varthabharthi

ಕರಾವಳಿ

ಗಂಭೀರ ಆರೋಪಗಳ ಬಗ್ಗೆ ಶಿರೂರು ಸ್ವಾಮೀಜಿ ಹೇಳಿದ್ದೇನು?

ಹಿಂದಿನ ಸ್ವಾಮಿಗಳನ್ನು ಇಡ್ಲಿಯಲ್ಲಿ ವಿಷ ಹಾಕಿ ಕೊಂದರು ಎಂದು ಹೇಳಿದರೇ ಶಿರೂರು ಸ್ವಾಮೀಜಿ?

ವಾರ್ತಾ ಭಾರತಿ : 13 Mar, 2018

ಉಡುಪಿ, ಮಾ.13: "ಕೃಷ್ಣಮಠದ ಅಷ್ಠಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿವೆ. ನನಗೂ ಮಕ್ಕಳಿದ್ದಾರೆ. ವಿಶ್ವಮಾನ್ಯರಾಗಿದ್ದ ಈ ಹಿಂದಿನ ಸ್ವಾಮೀಜಿಯನ್ನು ಇಡ್ಲಿಯಲ್ಲಿ ವಿಷ ಹಾಕಿ ಕೊಲ್ಲಲಾಗಿದೆ" ಎಂದು ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಹೇಳಿರುವುದಾಗಿ ‘ಬಿಟಿವಿ’ ಸುದ್ದಿಯೊಂದನ್ನು ಪ್ರಸಾರ ಮಾಡಿದೆ.

ಕುಟುಕು ಕಾರ್ಯಾಚರಣೆಯಲ್ಲಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಈ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ‘ಬಿಟಿವಿ’ ವರದಿ ಮಾಡಿದೆ.

“8ನೆ ವಯಸ್ಸಲ್ಲಿ ಸನ್ಯಾಸ ನೀಡುತ್ತಾರೆ. ಆಗ ನಮಗೆ ಬುದ್ಧಿ ಇರಲಿಲ್ಲ. ನನಗೂ ಮಕ್ಕಳಿದ್ದಾರೆ. ಕೃಷ್ಣಮಠದ ಅಷ್ಟಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿವೆ. ಸಂಬಂಧ ಇರದಿರುವರು ಮಠದಲ್ಲಿ ಠಿಕಾಣಿ ಹೂಡಿದ್ದಾರೆ. ಸ್ವಾಮಿಯ ಹೆಸರು ಹೇಳಿ 18 ಕೋಟಿ ರೂ. ಹಣ ಮಾಡಿದ್ದಾರೆ. ಐಟಿ ರೈಡ್ ಆದಾಗ ಸ್ವಾಮೀಜಿಯ ಪಿಎಗೆ ಹಣ ಹೋಗಿದೆ. ಪರ್ಯಾಯ ಅಂದರೆ ಹಣ ಮಾಡುವ ಸ್ಕೀಮ್ ಬಿಟ್ಟು ಬೇರೇನಲ್ಲ. ಪರ್ಯಾಯಕ್ಕಾಗಿ 10 ಕೋಟಿಯ ಪ್ರಾಜೆಕ್ಟ್ ತೋರಿಸಿ 4 ಕೋಟಿ ಖರ್ಚು ಮಾಡುತ್ತಾರೆ. 6 ಕೋಟಿ ರೂ.ಗಳನ್ನು ಜೇಬಿಗಿಳಿಸುತ್ತಾರೆ” ಎಂದು ಸ್ವಾಮೀಜಿ ಹೇಳಿರುವುದಾಗಿ 'ಬಿಟಿವಿ' ವರದಿ ಮಾಡಿದೆ.

“ಹಿಂದಿನ ಸ್ವಾಮಿ ವಿಶ್ವ ಮಾನ್ಯರು. ಭಾರೀ ಒಳ್ಳೆಯ ಸ್ವಾಮಿ ಅವರು. ಮಹಾತ್ಮಾ ಗಾಂಧಿಗೂ ಅವರಿಗೂ ನಿಕಟ ಸಂಬಂಧವಿತ್ತು. ಧಾರವಾಡದಲ್ಲಿ ಅವರನ್ನು ಕೊಲೆ ಮಾಡಲಾಯಿತು. ಇಡ್ಲಿಗೆ ವಿಷ ಹಾಕಿ ಕೊಲೆ ಮಾಡಲಾಗಿದೆ. ಈ ವಿಷಯ ಊರಿಗೆಲ್ಲಾ ಗೊತ್ತಿದೆ” ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆಂದು ‘ಬಿಟಿವಿ’ ವರದಿ ಮಾಡಿದೆ.

ಆದರೆ ಈ ಕುಟುಕು ಕಾರ್ಯಾಚರಣೆ ನಡೆದದ್ದು ಎಲ್ಲಿ, ಯಾವಾಗ ಹಾಗು ವಿಡಿಯೋದಲ್ಲಿರುವವರು ಶಿರೂರು ಸ್ವಾಮಿ ಹೌದೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲ.

ಇದು ಫೇಕ್ ವೀಡಿಯೋ: ಶೀರೂರು ಶ್ರೀ ಪ್ರತಿಕ್ರಿಯೆ

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಇಂದು ಸಂಜೆಯಿಂದ ಪ್ರಸಾರವಾಗುತ್ತಿರುವುದು ಫೇಕ್ ವೀಡಿಯೋ. ಡಬ್ಬಿಂಗ್ ಮಾಡಿ ಇದನ್ನು ಈಗ ಹರಿಯಬಿಡಲಾಗಿದೆ. ಇದು ನನ್ನ ವ್ಯಕ್ತಿತ್ವವನ್ನು ಕುಂದಿಸುವ ಹುನ್ನಾರವಾಗಿದೆ ಎಂದು ಉಡುಪಿ ಶೀರೂರು ಮಠದ ಶ್ರೀಲಕ್ಷ್ಮಿವರತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುತ್ತಿರುವ ಈ ವೀಡಿಯೊ ಈ ಚಾನೆಲ್‌ಗೆ ಹೇಗೆ ಸಿಕ್ಕಿತು ಎಂಬುದು ನನಗೆ ಗೊತ್ತಿಲ್ಲ. ಈ ಚಾನೆಲ್‌ನವರಿಗೆ ಈ ವೀಡಿಯೊ ಬಗ್ಗೆ ಮಾಹಿತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಸುಮಾರು 6-7 ತಿಂಗಳ ಹಿಂದೆಯೇ ನಾನು ಇದರ ವಿರುದ್ಧ ಕೋರ್ಟ್‌ಗೆ ಹೋಗಿದ್ದೇನೆ ಎಂದವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಷಡ್ಯಂತ್ರದ ಆರೋಪ: ನಾನು ಇತ್ತೀಚೆಗೆ ರಾಜಕೀಯವನ್ನು ಪ್ರವೇಶಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ಬಳಿಕ, ನನ್ನ ರಾಜಕೀಯ ಪ್ರವೇಶವನ್ನು ಸಹಿಸಲಾರದವರು ಈ ರೀತಿ ಮಾಡಿರಬೇಕು ಎಂದವರು ಆರೋಪಿಸಿದರು. ರಾಜಕೀಯ, ಚುನಾವಣೆ ವಿಚಾರ ಬಂದಾಗ ಮಾನಹಾನಿಗೊಳಿಸುವ ಷಡ್ಯಂತ್ರ ಸಾಮಾನ್ಯವಾಗಿರುತ್ತದೆ. ಒಟ್ಟಾರೆ ನನ್ನ ವ್ಯಕ್ತಿತ್ವ ಕುಂದಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಶಿರೂರು ಶ್ರೀಗಳು ದೂರಿದರು.

ಮುಂದೆ ಇಂಥ ಇನ್ನಷ್ಟು ಅಪ್ರಚಾರಗಳು ನಡೆಯಬಹುದು. ಆದರೆ ಇದಕ್ಕೆಲ್ಲಾ ನಾನು ಜಗ್ಗುವುದಿಲ್ಲ. ಗುಂಡು ಹೊಡೆದರೂ ನಾನು ಸಾಯುವುದಿಲ್ಲ. ನನ್ನೊಂದಿಗೆ ಮುಖ್ಯಪ್ರಾಣನಿದ್ದಾನೆ. ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಘೋಷಿಸಿದರು.

ವೃತ್ತಿ ವೈಷಮ್ಯದಿಂದಲೂ ಈ ರೀತಿ ಮಾಡಿರಬಹುದು. ಇವೆಲ್ಲವಕ್ಕೂ ಕಾನೂನಿನ ಮೂಲಕ ಉತ್ತರಿಸುತ್ತೇನೆ. ಈಗಿನ ವೈಜ್ಞಾನಿಕ ಯುಗದಲ್ಲಿ ಏನನ್ನೂ ಮಾಡಲು ಸಾಧ್ಯವಿದೆ. ಈ ರೀತಿ ಮಾಡಿರುವುದು ಯಾರೆಂದು ಅಷ್ಟಮಠಗಳ ಇತರೆ ಸ್ವಾಮೀಜಿಗಳಿಗೂ ಗೊತ್ತಿದೆ ಎಂದವರು ನುಡಿದರು.

 ಈ ಪ್ರಸಾರಗೊಳ್ಳುತ್ತಿರುವುದು ನಕಲಿ ವೀಡಿಯೊ. ನನ್ನ ಧ್ವನಿಯಲ್ಲಿ ಇನ್ನೊಬ್ಬರು ಮಾತನಾಡಿರಬಹುದು. ಆದರೆ ಇದಕ್ಕೆಲ್ಲಾ ನಾನು ಜಗ್ಗುವುದಿಲ್ಲ. ಚುನಾವಣೆ ಯಲ್ಲಿ ಬಿಜೆಪಿ ಟಿಕೆಟ್ ನೀಡದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಎಂತಹ ಸವಾಲು ಎದುರಾದರು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)