ಬಾಕ್ಸ್ ಆಫೀಸ್ ನಲ್ಲಿ ಸೋನು ಕೆ ಟಿಟು ಜಯಭೇರಿ
ಬಾಲಿವುಡ್ನಲ್ಲಿ ಬಯೋಪಿಕ್ಗಳು, ಐತಿಹಾಸಿಕ ಹಿನ್ನೆಲೆಯ ಹಾಗೂ ಸಾಮಾಜಿಕ ಸಂದೇಶ ಸಾರುವ ಚಿತ್ರಗಳು ವಿಜೃಂಭಿಸುತ್ತಿರುವ ಈಗಿನ ದಿನಗಳಲ್ಲಿ ಲಘುಹಾಸ್ಯದ ಚಿತ್ರವೊಂದು ಬಾಕ್ಸ್ ಆಫೀಸ್ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಲುವ್ ರಾಜ್ನಾಥ್ ನಿರ್ದೇಶನ ‘ಸೋನು ಕೆ ಟಿಟು ಕಿ ಸ್ವೀಟಿ’(ಎಸ್ಕೆಟಿಕೆಎಸ್) ಚಿತ್ರವು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ ಮಾತ್ರವಲ್ಲ ನಿರ್ಮಾಪಕರ ಹಣದ ಥೈಲಿಯನ್ನೂ ತುಂಬಿಸಿದೆ. ಉದಯೋನ್ಮುಖ ನಟರಾದ ಕಾರ್ತಿಕ್ ಆರ್ಯನ್ ಹಾಗೂ ಸನ್ನಿ ಸಿಂಗ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ‘ಪ್ಯಾರ್ ಕಾ ಪಂಚ್ನಾಮಾ 2’ ಚಿತ್ರದ ಧಾಟಿಯಲ್ಲಿದ್ದರೂ, ತಾಜಾ ಕಥೆ ಹಾಗೂ ನಿರೂಪಣೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಇನ್ನೋರ್ವ ಪ್ರತಿಭಾವಂತ ನಟಿ ನುಸ್ರತ್ ಭರೂಚಾ ಅವರ ಅಭಿನಯ ಕೂಡಾ ಚಿತ್ರಕ್ಕೆ ಹೊಸ ಮೈಲೇಜ್ನೀಡಿದೆ.
ಇನ್ನು ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ, ‘ಎಸ್ಕೆಟಿಕೆಎಸ್’ ಗಳಿಕೆಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ಮಾನ್ನ್ನು ಹಿಂದಕ್ಕೆ ಹಾಕಿದೆ. ಅಷ್ಟೇ ಅಲ್ಲ, ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರವನ್ನು ಹೊರತುಪಡಿಸಿ, 2018ರಲ್ಲಿ ಈತನಕ ಗರಿಷ್ಠ ಹಣಸಂಪಾದಿಸಿದ ಚಿತ್ರವೆಂಬ ಹೆಗ್ಗಳಿಕೆ ಕೂಡಾ ‘ಎಸ್ಕೆಟಿಕೆಎಸ್’ನ ಪಾಲಾಗಿದೆ.
ರಿಲೀಸ್ ಆದ ಎರಡೇ ವಾರಗಳಲ್ಲಿ 82.15 ಕೋಟಿ ರೂ. ಬಾಚಿರುವ ಈ ಚಿತ್ರ, ಕೆಲವೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ಗೆ ಸೇರ್ಪಡೆಯಾಗುವುದಂತೂ ಖಂಡಿತವೆಂದು ಬಾಕ್ಸ್ಆಫೀಸ್ ಪಂಡಿತರ ಲೆಕ್ಕಾಚಾರವಾಗಿದೆ. ಎಸ್ಕೆಟಿಕೆಎಸ್ನ ಭರ್ಜರಿ ಯಶಸ್ಸಿನಲ್ಲೀಗ ನಿರ್ದೇಶಕ ಲುವ್ ರಂಜನ್ ತೇಲಾಡುತ್ತಿದ್ದಾರೆ. ದೊಡ್ಡ ಸ್ಟಾರ್ಗಳು ಇದ್ದರೆ ಮಾತ್ರವೇ ಚಿತ್ರ ಭರ್ಜರಿಯಾಗಿ ಓಡಲು ಸಾಧ್ಯವೆಂಬ ಸಾಮಾನ್ಯ ನಂಬಿಕೆಯನ್ನು ಎಸ್ಕೆಟಿಕೆಎಸ್ ಹುಸಿಗೊಳಿಸಿದೆಯೆಂದು ಅವರ ಅಂಬೋಣ.
ಎಸ್ಕೆಟಿಕೆಎಸ್ನ ಗೆಲುವು ಬಾಲಿವುಡ್ನಲ್ಲಿ ಇನ್ನಷ್ಟು ಹಾಸ್ಯ ಹಾಗೂ ಮನರಂಜನೆಯ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿ ನೀಡಲಿದೆಯೆಂದು ಲುವ್ರಂಜನ್ ಅವರ ಅನಿಸಿಕೆಯಾಗಿದೆ.