varthabharthi

ರಾಷ್ಟ್ರೀಯ

ಮುಂಬೈ ತಲುಪಿದ ಮಹಾರಾಷ್ಟ್ರ ರೈತರ ಪ್ರತಿಭಟನಾ ರ‍್ಯಾಲಿ: ವಿಧಾನ ಸಭೆಗೆ ಮುತ್ತಿಗೆ ಹಾಕಲು ತಯಾರಿ

ವಾರ್ತಾ ಭಾರತಿ : 12 Mar, 2018

ಮುಂಬೈ, ಮಾ.12: ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನ್ನು ಜಾರಿಗೆ ತರುವಂತೆ ಆಗ್ರಹಿಸಿ ಮಾ.6 ರಂದು ನಾಸಿಕ್‌ನ ಸಿಬಿಎಸ್ ಚೌಕ್‌ನಿಂದ ಬರಿಗಾಲಲ್ಲಿ ಪ್ರತಿಭಟನಾ ರ್ಯಾಲಿಯನ್ನು ಆರಂಭಿಸಿರುವ ಮರಾಷ್ಟ್ರದ ರೈತರು ಸೋಮವಾರ ಬೆಳಗ್ಗೆ ಮುಂಬೈಗೆ ತಲುಪಿದ್ದಾರೆ.

ಸುಮಾರು 40,000 ರೈತರು ಮುಂಬೈನ ಆಝಾದ್ ಮೈದಾನದಲ್ಲಿ ಜಮಾಯಿಸಿದ್ದು, ಅಝಾದ್ ಮೈದಾನದಿಂದ 2 ಕಿ.ಮೀ. ದೂರದಲ್ಲಿ ಮಹಾರಾಷ್ಟ್ರದ ವಿಧಾನಸಭೆಗೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಂಡಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಮನವಿ ಸಲ್ಲಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲು ಬಯಸಿದೆ.

ಎಲ್ಲ ರೀತಿಯ ಸಾಲ ಮನ್ನಾ, ವಿದ್ಯುತ್ ಬಿಲ್‌ಗಳ ಪಾವತಿ ಹಾಗೂ ರಾಷ್ಟ್ರೀಯ ರೈತರ ಆಯೋಗ ಸ್ವಾಮಿನಾಥನ್ ವರದಿಯ ಎಲ್ಲ ಶಿಫಾರಸು ಗಳನ್ನು ಜಾರಿಗೆ ತರುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ರ್ಯಾಲಿ ನಡೆಸುತ್ತಿದ್ದಾರೆ. ಸಿಪಿಐ(ಎಂ)ನ ಅಖಿಲ ಭಾರತೀಯ ಕಿಶಾನ್ ಸಭಾ ನೇತೃತ್ವದಲ್ಲಿ ರೈತರು ಪ್ರತಿಭಟನಾ ರ್ಯಾಲಿಯನ್ನು ನಡೆಸುತ್ತಿದ್ದು, ಸೋಮವಾರದಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿರುವ ಕಾರಣ ರಾಜ್ಯ ಸರಕಾರ ಕೊನೆಯ ಕ್ಷಣದ ಯೋಜನೆ ಹಾಕಿಕೊಂಡಿದೆ.

ಕಳೆದ ಕೆಲವು ದಿನಗಳಿಂದ ಬರಿಗಾಲಲ್ಲಿ ನಡೆಯುತ್ತಿರುವ ರೈತರು ಮಧ್ಯರಾತ್ರಿಯ ತನಕ ನಡೆಯುವ ಸಾಹಸಕ್ಕೆ ಕೈಹಾಕಿದ್ದಾರೆ. ರೈತರ ಮಹಾರ್ಯಾಲಿಗೆ ವಿರೋಧ ಪಕ್ಷಗಳು ಹಾಗೂ ಆಡಳಿತಾರೂಢ ಬಿಜೆಪಿಯ ಮೈತ್ರಿಪಕ್ಷ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಖ್ಯವಾಗಿ ಮರಾಠವಾಡ ಹಾಗೂ ವಿದರ್ಭ ವಲಯಗಳಲ್ಲಿ ರೈತರು ತೀವ್ರ ಬರಗಾಲ, ವನ್ಯ ಜೀವಿಗಳ ದಾಳಿಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ಫಡ್ನವಿಸ್ ಕಳೆದ ವರ್ಷ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಈವರೆಗೆ ರೈತರ ಸಾಲಮನ್ನಾ ಆಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)