varthabharthi

ವಿಶೇಷ-ವರದಿಗಳು

ಪ್ರಪಂಚೋದ್ಯ

ಮತ್ತೆ ಜರ್ಮನಿಯ ಚರ್ಚ್‌ನಲ್ಲಿ ಬಾರಿಸತೊಡಗಿದ‘ಹಿಟ್ಲರ್ ಬೆಲ್’

ವಾರ್ತಾ ಭಾರತಿ : 13 Mar, 2018

ಜರ್ಮನಿಯ ಪುಟ್ಟ ಹಳ್ಳಿಯೊಂದರಲ್ಲಿ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಹೆಸರಿನಲ್ಲಿ ಚರ್ಚೊಂದಕ್ಕೆ ಸಮರ್ಪಿಸಲಾಗಿದ್ದ ಗಂಟೆಯೊಂದನ್ನು ತೆಗೆದುಹಾಕದಿರಲು ಸ್ಥಳೀಯಾಡಳಿತವು ನಿರ್ಧರಿಸಿದ ಬಳಿಕ ಅದು ಮತ್ತೆ ಬಾರಿಸತೊಡಗಿದೆ.

  ನೈಋತ್ಯ ಜರ್ಮನಿಯಲ್ಲಿರುವ ಹಿಡೆಲ್‌ಬರ್ಗ್ ಸುಮಾರು 700 ಮಂದಿ ಜನಸಂಖ್ಯೆಯಿರುವ ಹಳ್ಳಿಯಾಗಿದೆ. ಅಲ್ಲಿನ ಸೈಂಟ್ ಜಾಕೋಬ್ಸ್ ಚರ್ಚ್‌ನಲ್ಲಿರುವ 83 ವರ್ಷಗಳಷ್ಟು ಹಳೆಯದಾದ ಈ ಬೃಹತ್ ಗಾತ್ರದ ಚರ್ಚಿನ ಗಂಟೆಯನ್ನು ತೆಗೆದುಹಾಕಬೇಕೆಂದು ಬಲವಾದ ಒತ್ತಾಯಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತವು ಈ ವಿಷಯವನ್ನು ಮತಕ್ಕೆ ಹಾಕಿದಾಗ, ಗಂಟೆಯನ್ನು ತೆರವುಗೊಳಿಸುವ ಪ್ರಸ್ತಾಪವು 10-3 ಮತಗಳಿಂದ ಸೋಲುಕಂಡಿತು.
ಹಿಟ್ಲರ್‌ನ ಹೆಸರಿನಲ್ಲಿ ಚರ್ಚ್‌ಗೆ ಕೊಡುಗೆಯಾಗಿ ನೀಡಲಾದ ಈ ಗಂಟೆಯಲ್ಲಿ ನಾಝಿಗಳ ಚಿಹ್ನೆಯಾದ ಸ್ವಸ್ತಿಕಾದ ಚಿತ್ರವಿದೆ ಹಾಗೂ ಸರ್ವಸ್ವವೂ ಪಿತೃಭೂಮಿಗೆ ಎಂಬುದಾಗಿ ಜರ್ಮನ್ ಭಾಷೆಯಲ್ಲಿ ಬರೆಯಲಾಗಿತ್ತು.
  ಕಳೆದ 83 ವರ್ಷಗಳಿಂದ ಈ ಗಂಟೆ ಚರ್ಚ್‌ನಲ್ಲಿದ್ದರೂ, ಕಳೆದ ಕೆಲವು ದಶಕಗಳಿಂದ ಅದು ವಿವಾದದ ಕೇಂದ್ರಬಿಂದುವಾಗಿತ್ತು. ಯಹೂದಿಗಳು ಸೇರಿದಂತೆ ಸಾವಿರಾರು ಮಂದಿಯ ಮಾರಣಹೋಮ ನಡೆಸಿರುವ ಸರ್ವಾಧಿಕಾರಿ ಹಿಟ್ಲರ್‌ನನ್ನು ನೆನಪಿಸುವ ಈ ಗಂಟೆಯನ್ನು ತೆಗೆದುಹಾಕಬೇಕೆಂಬ ಬೇಡಿಕೆಗಳು ಬಲವಾಗಿ ಕೇಳಿಬರತೊಡಗಿದಾಗ ಆ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಸ್ಥಳೀಯ ಮೇಯರ್ ರೊಲ್ಯಾಂಡ್ ಬೇಕರ್ ಅವರು ಟಿವಿ ಸಂದರ್ಶನವೊಂದರಲ್ಲಿ ಹಿಟ್ಲರ್‌ನನ್ನು ಆತನ ಸಾಧನೆಗಳಿಗಾಗಿ ಸ್ಮರಿಸಬೇಕೆಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿದ್ದನ್ನು ಉಲ್ಲೇಖಿಸಿದಾಗ ಅದು ದೊಡ್ಡ ವಿವಾದವಾಗಿ ಕಡೆಗೆ ಅವರು ರಾಜೀನಾಮೆ ಕೊಡಬೇಕಾಗಿ ಬಂದಿತ್ತು.
ಆನಂತರ ಅಧಿಕಾರಕ್ಕೇರಿದ ನೂತನ ಮೇಯರ್ ಅವರು ಗಂಟೆಯನ್ನು ಯಥಾಸ್ಥಿತಿಯಲ್ಲಿರಿಸುವುದನ್ನು ಬೆಂಬಲಿಸಿದ್ದರು. ಆದರೆ ಜರ್ಮನಿಯ ಯೆಹೂದ್ಯರ ಕೇಂದ್ರೀಯ ಮಂಡಳಿ ಗಂಟೆಯನ್ನು ಉಳಿಸಿಕೊಳ್ಳುವುದನ್ನು ಬಲವಾಗಿ ವಿರೋಧಿಸಿತ್ತು. ಕೊನೆಗೂ, ಸ್ಥಳೀಯಾಡಳಿತದ ಸಭೆಯಲ್ಲಿ ಈ ವಿಷಯವನ್ನು ಮತಕ್ಕೆ ಹಾಕಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)