ಧನುಷ್ಗೂ ಹಾರರ್ ಕ್ರೇಝ್
ತಮಿಳಿನಲ್ಲಿ ಈಗ ಹಾರರ್ ಚಿತ್ರಗಳದ್ದೇ ಹವಾ. ಡೋರಾ, ಅರಮನೈ, ಡಾರ್ಲಿಂಗ್ ಹೀಗೆ ಸಾಲುಸಾಲು ಹಾರರ್ ಚಿತ್ರಗಳು ಹಿಟ್ ಆಗಿರುವುದು, ಪ್ರೇಕ್ಷಕರನ್ನು ‘ಭಯಪಡಿಸುವ’ ಚಿತ್ರಗಳಿಗೆ ಹಣ ಸುರಿಯಲು ತಮಿಳು ನಿರ್ಮಾಪಕರನ್ನು ಉತ್ತೇಜಿಸಿದೆ. ಇದಕ್ಕೆ ತಮಿಳಿನ ಸೂಪರ್ಸ್ಟಾರ್ ಧನುಷ್ ಕೂಡಾ ಹೊಸತಲ್ಲ. ಸದ್ಯದಲ್ಲೇ ಧನುಷ್ ತನ್ನ ಹೋಂ ಪ್ರೊಡಕ್ಷನ್ಸ್ನಲ್ಲಿ ಹಾರರ್ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಮಾತ್ರವಲ್ಲ, ಈ ಚಿತ್ರಕ್ಕೆ ಸ್ವತಃ ಅವರ ಪತ್ನಿ ಐಶ್ವರ್ಯಾ ಆರ್. ಆ್ಯಕ್ಷನ್ ಕಟ್ ಹೇಳಲಿದ್ದಾರೆ.
‘3’ ಹಾಗೂ ‘ವಾಯ್ ರಾಜಾ ವಾಯ್’ ಚಿತ್ರಗಳ ಬಳಿಕ ಐಶ್ವರ್ಯಾ ನಿರ್ದೇಶಿಸಲಿರುವ ಮೂರನೆ ಚಿತ್ರ ಇದಾಗಿದೆ. ಕಳೆದ ವರ್ಷ ಐಶ್ವರ್ಯಾ, ತಾನು ತಮಿಳುನಾಡಿನ ಖ್ಯಾತ ಪ್ಯಾರಾಲಿಂಪಿಕ್ ಹೈಜಂಪರ್ ಮಾರಿಯಪ್ಪನ್ ತಂಗವೇಲು ಕುರಿತ ಬಯೋಪಿಕ್ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದಾರೆ. ‘ಮಾರಿಯಪ್ಪನ್ ’ಎಂದು ಹೆಸರಿಡಲಾಗಿದ್ದ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಾಲಿವುಡ್ ಸೂಪರ್ಸ್ಟಾರ್ ಶಾರುಕ್ಖಾನ್ ಬಿಡುಗಡೆಗೊಳಿಸಿದ್ದರು. ಹೀಗೆ ಆರಂಭದಲ್ಲಿ ಭಾರೀ ಸದ್ದು ಮಾಡಿದ ಈ ಪ್ರಾಜೆಕ್ಟ್, ಅದ್ಯಾಕೋ ಮುಂದೆ ಸಾಗದೆ ಮಖಾಡೆ ಮಲಗಿತ್ತು.
ಚಿತ್ರದ ಪಾತ್ರವರ್ಗದ ಆಯ್ಕೆ ಇನ್ನೂ ಆಗಿಲ್ಲ ವಾದರೂ, ಧನುಷ್ ನಟಿಸುವ ಸಾಧ್ಯತೆಯೂ ಇಲ್ಲದಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ಹೆಸರಿಡದ ಈ ಚಿತ್ರ ಮುಂದಿನ ತಿಂಗಳ ಮೊದಲ ವಾರದಲ್ಲಿ ಶೂಟಿಂಗ್ ಆರಂಭಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ಧನುಷ್, ಸ್ವತಃ ತಾನು ನಿರ್ಮಿಸಿ ನಟಿಸುತ್ತಿರುವ ‘ವಡ ಚೆನ್ನೈ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಗೌತಮ್ ಮೆನನ್ ನಿರ್ದೇಶನದ ತಮಿಳು ಚಿತ್ರ ಹಾಗೂ ತನ್ನ ಚೊಚ್ಚಲ ಹಾಲಿವುಡ್ ಚಿತ್ರ ‘ದಿ ಎಕ್ಸ್ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್’ನ ಶೂಟಿಂಗ್ನ್ನು ಪೂರ್ಣಗೊಳಿಸಿದ್ದಾರೆ.