ವಲಸೆ ಕಾರ್ಮಿಕರ ಶಾಲಾ ಮಕ್ಕಳೊಂದಿಗೆ ಬೆರೆತ ರಾಹುಲ್ ಗಾಂಧಿ
ಪಡುಬಿದ್ರೆ, ಮಾ.20: ವಲಸೆ ಕಾರ್ಮಿಕರ ಮಕ್ಕಳೇ ಹೆಚ್ಚು ಕಲಿಯುತ್ತಿರುವ ತೆಂಕಎರ್ಮಾಳ್ ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ತೆರಳಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಜೊತೆ ಕೆಲಹೊತ್ತು ಬೆರೆತು ಅವರ ಹೆಸರು, ತರಗತಿಯ ಬಗ್ಗೆ ವಿಚಾರಿಸಿದರು.
ಅಪರಾಹ್ನ 11:55ಕ್ಕೆ ಶಾಲಾ ಮೈದಾನದಲ್ಲಿ ನಿರ್ಮಿಸಿದ ಹೆಲಿಪ್ಯಾಡ್ಗೆ ಆಗಮಿಸಿದ ರಾಹುಲ್ ಗಾಂಧಿ ಸುತ್ತಮುತ್ತ ನೆರೆದ ಸಾರ್ವಜನಿಕರಿಗೆ ಕೈ ಬೀಸಿಕೊಂಡು ಬಂದರು. ಆಗ ಶಾಲಾ ಕಿಟಕಿಯಲ್ಲಿ ಕೈಬೀಸುತ್ತಿರುವ ಮಕ್ಕಳನ್ನು ಕಂಡ ರಾಹುಲ್ ಗಾಂಧಿ ನೇರ ಶಾಲೆಯೊಳಗೆ ತೆರಳಿದರು.
ಆದರೆ ಭದ್ರತೆಯ ಹಿನ್ನೆಲೆಯಲ್ಲಿ ಶಾಲೆಯ ಗೇಟಿಗೆ ಪೊಲೀಸರು ಬೀಗ ಹಾಕಿದ್ದರು. ಅದನ್ನು ತೆರವುಗೊಳಿಸಿ, ತನ್ನ ಭದ್ರತಾ ಸಿಬ್ಬಂದಿಗಳನ್ನು ಹಿಂದೆ ಬಿಟ್ಟು ನೇರವಾಗಿ ಶಾಲೆಯೊಳಗೆ ಹೋದ ರಾಹುಲ್ ಗಾಂಧಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ವಲಸೆ ಕಾರ್ಮಿಕರ ಮಕ್ಕಳೊಂದಿಗೆ ಬೆರೆತು ಅವರ ತರಗತಿ, ಹೆಸರುಗಳನ್ನು ವಿಚಾರಿಸಿದರು.
ನೀವು ನಮ್ಮ ಶಾಲೆಗೆ ಬಂದದ್ದು ಮಕ್ಕಳು ಸೇರಿದಂತೆ ಎಲ್ಲರಿಗೂ ತುಂಬಾ ಸಂತೋಷ ಆಗಿದೆ ಎಂದು ಮುಖ್ಯೋಪಾಧ್ಯಾಯಿನಿ ಸುನೀತಾ ಯು. ಹೇಳಿದರು.