೇಳಿಕೊಂಡರು. ಅವರಿಗಾಗಿ ಅಲ್ಲಿನ ವೈದ್ಯರೊಬ್ಬರು ತಮ್ಮ ವಾಹನವನ್ನು ನೀಡಿದರು.

ಆ ವಾಹನದಲ್ಲಿ ಹತ್ತಿರದ ಬಾದಾಮಿ ಮತ್ತು ಐಹೊಳೆಗಳಿಗೆ ಇಎಂಎಸ್ ಅವರನ್ನು ಕರೆದುಕೊಂಡು ಹೋದೆವು. ಅಲ್ಲಿನ ಮೇಣಬಸಿದಿ ಮುಂತಾದ ಚಾಲುಕ್ಯರ ಶಿಲ್ಪಕಲೆ ವೈಭವವನ್ನು ನೋಡುತ್ತಲೇ ಅವುಗಳ ಇತಿಹಾಸವನ್ನು ಅವರು ನಮಗೆ ವಿವರಿಸಿದರು. ಸರಳತೆಗೆ ಹೆಸರಾದ ಇನ್ನೊಬ್ಬ ಕಮ್ಯುನಿಸ್ಟ್ ನಾಯಕ ಭೂಪೇಶ್ ಗುಪ್ತಾ ಮೂರು ದಶಕಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದರು. ಅವರಿಗೆ ಮದುವೆಯಾಗಿರಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ನಗರದಲ್ಲಿ ಓಡಾಡಲು ಸಿಟಿ ಬಸ್‌ಗಳನ್ನು ಬಳಸುತ್ತಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಗೃಹಸಚಿವರಾಗಿದ್ದರು. ಕಮ್ಯೂನಿಸ್ಟ್ ನಾಯಕ ಇಂದ್ರಜಿತ್ ಗುಪ್ತಾ ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬಂದವರು. ಲಂಡನ್‌ನಲ್ಲಿ ವ್ಯಾಸಂಗ ಮಾಡಿ ಬಂದಿದ್ದ ಅವರು ಗೃಹಮಂತ್ರಿಯಾಗಿದ್ದಾಗ ಸರಕಾರಿ ಬಂಗಲೆಗೆ ಹೋಗಲಿಲ್ಲ. ಲೋಕಸಭಾ ಸದಸ್ಯರಿಗೆ ನೀಡುವ ಒಂದು ರೂಮಿನ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಅಂತಹ ಇಂದ್ರಜಿತ್ ಗುಪ್ತಾ 1985ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಚಾರಕ್ಕೆ ಬಂದಾಗ ಅವರೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ಒಂದೇ ವಾಹನದಲ್ಲಿ ಪ್ರಯಾಣ ಮಾಡಿದ ನೆನಪನ್ನು ಮರೆಯಲು ಸಾಧ್ಯವಿಲ್ಲ. ದಾರಿಯುದ್ದಕ್ಕೂ ತಮಾಷೆಯ ಮಾತನ್ನಾಡುತ್ತ ಬಂದ ಗುಪ್ತಾ ಚಿತ್ರದುರ್ಗದ ಸಾಮಾನ್ಯ ದಾಬಾವೊಂದರ ಮುಂದೆ ವಾಹನ ನಿಲ್ಲಿಸಿ ಊಟ ಮಾಡಿದ್ದರು. ಮುಂದೆ ದಾವಣಗೆರೆಗೆ ಬಂದಾಗ ಅಲ್ಲಿನ ರಾಜನಹಳ್ಳಿಯ ಹನುಮಂತಪ್ಪ ಛತ್ರದ ಪಕ್ಕದ ಸುನಂದ ರಂಗಮಂಟಪದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಗುಪ್ತಾ ಮಾತನಾಡಿದ್ದರು.

ಅಲ್ಲಿನ ಸಭೆ ಮುಗಿಸಿ ಹುಬ್ಬಳ್ಳಿ ತಲುಪಿದಾಗ ರಾತ್ರಿ 10 ಗಂಟೆ. ಅಲ್ಲಿನ ಸರಾಪು ಕಟ್ಟೆಯಲ್ಲಿ ಅವರ ಭಾಷಣ ಕೇಳಲು 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇಂತಹ ಅನೇಕ ಸರಳ ಮತ್ತು ಅರ್ಪಣಾ ಮನೋಭಾವದ ನಾಯಕರನ್ನು ನೀಡಿದ ಕಮ್ಯುನಿಸ್ಟ್ ಪಕ್ಷಗಳು ಈಗಿನ ಹೊಸಜಗತ್ತಿನ ಸವಾಲುಗಳಿಗೆ ಸ್ಪಂಧಿಸಲು ಪ್ರಯಾಸ ಪಡುತ್ತಿವೆ. ಹೊಸ ಪೀಳಿಗೆಯ ಯುವಕರ ಮನಸ್ಸಿನ ಕದ ತಟ್ಟಿ ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕ ಚಳವಳಿಯಲ್ಲಿ ಬರುವ ಯುವಕರು ಆರ್ಥಿಕ ಬೇಡಿಕೆಗಳಿಗೆ ಸೀಮಿತಗೊಂಡಿರುತ್ತಾರೆ. ಒಮ್ಮೆ ಸಂಸದೀಯ ರಾಜಕಾರಣವನ್ನು ಒಪ್ಪಿಕೊಂಡ ನಂತರ ಅದಕ್ಕೆ ಪೂರಕವಾದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲೂ ಭಾರತದ ಕಮ್ಯುನಿಸ್ಟ್ ಚಳವಳಿಗೆ ಒಮ್ಮ್‌ಮ್ಮೆ ಅತ್ಯುತ್ತಮ ಅವಕಾಶಗಳು ಬಂದಿದ್ದೂ ಉಂಟು.

ಜ್ಯೋತಿ ಬಸು ಪ್ರಧಾನಿಯಾಗುವ ಅವಕಾಶ ಬಂದಾಗ ಪಕ್ಷ ಅದನ್ನು ತಿರಸ್ಕರಿಸಿತ್ತು. ಒಂದು ಕಾಲದಲ್ಲಿ ಹರ್‌ಕಿಶನ್ ಸಿಂಗ್ ಸುರ್ಜಿತ್, ಜ್ಯೋತಿ ಬಸು ಅಂತಹ ನಾಯಕರು ಪಕ್ಷಕ್ಕೆ ಸಮರ್ಥ ನಾಯಕತ್ವ ನೀಡಿ ಮುನ್ನಡೆಸಿದ್ದರು. 2004ರವರೆಗೆ ಲೋಕಸಭೆಯಲ್ಲಿ ಎಡಪಕ್ಷಗಳ ಸಂಖ್ಯಾಬಲ ಅರವತ್ತರ ಅಂಕೆಯನ್ನು ದಾಟಿತ್ತು. ಆದರೆ ಸುರ್ಜಿತ್ ಅವರ ನಿರ್ಗಮನದ ನಂತರ ಎಡಪಕ್ಷಗಳಿಗೆ ಸಮರ್ಥ ನಾಯಕತ್ವ ಸಿಗಲಿಲ್ಲ. ಪ್ರಕಾಶ್ ಕಾರಟ್ ಕಾರ್ಯದರ್ಶಿಯಾಗಿದ್ದಾಗ ಅಮೆರಿಕದ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದ ನೆಪ ಮುಂದೆ ಮಾಡಿಕೊಂಡು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದರು. ಆಗ ಮುಗ್ಗರಿಸಿದ ಕಮ್ಯುನಿಸ್ಟ್ ಚಳವಳಿ ಮತ್ತೆ ಚೇತರಿಸಲೇ ಇಲ್ಲ. ಈಗಲೂ ಸೀತಾರಾಂ ಯಚೂರಿಯವರಂತಹ ಸಮರ್ಥ ನಾಯಕರಿದ್ದರೂ ಅವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಹೀಗೆ ನಾನಾ ಕಾರಣಗಳಿಂದ ಹಿನ್ನಡೆ ಅನುಭವಿಸಿದ ಈ ದೇಶದ ಕಮ್ಯುನಿಸ್ಟ್ ಚಳವಳಿ ಮತ್ತೆ ಚೇತರಿಸಿತೇ ಎಂಬುದು ಯಕ್ಷಪ್ರಶ್ನೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)