varthabharthi

ಸಿನಿಮಾ

ಅರಾಜಕ ಜೀವಪರತೆಯ ಮೇರು ಕಲಾಕೃತಿ ‘ದಿ ಶೇಪ್ ಆಫ್ ವಾಟರ್’

ವಾರ್ತಾ ಭಾರತಿ : 10 Mar, 2018
ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

2017 ರ 74ನೇ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಕ್ಕೆ ಕೊಡುವ ಗೋಲ್ಡನ್ ಬೇರ್ ಪ್ರಶಸ್ತಿಗೆ ಪಾತ್ರವಾದ ಮೆಕ್ಸಿಕನ್ ಚಿತ್ರ ‘ದಿ ಶೇಪ್ ಆಫ್ ವಾಟರ್’ ಜೀವಪರತೆಯನ್ನು ಅತ್ಯುನ್ನತ ಮೌಲ್ಯವೆಂದು ಎತ್ತಿಹಿಡಿಯುವ, ಅನೇಕ ಕಾರಣಗಳಿಗಾಗಿ ಅನನ್ಯವೆನ್ನಬಹುದಾದ ಚಿತ್ರ. ಸರಳವೆಂಬಂತೆ ತೋರುವ ವಸ್ತುವನ್ನಿಟ್ಟುಕೊಂಡು, ಕನಿಷ್ಠ ಸಂಖ್ಯೆಯ ಪಾತ್ರ, ದೃಶ್ಯ, ಸಂವಾದ, ಘಟನೆ ಮತ್ತು ರಾಜಕೀಯ ಮೇಲಾಟಗಳ ಹೆಣಿಗೆಯಲ್ಲಿ ಈ ಚಿತ್ರ ಮೈದಾಳಿದೆ. ಹಸಿರು ಮಿಶ್ರಿತ ತೆಳುನೀಲಿ ಬಣ್ಣ ಮತ್ತು ಮೆಲುದನಿಯ ಮೋಹಕ ಸಂಗೀತದೊಂದಿಗೆ ಚಿತ್ರಕ್ಕೆ ಎಷ್ಟು ಅಗತ್ಯವೋ ಅಷ್ಟುಮಾತ್ರದ ತಾಂತ್ರಿಕ ಸಾಧ್ಯತೆಗಳನ್ನು ಅಳವಡಿಸಿಕೊಂಡು, ಹಾಲಿವುಡ್ ಶೈಲಿಯಲ್ಲಿದ್ದೂ ಅದರಾಚೆಗೆ ವಿಸ್ತರಿಸುತ್ತಾ ಕ್ಲಾಸಿಕ್ ಗುಣವನ್ನು ಪಡೆದುಕೊಳ್ಳುತ್ತದೆ. ಹಾಲಿವುಡ್ ವ್ಯಾಕರಣ ಮತ್ತು ನುಡಿಗಟ್ಟುಗಳಲ್ಲೇ ತಯಾರಾಗುವ ಗಮನಾರ್ಹ ಚಿತ್ರಗಳ ಸ್ಪರ್ಧಾತ್ಮಕ ವೇದಿಕೆಯಾದ ಆಸ್ಕರ್ ಚಿತ್ರಸ್ಪರ್ಧೆಯಲ್ಲೂ 1918 ರ ಸಾಲಿನ ಅತ್ಯುತ್ತಮ ಚಿತ್ರವೆಂದು ಪರಿಗಣಿತವಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷ.

 ಶೇಪ್ ಆಫ್ ವಾಟರ್ ಚಿತ್ರದ ಹೆಸರು ಹೇಗೋ ಹಾಗೆಯೇ ನೀರು-ನೆಲ ಎರಡರಲ್ಲೂ ಇರಬಲ್ಲ ಕಲ್ಪಿತ ಜೀವಿಯನ್ನು ಗುರುತಿ ಸಲು ಚಿತ್ರದಲ್ಲಿ ಬಳಸಿರುವ ಅನ್ವರ್ಥನಾಮವೂ ಹೌದು. ಡಾರ್ವಿನ್ನನ ವಿಕಾಸವಾದದ ಪ್ರಕಾರ ಜೀವಸಂಕುಲದ ಆದಿಮರೂಪ ಪಾಚಿಯಂಥ ಸಸ್ಯ(ಆಲ್ಗೀ) ಕಾಣಿಸಿಕೊಂಡಿದ್ದು ನೀರಿನಲ್ಲಿ. ಹಸಿರು ಮಿಶ್ರಿತ ನೀಲಿಬಣ್ಣದ ಸಸ್ಯರೂಪದ ಈ ಜೀವಿ ಅಕ್ಷರಶಃ ನೀರಿನ ಆಕೃತಿಯೇ ಹೌದು. ಇದನ್ನು ಜಲಾಕೃತಿ ಎಂದು ಕರೆಯುವಂತೆಯೇ ಜೀವಕ್ಕೆ ಆಧಾರವಾದ ನೀರಿಗೆ ಇನ್ನೊಂದು ಹೆಸರಾದ ಜೀವನದ ಆಕೃತಿ ಎಂಬ ಅರ್ಥದಲ್ಲಿ ಜೀವನಾಕೃತಿ ಎಂದೂ ಕರೆಯಬಹುದು. ಈ ಜಲಾಕೃತಿಯೇ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಕ್ರಮೇಣ ವಿಕಾಸಗೊಂಡು ಆಕಾಶ-ಸೂರ್ಯ -ಚಂದ್ರ-ನಕ್ಷತ್ರ-ಗಾಳಿ-ನೀರುಗಳ ಭೂಮಿಯ ಮೇಲೆ ಕಂಡುಬರುವ ಏಕಕೋಶಜೀವಿಯಿಂದ ಹಿಡಿದು ಬಹುಕೋಶಜೀವಿಯಾದ ಮನುಷ್ಯನವರೆಗಿನ ಜೀವ ಸರಪಳಿಗೆ ಕಾರಣವಾಗಿದೆ. ಮೂಲತಃ ಅಸ್ತಿತ್ವಕ್ಕಾಗಿ ಬಲಾಢ್ಯಜೀವಿ-ದುರ್ಬಲಜೀವಿಗಳ ನಡುವಿನ ಹೋರಾಟ ಮತ್ತು ಸಂತಾನೋತ್ಪತ್ತಿಯ ಜೀವಸಹಜ ಉದ್ದೇಶಗಳಿಂದ ನಿರ್ದೇಶಿತವಾಗುವ ಜೀವಿಗಳ ಸರಳ ಬದುಕು ಮನುಷ್ಯರಲ್ಲಿ ಪ್ರಜ್ಞೆಯ ವಿಕಾಸದೊಂದಿಗೆ ಭಾಷೆ-ಕಲೆ-ವಿಜ್ಞಾನ-ರಾಜಕೀಯ-ಆರ್ಥಿಕತೆ-ತಾತ್ವಿಕತೆ- ಉತ್ತಮಿಕೆಗಳ ಮೇಲಾಟಗಳಾಗಿ ಬಿಡಿಸಲಾಗದಷ್ಟು ಜಟಿಲಗೊಂಡಿದೆ. ಇವುಗಳೊಂದಿಗೆ ಬೆಸೆದುಕೊಂಡ ಜೀವಪರತೆಯ ಹಂಬಲವು ದಿಕ್ಕೆಟ್ಟು ಬದುಕಿನ ಸಹಜ ಉದ್ದೇಶಗಳಾದ ಅಸ್ತಿತ್ವ-ಸಂತಾನೋತ್ಪತ್ತಿಗಳ, ಸಮುದಾಯ ಜೀವನದ ನ್ಯಾಯ-ನೆಮ್ಮದಿಗಳಿಗೆ ಭಂಗಬಂದಿದೆ. ಒಂಟಿತನ, ಕ್ರೌರ್ಯ, ರಹಸ್ಯಪ್ರಿಯತೆ ಮತ್ತು ಕಲ್ಪಿತ ಅನ್ಯರ ಬಗೆಗಿನ ಭಯ ಮತ್ತು ಅನುಮಾನಗಳಿಂದಾಗಿ ಇಡೀ ಸಮಾಜವು ಕ್ಷೋಭೆಗೊಳಗಾಗಿದೆ. ಇಂಥ ಸಮಯದಲ್ಲಿ ಶೇಪ್ ಆಫ್ ವಾಟರ್ ತಯಾರಾಗಿದೆ.
A Fairy Tale for Troubled Times ಎಂಬ ಗುರುತು ಚೀಟಿಯನ್ನು ಚಿತ್ರದ ನಿರ್ದೇಶಕ ಗ್ಯೇಮೋ ದೆಲ್ ತೋರೋ ಈ ಚಿತ್ರಕ್ಕೆ ಕೊಟ್ಟಿದ್ದಾರೆ.
ಅಮೆರಿಕದ ರಹಸ್ಯ ಸಂಶೋಧನಾ ಕೇಂದ್ರದಲ್ಲಿ ಸೆರೆಯಾಗಿರಿಸಿರುವ ಅಪೂರ್ಣಸೃಷ್ಟಿಯ ಅನ್ಯಲೋಕದ ಜಲಾಕೃತಿಯ ರಕ್ಷಣೆ ಮತ್ತು ರಹಸ್ಯತೆಯ ಜವಾಬ್ದಾರಿ ಅಮೆರಿಕದ ಮಿಲಿಟರಿ ಕಾವಲುಗಾರನ ಮೇಲಿದೆ. ಇದರಲ್ಲಿ ಆಸಕ್ತವಾಗಿರುವ ಸೋವಿಯತ್ ಸರಕಾರ ತನ್ನ ಜೀವವಿಜ್ಞಾನಿಯೊಬ್ಬನನ್ನು ರಹಸ್ಯವಾಗಿ ನುಸುಳಿಸಿ ಸಂಶೋಧನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿರುತ್ತದೆ. ಅಲ್ಲಿಗೆ ಕಸಗುಡಿಸುವ ಬಿಳಿವರ್ಣದ ಎಲಿಸಾ, ಮತ್ತು ಕಪ್ಪುವರ್ಣದ ಸ್ನೇಹಮಯಿ ಝೀಲ್ದಾರಿಗೆ ಮಾತ್ರ ಸ್ವಚ್ಛತೆಯ ಉದ್ದೇಶಕ್ಕಾಗಿ ಅಲ್ಲಿ ಪ್ರವೇಶವಿದೆ. ಎಲಿಸಾ ಮೂಕಿ. ಆ ಕೇಂದ್ರದಲ್ಲಿ ಸಂಶೋಧನೆಯ ಉದ್ದೇಶಕ್ಕಾಗಿ ಬಂದಿಯಾಗಿರುವ ಅಪೂರ್ಣ ಸೃಷ್ಟಿಯಾದ ಜಲಾಕೃತಿಯೂ ಮೂಕಿಯೇ. ಆದರೆ ಅವನಿಗೆ ಭಾವನೆಗಳಿವೆ-ಇತರರ ಭಾವನೆಗಳು ಅರ್ಥವಾಗುತ್ತವೆ. ಒಂಟಿ ಬದುಕಿನ ಎಲಿಸಾ ಮತ್ತು ನೀರಿನಲ್ಲಿ ಬಂದಿಯಾಗಿ ಬದುಕುವ ಜಲಾಕೃತಿ ಪ್ರೀತಿ-ವಿಶ್ವಾಸಗಳ ಮೂಲಕ ಪರಸ್ಪರ ಆಕರ್ಷಿತರಾಗುತ್ತಾರೆ. ಅವರಿಬ್ಬರ ನಡುವೆ ಲಿಂಗಕೇಂದ್ರಿತ ಆಕರ್ಷಣೆಯನ್ನು ಒಳಗೊಂಡೂ ಅದನ್ನು ಮೀರಿದ ನಿರ್ಲಿಂಗ ಆಪ್ತತೆಯ ಮಾನವೀಯ ಬಾಂಧವ್ಯ ಏರ್ಪಡುತ್ತದೆ.
ಅಮೆರಿಕದ ಮಿಲಿಟರಿ ಕಾವಲುಗಾರ, ಪ್ರೀತಿ ತೋರಿದರೆ ಪ್ರೀತಿ, ದ್ವೇಷತೋರಿದರೆ ದ್ವೇಷವನ್ನು ಪ್ರತಿಫಲಿಸುವ ಜಲಾಕೃತಿಯ ಬಗೆಗಿನ ಅದುಮಿಟ್ಟ ಭಯ, ತಿರಸ್ಕಾರ-ಒರಟುತನಗಳಿಂದಾಗಿ ಆ ಅನನ್ಯ ಜೀವಿಯ ಆಕ್ರಮಣಕ್ಕೊಳಗಾಗಿ ತನ್ನ ಕೈ ಬೆರಳುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆ ಜಲಾಕೃತಿಯನ್ನು ಅತ್ಯಂತ ಅಪಾಯಕಾರಿಯೆಂದು ನಿರ್ಧರಿಸಿ ಕೊಲ್ಲುವ ಸರಕಾರದ ನಿರ್ಧಾರ ಎಲಿಸಾ ಮತ್ತು ಸೋವಿಯತ್ ವಿಜ್ಞಾನಿ ಇಬ್ಬರನ್ನೂ ಕಳವಳಕ್ಕೀಡುಮಾಡುತ್ತದೆ. ಎಲಿಸಾ ತನ್ನೊಂದಿಗೆ ಭಾವನಾತ್ಮಕ ಸಂಬಂಧದಲ್ಲಿ ಬೆಸೆದುಕೊಂಡ ಆ ಅಪೂರ್ಣ ಮೂಕಜೀವಿಯನ್ನು ರಹಸ್ಯವಾಗಿ ಮನೆಗೆ ಸಾಗಿಸಿ ಬಚ್ಚಿಡಲು ತನ್ನ ನೆರೆಮನೆಯ ಚಿತ್ರಕಾರನ ಸಹಾಯದಿಂದ ಮುಂದಾಗುತ್ತಾಳೆ. ಸೋವಿಯತ್ ವಿಜ್ಞಾನಿ ತನ್ನದೇ ಉದ್ದೇಶಗಳಿಗಾಗಿ ಅವಳಿಗೆ ಸಹಾಯಮಾಡುತ್ತಾನೆ. ಝೀಲ್ದಾ ಸಹ ಎಂದಿನಂತೆ ಎಲಿಸಾಳಿಗೆ ನೆರವಾಗುತ್ತಾಳೆ. ಎಲಿಸಾಳ ಮನೆಯ ಸ್ನಾನದ ತೊಟ್ಟಿಯ ಉಪ್ಪುಸೇರಿಸಿದ ನೀರಿನಲ್ಲಿ ಕೆಲದಿನಗಳ ಮಟ್ಟಿಗೆ ಜೀವವುಳಿಸಿಕೊಳ್ಳುವ ಜಲಾಕೃತಿಯನ್ನು ಎಲಿಸಾ ದೈಹಿಕವಾಗಿ ಕೂಡುತ್ತಾಳೆ. ಅವರಿಬ್ಬರೂ ಎಂದೆಂದಿಗೂ ಅಗಲಬಾರದ ಸಂಬಂಧಿಗಳೆಂದು ಪ್ರೀತಿಯ ಸನ್ನೆ ಭಾಷೆಯಲ್ಲಿ ಪರಸ್ಪರ ಹೇಳಿಕೊಳ್ಳುತ್ತಾರೆ. ಝೀಲ್ದಾಳ ಕಾನೂನುನಿಷ್ಠ ನಾಗರಿಕ ನೀಗ್ರೊ ಗಂಡ ಬಯಲುಮಾಡಿದ ಮಾಹಿತಿಯಿಂದಾಗಿ ಅಮೆರಿಕನ್ ಕಾವಲುಗಾರ ಎಲಿಸಾಳ ಮನೆಯನ್ನು ತಲುಪುವ ಮುಂಚೆ ಎಲಿಸಾ ಜಲಾಕೃತಿಯನ್ನು ಸಮುದ್ರಕ್ಕೆ ಸಾಗಿಸಲು ಯತ್ನಿಸುತ್ತಾಳೆ. ಈ ಕಾದಾಟದಲ್ಲಿ ಅಮೆರಿಕನ್ ಕಾವಲುಗಾರ- ರಷ್ಯನ್ ವಿಜ್ಞಾನಿ, ಏಜೆಂಟರು ಎಲ್ಲರೂ ಸಾಯುತ್ತಾರೆ. ಸಾಯುವ ಮುಂಚೆ ಹಾರಿಸಿದ ಅಮೆರಿಕನ್ ಕಾವಲುಗಾರನ ಗುಂಡಿಗೆ ಎಲಿಸಾ ಬಲಿಯಾದರೂ ಆ ಜೀವಿಯು ಅವಳನ್ನು ತಬ್ಬಿಕೊಂಡೇ ಸಮುದ್ರಕ್ಕೆ ಧುಮುಕಿ ಪಾರಾಗುತ್ತದೆ. ಪಾಶ್ಚಿಮಾತ್ಯ ಕಥಾ ನಿರೂಪಣೆಯ ಪರಿಚಿತ ಅಂಶವಾದ ಆ್ಯಂಟಿಕ್ಲೈಮಾಕ್ಸ್ ನೊಂದಿಗೆ, ಅಂದರೆ, ಪರಸ್ಪರ ಎಂದಿಗೂ ಅಗಲಬಾರದೆಂಬ ಪ್ರೀತಿಯ ಬಂಧದಲ್ಲಿ ಜಲಾಕೃತಿಯೊಂದಿಗೆ ಒಂದಾದ ಎಲಿಸಾ ಸತ್ತು ಅವನ ಜೊತೆ ಒಂದಾದಳೋ, ಒಂದಾಗಿ ಮರುಜೀವ ಪಡೆದಳೋ ಎಂಬ ಸಂದಿಗ್ಧ ದೃಶ್ಯದೊಂದಿಗೆ ಚಿತ್ರ ಮುಗಿಯುತ್ತದೆ. ಜನಪ್ರಿಯ ಹಾಲಿವುಡ್ ಚಿತ್ರಗಳಲ್ಲಿ ನಡೆಯುವ ಗುಂಡಿನ ಕಾಳಗದಲ್ಲಿ ಯಾರೇ ಸತ್ತರೂ, ಎಷ್ಟೇ ಗಾಯಗಳಾದರೂ ಮಾಮೂಲಿನಂತೆ ಅಮೆರಿಕವನ್ನು ಮೂರ್ತೀಕರಿಸುವ ವೀರಾಗ್ರಣಿಯೇ ಗೆಲ್ಲುತ್ತಾನೆ. ಆದರೆ ಈ ಚಿತ್ರದಲ್ಲಿ ಅವನು ಸತ್ತು, ಸೋಲುತ್ತಾನೆ. ಸಮಾಜವಾದದ ಅಂತಿಮ ಘಟ್ಟವಾದ ಕಮ್ಯೂನಿಸಮ್‌ನ ವರ್ಗರಹಿತ ನಿರಾಳ್ವಿಕೆಯ ಸಮಾಜದ ಆಶಯ ಹೊತ್ತ ಸಮಾಜವಾದೀ ತಾತ್ವಿಕತೆಯ ಸೋವಿಯತ್ ವಿಜ್ಞಾನಿ ಜೀವನಾಕೃತಿಯನ್ನು ಉಳಿಸುವ ಯತ್ನದಲ್ಲಿ ಗುಂಡೇಟಿನಿಂದ ಸತ್ತರೂ ಜೀವಪರವಾದ ನಿಲುವಿಗಾಗಿ ಸಾಯುತ್ತಾನೆ. ಅದರಿಂದಾಗಿ ನಿರ್ದೇಶಕ, ಗ್ಯೇಮೋ ದೆಲ್ ತೋರೋ ನಂಬುವ ನಿರಾಳ್ವಿಕೆಯ ಅರಾಜಕ ರಾಜಕೀಯ ನಿಲುವಿಗೆ ಅವನು ಹತ್ತಿರವಾಗುತ್ತಾನೆ.
ಸಮಾಜವಾದೀ ಸೋವಿಯತ್ ಯೂನಿಯನ್ ಮತ್ತು ಬಂಡವಾಳಶಾಹಿ ಪ್ರಜಾಪ್ರಭುತ್ವದ ಅಮೆರಿಕ ದೇಶಗಳ ನಡುವೆ 60ರ ದಶಕದಲ್ಲಿ ನಡೆಯುತ್ತಿದ್ದ ಶೀತಲಸಮರದ ಹಿನ್ನೆಲೆ ಬಹುಸಂಖ್ಯೆಯ ಜನಪ್ರಿಯ-ರೋಚಕ-ಮನೋರಂಜಕ ಹಾಲಿವುಡ್ ಚಿತ್ರಗಳಿಗಿದೆ. ಇವುಗಳಲ್ಲಿ ಅಮೆರಿಕದ ಚಾಣಾಕ್ಷ ಗೂಢಚಾರರು, ಮೇಧಾವಿ ವಿಜ್ಞಾನಿಗಳು, ದೇಶಭಕ್ತ ಸೈನ್ಯಾಧಿಕಾರಿಗಳು ಮತ್ತು ಮಹೋನ್ನತ ರಾಜಕೀಯ ಮುತ್ಸದ್ದಿ-ನೇತಾರರು ಒಂದಲ್ಲ ಒಂದು ರೀತಿಯಲ್ಲಿ ಸಮಾಜವಾದೀ ಸೋವಿಯತ್ ಯೂನಿಯನ್‌ನೊಂದಿಗೆ ಸಂಪರ್ಕವಿಟ್ಟುಕೊಂಡು ಕೆಲಸಮಾಡುವ ಜ್ಞಾತ-ಅಜ್ಞಾತ, ಈ ಲೋಕದ-ಅನ್ಯಲೋಕದ ಜೀವಿಗಳ ಆಕ್ರಮಣವನ್ನು ದುಸ್ಸಾಧ್ಯ ಕ್ರಮಗಳ ಮೂಲಕ ಹಿಮ್ಮೆಟ್ಟಿಸಿ ಈ ಭೂಮಿಯನ್ನು ಅಂದರೆ ಅಮೆರಿಕವನ್ನು, ಪ್ರಜಾಪ್ರಭುತ್ವವನ್ನು ಅಂದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ಕಾಪಾಡುತ್ತಾರೆ. ಈ ಚಿತ್ರಗಳ ಕೇಂದ್ರ ಪಾತ್ರಗಳು ತಮ್ಮ ಮಿಲಿಟರಿ-ಬೌದ್ಧಿಕ-ಚಾಣಾಕ್ಷತೆಗಳ ಹೋರಾಟಗಳಲ್ಲಿ ಸತ್ತರೂ ಸಾಯದಂಥ ಅಪ್ರತಿಮ ಅಸ್ತಿತ್ವವನ್ನು ಸಾಧಿಸಿ ಕೊನೆಗೂ ಜಯಶೀಲರಾಗುತ್ತಾರೆ. ‘ದಿ ಶೇಪ್ ಆಫ್ ವಾಟರ್’ ಚಿತ್ರದಲ್ಲಿ ಹೀಗಾಗುವುದಿಲ್ಲ ಎಂಬುದು ಚಿತ್ರದ ಮತ್ತೊಂದು ವಿಶೇಷ. ಇದಕ್ಕೆ ನಿರ್ದೇಶಕರ ನಿರಾಳ್ವಿಕೆಯ ಅರಾಜಕ ತಾತ್ವಿಕ ಧೋರಣೆ ಮುಖ್ಯ ಕಾರಣ.
ತನ್ನ ಚಿಕ್ಕಂದಿನಲ್ಲಿ ಕ್ಯಾಥೊಲಿಕ್ ನಂಬಿಕೆಯ ಗಾಢ ಪ್ರಭಾವದಲ್ಲಿ ಬೆಳೆದ ಗ್ಯೇಮೋ ದೆಲ್ ತೋರೋ ತಮ್ಮ ಸಿನೆಮಾ ನಿರ್ಮಾಣ ಹಾಗೂ ಜೀವನಾನುಭವಗಳ ಹಿನ್ನೆಲೆಯಲ್ಲಿ ಚಿಕ್ಕಂದಿನ ಕ್ಯಾಥೋಲಿಕ್ ಶ್ರದ್ಧೆಯಿಂದ ಹೊರಬಂದಿದ್ದು ಮಾತ್ರವಲ,್ಲ ಅವರೇ ಹೇಳುವಂತೆ ಯಾವುದೇ ಸಾಂಸ್ಥೀಕರಿಸಿದ ಧ್ಯೇಯ-ಧೋರಣೆ-ತಾತ್ವಿಕತೆಗಳ ಚೌಕಟ್ಟುಗಳೊಳಗೆ ಇದ್ದುಕೊಂಡು ಯೋಚಿಸಲು ನಿರಾಕರಿಸುವ ಅರಾಜಕತ್ವದ ನಿಲುವನ್ನು ಪಡೆದವರು. ಸಹಜವಾಗಿಯೇ ಅವರು ಎಡ-ಬಲಗಳ ತಾತ್ವಿಕತೆಗಳನ್ನು ಈ ನೆಲೆಯಿಂದಲೇ ನೋಡುತ್ತಾರೆ. ಹೀಗಾಗಿ 60ರ ದಶಕದ ಸೋವಿಯತ್ ಯೂನಿಯನ್ ತಾತ್ವಿಕವಾಗಿ ಪ್ರತಿನಿಧಿಸುವ ಸಮಾಜವಾದವನ್ನು, ಮಿಲಿಟರಿ ಬಲದಿಂದ ಎತ್ತಿನಿಲ್ಲಿಸಿಕೊಂಡ ಪ್ರಜಾಪ್ರಭುತ್ವವಾದೀ ಬಂಡವಾಳಶಾಹಿಯನ್ನು ಅವರು ತಿರಸ್ಕರಿಸುತ್ತಾರೆ. ಜೀವಪರತೆಯನ್ನು ಮುರುಟುವ ಅಮಾನವೀಯತೆ ಈ ಎರಡರಲ್ಲಿಯೂ ಇದೆ ಎಂಬುದು ಅರಾಜಕ ನಿಲುವಿನ ಅವರ ಅಭಿಮತ. ಭೂಮಿಯ ಮೇಲಿನ ಜೀವ ಅಸ್ತಿತ್ವದ ಗತಿತಾರ್ಕಿಕ ಭೌತಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ರಾಜಕೀಯ ತಾತ್ವಿಕತೆಗಳಾದ ಸಮಾಜವಾದ ಮತ್ತು ಬಂಡವಾಳವಾದದ ಸಾಮಾಜಿಕತೆ-ಸಾಂಸ್ಥಿಕತೆ ಮತ್ತು ರಾಜಕೀಯಗಳನ್ನು ತಿರಸ್ಕರಿಸುವುದರಿಂದಾಗಿಯೇ ಅವರು ಸಹಜವಾಗಿ-ಅನಿವಾರ್ಯವಾಗಿ ಫ್ಯಾಂಟಸಿ, ಮಾಂತ್ರಿಕತೆ ಮತ್ತು ಮಕ್ಕಳಲೋಕದ ಅದ್ಭುತ-ಕಲ್ಪಿತ-ರಮ್ಯ ಪ್ರಪಂಚದ ಫೇರೀಟೇಲ್‌ಗಳನ್ನು ಮೊರೆಹೋಗುತ್ತಾರೆ. ‘ದಿ ಶೇಪ್ ಆಫ್ ವಾಟರ್’ ಮಗುವಿನ ಮನಸ್ಥಿತಿಯಲ್ಲಿರುವ ವಯಸ್ಕನೊಬ್ಬ ಪ್ರಕ್ಷುಬ್ಧ ವಿಶ್ವದಿಂದ ಪಾರಾಗಲು ಮೊರೆಹೊಗುವ ಫ್ಯಾಂಟಸಿ. ನಿರ್ದೇಶಕನಾಗಿ ತನ್ನ ಮತ್ತು ಈ ಚಿತ್ರದ ಬಗ್ಗೆ ಇಂಡೀವೈರ್‌ಗೆ ನೀಡಿದ ಸಂದರ್ಶನದಲ್ಲಿ ಗ್ಯೇಮೋ ದೆಲ್ ತೋರೋ ಹೇಳಿರುವ ಮಾತುಗಳು ಗಮನಾರ್ಹ.
‘‘ನನ್ನ ಪಾಲಿಗೆ ಈ ಚಿತ್ರವು ನೋವು ಶಮನಕಾರಕ. ನನ್ನ ಮೊದಲಿನ ಒಂಬತ್ತು ಚಿತ್ರಗಳಲ್ಲಿ ನಾನು ನನ್ನ ಬಾಲ್ಯದ ಭಯಗಳನ್ನು, ಬಾಲ್ಯದ ಕನಸುಗಳನ್ನು ಚಿತ್ರಿಸಿದ್ದೆ. ಮೊದಲಬಾರಿಗೆ ನಾನು ಒಬ್ಬ ಪ್ರೌಢನಾಗಿ, ಪ್ರೌಢಾವಸ್ಥೆಯಲ್ಲಿ ನನ್ನನ್ನು ಚಿಂತೆಗೀಡುಮಾಡುವುದರ ಬಗ್ಗೆ ಹೇಳಿದ್ದೇನೆ. ವಿಶ್ವಾಸ, ಅನ್ಯತನ, ಕಾಮ, ಪ್ರೀತಿ ಮತ್ತು ನಾವೆತ್ತ ಸಾಗುತ್ತಿದ್ದೇವೆ ಎಂಬುದರ ಮಾತನಾಡಿದ್ದೇನೆ. ಇವು ನಾನು ಏಳೆಂಟು ವರ್ಷದವನಾಗಿದ್ದಾಗ ನನ್ನನ್ನು ಕಾಡಿದ ಸಂಗತಿಗಳಲ್ಲ.’’
ಆದರೆ ತಲೆ ಆಕಾಶದಲ್ಲಿರಲು ಕಾಲುಗಳು ನೆಲದಮೇಲೆ ಇರಲೇಬೇಕಾದ ಅನಿವಾರ್ಯತೆ ಇರುವುದರಿಂದ ನಿರ್ದೇಶಕರ ರಾಜಕೀಯಕ್ಕೆ ಅತೀತವಾದ ಜೀವಪರತೆಯ ಕಾಳಜಿಗೆ, ಬೇಡವೆಂದರೂ ಭೌತಿಕ-ಲೌಕಿಕ ನೆಲೆಗಟ್ಟು ಅನಿವಾರ್ಯವಾಗುತ್ತದೆ. ಅರಾಜಕ ನಿಲುವನ್ನು, ಅಂದರೆ, ಎಡ-ಬಲದ ಯಾವರಾಜಕೀಯದ ಆಳ್ವಿಕೆಗೂ ಒಳಪಡಲು ನಿರಾಕರಿಸುವ, ನಿರ್ದೇಶಕರೂ ಸಹ ತಮ್ಮ ನಿಲುವನ್ನು ವಸ್ತು-ಘಟನೆ-ಸನ್ನಿವೇಶ-ದೃಷ್ಟಿಕೋನಗಳನ್ನು ಒಳಗೊಳ್ಳುವಂತೆ ಮೂರ್ತೀಕರಿಸಲು ಸಿನೆಮಾ ಹೇಳಿ ಮಾಡಿಸಿದ ಕಲಾಮಾಧ್ಯಮ. ಇದರಲ್ಲಿಯೇ ಲಿಂಗಾಧಾರಿತ ತಾರತಮ್ಯ, ಜನಾಂಗಭೇದ ಆಧಾರಿತ ತಾರತಮ್ಯ ಮತ್ತು ಈಡಿಯಾಲಜಿಯಾಧಾರಿತ ತಾರತಮ್ಯಗಳನ್ನು ತಾತ್ವಿಕವಾಗಿ ನಿರಾಕರಿಸಿ ಜಾಗತಿಕ ಭಿತ್ತಿಯ ಆದರ್ಶ ಸ್ಥಿತಿಯ ಮಾನವೀಯತೆಯನ್ನು ಎತ್ತಿಹಿಡಿಯುವ ಸೌಲಭ್ಯಗಳಿವೆ. ಇವೆಲ್ಲವನ್ನೂ ಚಿತ್ರವು ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಅಲ್ಲದೆ, ಜಲಾಕೃತಿಯ ಕಲ್ಪನೆ ವಿಕಾಸವಾದದ ಸರಪಳಿಯಲ್ಲಿ ಬರುವ ಎಲ್ಲ ಜೀವಿಗಳ ಮೊತ್ತವಾದ ಅನನ್ಯ ಆಕೃತಿಯಾಗಿ ನಿಲ್ಲುವಂತೆ, ಹಣಕ್ಕಾಗಿ ಪ್ರಾರಂಭದ ಚಲನಚಿತ್ರಗಳನ್ನು ನಿರ್ಮಿಸಿದ ಲೂಮಿಯೇ ಸಹೋದರರ ಕಿರುಚಿತ್ರಗಳಿಂದ ಹಿಡಿದು, ಮೂಕಿ-ಟಾಕಿಗಳನ್ನು ಒಳಗೊಂಡು, ತಾಂತ್ರಿಕ ನೈಪುಣ್ಯದ ಬಲದಿಂದ ನೀರೇ ಇಲ್ಲದೆ ನೀರನ್ನು ತೋರಿಸಬಲ್ಲ ಸಿನೆಮಾ ತಂತ್ರಜ್ಞತೆಯ ಆವಿಷ್ಕಾರಗಳನ್ನು ಕಲಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಒಟ್ಟಾರೆಯಾಗಿ ಸಿನೆಮಾ ವಿಕಾಸದ ಇಡೀ ಸರಪಳಿಯನ್ನು ‘ದಿ ಶೇಪ್ ಆಫ್ ವಾಟರ್’ ಪ್ರತಿನಿಧಿಸುತ್ತದೆ.    
ಹೀಗಾಗಿಯೇ ಏಕಕಾಲಕ್ಕೆ ಅತ್ಯುತ್ತಮ ಕಲಾಕೃತಿಯೆಂದು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಮನ್ನಣೆಗಳಿಸುತ್ತಾ ಮತ್ತು ಮನರಂಜನೆಯ ಮಾರುಕಟ್ಟೆಯಲ್ಲಿ ಹೇರಳವಾಗಿ ಹಣಗಳಿಸಬಲ್ಲ ಸರಕಾಗಿ ಮಾರಾಟವಾಗುವ ಶಕ್ತಿಯು ‘ದಿ ಶೇಪ್ ಆಫ್ ವಾಟರ್’ ಚಿತ್ರಕ್ಕೆ ದಕ್ಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)