varthabharthi

ಕ್ರೀಡೆ

ಟ್ವೆಂಟಿ-20 ತ್ರಿಕೋನ ಸರಣಿ

ಭಾರತಕ್ಕೆ ಇಂದು ಬಾಂಗ್ಲಾದೇಶ ಎದುರಾಳಿ

ವಾರ್ತಾ ಭಾರತಿ : 14 Mar, 2018

ಕೊಲಂಬೊ, ಮಾ.14: ಆತಿಥೇಯ ಶ್ರೀಲಂಕಾವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾದೇಶವನ್ನು ಬುಧವಾರ ಎದುರಿಸಲಿರುವ ಭಾರತ ತಂಡ ಟ್ವೆಂಟಿ-20 ತ್ರಿಕೋನ ಸರಣಿಯಲ್ಲಿ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.

  ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಅನಿರೀಕ್ಷಿತ ಸೋಲುಂಡಿದ್ದ ಭಾರತ ತನ್ನ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪ್ರಯೋಗ ನಡೆಸುವ ಸಾಧ್ಯತೆಯಿಲ್ಲ. ಶ್ರೀಲಂಕಾ ವಿರುದ್ಧ 215 ರನ್ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಜಯ ಸಾಧಿಸಿದರೆ ಫೈನಲ್‌ಗೆ ತಲುಪುವ ಸಾಧ್ಯತೆಯಿದೆ.

ಒಂದು ವೇಳೆ ಭಾರತ ಸೋತರೆ ಫೈನಲ್ ಹಾದಿ ಬಂದ್ ಆಗುವುದಿಲ್ಲ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಅಂತಿಮ ಲೀಗ್ ಪಂದ್ಯದ ಫಲಿತಾಂಶ ಹಾಗೂ ನೆಟ್ ರನ್-ರೇಟ್ ಭಾರತದ ಫೈನಲ್ ಸ್ಥಾನವನ್ನು ನಿರ್ಧರಿಸುತ್ತದೆ.

ಕಳೆದ ಎರಡು ಪಂದ್ಯಗಳಲ್ಲಿ ಸತತ ಜಯ ದಾಖಲಿಸಿರುವ ಭಾರತ ಪ್ರಸ್ತುತ +0.21 ನೆಟ್ ರನ್‌ರೇಟ್ ಹೊಂದಿದೆ. ಭಾರತ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿತ್ತು. ದೀಪಕ್ ಹೂಡ, ಮುಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ಟೂರ್ನಿಯಲ್ಲಿ ಈತನಕ ಆಡುವ ಅವಕಾಶ ಪಡೆದಿಲ್ಲ. ಹೂಡಾ ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ನಡೆದ ಪಂದ್ಯದಲ್ಲೂ ಆಡುವ ಅವಕಾಶ ಪಡೆದಿರಲಿಲ್ಲ.

ನಾಯಕ ರೋಹಿತ್ ಶರ್ಮರ ಕಳಪೆ ಫಾರ್ಮ್ ಭಾರತಕ್ಕೆ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಭಾರತದ ಓರ್ವ ಶ್ರೇಷ್ಠ ಆರಂಭಿಕ ಆಟಗಾರನಾಗಿರುವ ಮುಂಬೈಕರ್ ದೊಡ್ಡ ಇನಿಂಗ್ಸ್ ಕಟ್ಟಲು ಎದುರು ನೋಡುತ್ತಿದ್ದಾರೆ.

ಶಿಖರ್ ಧವನ್(153 ರನ್) ಭರ್ಜರಿ ಫಾರ್ಮ್ ನಲ್ಲಿದ್ದರೂ ರೋಹಿತ್ ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಶ್ರೀಲಂಕಾ ವಿರುದ್ಧ 25 ಎಸೆತಗಳಲ್ಲಿ 39 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.

ಒಂದು ವೇಳೆ ರೋಹಿತ್ ಅವರು ಕೆಎಲ್ ರಾಹುಲ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿದರೆ, ರೋಹಿತ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸ್ಪೆಷಲಿಸ್ಟ್ ಓಪನರ್ ಆಗಿರುವ ರಾಹುಲ್ ಪ್ರಸ್ತುತ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.

ಭಾರತದ ಬ್ಯಾಟ್ಸ್‌ಮನ್‌ಗಳಿಗಿಂತಲೂ ಬೌಲರ್‌ಗಳು ಬಾಂಗ್ಲಾದೇಶ ದಾಂಡಿಗರಿಂದ ದೊಡ್ಡ ಸವಾಲು ಎದುರಿಸಬೇಕಾಗಿದೆ. ಭಾರತ ತಂಡ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 139 ರನ್‌ಗೆ ನಿಯಂತ್ರಿಸಲು ಶಕ್ತವಾಗಿತ್ತು. ಆದರೆ, ಬಾಂಗ್ಲಾ ತಂಡ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತಮೀಮ್ ಇಕ್ಬಾಲ್, ಲಿಟನ್ ದಾಸ್, ಮುಶ್ಫಿಕುರ್ರಹೀಂ ಸಾಹಸದ ನೆರವಿನಿಂದ ಶ್ರೀಲಂಕಾ ನೆಲದಲ್ಲಿ ಗರಿಷ್ಠ ಮೊತ್ತದ ಗುರಿಯನ್ನು ಬೆನ್ನಟ್ಟಿತ್ತು.

ಬೌಲಿಂಗ್ ವಿಭಾಗದಲ್ಲಿ ಐಪಿಎಲ್‌ನ ದುಬಾರಿ ಬೌಲರ್ ಜೈದೇವ್ ಉನದ್ಕಟ್(11.5 ಕೋ.ರೂ.)ಎಲ್ಲ ಮೂರು ಪಂದ್ಯಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. 2 ಪಂದ್ಯಗಳಲ್ಲಿ 4 ಓವರ್ ಕೋಟಾ ಪೂರ್ಣಗೊಳಿಸಲು ವಿಫಲರಾಗಿದ್ದರು. ಆದಾಗ್ಯೂ ಅನುಭವಿ ಬೌಲರ್ ಉನದ್ಕಟ್ ಆಡುವ 11ರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳುವುದು ನಿಶ್ಚಿತ.

ಶಾರ್ದೂಲ್ ಠಾಕೂರ್ ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ವಿಜಯ್ ಶಂಕರ್ ಕೂಡ ತಂಡದ ಗೆಲುವಿಗೆ ನೆರವಾಗಿದ್ದಾರೆ.

ಪಂದ್ಯದ ಸಮಯ: ರಾತ್ರಿ 7:30 ಗಂಟೆಗೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)