varthabharthi

ಕೃತಿ ಪರಿಚಯ

ಪುಸ್ತಕದೊಳಗಿಂದ...

‘ನುಡಿ ಬಾಗಿನ’-ಅಭಿನಂದನಾ ಗ್ರಂಥವೋ? ವಿಮರ್ಶೆ ಕೃತಿಯೋ?

ವಾರ್ತಾ ಭಾರತಿ : 27 Mar, 2018
ಶಿವಮಾಧು ಎಂ. ಬೆಂಗಳೂರು

 ಕನ್ನಡ ಸಾಹಿತ್ಯ ವಿಮರ್ಶೆಯ ಹಿರಿಯ ತಲೆಗಳಲ್ಲಿ ಎಚ್.ಎಸ್. ರಾಘವೇಂದ್ರ ರಾವ್ ಪ್ರಮುಖರು. ನವ್ಯ ಚಳವಳಿಯ ಪ್ರಾರಂಭಘಟ್ಟದಿಂದ ತಮ್ಮ ಬರಹವನ್ನು ಆರಂಭಿಸಿ 30-35 ವರ್ಷಗಳ ಅವಧಿಯ ಸಮಕಾಲೀನ ವಿಮರ್ಶಾ ಮೌಲ್ಯಗಳ ದೃಷ್ಟಿಯಿಂದ ವಿಶಿಷ್ಟ ರೀತಿಯ ಅಸ್ಮಿತೆಯನ್ನು ಉಳಿಸಿಕೊಂಡವರು. ಎಚ್.ಎಸ್.ಆರ್. ಕೇವಲ ವಿಮರ್ಶಕರಲ್ಲ. ಅನುವಾದ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಕೃತಿಗಳು ರಚಿಸಿದವರು. ‘ಆಫ್ರಿಕಾದ ಕಪ್ಪು ಕವಿತೆಗಳು’ ಕನ್ನಡಕ್ಕೆ ತಂದವರು. ಅವರ 40 ದಶಕದ ನಿರಂತರವಾದ ಯಶಸ್ವಿ ಸಾಹಿತ್ಯ ಜೀವನಕ್ಕೆ ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಮತ್ತು ವಿಕ್ರಮ ವಿಸಾಜಿಯವರು ಹಾಗೂ ಕಾವ್ಯಮನೆ ಪ್ರಕಾಶನ ನುಡಿ ಬಾಗಿನದ ಮೂಲಕ ನುಡಿ ನಮನ ಸಲ್ಲಿಸಿದೆ.

ನುಡಿ ಬಾಗಿನ ಎಂಬ ಶೀರ್ಷಿಕೆಯು ಓದುಗರ ಸೃಜನಶೀಲ ಮನಸ್ಸಿಗೆ ಕೌತುಕವೇ ಸರಿ. ‘ಬಾಗಿನ’ ಎಂಬ ಪರಿಭಾವನೆಯು ನಮ್ಮ ಪರಂಪರೆಯಲ್ಲಿ ವಿಶಿಷ್ಟ ಸಂದರ್ಭದಲ್ಲಿ ಸಮೃದ್ಧತೆಯ, ಸಂತೃಪ್ತಿಯ ಮೌಲ್ಯಗಳನ್ನು ತನ್ನೊಳಗಿರಿಸಿಕೊಂಡಿದೆ. ಕನ್ನಡ ಸಾಹಿತ್ಯಲೋಕದ ಅಭಿನಂದನಾ ಕೃತಿಗಳಲ್ಲಿ ನುಡಿಬಾಗಿನ ಕೃತಿಯು ವಿಶಿಷ್ಟವಾಗಿ ನಿಲ್ಲುತ್ತದೆ. ಬಹುಪಾಲು ಅಭಿನಂದನಾ ಕೃತಿಗಳು ಬರಹಗಾರನೊಬ್ಬನ ವೈಯಕ್ತಿಕ ಬದುಕಿನ ಒಡನಾಟದ ಅನುಭವಗಳ ಅಥವಾ ಕೆಲವು ಸಾರಿ ಹುಸಿ ಹೊಗಳಿಕೆಗಳಿಂದಲೇ ತುಂಬಿರುತ್ತದೆ. ಆದರೆ ಈ ಕೃತಿಯಲ್ಲಿರುವ ಒಂದೆರೆಡು ಲೇಖನಗಳು ಮಾತ್ರ ಚೂರು ಪಾರು ಎಚ್.ಎಸ್.ಆರ್. ಬಗ್ಗೆ ಮಾತನಾಡುತ್ತವೆ. ಉಳಿದ ಲೇಖನಗಳೆಲ್ಲ ಅವರು ರಚಿಸಿದ ಸಾಹಿತ್ಯದ ವಿಮರ್ಶೆಗಳೇ ಆಗಿವೆ. ಕನ್ನಡದ ಬಹುತೇಕ ಮಹತ್ತದ ಲೇಖಕರ ಲೇಖನಗಳೆಲ್ಲ ಇಲ್ಲಿದ್ದು ಇವುಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದವುಗಳಾಗಿವೆ. ನುಗಡೋಣಿ ಮತ್ತು ವಿಸಾಜಿಯವರು ಈ ಲೇಖನಗಳು ಒಂದುಕಡೆ ಸೇರಿಸಲು ಪಟ್ಟ ಶ್ರಮ ದೊಡ್ಡದು. ಎಚ್.ಎಸ್.ಆರ್. ಅವರೇ ಹೇಳುವಂತೆ ‘‘ವಿಮರ್ಶೆ ಎನ್ನುವುದು ತನ್ನದೇ ಆದ ಲೋಕದರ್ಶನವನ್ನು ಹೇಳುವ ಕೆಲಸ, ಅಂದರೆ ಸಮಾಜ-ಬದುಕು-ಅನುಭವ ಇವುಗಳ ಅಂತರ ಸಂಬಂಧದೊಳಗೆ ನಡೆಯುವ ಸಂಭಾಷಣೆಯಾಗಿರುತ್ತದೆ’’ ಹಾಗಾಗಿ ಸಾಹಿತ್ಯವು ಲೇಖಕನ ಲೋಕಾನುಭವ ಜೀವನಾನುಭವಗಳ ಸಂವೇದನೆಗಳಿಗೆ ಅವನ ವ್ಯಕ್ತಿತ್ವಕ್ಕೆ ಕನ್ನಡಿಯೇ ಆಗಿರುತ್ತದೆ.
ನುಡಿ ಬಾಗಿನದಲ್ಲಿ ಒಟ್ಟು ಮೂರು ಭಾಗಗಳಿವೆ. 1. ವಿಮರ್ಶೆ ವಿಭಾಗ 2. ಅನುವಾದ ವಿಭಾಗ 3. ಸಂದರ್ಶನ ವಿಭಾಗ. ಎಚ್.ಎಸ್.ಆರ್. ಕೇವಲ ಯಾವುದೇ ಒಂದು ಪ್ರಕಾರಕ್ಕೆ ಸೀಮಿತವಾದವರಲ್ಲ. ಅವರ ಆಲೋಚನೆಯ ಬೇರುಗಳು ಸದಾ ಎಲ್ಲವನ್ನೂ ಧ್ಯಾನಿಸುತ್ತಿರುತ್ತವೆ.
‘‘ಎಚ್.ಎಸ್.ಆರ್. ಅವರು ತಮ್ಮ ನಿಲುವು ವಿಮರ್ಶಾ ಸಂಕಲನದಲ್ಲಿ ತಮ್ಮ ನಿಲುವು ತಿಳಿಸುವ ಒಂದು ಲೇಖನವನ್ನು ಬರೆದಿದ್ದಾರೆ. ಅದರಲ್ಲಿ... ‘ಸೃಜನಶೀಲ ಸಾಹಿತಿಗಳ ಸೃಷ್ಟಿಕಾರ್ಯವು ಯಾವುದೇ ವಿಮರ್ಶಕನ ಸಾಧನೆಗಿಂತ ಮೇಲು ದರ್ಜೆಯದೆಂದು ನಾನು ತಿಳಿದಿದ್ದೇನೆ’ ಎಂದಿದ್ದಾರೆ. ಬಹುಶಃ ನಾಡಿನ ವಿಮರ್ಶಾ ವಲಯದಲ್ಲಿ ಇನ್ಯಾರೂ ಇಂತಹ ಮಾತನ್ನು ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ವಿಮರ್ಶಕರು ಗತ್ತಿನಿಂದ ಇರುವುದನ್ನು ನೋಡುತ್ತೇವೆ. ಕನ್ನಡದಲ್ಲಿ ವಿಮರ್ಶೆ ಹೇಗಿರಬೇಕೆಂದು ತೋರಿಸಿದವರು ಎಚ್.ಎಸ್.ಆರ್. !’’ - ಈ ಕೃತಿಗೆ ಸಂಪಾದಕೀಯ ಮಾತು ಬರೆದಿರುವ ನುಗಡೆಣಿಯವರ ಕೆಲವು ಮಾತುಗಳಿವು.
  ಬದುಕು-ಸಾಹಿತ್ಯಗಳೆರಡು ಒಂದೇ ಎಂದು ನಂಬಿ ಬದುಕಿದ ಎಚ್.ಎಸ್.ಆರ್.ರವರ ನುಡಿ ಬಾಗಿನ ಅಭಿನಂದನಾ ಕೃತಿಯು ಸಾಹಿತ್ಯದ ಮೂಲಕವೇ ವಿಮರ್ಶಕನೊಬ್ಬನ ವ್ಯಕ್ತಿತ್ವವನ್ನು ಬದುಕಿನ ಮೌಲ್ಯಗಳನ್ನು ಹುಡುಕ ಹೊರಟ ವಿಭಿನ್ನ ರೀತಿಯ ಕೃತಿಯಾಗಿದೆ. ಹೌದು ಎಚ್.ಎಸ್.ಆರ್. ಹೇಳುವಂತೆ ‘‘ವಿಮರ್ಶೆ ಎನ್ನುವುದು ತನ್ನದೇ ಆದ ಲೋಕದರ್ಶನವನ್ನು ಹೇಳುವ ಕೆಲಸ.ಅಂದರೆ ಸಮಾಜ-ಬದುಕು-ಅನುಭವ ಇವುಗಳ ಅಂತರ್ ಸಂಬಂಧದೊಳಗೆ ನಡೆಯುವ ಸಂಭಾಷಣೆಯಾಗಿರುತ್ತದೆ. ಹಾಗಾಗಿ ಸಾಹಿತ್ಯವು ಲೇಖಕನ ಲೋಕಾನುಭವ, ಜೀವನಾನುಭವಗಳ ಸಂವೇದನೆಗಳಗೆ ಅವರ ವ್ಯಕ್ತತ್ವಕ್ಕೆ ಕನ್ನಡಿಯೇ ಆಗಿರುತ್ತದೆ.’’
 ‘‘ಸಮಕಾಲೀನತೆಗೆ ಸ್ಪಂದಿಸುವ ಮನಸ್ಸು ಸದಾ ಜೀವಂತವಾಗಿರುತ್ತದೆ. ಆ ಮನಸ್ಸು ಸಮಕಾಲೀನ ಅಗತ್ಯಕ್ಕೆ, ಅನಿವಾರ್ಯತೆಗೆ ಅನುಗುಣವಾಗಿ ಸೃಜನಾತ್ಮಕವಾಗಿ ರೂಪು ತಳೆದಿರುತ್ತದೆ.’’ ಇಂತಹ ನಿತ್ಯ ಹೊಸತನದ ಬರವಣಿಗೆಯ ಶೈಲಿಯನ್ನು ಉಳಿಸಿಕೊಂಡಿರುವ ಎಚ್.ಎಸ್.ಆರ್.ರವರು, ‘‘30-35 ವರ್ಷಗಳಿಂದ ವಿಮರ್ಶೆ ಬರೆಯುತ್ತಾ, ಜೊತೆ ಜೊತೆಗೆ ಸ್ವವಿಮರ್ಶೆಯ ಮೂಲಕ ವಿಮರ್ಶೆಯ ಕುರಿತ ತಿಳುವಳಿಕೆಗಳನ್ನು ಬದಲಿಸಿಕೊಳ್ಳುತ್ತಾ, ಹಿಂದಿನ ಹಂತಗಳನ್ನು ಮರೆತು ಪ್ರತೀ ಕ್ಷಣದ ತಾತ್ಕಾಲಿಕ ಸತ್ಯಗಳನ್ನು ಉಳಿಸಿಕೊಂಡ ತಮ್ಮ ವಿಮರ್ಶೆ ಅವರನ್ನು ವಿಸ್ತರಿಸಿಕೊಂಡು ಬೆಳೆದಿರುವುದನ್ನು ಈ ಕೃತಿಯಲ್ಲಿ ಗುರುತಿಸಿದ್ದಾರೆ. ‘‘ನನ್ನನ್ನು ಇಂದಿಗೂ ಆರೋಗ್ಯವಾಗಿಟ್ಟಿದ್ದು ನನ್ನ ಓದು’’ ಎನ್ನುವ ಎಚ್.ಎಸ್.ಆರ್. ಮಾತಿನಲ್ಲಿ ಸತ್ಯವಿದೆ.
ಸ್ವ-ವಿಮರ್ಶೆ ಮತ್ತು ಸಮಕಾಲೀನ ಜಗತ್ತಿನ ಜೊತೆ ನಡೆಸಿದ ಸಂವಾದದ ಪ್ರತೀಕವಾಗಿ ಇತ್ತೀಚಿನ 10-12 ವರ್ಷಗಳಿಂದ ಹೊಸದಾಗಿ ಬರೆಯುತ್ತಿರುವ ಯುವ ಬರಹಗಾರರ ಅಥವಾ ಕವಿಗಳ ಬಹುತೇಕ ಕೃತಿಗಳಿಗೆ ಎಚ್.ಎಸ್.ಆರ್.ರವರು ಮುನ್ನುಡಿ ಬರೆದಿದ್ದಾರೆ. ವಸಾಹತೋತ್ತರ ಕಾಲಘಟ್ಟದ ಕೇಂದ್ರ ಅಂಚು, ರಚನೆ-ನಿರಚನೆ ಎಂದು ಮುಕ್ತತೆಯ ಕವಿ ಮನಸ್ಸುಗಳಿಗೆ ಬಿಸಿನೀರನ್ನು ಎರಚದೆ, ವಿಶ್ಲೇಷಣೆ, ಸೂಚನೆ, ಮೆಚ್ಚುಗೆಗಳ ಸಮತೂಕದ ಉದಾರವಾದಿತನದ ಮೂಲಕ ದಾರಿದೀಪವಾಗಿದ್ದಾರೆ. ಇದು ಅವರ ಸಾಹಿತ್ಯ ಪ್ರೀತಿಗೆ ಮತ್ತು ತಾವು ಲೇಖಕರಾಗಿ ಕಿರಿಯರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ, ಕರ್ತವ್ಯ ಎಂದು ಭಾವಿಸಿದ್ದಾರೆ. ಒಟ್ಟಾರೆ ಎಚ್.ಎಸ್.ಆರ್.ರವರ ಮುನ್ನುಡಿ ಬರಹಗಳೇ ಒಂದು ವಿಮರ್ಶಾ ಕೇಂದ್ರಗಳಾಗಿ ನಡೆದು ಬಂದಿವೆ ಎಂದು ಸಿ.ಎನ್.ರಾಮಚಂದ್ರನ್ ಅವರು ಶ್ಲಾಘಿಸಿದ್ದಾರೆ.

 ಸಾಮಾಜಿಕ ಬದಲಾವಣೆಗಳು ಕ್ರಾಂತಿಯ ಮೂಲಕ ಉಂಟಾಗುವ ದೀರ್ಘಕಾಲಿಕ ಪ್ರಕ್ರಿಯೆ. ಈ ಪ್ರಕ್ರಿಯೆಯು ಚಳವಳಿಗಳು ಎಂಬ ಒಂದು ದಾರಿಯಲ್ಲಿ ಸಾಗಿದರೆ, ಸಾಹಿತ್ಯ ಎಂಬ ಮತ್ತೊಂದು ದಾರಿಯಲ್ಲಿ ಸಾಗುತ್ತದೆ. ಈ ಎರಡನೆ ದಾರಿಯನ್ನು ಆಯ್ಕೆ ಮಾಡಿಕೊಂಡ ಎಚ್.ಎಸ್.ಆರ್.ರವರು ಸಾಮಾಜಿಕ ನ್ಯಾಯ, ಸ್ತ್ರೀಪರ ದನಿಯಾಗಿ ಬದಲಾವಣೆಗೆ ದುಡಿದವರು. ಸ್ವಕೇಂದ್ರಿತ ಚಿಂತನಾ ಕ್ರಮವನ್ನು ಸಮುದಾಯ ಕೇಂದ್ರಿತ ಪ್ರಜ್ಞೆಯಾಗಿ ಸಾಹಿತ್ಯ ಲೋಕದಲ್ಲಿ ಓದುಗರನ್ನು ಜೊತೆಗೆ ವೃತ್ತಿ ಜೀವನದ ಮೂಲಕ ಶಿಷ್ಯ ಪರಂಪರೆಯನ್ನು ಸೃಷ್ಟಿಸಿದವರು. ಇಂತಹ ಸಾಮಾಜಿಕ ಬದಲಾವಣೆಯ ಬೆಳವಣಿಗೆಯನ್ನು ಸಾಹಿತ್ಯದ ಸಂವೇದನೆಯಾಗಿಸಿ ವಿಸ್ತರಿಸಿದ್ದು ಇಂದಿಗೂ ಸಾಹಿತ್ಯದ ವಿದ್ಯಾರ್ಥಿಯಾಗಿರುವ ಎಚ್.ಎಸ್.ಆರ್.ರವರ ಸಾಹಿತ್ಯ ಓದು. ಆ ಮೂಲಕ ಬರವಣಿಗೆಯ ಗುರಿಗಳನ್ನು ಕಾಲದಿಂದ ಕಾಲಕ್ಕೆ ಬದಲಿಸಿಕೊಂಡು, ವಿಸ್ತರಿಸಿಕೊಂಡು ಬಂದಿರುವ ಸ್ವರೂಪವನ್ನು ಈ ಕೃತಿಯ ವಿಮರ್ಶೆ ವಿಭಾಗದ ಲೇಖನಗಳು ಸೂಕ್ಷ್ಮವಾಗಿಯೇ ತನ್ನೊಳಗಿರಿಸಿಕೊಂಡಿವೆ. ಎಚ್.ಎಸ್.ಆರ್.ರವರ ವಿಶ್ವ ಸಾಹಿತ್ಯದ ಜೊತೆಗಿನ ಸಂಬಂಧವು ಗಮನಾರ್ಹವಾದದ್ದು, ಕೇವಲ ಪಶ್ಚಿಮದ ತಾತ್ವಿಕತೆಗಳನ್ನು ಅನುಕರಣೆ ಮಾಡದೆ, ಅದನ್ನು ರಕ್ತಗತ ಮಾಡಿಕೊಂಡು ಸರಿಯಾದುದನ್ನು ಸರಿಯಾಗಿ ಅನುಕ್ರಮಣಿಕೆಯ ಮೂಲಕ ಕನ್ನಡದ ಜಾಯಮಾನಕ್ಕೆ ತಮ್ಮದೇ ಆದ ಭಾಷೆ, ಶೈಲಿಗಳ ಮೂಲಕ ಸಮ್ಮಿಳಿತಗೊಳಿಸಿಕೊಂಡು ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯಾಗಿ ನೀಡಿರುವುದನ್ನು ಈ ಕೃತಿಯ ಅನುವಾದ ವಿಭಾಗದ ಎಲ್ಲ ಲೇಖನಗಳು ಹೇಳಹೊರಟಿವೆ. ಕನ್ನಡ ಸಾಹಿತ್ಯವನ್ನು ಮತ್ತು ಜಾಗತಿಕ ಸಾಹಿತ್ಯವನ್ನು ಒಟ್ಟೊಟಿಗೆ ಕೊಂಡೊಯ್ಯ ಬಲ್ಲ ಪ್ರಜ್ಞೆಯನ್ನು ಶ್ಲಾಘಿಸುವ ಕಾರ್ಯ ನುಡಿ ಬಾಗಿನ ಕೃತಿಯಲ್ಲಿ ಮೌಲ್ಯಯುತವಾಗಿಯೇ ಬಿಂಬಿತಗೊಂಡಿದೆ.
  ಈ ಕೃತಿಯಲ್ಲಿ ನಾಲ್ಕು ಸಂದರ್ಶನಗಳಿವೆ. ಪ್ರತೀ ಸಂದರ್ಶನಗಳ ನೆಲೆಗಳು ಬೇರೆ ಬೇರೆಯಾಗಿದ್ದು, ವಿಭಿನ್ನವಾಗಿವೆ. ಎಚ್.ಎಸ್.ಆರ್.ರವರ ಸಾಹಿತ್ಯ ಅಧ್ಯಯನ ಗುರಿಗಳು, ಅವರು ರೂಪಿಸಿದ ಮತ್ತು ರೂಪಿಸಿಕೊಂಡ ತಾತ್ವಿಕ ಚಿಂತನೆಗಳ ಸ್ವರೂಪ, ಆಧುನಿಕ ಕನ್ನಡ ಸಾಹಿತ್ಯಅಧ್ಯಯನ, ಪ್ರಸ್ತುತ ಸಾಹಿತ್ಯದ ನೆಲೆ, ವಿಮರ್ಶೆ, ವಿಮರ್ಶಾ ಸಾಹಿತ್ಯದ ಪ್ರಾಮುಖ್ಯತೆ, ವಿಮರ್ಶೆಯ ಪ್ರಸ್ತುತ ಸ್ವರೂಪ, ವಿಮರ್ಶಾ ಭಾಷೆ ಸ್ವರೂಪ ಸಾಹಿತಿಗಳ ನಿಷ್ಠೆ, ಬರಹಗಾರರ ದಿವಾಳಿತನ, ಪಶ್ಚಿಮದ ತಾತ್ವಿಕತೆ ಮತ್ತು ಮುಖಾಮುಖಿ, ಸಂಸ್ಕೃತಿಶೋಧ, ನಮ್ಮ ನಾಡು-ನುಡಿ-ನಾಡವರ ಸ್ಥಿತಿಗತಿ ಸ್ತ್ರೀವಾದಿ ಚಿಂತನೆಗಳ ಸ್ವರೂಪ,ಕಲೆ, ಸಿನೆಮಾ, ಮಾಧ್ಯಮ ಕ್ಷೇತ್ರದ ಇಂದಿನ ಪಲ್ಲಟ, ಹೀಗೆ ಸಾಂಸ್ಕೃತಿಕ ವೈವಿಧ್ಯತೆಯನ್ನೊಳಗೊಂಡಂತಹ ಪ್ರತೀ ಓದುಗ ಮನಸ್ಸನ್ನು ಸೆಳೆಯುವ ಓದಲೇಬೇಕಾದ ಮಹತ್ವಪೂರ್ಣ ಭಾಗವಾಗಿದೆ. ಮತ್ತು ಎಚ್.ಎಸ್.ಆರ್.ರವರ ಸಾಂಸ್ಕೃತಿಕ ಲೋಕದ ಎಳೆಗಳನ್ನು ತಿಳಿಯುವ ಮತ್ತು ಅಧ್ಯಯನಕ್ಕೊಳಪಡಿಸಿಕೊಳ್ಳ್ಳುವ ಪ್ರವೇಶಿಕೆಯೂ ಆಗಿದೆ. ಗಿರೀಶ್ ಕಾಸರವಳ್ಳಿಯವರ ಜೊತೆ ಇರುವ ಕಲೆ, ಸಾಹಿತ್ಯ, ಸಿನೆಮಾ...ಇತ್ಯಾದಿ ಮಾತುಕತೆಯು ನಮಗೆ ಸಿನೆಮಾ ಮತ್ತು ಾಹಿತ್ಯದ ನಂಟನ್ನು ತೋರಿಸುತ್ತದೆ.
‘ನುಡಿಬಾಗಿನ’ದೊಳಗೆ ಲೇಖನ ಬರೆದಿರುವ ಲೇಖಕರು ಎಚ್.ಎಸ್.ಆರ್.ರವರ ಸಮಕಾಲೀನರು, ಅವರ ಒಡನಾಡಿಗಳು, ಸ್ನೇಹಿತರು, ಪ್ರತ್ಯಕ್ಷ  ಮತ್ತು ಪರೋಕ್ಷ ವಿದ್ಯಾರ್ಥಿಗಳು. ಸಿ.ಎನ್.ರಾಮಚಂದ್ರನ್, ರಾಜೇಂದ್ರ ಚನ್ನಿ, ಬಸವರಾಜ ಕಲ್ಗುಡಿ, ರಹಮತ್ ತರೀಕೆರೆ, ಓ.ಎಲ್. ನಾಗಭೂಷಣ ಸ್ವಾಮಿ, ಟಿ.ಪಿ.ಅಶೋಕ್, ಪುರುಷೋತ್ತಮ ಬಿಳಿಮಲೆ, ಶೂದ್ರ ಶ್ರೀನಿವಾಸ್ ಆದಿಯಾಗಿ ಬಿ.ಎನ್. ಸುಮಿತ್ರಾಬಾಯಿ, ಬಿ.ಯು.ಸುಮಾ, ಎಂ.ಉಷಾ, ತಾರಿಣಿಶುಭದಾಯಿನಿ, ಸಮಕಾಲೀನ ಭರವಸೆಗಳಾದ ವಿನಯಾ, ಕೆ.ಸತ್ಯನಾರಾಯಣ, ಸುರೇಶ ನಾಗಲಮಡಿಕೆಯರಂತಹ ಲೇಖನಗಳು ಇವೆ. ಡಿಗ್ರಿ ಮತ್ತು ಪಿಜಿ ಹುಡುಗರೆಲ್ಲ ಸೇರಿ ಮಾಡುತ್ತಿರುವ ಕಾವ್ಯಮನೆಯೆಂಬ ಬಿಸಿಲು ನಾಡಿನ ಎಳೆಯ ಪ್ರಕಾಶನಕ್ಕೆ ಎಚ್.ಎಸ್.ಆರ್. ಅಂತಹವರು ತಮ್ಮ ಮಹತ್ವದ ಕೃತಿ ಪ್ರಕಟಸಲು ನೀಡುವುದೆಂದರೆ ಅದು ಅವರ ಸರಳತೆ ಮತ್ತು ಬೆಳೆಸುವ ಪ್ರಕ್ರಿಯೆ ಆಗಿದೆ.

ಪುಸ್ತಕ: ನುಡಿ ಬಾಗಿನ
ಸಂಪಾದಕರು: ಅಮರೇಶ ನುಗಡೋಣಿ/
ವಿಕ್ರಮ ವಿಸಾಜಿ
ಪ್ರಕಾಶಕರು: ಕಾವ್ಯಮನೆ ಪ್ರಕಾಶನ
ಬೆಲೆ: 290
ದೂರವಾಣಿ - 8660098545

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)