varthabharthi

ಬುಡಬುಡಿಕೆ

ಕನ್ನಡ ಸಾಯಿತ್ಯ ಪರಿಸತ್ತು ಚುನಾವಣೆಯಲ್ಲಿ ಇವಿಎಂ ಬಳಕೆ!

ವಾರ್ತಾ ಭಾರತಿ : 18 Mar, 2018
-ಚೇಳಯ್ಯ chelayya@gmail.com

ನ್ನಡ ಸಾಯಿತ್ಯ ಪರಿಸತ್ತು ತನ್ನ ಸರ್ವ ಸದಸ್ಯರ ಸಭೆಯನ್ನು ಹಮ್ಮಿಕೊಳ್ಳುವುದರ ಕುರಿತಂತೆ ನಿರ್ಧಾರ ಮಾಡಲಾಯಿತು. ‘ಕೇಶವ ಕೃಪ’ದಲ್ಲಿ ಮಾಡಿದರೆ ಹೇಗೆ ಎಂದು ಹಿರಿಯ ಶಾಯಿತಿಯೋರ್ವರು ಸಲಹೆ ನೀಡಿದರು. ಆದರೆ ಕೇಶವ ಕೃಪೆಗೆ ಹೋಗಬೇಕಾದರೆ ಖಾಕಿ ಪ್ಯಾಂಟು ಕಡ್ಡಾಯವಾಗಿ ಧರಿಸಬೇಕಾಗುತ್ತದೆ. ಸಭೆಗೆ ದಿನಾಂಕ ದೂರವಿಲ್ಲ. ಅಷ್ಟು ಹೊತ್ತಿನಲ್ಲಿ ಪ್ಯಾಂಟು ಹೊಲಿದು ಸಿಕ್ಕದೇ ಇದ್ದರೆ ದಿನಾಂಕವನ್ನು ಮುಂದೂಡಬೇಕಾಗುತ್ತದೆ ಎಂದು ಇನ್ನೋರ್ವ ಹಿರಿಯ ಸಂ-ಶೋಧಕರು ಹೇಳಿದರು. ಹಾಗಾದರೆ ಯಾವುದಾದರೂ ದೇವಸ್ಥಾನದಲ್ಲಿ ಇಟ್ಟರೆ ಹೇಗೇ? ಸಾಧಾರಣವಾಗಿ ಸಾಹಿತ್ಯ ಸಮ್ಮೇಳನಗಳನ್ನು ದೇವಸ್ಥಾನಗಳಲ್ಲಿ ಹರಕೆಯ ಆಟದಂತೆ ಇಡುವ ಸಂಪ್ರದಾಯ ಇರುವುದರಿಂದ ಸಭೆಯೂ ದೇವಸ್ಥಾನಗಳಲ್ಲೇ ಆದರೆ ಸಾಯಿತ್ಯ ಪರಿಸೊತ್ತು ತನ್ನ ಸೊತ್ತನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಎನ್ನುವುದು ಆ ಶೋಧಕರ ಆಶಯವಾಗಿತ್ತು. ‘‘ಹಾಗಾದರೆ ಉಡುಪಿಯ ಕೃಷ್ಣ ಮಠದಲ್ಲಿ ಇಡೋಣ....’’ ಮಗದೊಬ್ಬರು ಸಲಹೆ ನೀಡಿದರು. ಎಲ್ಲರೂ ಸರಿ ಸರಿಯೆಂದರು. ಯಾಕೆಂದರೆ ಸಭೆಯ ಬಳಿಕ ಭೋಜನದ ಸಮಸ್ಯೆಯೂ ಬಗೆ ಹರಿದಂತಾಗುತ್ತದೆ. ಸದ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಅಲ್ಲಿನ ಊಟ, ಉಪಚಾರಗಳನ್ನು ಅವಲಂಬಿಸುತ್ತಿರುವುದರಿಂದ ಪರಿಸತ್ತು ಊಟದ ಕುರಿತಂತೆ ವಿಶೇಷ ಕಾಳಜಿಯನ್ನು ತೆಗೆದುಕೊಂಡಿತ್ತು. ಅಷ್ಟರಲ್ಲಿ ಯಾರೋ ಹೇಳಿದರು ‘‘ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಕ್ಕಳ ಸದ್ದು ಜೋರಾಗಿ ಕೇಳುತ್ತಿವೆ. ಸ್ವಾಮೀಜಿಗಳಿಗೆಲ್ಲ ಮಕ್ಕಳಿವೆ ಎಂದು ಇನ್ನೋರ್ವ ಸ್ವಾಮೀಜಿಗಳೇ ಹೇಳಿರುವುದರಿಂದ, ಸಭೆಯ ಮಧ್ಯೆ ಮಕ್ಕಳು ಬಂದು ರಗಳೆ ಎಬ್ಬಿಸಿದರೆ....?’’ ‘‘ಅದೂ ಹೌದು. ಆದರೆ ಉಡುಪಿಯ ಪುಣ್ಯ ಭೂಮಿಯಲ್ಲೇ ಸಭೆಯನ್ನು ಇಡೋಣ. ಕಸಾಪ ಸಭೆಯಲ್ಲಿ ದೂರದಲ್ಲಾದರೂ ಪೇಜಾವರಶ್ರೀಗಳ ಸಾನ್ನಿಧ್ಯ ಇದ್ದಂತಾಗುತ್ತದೆ....ಸಭೆ ಮುಗಿಸಿದ ಬಳಿಕ ನಾವೆಲ್ಲರೂ ಮಠಕ್ಕೆ ಭೇಟಿ ಕೊಟ್ಟು ಪ್ರಸಾದ ಸೇವಿಸಿದ ಹಾಗೆಯೂ ಆಗುತ್ತದೆ....’’ ಕೊನೆಗೂ ಕನ್ನಡ ಸಾಯಿತ್ಯ ಪರಿಸತ್ತು ಸಭೆ ಉಡುಪಿಯಲ್ಲಿ ನಡೆದು ಭಾರೀ ನಿರ್ಣಯಗಳನ್ನು ಘೋಷಿಸಿಯೇ ಬಿಟ್ಟಿತು. ಪತ್ರಕರ್ತ ಎಂಜಲು ಕಾಸಿ, ಅಲ್ಲಿಯ ನಿರ್ಣಯಗಳನ್ನು ತನ್ನ ಜೋಳಿಗೆಯಲ್ಲಿ ಹಾಕಿಕೊಂಡು ಬಂದವನೇ, ಒಂದೊಂದಾಗಿ ಎತ್ತಿ ಜೋಡಿಸತೊಡಗಿದ.

***

ಕನ್ನಡ ಸಾಯಿತ್ಯ ಪರಿಸತ್ತು ಸರ್ವ ಸದಸ್ಯರ ಸಭೆ ತೆಗೆದುಕೊಂಡ ಕೆಲವು ಪ್ರಮುಖ ನಿರ್ಣಯಗಳು ಇಲ್ಲಿವೆ.

1. ಅಧ್ಯಕ್ಷರ ಅವಧಿ:

ಪರಿಸತ್ತಿನ ಅಧ್ಯಕ್ಷರ ಚುನಾವಣೆಯನ್ನು ಪದೇ ಪದೇ ನಡೆಸುವುದರಿಂದ ಕನ್ನಡ ಸಾಹಿತ್ಯಕ್ಕೆ ಆರ್ಥಿಕವಾಗಿ ಭಾರೀ ನಷ್ಟವಾಗುತ್ತಿದೆ. ಸಾಯಿತ್ಯ ಪರಿಸತ್ ಚುನಾವಣೆಯಲ್ಲೂ ಹಣ, ಹೆಂಡ, ಸೀರೆ ಹಂಚುವಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿಗಳು ದೊರಕುತ್ತಿವೆ. ಆದುದರಿಂದ ಈಗ ಇರುವ ಅಧ್ಯಕ್ಷರನ್ನು ಆಜೀವ ಪರ್ಯಂತ ಅಧ್ಯಕ್ಷರಾಗಿ ನೇಮಕ ಮಾಡಲು ನಿರ್ಣಯ ಮಾಡಲಾಗಿದೆ. ಇತ್ತೀಚೆಗಷ್ಟೇ ಚೀನಾದಲ್ಲೂ ಅಲ್ಲಿನ ರಾಷ್ಟ್ರದ ಅಧ್ಯಕ್ಷರನ್ನು ಆಜೀವ ಪರ್ಯಂತ ನೇಮಕ ಮಾಡಲು ನಿರ್ಧರಿಸಿರುವುದರಿಂದ, ಪರಿಸತ್ತಿನ ನಿರ್ಣಯವು ಚೀನಾ ಮತ್ತು ಕನ್ನಡ ಸಾಹಿತ್ಯದ ಕೊಡುಕೊಳ್ಳುವಿಕೆಯಲ್ಲಿ ಮಹತ್ತರವಾದ ಹೆಜ್ಜೆಯಾಗಿದೆ. ಚೀನಾ ಅಧ್ಯಕ್ಷರ ರಾಜಕೀಯ ಬದುಕಿನಲ್ಲಿ ಸಾಹಿತ್ಯದ ಪಾತ್ರ ಏನು ಎನ್ನುವುದನ್ನು ಸಂಶೋಧಿಸಲು ಕನ್ನಡ ಸಾಯಿತ್ಯ ಪರಿಸತ್ತು ಒಂದು ದತ್ತಿನಿಧಿಯನ್ನು ಸ್ಥಾಪಿಸಿ, ಪ್ರತಿವರ್ಷ ಮೂವರು ಸಾಯಿತಿಗಳು ಮತ್ತು ಸಂಸೋದಕರನ್ನು ಚೀನಾಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ.

2. ಸಾಹಿತ್ಮ ಸಮ್ಮೇಳನದ ಸ್ಥಳ:

ಸಾಹಿತ್ಯ ಸಮ್ಮೇಳನವನ್ನು ಸಾರ್ವಜನಿಕ ಮೈದಾನಗಳಲ್ಲಿ ಹಮ್ಮಿಕೊಳ್ಳುವುದರಿಂದ ಸಾಹಿತ್ಯ ಸರಸ್ವತಿಗೆ ಮೈಲಿಗೆ ಆಗುತ್ತಿದೆ. ಜನರು ಯಾವುದೇ ಮಡಿ ಮೈಲಿಗೆಗಳನ್ನು ಪಾಲಿಸದೇ ಸಭೆಯಲ್ಲಿ ಭಾಗವಹಿಸುವುದರಿಂದ ಕನ್ನಡ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಕಳಪೆಯಾಗುತ್ತಾ ಬಂದಿದೆ. ಆದುದರಿಂದ ಸಾಯಿತ್ಯದೊಳಗೆ ಮಡಿ ಮೈಲಿಗೆಗಳನ್ನು ಕಟ್ಟಾ ನಿಟ್ಟಾಗಿ ಪಾಲಿಸುವ ಹಿನ್ನೆಲೆಯಲ್ಲಿ ಪ್ರತಿ ಸಾಯಿತ್ಯ ಸಮ್ಮೇಳನಗಳನ್ನು ಆಯಾ ಪ್ರಮುಖ ದೇವಸ್ಥಾನಗಳ ಪ್ರಾಂಗಣದಲ್ಲೇ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.

3. ಸಾಹಿತ್ಯೋಪಚಾರ:

ಸಾಹಿತ್ಯ ಸಮ್ಮೇಳನದ ಯಶಸ್ಸು ಊಟವನ್ನು ಅವಲಂಬಿಸಿಕೊಂಡಿದೆ. ಊಟದ ವ್ಯವಸ್ಥೆ ಯಶಸ್ವಿಯಾದರೆ ಸಾಯಿತ್ಯ ಸಮ್ಮೇಳನ ಯಶಸ್ವಿಯಾದಂತೆ ಎನ್ನುವುದನ್ನು ಈಗಾಗಲೇ ಮಾಜಿ ಕಸಾಪ ಅಧ್ಯಕ್ಷ ಪುನರೂರು ಸಾಬೀತು ಮಾಡಿ ತೋರಿಸಿದ್ದಾರೆ. ಆದುದರಿಂದ ಸಾಯಿತ್ಯ ಸಮ್ಮೇಳನದಲ್ಲಿ ಊಟದಲ್ಲಿ ಸಾಹಿತ್ಯದ ಮಡಿ ಮೈಲಿಗೆಗಳು ಕೆಡದ ಹಾಗೆ ಪಂಕ್ತಿಭೇದವನ್ನು ಕಡ್ಡಾಯಗೊಳಿಸಬೇಕು. ಹೇಗೆ ನವೋದಯ, ನವ್ಯ, ಬಂಡಾಯ, ದಲಿತ ಸಾಹಿತ್ಯ ಪಂಕ್ತಿಗಳಿವೆಯೋ ಅದಕ್ಕೆ ತಕ್ಕ ಹಾಗೆ ಬ್ರಾಹ್ಮಣರಿಗೆ ನವೋದಯ ಪಂಕ್ತಿ, ವೈಶ್ಯರಿಗೆ ಅಂದರೆ ಉದ್ದಿಮೆದಾರರಿಗೆ ನವ್ಯ ಪಂಕ್ತಿ, ಶೂದ್ರರಿಗೆ ಬಂಡಾಯ ಮತ್ತು ದಲಿತರಿಗೆ ದಲಿತ ಸಾಹಿತ್ಯ ಪಂಕ್ತಿಯೆಂದು ವಿಭಾಗಿಸಿ ಸಾಹಿತ್ಯ ಹಿರಿಮೆಯನ್ನು ಊಟದಲ್ಲೂ ಕಾಪಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಹಾಗೆಯೇ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಹೊಟೇಲ್ ಉದ್ಯಮಿಗಳನ್ನು, ಖ್ಯಾತ ಅಡುಗೆ ಭಟ್ರನ್ನು ಆಯ್ಕೆ ಮಾಡಬೇಕು. ಇದರಿಂದ ಸಾಹಿತ್ಯದ ಘಮ ಇನ್ನಷ್ಟು ದೂರ ಹರಡುತ್ತದೆ ಎಂದು ನಿರ್ಧರಿಸಲಾಯಿತು.

4. ಚುನಾವಣಾ ಪ್ರಕ್ರಿಯೆ:

ಮುಂದಿನ ದಿನಗಳಲ್ಲಿ ಒಂದು ಅಧ್ಯಕ್ಷರ ಜೀವಿತಾವಧಿ ಮುಗಿದು ಇನ್ನೊಂದು ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಇವಿಎಂ ಬಳಸಬೇಕು. ಕಸಾಪದ ಒಳಗಿನ ಯಾವುದೇ ಚುನಾವಣಾ ಪ್ರಕ್ರಿಯೆ ಇವಿಎಂ ಮೂಲಕವೇ ನಡೆಯಬೇಕು. ಹಾಗೆಯೇ ಗುಜರಾತ್‌ನಲ್ಲಿ ಬಳಸಿದ ಇವಿಎಂ ಯಂತ್ರಗಳನ್ನು ಬಳಸುವ ಮೂಲಕ ಕರ್ನಾಟಕ ಸಾಹಿತ್ಯಕ್ಕೂ ಗುಜರಾತ್ ಸಾಹಿತ್ಯಕ್ಕೂ ನಂಟು ಬೆಸೆದಂತೆ ಆಗುತ್ತದೆ. ಇದೇ ಸಂದರ್ಭದಲ್ಲಿ ‘ಇವಿಎಂ ಸಾಹಿತ್ಯದಲ್ಲಿ ಕನ್ನಡ ಪ್ರಜ್ಞೆ’ ಎನ್ನುವುದರ ಕುರಿತಂತೆ ಸಂಸೋಧನೆ ನಡೆಸಲು ದತ್ತಿ ನಿಧಿಯೊಂದನ್ನು ಸ್ಥಾಪಿಸಬೇಕು.

5. ಸಮ್ಮೇಳನದ ನಿರ್ಣಯಗಳು:

 ಹಲವು ದಶಕಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಬೇರೆ ಬೇರೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅವೆಲ್ಲವೂ ಪರಿಸತ್ತಿನ ಹಿಂಬದಿಯಲ್ಲಿ ರಾಶಿರಾಶಿಯಾಗಿ ಕೊಳೆತು ನಾರುತ್ತಿವೆ. ಈ ನಿರ್ಣಯಗಳನ್ನು ಗೊಬ್ಬರಗಳಾಗಿ ಬಳಸಿ ನಾಡಿನ ರೈತರಿಗೆ ಹಂಚುವುದರ ಮೂಲಕ, ಸಾಹಿತ್ಯದಲ್ಲಿ ಗೊಬ್ಬರದ ವಾಸನೆಯನ್ನು ರಾಜ್ಯಾದ್ಯಂತ ಹರಡಬೇಕಾಗಿದೆ. ಈ ಮೂಲಕ ಕನ್ನಡ ಸಾಹಿತ್ಯ ರೈತರನ್ನು ತಲುಪಿದಂತೆ ಆಗುತ್ತದೆ. ಇದೇ ಸಂದರ್ಭದಲ್ಲಿ ಕೊಳೆತು ರಾಶಿ ಬಿದ್ದಿರುವ ನಿರ್ಣಯಗಳಿಂದ ಗೋಬರ್ ಗ್ಯಾಸ್ ಮಾಡುವ ಕುರಿತಂತೆ ಸಂಶೋಧನೆ ನಡೆಸಲು ಪತಂಜಲಿ ಸಂಸ್ಥೆಗೆ ಹತ್ತು ಕೋಟಿ ರೂಾಯಿಯನ್ನು ನೀಡಲು ನಿರ್ಣಯಿಸಲಾಗಿದೆ.

****

ನಿರ್ಣಯಗಳಲ್ಲಿ ಸಾಹಿತ್ಯದ ವಾಸನೆಯನ್ನು ಹೀರುತ್ತಾ ಹೀರುತ್ತಾ ಪತ್ರಕರ್ತ ಎಂಜಲು ಕಾಸಿ ಎಚ್ಚರ ತಪ್ಪಿ ಕೆಳಗೆ ಬಿದ್ದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)