varthabharthi

ನೇಸರ ನೋಡು

‘ಸುಳ್ಳು ಸುದ್ದಿ’ಯೂ ಸ್ಮೃತಿ ಇರಾನಿಯವರ ಭಾನಗಡಿಗಳೂ...

ವಾರ್ತಾ ಭಾರತಿ : 15 Apr, 2018
ಜಿ.ಎನ್.ರಂಗನಾಥ ರಾವ್

ಪತ್ರಿಕಾ ವ್ಯವಸಾಯದ ಬಗ್ಗೆ ತಮಗಿರುವ ಅಸಹಿಷ್ಣುತೆಯನ್ನು ಸ್ಮೃತಿ ಇರಾನಿಯವರು ಒಂದಕ್ಕಿಂತ ಹೆಚ್ಚು ಬಾರಿ ಬಹಿರಂಗಗೊಳಿಸಿದ್ದಾರೆ. ಇಂಥವರಿಂದ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಯನ್ನು ನಿರೀಕ್ಷಿಸಲಾಗದು. ಎಂದೇ ಅವರು ವಾರ್ತೆ ಮತ್ತು ಪ್ರಸಾರ ಖಾತೆ ಸಚಿವರಾಗಿರಲು ಅನರ್ಹರು. ಸುಳ್ಳು ಸುದ್ದಿ ಆಜ್ಞೆ ವಾಪಸಿಗೂ ಮೊದಲು ಮೋದಿಯವರು ಸ್ಮೃತಿ ಇರಾನಿಯವರನ್ನು ಸಂಪುಟದಿಂದ ಉಚ್ಚಾಟನೆ ಮಾಡಿದ್ದಿದ್ದರೆ ತಮಗೆ ಸಂವಿಧಾನದಲ್ಲಿ ಅಚಲ ನಿಷ್ಠೆಯುಂಟೆಂಬ ಅವರ ಬಡಾಯಿ ಮಾತುಗಳಿಗೆ ಅರ್ಥವಿರುತ್ತಿತ್ತು.


ಆರೆಸ್ಸೆಸ್ ಕೃಪಾಪೋಷಿತ ನರೇಂದ್ರ ಮೋದಿಯವರ ಸರಕಾರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ಯ, ಸಂವಿಧಾನ, ಸಂಸದೀಯ ಪ್ರಜಾಸತ್ತೆ ಇವುಗಳಲ್ಲಿ ನಂಬಿಕೆ ಇಲ್ಲ ಎಂಬುದನ್ನು ಈ ಅಂಕಣದಲ್ಲಿ ಈಗಾಗಲೇ ಒಂದಕ್ಕಿಂತ ಹೆಚ್ಚು ಬಾರಿ ಬರೆಯಲಾಗಿದೆ. ಆದರೆ ಮತ್ತೆ ಮತ್ತೆ ಬರೆಯುವಂಥ ಸಂದರ್ಭಗಳನ್ನು ಮೋದಿಯವರ ಸರಕಾರ ಸೃಷ್ಟಿಸುತ್ತಲೇ ಇರುವುದರಿಂದ ಮತ್ತೆಮತ್ತೆ ಹೇಳುವುದು ಅನಿವಾರ್ಯವಾಗಿದೆ. ಇತ್ತೀಚಿನದು ‘ಸುಳ್ಳು ಸುದ್ದಿಯ’ ಕಥೆ. ಕಥಾ ನಾಯಕಿ ಶ್ರೀಮತಿ ಸ್ಮೃತಿ ಇರಾನಿ, ಕೇಂದ್ರ ವಾರ್ತೆ ಮತ್ತು ಪ್ರಸಾರ ಖಾತೆ ಸಚಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಥವಾ ನಿಯಂತ್ರಿಸುವ ತುಡಿತ ಅಧಿಕಾರದಲ್ಲಿರುವವರಲ್ಲಿ ಅಂತರ್ಗತವಾದದ್ದು ಎಂಬುದನ್ನು ಹೇಳುವುದಕ್ಕೆ ಮನಶ್ಶಾಸ್ತ್ರಜ್ಞರೇ ಬೇಕಾಗಿಲ್ಲ. ಸ್ವತಂತ್ರ್ಯಾನಂತರ ಇಂಥ ಹಲವಾರು ಹುಂಬತನಗಳನ್ನು ನಾವು ಕಂಡಿದ್ದೇವೆ. ಇತ್ತೀಚಿನದು ಸ್ಮೃತಿ ಇರಾನಿಯವರದು. ‘ಸುಳ್ಳು ಸುದ್ದಿ’ ವರದಿ ಮಾಡುವ ಪತ್ರಕರ್ತರ ಮಾನ್ಯತೆಯನ್ನು ವಾಪಸು ಪಡೆಯುವ ಆಜ್ಞೆಯೊಂದನ್ನು ಸ್ಮೃತಿ ಇರಾನಿ ಯವರು ರಾತ್ರೋರಾತ್ರಿ ಹೊರಡಿಸಿದರು. ಪ್ರಧಾನ ಮಂತ್ರಿಯವರ ಕಾರ್ಯಾಲಯದ ಮಧ್ಯಪ್ರವೇಶದಿಂದಾಗಿ ಎಷ್ಟು ತರಾತುರಿಯಲ್ಲಿ ಆಜ್ಞೆಯನ್ನು ಹೊರಡಿಸಲಾಯಿತೋ ಅಷ್ಟೇ ತರಾತುರಿಯುಲ್ಲಿ ಅದನ್ನು ವಾಪಸು ಪಡೆಯಲಾಯಿತು. ಸ್ಮೃತಿ ಇರಾನಿಯವರ ‘ಚಿಂತನೆಯ ಫಲ’ ಎನ್ನಲಾದ ಈ ಆಜ್ಞೆ ಪ್ರಕಾರ, ಸುಳ್ಳು ಸುದ್ದಿ ವರದಿ ಮಾಡಿದ್ದಾರೆಂಬ ದೂರು ಬಂದ ಕೂಡಲೇ ಸದರಿ ವರದಿಗಾರನಿಗೆ ನೀಡಿರುವ ಮಾನ್ಯತೆಯನ್ನು ತಕ್ಷಣ ಪಿ.ಐ.ಬಿ.(ಪ್ರೆಸ್ ಇನಫರ್ಮೇಷನ್ ಬ್ಯೂರೊ) ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯ ಬೇಕು ಹಾಗೂ ‘ಸುಳ್ಳು ಸುದ್ದಿ’ ವರದಿ ಮಾಡುವುದು ಮುಂದುವರಿಸಿದಲ್ಲಿ ಸದರಿ ವರದಿಗಾರನ ಮಾನ್ಯತೆಯನ್ನು ಖಾಯಮ್ಮಾಗಿ ರದ್ದುಗೊಳಿಸಬೇಕು. ಈ ‘ಶಿಕ್ಷೆ’ಯ ಹಿಂದಿನ ಮನೋಗತವೂ ಸ್ಪಷ್ಟ. ಪತ್ರಕರ್ತರು ‘ಸತ್ಯ’ವಾದ ಸುದ್ದಿಗಳನ್ನೇ ವರದಿ ಮಾಡಬೇಕು.

ಸರಕಾರದ ಮುಖವಾಣಿಯಿಂದ ಬರುವ ಸತ್ಯ ಸುದ್ದಿಗಳನ್ನು, ಪ್ರಧಾನ ಮಂತ್ರಿಯಾದಿಯಾಗಿ ಸಚಿವರಿಗೆ ಮತ್ತು ಆಡಳಿತಾರೂಢ ಪಕ್ಷಕ್ಕೆ ಪ್ರಿಯವಾಗುವಂಥ ‘ಸತ್ಯ’ ಸುದ್ದಿಗಳನ್ನು ಮಾತ್ರ ವರದಿ ಮಾಡಬೇಕು ಎನ್ನುವುದೇ ಆಜ್ಞೆಯ ಪರಮ ಆಶಯವಿದ್ದಂತಿದೆ. ಪತ್ರಕರ್ತರ ಸಂವಿಧಾನದತ್ತವಾದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಇಂಥದೊಂದು ಕ್ರಮವನ್ನು ಕೇಂದ್ರ ಸಂಪುಟದ ಗಮನಕ್ಕೂ ತರದೆ, ಕಾರ್ಯಾಂಗದ ಆಜ್ಞೆ ಮೂಲಕ ಜಾರಿಗೊಳಿಸಲು ಸಚಿವೆ ನಡೆಸಿದ ಪ್ರಯತ್ನ ಊಹಿಸಲೂ ಕಷ್ಟಸಾಧ್ಯವಾದದ್ದು. ಈ ಆಜ್ಞೆಯ ಗುರಿ ಸುಳ್ಳು ಸುದ್ದಿಯಲ್ಲ. ಸರಕಾರವನ್ನು ಕಟುವಾಗಿ ಟೀಕಿಸುವ ಹಾಗೂ ಸರಕಾರಕ್ಕೆ ಅಪ್ರಿಯವಾದ ಸುದ್ದಿಗಳನ್ನು ಪ್ರಕಟಿಸಬಾರದು, ಪ್ರಕಟಿಸಿದರೆ ಗತಿ ನೆಟ್ಟಗಿರದು ಎಂದು ಮಾಧ್ಯಮಗಳಿಗೆ ನೀಡಿರುವ ಪರೋಕ್ಷ ಎಚ್ಚರಿಕೆಯೇ ಇದಾಗಿತ್ತು. ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಿಂದ ಪರೋಕ್ಷವಾಗಿ ಸುಳ್ಳು ಸುದ್ದಿಗಳ ಸೃಷ್ಟಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂಬುದನ್ನು ಸಚಿವೆಯ ಮಂತ್ರಾಲೋಚಕರು ಅರಿವು ಮಾಡಿಕೊಟ್ಟಂತಿಲ್ಲ. ಇಲ್ಲವಾದಲ್ಲಿ ಸಚಿವೆ ಇಂಥ ಅಭಾಸ ಮಾಡುತ್ತಿರಲಿಲ್ಲ. ಹಿಂದಿನ ಸರಕಾರಗಳಿಂದಲೂ ಇಂಥ ಅಭಾಸಗಳಾಗಿವೆ. 1982ರ ಬಿಹಾರ್ ಪತ್ರಿಕಾ ಮಸೂದೆ, 1988ರಲ್ಲಿ ರಾಜೀವ್ ಗಾಂಧಿ ಸರಕಾರ ತರಲೆತ್ನಿಸಿದ ಮಾನಹಾನಿ ವಿರೋಧಿ ಮಸೂದೆ, ಕಳೆದ ವರ್ಷ ರಾಜಸ್ಥಾನ ಸರಕಾರ ತರಲೆತ್ನಿಸಿದ ಕ್ರಿಮಿನಲ್ ಕಾಯ್ದೆ ಮಸೂದೆ ಇವು ಕೆಲವು ಕುಖ್ಯಾತ ನಿದರ್ಶನಗಳು. ಪತ್ರಿಕೆಗಳ ಬಾಯಿಕಟ್ಟುವ ಈ ಎಲ್ಲ ಪ್ರಯತ್ನಗಳನ್ನೂ ತೀವ್ರ ವಿರೋಧದಿಂದಾಗಿ ಕೈಬಿಡಲಾಯಿತು.

 ಸುಳ್ಳು ಸುದ್ದಿ ಎನ್ನುವ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ.ವಿಶ್ವಾದ್ಯಂತ ಸುಳ್ಳು ಸುದ್ದಿಗಳ ಕಾಟವಿದೆ. ನಿಜವಾಗಿ ಹೇಳುವುದಾದರೆ, ಸುಳ್ಳು ಸುದ್ದಿಯನ್ನು ‘ಇದು ಸುಳ್ಳು ಸುದ್ದಿ’ ಎಂದು ಖಚಿತವಾಗಿ ನಿಷ್ಕರ್ಶಿಸುವುದು, ಗುರುತಿಸುವುದು ಕಷ್ಟ. ಸುದ್ದಿಗಳು ಪತ್ರಕರ್ತರಿಂದ ಮಾತ್ರ ಸೃಷ್ಟಿಗೊಳ್ಳುವುದಿಲ್ಲ. ಸುದ್ದಿಯ ಸೃಷ್ಟಿ ಮೂಲಗಳು ಹಲವಾರು. ಸದ್ಯಕ್ಕೆ, ತಮ್ಮ ಸಾಮಾಜಿಕ ಜವಾಬ್ದಾರಿ, ಓದುಗರಿಗೆ ಉತ್ತರದಾಯಿತ್ವ ಮತ್ತು ವಿಶ್ವಾಸಾರ್ಹತೆಯಂಥ ಮೌಲ್ಯಗಳ ಬಗ್ಗೆ ಇನ್ನೂ ಕಾಳಜಿ ಹೊಂದಿರುವ ಮುದ್ರಣ ಮಾಧ್ಯಮಗಳಿಗಿಂತ ಮಿಗಿಲಾಗಿ ಸಾಮಾಜಿಕ ಮಾಧ್ಯಮಗಳು ಸುಳ್ಳು ಸುದ್ದಿಗಳ ಸೃಷ್ಟಿಮೂಲಗಳಾಗಿವೆ. ಸಾಮಾಜಿಕ ಮಾಧ್ಯಮಗಳು ಇಂದು ಯಥೇಚ್ಛವಾಗಿ ಸುಳ್ಳು ಸುದ್ದಿಗಳನ್ನು ಪ್ರಸಾರಮಾಡುತ್ತಿವೆ. ಸಾಮಾಜಿಕ ಮಾಧ್ಯಮಗಳ ಸುಳ್ಳು ಸುದ್ದಿಗಳಿಗೆ ಪ್ರೇರಣೆ ಮತ್ತು ಮೂಲಗಳನ್ನು ಪತ್ತೆ ಮಾಡುತ್ತಾ ಹೋದರೆ ನಾವು ನಾಗಪುರದವರೆಗೆ ನಡೆಯಬೇಕಾದೀತು. ಇದನ್ನು ನಿಯಂತ್ರಿಸಲು ಸ್ಮೃತಿ ಇರಾನಿಯವರಲ್ಲಿ ಏನಾದರೂ ಅಸ್ತ್ರ ಉಂಟೋ, ತಿಳಿಯದು.

ನರೇಂದ್ರ ಮೋದಿ ಸಂಪುಟದ ‘ಮುದ್ದು ಮಣಿ’ ಎನ್ನಬಹುದಾದ ಸ್ಮೃತಿ ಇರಾನಿಯವರು ಪ್ರಜ್ಞಾಪೂರ್ವಕವಾಗಿ ಇಂಥ ನಿರ್ಧಾರಗಳನ್ನು ಕೈಗೊಳ್ಳುತ್ತಾರೋ ಅಥವಾ ‘ವಿಸ್ಮೃತಿ’ಯಾಗಿ ಇಂಥ ನಿರ್ಧಾರಗಳನ್ನು ಕೈಗೊಳ್ಳುತ್ತಾರೋ ಎಂದು ಕೆಲವು ಸಲ ಅನುಮಾನ ಮೂಡುತ್ತದೆ, ಅವರ ಕೆಲವು ನಿರ್ಧಾರಗಳನ್ನು ಗಮನಿಸಿದಾಗ ಸ್ಮೃತಿ ಇರಾನಿಯವರ ಭಾನಗಡಿಗಳು ಅವರು ಸಂಪುಟ ಸೇರಿದಾಗಿನಿಂದ ಒಂದೊಂದಾಗಿ ಹೊರಬರುತ್ತಿವೆ. 2014ರಲ್ಲಿ ಪದವಿ ಅರ್ಹತೆ ವಿವಾದದಲ್ಲಿ ಅವರು ವಿರೋಧಾಭಾಸದ ಹೇಳಿಕೆಗಳನ್ನು ನೀಡಿ ಸರಕಾರಕ್ಕೆ ಮತ್ತು ಪಕ್ಷವನ್ನು ಪೇಚಿಗೆ ಸಿಕ್ಕಿಸಿದ್ದರು. ಆಖೈರಾಗಿ ಅವರನ್ನು ಮಾನವ ಸಂಪನ್ಮೂಲ ಖಾತೆಯಿಂದ ಹೊರದೂಡುವುದು ಮೋದಿಯವರಿಗೆ ಅನಿವಾರ್ಯವಾಯಿತು. ಆ ವೇಳೆಗಾಗಲೇ ಮೋದಿ ಸರಕಾರದ ವಿವಾದಾತ್ಮಕ ಸಚಿವೆ ಎಂಬ ಹಣೆಪಟ್ಟಿಯ ಗೌರವಕ್ಕೂ ಅವರು ಪಾತ್ರರಾಗಿದ್ದರು. ಆದರೆ ಘೋರ ಪ್ರಮಾದಗಳು ಎನ್ನಬಹುದಾದಂಥ ಭಾನಗಡಿಗಳು ಆಗುತ್ತ್ತಿರುವುದು ಸ್ಮೃತಿ ಇರಾನಿಯವರು ಕಳೆದ ಜುಲೈನಲ್ಲಿ ಕೇಂದ್ರ ವಾರ್ತೆ ಮತ್ತು ಪ್ರಸಾರ ಖಾತೆ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಂತರ.

ಇಂಥ ಒಂದು ಭಾನಗಡಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವಾರ್ತಾ ಸಂಸ್ಥೆಗೆ ಸಂಬಂಧಿಸಿದ್ದು. ಸ್ನೇಹ ದಿನ ಆಚರಣೆ ಸಂದರ್ಭದಲ್ಲಿ ಕೆಲವರು ಮೋದಿ ಮತ್ತು ನಿತೀಶ್ ಕುಮಾರ್ ಅವರ ಮುಖವಾಡಗಳನ್ನು ಧರಿಸಿದ್ದ ವ್ಯಕ್ತಿಗಳ ಛಾಯಾಚಿತ್ರವೊಂದನ್ನು ಪಿ.ಟಿ.ಐ. ಪತ್ರಿಕೆಗಳಿಗೆ ರವಾನಿಸಿತ್ತು. ಅದೊಂದು ನಿರುಪದ್ರವಿ ತಮಾಷೆಯ ಚಿತ್ರ. ಯಾರಿಗಾದರೂ ನಗೆತರಿಸುವಂಥ ಈ ಚಿತ್ರ ಇರಾನಿಯವರೆಗೆ ಕೋಪತರಿಸಿತ್ತು. ‘‘ಚುನಾಯಿತ ಪ್ರತಿನಿಧಿಗಳನ್ನು ಈ ರೀತಿ ಬಿಂಬಿಸುವುದೇ? ಇದು ನಿಮ್ಮ ಅಧಿಕೃತ ನೀತಿಯೇ?’’ ಎಂದು ಅವರು ಟ್ವಿಟರ್‌ನಲ್ಲಿ ಪಿಟಿಐಯನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಅವಗಾಹನೆಗೆ ತರಲು ಅರ್ಹವಾದಂಥ ಸುದ್ದಿಗಳನ್ನು/ ಚಿತ್ರಗಳನ್ನು ತನ್ನ ಚಂದಾದಾರ ಪತ್ರಿಕೆಗಳಿಗೆ ಬಿಡುಗಡೆ ಮಾಡುವುದು ಪಿಟಿಐ ಹಕ್ಕು. ಆದರೆ ಕೇಂದ್ರ ವಾರ್ತೆ ಮತ್ತು ಪ್ರಸಾರ ಖಾತೆ ಸಚಿವರು ಈ ಹಕ್ಕನ್ನು ಮಾನ್ಯ ಮಾಡಲಿಲ್ಲ. ರಾಜಕಾರಣಿಗಳನ್ನು ಗೇಲಿ ಮಾಡುವುದು ಅಥವಾ ಅವರನ್ನು ಅಣಕದ ವಸ್ತುವನ್ನಾಗಿಸುವುದು ಸ್ಮೃತಿ ಇರಾನಿಯವರಿಗೆ ಹಿಡಿಸಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕಾದ್ದು ತಮ್ಮ ಸರಕಾರದ ಕರ್ತವ್ಯ ಎಂಬುದನ್ನು ಮರೆತು ಇರಾನಿಯವರು ಮಾಧ್ಯಮಕ್ಕೆ ಛೀಮಾರಿ ಹಾಕಲು ಮುಂದಾದರು. ಆಗ ಪ್ರಧಾನಿಯವರ ಮಧ್ಯ ಪ್ರವೇಶವಾಗಲಿಲ್ಲ. ಪಿಟಿಐ ಕ್ಷಮೆ ಕೇಳಬೇಕಾಯಿತು. ಇದರಿಂದ ಇರಾನಿಯವರಿಗೆ ವಿಜಯದ ಸಂಭ್ರಮ ಉಂಟಾಗಿರಬಹುದು. ಆದರೆ ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನೆಂಬುದು ತಿಳಿಯದೆಂದೂ ವಿನೋದ ಪ್ರಜ್ಞೆ ಇಲ್ಲವೆಂದೂ ಈ ಘಟನೆ ಮೂಲಕ ಅವರು ಸಾಬೀತುಪಡಿಸಿದ್ದರು.

ಸ್ಮೃತಿ ಇರಾನಿಯವರ ಇತ್ತೀಚಿನ ಭಾನಗಡಿ ಎಂದರೆ ಪ್ರಸಾರ ಭಾರತಿಯ ಕೆಲಕಾರ್ಯಗಳಲ್ಲಿ ಮೂಗು ತೂರಿಸುವ ಅವಾಂತರಗಳು.ಇತ್ತೀಚೆಗೆ ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಹಲವಾರು ಆಜ್ಞೆಗಳನ್ನು ಹೊರಡಿಸಿರುವುದು ಸುದ್ದಿಯಲ್ಲಿದೆ. ಈ ಆಜ್ಞೆಗಳನ್ನು ನೋಡಿದರೆ ಅಧಿಕಾರಶಾಹಿಗೆ ಪ್ರಸಾರ ಭಾರತಿ ಕಾಯ್ದೆ ಬಗ್ಗೆ ತೀವ್ರವಾದ ತಿರಸ್ಕಾರ ಭಾವನೆ ಇರುವಂತಿದೆ ಎಂದು ಪ್ರಸಾರ ಭಾರತಿ ಅಧ್ಯಕ್ಷರಾದ ಸೂರ್ಯಪ್ರಕಾಶ್ ಅವರೇ ಸಂದರ್ಶನವೊಂದರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಯ ಕೆಲಸಕಾರ್ಯಗಳು ಮತ್ತು ದಕ್ಷತೆಯ ಮೌಲ್ಯಮಾಪನವನ್ನು ಕೇಂದ್ರ ವಾರ್ತೆ ಮತ್ತು ಪ್ರಸಾರ ಶಾಖೆಯ ಕಾರ್ಯದರ್ಶಿ ಮಾಡತಕ್ಕದ್ದು ಹಾಗೂ ಅದನ್ನು ಸಚಿವರು ಪರಾಮರ್ಶಿಸತಕ್ಕದ್ದು ಎಂಬುದು ಇಂಥ ಒಂದು ಅಜ್ಞೆ. ಈ ಆಜ್ಞೆ, ಸೂರ್ಯಪ್ರಕಾಶ್ ಅವರೇ ಹೇಳಿರುವಂತೆ, ಶುದ್ಧಾಂಗವಾಗಿ ಹಾಗೂ ಶತಃಸಿದ್ಧವಾಗಿ ಕಾನೂನು ವಿರೋಧಿ ಆಜ್ಞೆಯಾಗಿದೆ. ಪ್ರಸಾರ ಭಾರತಿ ಶಾಸನದ ಆರನೇ ಕಲಂನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಶಾಸನದ ಪ್ರಕಾರ ಸಿಇಒ ಪ್ರಸಾರ ಭಾರತಿಯ ಉದ್ಯೋಗಿಯೇ ಹೊರತು ಸಚಿವಾಲಯದ ಉದ್ಯೋಗಿಯಲ್ಲ. ಪ್ರಸಾರ ಭಾರತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಎಲ್ಲ ಸಿಬ್ಬಂದಿಯನ್ನು ಕೆಲಸದಿಂದ ವಜಾಮಾಡಬೇಕೆಂದು ಸಚಿವಾಲಯ ಫೆಬ್ರವರಿಯಲ್ಲಿ ಆದೇಶ ಹೊರಡಿಸಿದೆ. ಶಾಸನದನ್ವಯ ಪ್ರಸಾರ ಭಾರತಿಗೆ ತನ್ನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಧಿಕಾರವಿದೆ. ಸಚಿವಾಲಯದ ಆದೇಶ ಈ ಅಧಿಕಾರವನ್ನು ಮೊಟಕುಗೊಳಿಸುವ ಕ್ರಮವಾಗಿದೆ. ಐಎಎಸ್ ಅಧಿಕಾರಿಯೊಬ್ಬರು ಪ್ರಸಾರ ಭಾರತಿ ಆಡಳಿತ ಮಂಡಳಿಯಲ್ಲಿ ಪೂರ್ಣಾವಧಿ ನಿರ್ದೇಶಕರಾಗಿರಬೇಕೆಂಬುದು ಸಚಿವಾಲಯದ ಇನ್ನೊಂದು ಆಜ್ಞೆ.

ಪ್ರಸಾರ ಭಾರತಿ ಶಾಸನದರೀತ್ಯ ಕಾರ್ಪೊರೇಷನ್‌ನ ಉದ್ಯೋಗಿಗಳಲ್ಲೇ ಒಬ್ಬರನ್ನು ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿ ನೇಮಿಸ ಬೇಕು. ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯದಲ್ಲಿನ ಭಾರತೀಯ ವಾರ್ತಾ ಸೇವೆಯ ಅಧಿಕಾರಿಗಳೇ ದೂರದರ್ಶನ ಮತ್ತು ಆಕಾಶವಾಣಿಯ ಸುದ್ದಿ ವಿಭಾಗಗಳಲ್ಲಿ ಕೆಲಸ ಮಾಡಬೇಕೆನ್ನುವುದು ಇನ್ನೊಂದು ಆಜ್ಞೆ. ಮುಂಬೈಯ ಖಾಸಗಿ ಸಂಸ್ಥೆಯೊಂದಕ್ಕೆ ಅದು ಸಲ್ಲಿಸಿರುವ ಸೇವೆಗಾಗಿ ಪ್ರಸಾರ ಭಾರತಿ 2.92 ಕೊಟಿ ರೂ. ಪಾವತಿಸಬೇಕೆನ್ನುವುದು ಮತ್ತೊಂದು ಆಜ್ಞೆ. ಖಾಸಗಿ ಸಂಸ್ಥೆಗೆ ವಹಿಸಿದ ಕಾರ್ಯವನ್ನು ತನ್ನ ಉದ್ಯೋಗಿಗಳೇ ಮಾಡಬಹುದಿತ್ತು ಎಂಬುದು ಪ್ರಸಾರ ಭಾರತಿ ನಿಲುವು. ತನ್ನ ಈ ಎಲ್ಲ ಆಜ್ಞೆಗಳನ್ನು ಜಾರಿಗೊಳಿಸದಿದ್ದರೆ ಅರ್ಥಸಚಿವ ಶಾಖೆ ಪ್ರಸಾರ ಭಾರತಿಗೆಂದು ಗೊತ್ತು ಪಡಿಸಿರುವ ಹಣವನ್ನು ಬಿಡುಗಡೆ ಮಾಡಲಾಗದು ಎನ್ನುವುದು ವಾರ್ತಾ ಸಚಿವಾಲಯದ ನಿರ್ಧಾರ. ಪ್ರಸಾರ ಭಾರತಿ ಅಧ್ಯಕ್ಷ ಸೂರ್ಯಪ್ರಕಾಶ್ ಪರಿವಾರದ ಪತ್ರಕರ್ತರೇ. ಅವರೇನೂ ಹಿಂದಿನ ಸರಕಾರದಿಂದ ಬಳುವಳಿಯಾಗಿ ಬಂದ ಅಧಿಕಾರಿಯಲ್ಲ. ಈ ಎಲ್ಲ ಆಜ್ಞೆಗಳನ್ನು ಅವರು ಪ್ರಸಾರ ಭಾರತಿ ಶಾಸನ ಮತ್ತು ಸಂಸತ್ತಿನ ನಿಂದನೆ ಎಂದು ಬಣ್ಣಿಸಿದ್ದಾರೆ. ಇವೆಲ್ಲವೂ ಕೇವಲ ಅಧಿಕಾರಶಾಹಿಯ ಕ್ರಮಗಳೆಂದು ಹೇಳಲಿಕ್ಕಾಗುವುದಿಲ್ಲ. ಇರಾನಿಯವರ ಬೆಂಬಲವಿಲ್ಲದೆ ಇವು ನಡೆದಿರಲಿಕ್ಕಿಲ್ಲ. ಈ ಎಲ್ಲ ಬೆಳವಣಿಗೆಗಳೂ ಪ್ರಸಾರ ಭಾರತಿ ಮತ್ತು ಮೋದಿ ಸರಕಾರದ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನ ಸೂಚಿಯಾಗಿದೆ. ಈ ಬಿಕ್ಕಟ್ಟು ಹೇಗೆ ಪರಿಹಾರವಾಗುವುದೋ?

‘ಸುಳ್ಳು ಸುದ್ದಿ’ ಪ್ರಕರಣ ಸ್ಮೃತಿ ಇರಾನಿಯವರ ಭಾನಗಡಿತನದ ಪರಮಾವಧಿಯಾಗಿದೆ. ಸುಳ್ಳು ಸುದ್ದಿ ಎಂದು ಸಾಬೀತಾಗುವ ಮೊದಲೇ ಪತ್ರಕರ್ತನ ಮಾನ್ಯತೆಯನ್ನು ರದ್ದುಗೊಳಿಸುವ ನಿರ್ಧಾರದಿಂದ ಅನಾಹುತಗಳೇ ಹೆಚ್ಚಾಗಿ ಆಗಬಹುದು. ಇಂತಹದೊಂದು ಕ್ರಮದ ಹಿಂದಿನ ಉದ್ದೇಶ 2019ರ ಚುನಾವಣೆ ಸಮೀಪಿಸುತ್ತಿರುವ ದಿನಗಳಲ್ಲಿ ಮಾಧ್ಯಮವನ್ನು ನಿಷ್ಕ್ರಿಯಗೊಳಿಸುವ ಹುನ್ನಾರವೇ ಇದ್ದೀತು.

 ಆಖೈರಾಗಿ, ಪತ್ರಿಕಾ ಸ್ವಾತಂತ್ರ್ಯದ ದೃಷ್ಟಿಯಿಂದ ಹೇಳುವುದಾದರೆ, ಇದು ಶುಭ ಸೂಚನೆಯಲ್ಲ. ಪತ್ರಿಕಾ ವ್ಯವಸಾಯದ ಬಗ್ಗೆ ತಮಗಿರುವ ಅಸಹಿಷ್ಣುತೆಯನ್ನು ಸ್ಮೃತಿ ಇರಾನಿಯವರು ಒಂದಕ್ಕಿಂತ ಹೆಚ್ಚು ಬಾರಿ ಬಹಿರಂಗಗೊಳಿಸಿದ್ದಾರೆ. ಇಂಥವರಿಂದ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಯನ್ನು ನಿರೀಕ್ಷಿಸಲಾಗದು. ಎಂದೇ ಅವರು ವಾರ್ತೆ ಮತ್ತು ಪ್ರಸಾರ ಖಾತೆ ಸಚಿವರಾಗಿರಲು ಅನರ್ಹರು. ಸುಳ್ಳು ಸುದ್ದಿ ಆಜ್ಞೆ ವಾಪಸಿಗೂ ಮೊದಲು ಮೋದಿಯವರು ಸ್ಮೃತಿ ಇರಾನಿಯವರನ್ನು ಸಂಪುಟದಿಂದ ಉಚ್ಚಾಟನೆ ಮಾಡಿದ್ದಿದ್ದರೆ ತಮಗೆ ಸಂವಿಧಾನದಲ್ಲಿ ಅಚಲ ನಿಷ್ಠೆಯುಂಟೆಂಬ ಅವರ ಬಡಾಯಿ ಮಾತುಗಳಿಗೆ ಅರ್ಥವಿರುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)