ಅತಿಯಾಗದಿರಲಿ
ಮಾನ್ಯರೇ,
ಓರ್ವ ಖ್ಯಾತ ನಟಿ ಯಾವುದೇ ರೀತಿಯಲ್ಲಿ ಮರಣಿಸಿದರೂ ಮಾಧ್ಯಮಗಳು, ಅಭಿಮಾನಿಗಳು ದೊಡ್ಡ ಕೋಲಾಹಲ ಸೃಷ್ಟಿಸುತ್ತಾರೆ. ಸುತ್ತಲಿರುವ ಎಲ್ಲರನ್ನೂ ಅನುಮಾನದಿಂದ ನೋಡುತ್ತಾರೆ. ಅದೆಲ್ಲ ಇರಲಿ. ಆದರೆ ಅತಿರೇಕಕ್ಕೆ ಹೋಗಬಾರದು.
ಸಿನೆಮಾ, ಮಾಡಲಿಂಗ್ ರಂಗಗಳ ಪುರುಷರ ಸ್ಥಿತಿಗತಿಗಳೇನು? ಯಾರೂ ಈ ಕುರಿತು ಸಿನೆಮಾ ಮಾಡಿಲ್ಲ, ಕತೆ ಬರೆದಿಲ್ಲ. ಹೆಚ್ಚು ಓದಿಲ್ಲದ ಎಷ್ಟೋ ಸುಂದರ ಯುವಕರು ಸಿನೆಮಾ ವ್ಯಾಮೋಹದಲ್ಲಿ ಬಿದ್ದು, ಸೋಲಿನಿಂದ ಕಂಗೆಟ್ಟು ದುಶ್ಚಟಗಳ ದಾಸರಾಗಿ ಸತ್ತಿದ್ದಾರೆ. ಪುರುಷ ವೇಶ್ಯೆಯರಾಗಿದ್ದಾರೆ. ಹುಚ್ಚರಾಗಿದ್ದಾರೆ. ಸೋತವರು ಬಿಡಿ ಸ್ಟಾರ್ ಹೀರೋಗಳೆನಿಸಿಕೊಂಡವರಿಗೂ ತೀವ್ರ ಅಭದ್ರತೆ. ಸಾಮಾನ್ಯವಾಗಿ ಖ್ಯಾತನಟರಿಗೆಲ್ಲಾ ಅವಲಂಬಿತರಿದ್ದಾರೆ. ಅವರಲ್ಲಿ ಕೆಲವರು ಕಡುಸೋಮಾರಿಗಳು ಕೂಡಾ.
ಒಂದು ಸಿನೆಮಾದ ಸೋಲು ಗೆಲುವು ನಾಯಕಿಗಿಂತ ನಾಯಕನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗೇ ನಿರ್ಮಾಪಕ, ನಿರ್ದೇಶಕರೂ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಸೋತು ಮೂಲೆಗುಂಪಾದ ನಟಿಗೆ ಯೋಗ್ಯ ಶ್ರೀಮಂತನನ್ನು ಕೈಹಿಡಿದು ನೆಲೆಯಾಗುವ ಸೌಕರ್ಯವಿದೆ. ಆಕೆಯ ಮೇಲೆ ಬರುವ ಗಾಸಿಪ್ಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತದೆ. ವಿಚ್ಛೇದನ, ವಿವಾಹೇತರ ಸಂಬಂಧಗಳಲ್ಲಿ ಸಿನೆಮಾ ರಂಗದ ಪುರುಷರೇ ಅತೀ ಹೆಚ್ಚು ಬೆಲೆ ತೆರುವುದು... ಆರ್ಥಿಕವಾಗಿ-ಸಾಮಾಜಿಕವಾಗಿ.
ಎರಡು ದಶಕಗಳ ಹಿಂದೆ ಬಾಲಿವುಡ್ ನಟಿ ರೇಖಾ ಪತಿ ಮದುವೆಯಾದ ಕೆಲ ದಿನಗಳಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಇತ್ತೀಚೆಗೆ ತೆಲುಗಿನ ಖ್ಯಾತ ನಟಿಯ ಪತಿ ಕೂಡಾ ಮಹಡಿಯಿಂದ ಹಾರಿ ಸತ್ತರು. ಆ ಸಾವುಗಳಲ್ಲಿ ಪತ್ನಿಯರ ಪಾತ್ರ ಇದೆ ಎಂಬ ಅನುಮಾನ ಯಾರಿಗೂ ಯಾಕೆ ಬರಲಿಲ್ಲ? ಕನ್ನಡದಲ್ಲೂ ಅನೇಕ ನಿರ್ದೇಶಕರು, ಜನಪ್ರಿಯ ನಟರು ಕುಡಿದು ಕುಡಿದು ಸತ್ತಿದ್ದಾರೆ. ಅವರದ್ದೆಲ್ಲಾ ಸ್ವಯಂಕೃತಾಪರಾಧ ಎಂದು ದೂರಲಾಗುತ್ತಿದೆ. ಸಿನೆಮಾ ಕ್ಷೇತ್ರದ ಪುರುಷರ ಜೀವಗಳಿಗೆ ಬೆಲೆಯಿಲ್ಲವೇ?
ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈತ ಕೂಲಿಗಳಾಗಿರುವ ಮಹಿಳೆಯರು, ಸಿನೆಮಾಗಳ ಎಕ್ಸ್ಟ್ರಾ ನಟಿಯರು, ಆದಿವಾಸಿ ಮಹಿಳೆಯರು ಒಳಗೂ ಹೊರಗೂ ಪಡಬಾರದ ಪಾಡು ಪಡುತ್ತಿದ್ದಾರೆ. ನಟಿಮಣಿಯರು ತಮ್ಮ ವಿಶಾಲಕಣ್ಣುಗಳನ್ನು ಇಂತಹವರತ್ತ ಹರಿಸಿ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿ. ಬೇರೆಲ್ಲೂ ಸಿಗದ ನೆಮ್ಮದಿ ಅವರಿಗೆ ಇಲ್ಲಿ ಸಿಗುತ್ತದೆ.