varthabharthi

ನಿಮ್ಮ ಅಂಕಣ

ಆನ್‌ಲೈನ್‌ನಲ್ಲಿ ಒಡಂಬಡಿಕೆಯ ವಿವರಗಳ ಸೋರಿಕೆ

ಭಾರತ-ಸೆಶೆಲ್ಸ್ ಮಿಲಿಟರಿ ಒಪ್ಪಂದಕ್ಕೆ ಗ್ರಹಣ?

ವಾರ್ತಾ ಭಾರತಿ : 13 Mar, 2018
ದೇವಿರೂಪ ಮಿತ್ರ

ಯೂಟ್ಯೂಬ್‌ನಲ್ಲಿ ಪ್ರಸಾರವಾದ 20 ಸೆಕೆಂಡ್‌ಗಳ ವೀಡಿಯೊದಲ್ಲಿ ಅಸಂಪ್ಶನ್ ದ್ವೀಪದಲ್ಲಿ ಸೇನಾ ನೆಲೆಯೊಂದನ್ನು ನಿರ್ಮಿಸುವುದಕ್ಕಾಗಿ ಸೆಶೆಲ್ಸ್‌ನ ಸಾರ್ವಭೌಮತೆಯನ್ನು ಭಾರತಕ್ಕೆ ಒಪ್ಪಿಸಿಕೊಡಲಾಗಿದೆಯೆಂದು ಆರೋಪಿಸಲಾಗಿದೆ.


ಅತ್ಯಂತ ಕಳವಳಕಾರಿಯಾದ ಭದ್ರತಾ ಉಲ್ಲಂಘನೆಯ ಪ್ರಕರಣ ವೊಂದರಲ್ಲಿ, ಸೆಶೆಲ್ಸ್‌ನ ಅಸಂಪ್ಶನ್ ದ್ವೀಪದಲ್ಲಿ ಸೇನಾ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲು ಭಾರತವು ಆ ದೇಶದ ಜೊತೆಗೆ ಸಹಿಹಾಕಿದ ಸಂಕ್ಷಿಪ್ತ ಒಪ್ಪಂದದ ಪ್ರತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಬೃಹತ್ ಪ್ರಾಜೆಕ್ಟ್‌ನ ವಿವರಗಳನ್ನು ಪುನರ್‌ರೂಪಿಸಬೇಕೇ ಎಂಬ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 ಇತ್ತೀಚೆಗೆ, ಸೆಶೆಲ್ಸ್‌ನ ಅಧ್ಯಕ್ಷರು ಹಿಂದೂ ಮಹಾಸಾಗರ ಪ್ರದೇಶದ ರಾಷ್ಟ್ರಗಳ ಅಧಿವೇಶನವನ್ನು ಮಂಗಳವಾರ ಉದ್ಘಾಟಿಸಿದ ಸಂದರ್ಭದಲ್ಲಿ ಪರಿಷ್ಕೃತ ಒಪ್ಪಂದವನ್ನು ಅನುಮೋದಿಸುವಂತೆ ಶಾಸನಸಭೆಯ ಸದಸ್ಯರಿಗೆ ಕರೆ ನೀಡಿದ್ದರು.

 ಆದಾಗ್ಯೂ, ಇದಕ್ಕೂ ಒಂದು ದಿನ ಮೊದಲು, ಅಂದರೆ ಮಾರ್ಚ್ 6ರಂದು ಅಜ್ಞಾತ ಯೂಸರ್ ಒಬ್ಬಾತ, ಯೂಟ್ಯೂಬ್‌ನಲ್ಲಿ 9 ನಿಮಿಷ ಹಾಗೂ 20 ಸೆಕೆಂಡ್‌ಗಳ ವೀಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಭಾರತವು ಸೆಶೆಲ್ಸ್ ಸರಕಾರದ ಜೊತೆ ಒಪ್ಪಂದದ 2015ರ ಆವೃತ್ತಿ, 2018ರ ಅಂತಿಮ ಒಪ್ಪಂದ ಹಾಗೂ ಭಾರತವು ಸೆಶಲ್ಸ್ ಗೆ 2015ರಲ್ಲಿ ಒದಗಿಸಿದ ‘ರಹಸ್ಯ ಉಪ ಪತ್ರ’ದ ಪೂರ್ಣಪಾಠವನ್ನು ಒಳಗೊಂಡ ಮೂರು ಗೂಗಲ್ ಡ್ರೈವ್ ಫೋಲ್ಡರ್‌ಗಳನ್ನು ಸಂಪರ್ಕಿಸುವ ಯುಆರ್‌ಎಲ್ ವಿಳಾಸಗಳ ಜೊತೆ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದಾನೆ. ಸೆಶೆಲ್ಸ್ ಸರಕಾರವು ಸೇನಾನೆಲೆಯೊಂದನ್ನು ಸ್ಥಾಪಿಸುವುದಕ್ಕಾಗಿ ಆ ದ್ವೀಪವನ್ನು ಭಾರತಕ್ಕೆ ಮಾರಾಟ ಮಾಡಿದೆಯೆಂದು ವೀಡಿಯೊ ಆಪಾದಿಸಿದೆ. ವೀಡಿಯೊ ಪ್ರಸಾರವಾದ ಬೆನ್ನಲ್ಲೇ ಈ ಯೋಜನೆಯ ವಿರುದ್ಧ ಸೆಶೆಲ್ಸ್‌ನ ಸಾಮಾಜಿಕ ಕಾರ್ಯಕರ್ತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಈ ಒಪ್ಪಂದದ ದಾಖಲೆಪತ್ರಗಳ ಎಲ್ಲಾ ಪುಟಗಳ ಛಾಯಾಚಿತ್ರಗಳನ್ನು ಪ್ರತ್ಯೇಕವಾಗಿ ತೆಗೆದು, ಗೂಗಲ್ ಡ್ರೈವ್ ಅಕೌಂಟ್‌ಗೆ ಅಪ್‌ಲೋಡ್ ಮಾಡಲಾಗಿತ್ತು.

ಸೆಶೆಲ್ಸ್ ಸಂವಿಧಾನದ ಪ್ರಕಾರ, ಒಪ್ಪಂದವೊಂದು ಜಾರಿಗೆ ಬರಬೇಕಾದರೆ ಅದಕ್ಕೆ ಸಂಸತ್‌ನ ಅನುಮೋದನೆ ದೊರೆಯಬೇಕಾಗಿದೆ. ಸೆಶೆಲ್ಸ್ ಸರಕಾರದ ಹೊರಗಡೆ, ಒಪ್ಪಂದದ ಪೂರ್ಣಪಾಠವನ್ನು ಈ ಒಪ್ಪಂದದ ಬೆಂಬಲಿಗರಾದ ಪ್ರತಿಪಕ್ಷ ನಾಯಕ ವ್ಯಾವೆಲ್ ರಾಮ್‌ಕಲಾವಾನ್‌ರೊಂದಿಗೆ ಅಧಿಕೃತವಾಗಿ ಹಂಚಿಕೊಳ್ಳಲಾಗಿತ್ತು. ಸೋಮವಾರ ಒಪ್ಪಂದದ ಪೂರ್ಣಪಾಠವನ್ನು ಭ್ರಷ್ಟಾಚಾರದ ನಿಗ್ರಹ ಕಾರ್ಯಾಲಯದ ಪ್ರತಿನಿಧಿಯೊಬ್ಬರ ಜೊತೆ, ಅವರ ಕೋರಿಕೆಯ ಹಿನ್ನೆಲೆಯಲ್ಲಿ ಹಂಚಿ ಕೊಳ್ಳಲಾಗಿತ್ತು.

ಒಪ್ಪಂದ ಮಂಡನೆಯ ಸಂದರ್ಭದಲ್ಲಿ ಸ್ಪೀಕರ್ ಅವರಿಗೂ, ಅದರ ಪ್ರತಿ ಲಭ್ಯವಾಗಿತ್ತು.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಒಪ್ಪಂದದ ದಾಖಲೆಪತ್ರಗಳು ಅಸಲಿ ಎಂಬುದನ್ನು ಆನ್‌ಲೈನ್ ಪತ್ರಿಕೆ ‘ದಿ ವೈರ್’ ದೃಢಪಡಿಸಿದೆ. ಸೆಶೆಲ್ಸ್ ಸರಕಾರದೊಳಗಿನವರೇ ಈ ದಾಖಲೆಯ ಸೋರಿಕೆಯ ಹಿಂದಿದ್ದಾರೆಂದು ಅದು ಬಹಿರಂಗಪಡಿಸಿದೆ.

ಈ ವೀಡಿಯೊ ಹಾಗೂ ದಾಖಲೆಪತ್ರಗಳನ್ನು ಯೂಟ್ಯೂಬ್‌ನಲ್ಲಿ ಮಾರ್ಚ್ 6ರಂದೇ ಪೋಸ್ಟ್ ಮಾಡಲಾಗಿದ್ದರೂ, ಮರುದಿನವಷ್ಟೇ ಅದು ಭಾರತ ಸರಕಾರದ ಗಮನಕ್ಕೆ ಬಂದಿದೆ. ಈ ಲೇಖನ ಪ್ರಕಟಗೊಂಡ ವೇಳೆಗೆ ಸುಮಾರು 3 ಸಾವಿರ ಮಂದಿ ಆ ವೀಡಿಯೊವನ್ನು ವೀಕ್ಷಿಸಿದ್ದರು.

 ಈ ವೀಡಿಯೊ ದಾಖಲೆಗಳನ್ನು ಅಪ್‌ಲೋಡ್ ಮಾಡಿರುವ ಜೊತೆಗೆ ಭಾರತದ ವಿರುದ್ಧ ತೀವ್ರವಾದ ಆರೋಪಗಳನ್ನು ಮಾಡಿದೆ. ವೀಡಿಯೊದಲ್ಲಿ ಒಪ್ಪಂದದ ವಿಸ್ತೃತ ಪ್ರಾಜೆಕ್ಟ್ ವರದಿಯ (ಡಿಪಿಆರ್) ಪುಟಗಳನ್ನು ಸೇರ್ಪಡೆಗೊಳಿಸಿರುವುದು ಭಾರತೀಯ ಅಧಿಕಾರಿ ವರ್ಗಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತಾಗಿದೆ.
ಈ ದ್ವೀಪದಲ್ಲಿ ಭಾರತೀಯ ಸೇನೆ ನಿರ್ಮಿಸಲಿರುವ ವಿಮಾನಸಂಚಾರ ನಿಯಂತ್ರಣ ಗೋಪುರ ಹಾಗೂ ಏರ್‌ಸ್ಟ್ರಿಪ್‌ನಂತಹ ಕೆಲವು ಕಟ್ಟಡಗಳು ನಿರ್ಮಾಣಗೊಳ್ಳುವ ಸ್ಥಳ, ಅವುಗಳ ವಿಸ್ತೀರ್ಣವನ್ನು ವೀಡಿಯೊದಲ್ಲಿ ತೋರಿಸಲಾಗಿತ್ತು.
ಈ ವಿಷಯಗಳ ಸೋರಿಕೆಯಿಂದಾಗಿ ಯೋಜನೆಯ ಪರಿಷ್ಕರಣೆಯ ಅಗತ್ಯವುಂಟಾಗಿದೆ. ಆದ್ದರಿಂದ ಈ ಯೋಜನೆಯ ಅನುಷ್ಠಾನ ವಿಳಂಬವಾಗಲಿದೆಯೆಂಬ ಬಗ್ಗೆ ಮೂಲಗಳು ಸುಳಿವು ನೀಡಿವೆ.
ಈ ದಾಖಲೆಗಳು ಸೋರಿಕೆಯಾಗಿರುವ ಬಗ್ಗೆ ಅರಿವಿದೆಯೇ. ಒಂದು ವೇಳೆ ಅರಿವಿದ್ದರೆ ಆ ಬಗ್ಗೆ ಸೆಶೆಲ್ಸ್ ಸರಕಾರದ ಜೊತೆ ಪ್ರಸ್ತಾಪಿಸಲಾಗಿದೆಯೇ ಎಂಬುದಾಗಿ ‘ದಿ ವೈರ್’ ಆನ್‌ಲೈನ್ ಪತ್ರಿಕೆ ವಿದೇಶಾಂಗ ಸಚಿವಾಲಯವನ್ನು ಪ್ರಶ್ನಿಸಿತ್ತು. ಆದಾಗ್ಯೂ ಸಚಿವಾಲಯವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದೊಂದು ಗಂಭೀರವಾದ ವಿಶ್ವಸನೀಯತೆಯ ಉಲ್ಲಂಘನೆಯೆಂದು ಭಾರತ ಸರಕಾರವು ಸೆಶೆಲ್ಸ್ ಸರಕಾರಕ್ಕೆ ಮಾಹಿತಿ ನೀಡುವ ಸಾಧ್ಯತೆಯಿದೆ. ಕಾಕತಾಳೀಯವೆಂಬಂತೆ ಸೆಶೆಲ್ಸ್ ಅಧ್ಯಕ್ಷ ಡ್ಯಾನಿ ಫ್ಯಾಯುರ್ ಶುಕ್ರವಾರ ಭಾರತಕ್ಕೆ ಆಗಮಿಸಿದ್ದು, ಮಾರ್ಚ್ 11ರಂದು ನಡೆದ ಅಂತಾರಾಷ್ಟ್ರೀಯ ಸೌರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಅಸಂಪ್ಶನ್ ದ್ವೀಪ ಯೋಜನೆ
 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದೂ ಮಹಾಸಾಗರ ಪ್ರದೇಶದ ರಾಷ್ಟ್ರಗಳ ಪ್ರವಾಸದ ಸಂದರ್ಭದಲ್ಲಿ ಭಾರತವು ಮಾರಿಷಸ್‌ನ ಅಗಾಲೆಗಾ ಹಾಗೂ ಸೆಶೆಲ್ಸ್‌ನ ಆಸಂಪ್ಶನ್ ದ್ವೀಪಗಳನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿಹಾಕಿತ್ತು. ಚೀನಾ ತನ್ನ ನೌಕಾಪಡೆಯ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ, ಹಿಂದೂ ಮಹಾಸಾಗರದಲ್ಲಿ ‘ತನ್ನ ಹೆಜ್ಜೆಗಳನ್ನು ಬಲಪಡಿಸುವ ಹಾಗೂ ಹರಡುವ’ ಭಾರತದ ಪ್ರಯತ್ನದ ಭಾಗವೇ ಈ ಯೋಜನೆಗಳೆಂದು ಬಣ್ಣಿಸಲಾಗಿತ್ತು.

ಆದಾಗ್ಯೂ ಕಳೆದ ಮೂರು ವರ್ಷಗಳಲ್ಲಿ ಸೆಶೆಲ್ಸ್ ಸರಕಾರವು ಒಪ್ಪಂದಕ್ಕೆ ಅನುಮೋದನೆ ನೀಡದ ಕಾರಣ ಅಸಂಪ್ಶನ್ ಯೋಜನೆ ಜಾರಿಗೆ ಬಂದಿರಲಿಲ್ಲ.
ಸೆಶೆಲ್ಸ್‌ನ ಮೇಹೆ ದ್ವೀಪದಲ್ಲಿರುವ ರಾಜಧಾನಿ ವಿಕ್ಟೋರಿಯಾದಿಂದ ವಾಯವ್ಯಕ್ಕೆ 1,135 ಕಿ.ಮೀ. ದೂರದಲ್ಲಿ ಅಸಂಪ್ಶನ್ ದ್ವೀಪದಲ್ಲಿ ಭಾರತವು ಸೇನಾನೆಲೆಯನ್ನು ನಿರ್ಮಿಸುತ್ತಿದೆ.

ಬೃಹತ್‌ಗಾತ್ರದ ಹವಳದ ದ್ವೀಪ ಸಮೂಹದಲ್ಲಿರುವ ಅಸಂಪ್ಶನ್ ದ್ವೀಪವು ಈ ತನಕ ಮಾನವ ಚಟುವಟಿಕೆಗಳಿಂದ ಬಾಧಿತವಾಗದೆ ಉಳಿದಿತ್ತು ಹಾಗೂ ವಿಕಾಸ ಮತ್ತು ಪರಿಸರ ಪ್ರಕ್ರಿಯೆಯ ಅಧ್ಯಯನಗಳನ್ನು ನಡೆಸಲು ಅದೊಂದು ಮಹತ್ವದ ಪ್ರಾಕೃತಿಕ ಆವಾಸಸ್ಥಳವಾಗಿದೆ.

ಸೆಶೆಲ್ಸ್‌ನಲ್ಲಿ ಭಾರತೀಯ ಸೇನಾನೆಲೆಯ ನಿರ್ಮಾಣದ ವಿರುದ್ಧ ನಡೆಯುತ್ತಿರುವ ಚಳವಳಿಯ ನೇತೃತ್ವವನ್ನು ‘‘ಸೇವ್ ಅಲ್ದಾಬ್ರಾ ಐಲ್ಯಾಂಡ್ ಗ್ರೂಪ್’’(ಎಸ್‌ಎಐಜಿ) ವಹಿಸಿಕೊಂಡಿತ್ತು. ಸೆಶೆಲ್ಸ್‌ನ ಮಾಜಿ ಪ್ರವಾಸೋದ್ಯಮ ಸಚಿವ ಆಲೈನ್ ಸೈಂಟ್ ಆ್ಯಂಜೆ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಈ ಒಪ್ಪಂದದ ಪ್ರಕಾರ ಭಾರತವು ಸೇನಾನೆಲೆಯನ್ನು ನಿರ್ಮಿಸಲಿದ್ದು, ಅದರ ಕಾರ್ಯನಿರ್ವಹಣೆಯ ಹೊಣೆಯನ್ನು ಹೊತ್ತುಕೊಳ್ಳಲಿದೆ. ಭಾರತವು ತನ್ನದೇ ವೆಚ್ಚದಲ್ಲಿ ಸೆಶೆಲ್ಸ್‌ನ ಮಿಲಿಟರಿ ಸಿಬ್ಬಂದಿಗೆ ತರಬೇತಿ ನೀಡಲಿದೆ ಹಾಗೂ ಜಂಟಿ ಸೇನಾ ಕವಾಯತನ್ನು ನಡೆಸಲಿದೆ. ಸೇನಾನೆಲೆಯ ಕಾರ್ಯನಿರ್ವಹಣೆ ಹಾಗೂ ಪಾಲನೆಗಾಗಿ ನೌಕಾಪಡೆಯ ಅಧಿಕಾರಿಯೊಬ್ಬರನ್ನು ಸಹ ಭಾರತ ನೇಮಿಸಲಿದೆ. ಅಲ್ಲಿ ನಿಯೋಜನೆಗೊಳ್ಳುವ ಭಾರತೀಯ ಸಿಬ್ಬಂದಿ ಭಾರತೀಯ ವಾಯುಪಡೆ ಯೋಧರ ಸಮವಸ್ತ್ರಗಳನ್ನು ಧರಿಸಲಿದ್ದಾರೆ ಹಾಗೂ ಆಯುಧಗಳನ್ನು ಹೊಂದಲಿದ್ದಾರೆ.

ಒಪ್ಪಂದದ ವಿವರಗಳು ಸೋರಿಕೆಯಾದ ಬೆನ್ನಲ್ಲೇ ಗುರುವಾರ ಸೆಶೆಲ್ಸ್ ಉಪಾಧ್ಯಕ್ಷ ವಿನ್ಸೆಂಟ್ ಮ್ಯಾರಿಟನ್ ಸಂಸತ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಸೆಶೆಲ್ಸ್ ನ್ಯೂಸ್ ಏಜೆನ್ಸಿಯ ಪ್ರಕಾರ, ಒಪ್ಪಂದದಲ್ಲಿನ ಯೋಜನೆಗಳನ್ನು ಸೋರಿಕೆ ಮಾಡುವುದು ದೇಶದ ಗೌಪ್ಯತಾ ಕಾಯ್ದೆ ಹಾಗೂ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ.

ಯೂಟ್ಯೂಬ್‌ನಲ್ಲಿ ಪ್ರಸಾರವಾದ 20 ಸೆಕೆಂಡ್‌ಗಳ ವೀಡಿಯೊದಲ್ಲಿ ಅಸಂಪ್ಶನ್ ದ್ವೀಪದಲ್ಲಿ ಸೇನಾ ನೆಲೆಯೊಂದನ್ನು ನಿರ್ಮಿಸುವುದಕ್ಕಾಗಿ ಸೆಶೆಲ್ಸ್‌ನ ಸಾರ್ವ ಭೌಮತೆಯನ್ನು ಭಾರತಕ್ಕೆ ಒಪ್ಪಿಸಿಕೊಡಲಾಗಿದೆಯೆಂದು ಆರೋಪಿಸಲಾಗಿದೆ.

ವಿಸ್ತೃತ ಯೋಜನಾ ವರದಿ (ಡಿಪಿಆರ್)ಯ ಪ್ರತಿ ಸೋರಿಕೆಯಾಗಿ ರುವುದು ಭಾರತಕ್ಕಾದ ಗಂಭೀರ ಹಾನಿಯೆಂದು ‘ದಿ ವೈರ್’ನ ವರದಿ ಬಣ್ಣಿಸಿದೆ. ಸೇನಾ ನೆಲೆಯಲ್ಲಿ ನಿರ್ಮಾಣವಾಗಲಿರುವ ಏರ್‌ಸ್ಟ್ರಿಪ್ (ವಿಮಾನ ಇಳಿಯುವ ಹಾಗೂ ಹಾರಾಟ ಆರಂಭಿಸುವ ತಾಣ)ನ ಸ್ಥಳ ಹಾಗೂ ಕೆಲವು ಪ್ರಮುಖ ಸ್ಥಳಗಳ ವಿಸ್ತೀರ್ಣಗಳ ಬಗ್ಗೆಯೂ ವೀಡಿಯೊ ವಿವರಗಳನ್ನು ನೀಡಿದೆ.

ಆದಾಗ್ಯೂ ಈ ಡಿಪಿಆರ್ ವರದಿಗೆ ಜಂಟಿ ಯೋಜನಾ ಕಣ್ಗಾವಲು ಸಮಿತಿಯು ತನ್ನ ಅನುಮೋದನೆಯನ್ನು ಇನ್ನಷ್ಟೇ ನೀಡಬೇಕಾಗಿದೆ. ಸೋರಿಕೆಯ ಹಿನ್ನೆಲೆಯಲ್ಲಿ ಯೋಜನೆಯ ಕೆಲವು ಭಾಗಗಳಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆಯೆನ್ನಲಾಗಿದೆ.

ಯೋಜನೆಯ ವರದಿಯು ಬಹಿರಂಗಗೊಂಡ ಬೆನ್ನಲ್ಲೇ ಸೆಶೆಲ್ಸ್ ಅಧ್ಯಕ್ಷರು ಗುರುವಾರ ಸಂಸತ್‌ನಲ್ಲಿ ನೀಡಿದ ವಿವರಣೆಯಲ್ಲಿ, ಯೋಜನೆಯ ಅನುಷ್ಠಾನವು ಪರಿಶೀಲನಾ ಹಂತದಲ್ಲಿದ್ದು, ಸದ್ಯಕ್ಕೆ ಅದರ ನಿಖರವಾದ ವೆಚ್ಚವನ್ನು ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಯೋಜನೆಯ ಕುರಿತಾಗಿ ಸರಕಾರವು ಆಯೋಜಿಸಿರುವ ಸಾರ್ವಜನಿಕ ಅಹವಾಲುಗಳ ಆಲಿಕೆಯು ಮುಂದುವರಿಯಲಿದೆಯೆಂದು ಅವರು ತಿಳಿಸಿದ್ದರು.

ಮೊದಲ ಸಾರ್ವಜನಿಕ ಅಹವಾಲುಗಳ ಆಲಿಕೆಯನ್ನು ಕಳೆದ ತಿಂಗಳು ನಡೆಸಲಾಗಿದ್ದು, ಆಗ ಈ ಒಪ್ಪಂದದಲ್ಲಿನ ಅಂಶಗಳನ್ನು ಸೆಶೆಲ್ಸ್ ಸರಕಾರದ ಹಿರಿಯ ಅಧಿಕಾರಿಗಳು ವಿವರಿಸಿದ್ದರು. ಸೆಶೆಲ್ಸ್ ಅಧ್ಯಕ್ಷರು ಮಾರ್ಚ್ 7ರಂದು ನೀಡಿದ ಹೇಳಿಕೆಯೊಂದರಲ್ಲಿ ಒಪ್ಪಂದದ ಪ್ರತಿಯನ್ನು ಎಪ್ರಿಲ್‌ನಲ್ಲಿ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅವರಿಗೆ ಸಲ್ಲಿಸುವುದಾಗಿ ತಿಳಿಸಿದರು. ಆದಾಗ್ಯೂ ಒಪ್ಪಂದಕ್ಕೆ ಸೆಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿ ಯಥಾ ಪ್ರಕಾರ ಅನುಮೋದನೆ ನೀಡಲಿದೆಯೇ ಎಂಬುದೀಗ ಸ್ಪಷ್ಟವಾಗಿಲ್ಲ.

ಕೃಪೆ: ದಿ ವೈರ್ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)