varthabharthi

ನೇಸರ ನೋಡು

ತೂಕಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಹಾಗೆ

ವಾರ್ತಾ ಭಾರತಿ : 22 Apr, 2018
ಜಿ.ಎನ್. ರಂಗನಾಥ ರಾವ್

 ಶಿಕ್ಷಣ ಹಕ್ಕು ಶಾಸನವನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಈ ವಿಷಯದಲ್ಲಿ ಕಾರ್ಯಾಂಗವನ್ನು ಉತ್ತರದಾಯಿಯಾಗಿ ಮಾಡಬೇಕಾದ ಹೊಣೆ ಶಾಸಕಾಂಗದ್ದು.ಸಚಿವರು ನೀಡಿರುವ ಉತ್ತರವನ್ನು ಗಮನಿಸಿದಾಗ ಈ ಎರಡೂ ಅಂಗಗಳು ಸರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದು ನಮ್ಮ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ್ದರಿಂದ ಶಾಸನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹೊರಬೇಕಾಗಿದೆ.

ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ ಎಂದು ಸಾರ್ವತ್ರಿಕವಾಗಿ ಕರೆನೀಡುವ ಮೂಲಕ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರು ಶಿಕ್ಷಣದಲ್ಲಿ ದೊಡ್ಡ ಜಾಗೃತಿಯನ್ನುಂಟುಮಾಡಿದ್ದು ಈಗ ಇತಿಹಾಸ. ಪ್ರಶ್ನಿಸುವುದು ಅಜ್ಞಾನ-ಮೌಢ್ಯಗಳ ನಿವಾರಣೆಯ ನಿಟ್ಟಿನಲ್ಲಿ, ವಿಕಾಸದ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ. ಆದರೆ, ನಮ್ಮಲ್ಲಿ, ನಮ್ಮನ್ನು ಆಳುವ ಮಂದಿಗೆ, ವ್ಯವಸ್ಥೆಗೆ ಪ್ರಶ್ನೆ ಕೇಳುವುದು ಬೇಕಿಲ್ಲ. ಶಿಕ್ಷಣ ಕೊಟ್ಟರೆ ತಾನೆ ಪ್ರಶ್ನೆ ಕೇಳುವುದು ಎಂದು ಜನರನ್ನು ಅಜ್ಞಾನದ ಅಂಧಕಾರ ಕೂಪದಲ್ಲೇ ಇಡುವ ವ್ಯವಸ್ಥೆಯನ್ನು ಶತಶತಮಾನಗಳಿಂದ ಬೆಳೆಸಿಕೊಂಡು ಬರಲಾಗುತ್ತಿದೆ. ಕೆಲವು ಜ್ಞಾನದ ಶಾಖೆಗಳೂ ಅಸ್ಪಶ್ಯರಿಗೆ ಹಾಗೂ ಸ್ತ್ರೀಯರಿಗೆ ನಿಷಿದ್ಧ ಎಂಬ ಮನು ಸಿದ್ಧಾಂತವನ್ನು ಮೊನ್ನೆಮೊನ್ನೆಯವರೆಗೆ ಪಾಲಿಸಿಕೊಂಡು ಬರುತ್ತಿದ್ದ ಭಾರತೀಯ ಸಂಸ್ಕೃತಿ ನಮ್ಮದು.

 ಸ್ವಾತಂತ್ರ್ಯಾನಂತರ ನಮ್ಮ ಸಂವಿಧಾನ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಆದರೆ ಶಿಕ್ಷಣವೆಂದರೆ ಎಲ್ಲ ಸರಕಾರಗಳಿಗೂ ಒಂದು ಕಾಟಾಚಾರದ ಸಂಗತಿಯೇ. ಶಿಕ್ಷಣವೆನ್ನುವುದು ಒಂದು ಪ್ರಯೋಗ ಪಶುವಾಯಿತೇ ವಿನಃ ಅದಕ್ಕೆ ಸಿಗಬೇಕಾದ ಪ್ರಾಶಸ್ತ್ಯ, ಆದ್ಯತೆಗಳು ಸಿಗಲೇ ಇಲ್ಲ. ಸ್ವಾತಂತ್ರ್ಯ ಬಂದು ಹಲವಾರು ದಶಕಗಳು ಕಳೆದರೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣವೆನ್ನುವುದು ಇನ್ನೂ ಗಗನಕುಸುಮವೇ. 1964ರಷ್ಟು ಹಿಂದೆಯೇ ನೆಹರೂ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಎಂ.ಸಿ.ಛಗಲಾ ಅವರು ಆಡಿದ ಈ ಮಾತುಗಳು ಇಂದಿಗೂ ಸತ್ಯ. ‘‘ಜೋಪಡಿಗಳಲ್ಲಿ ಶಾಲೆಗಳು, ತರಬೇತಿಯಿಲ್ಲದ ಶಿಕ್ಷಕರು, ಕೆಟ್ಟ ಪಠ್ಯಪುಸ್ತಕಗಳು, ಆಟದ ಮೈದಾನಗಳಿಲ್ಲದ ಶಾಲೆಗಳು-ಇಂಥ ಶಿಕ್ಷಣ ನಮ್ಮ ಸಂವಿಧಾನ ಪಿತೃಗಳ ಆಶಯವಲ್ಲ’’ ಎಂದು ಆಗಲೇ ಛಗಲಾ ಅವರು ನಮ್ಮ ಶಿಕ್ಷಣದ ದುರವಸ್ಥೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು. ಇದು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಶಿಕ್ಷಣದ ಕಟು ವಾಸ್ತವ ಚಿತ್ರ. ಇದರ ಪಕ್ಕದಲ್ಲೇ ಉಳ್ಳವರಿಗಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ತಲೆಎತ್ತಿರುವುದು ಶಿಕ್ಷಣ ಕುರಿತ ನಮ್ಮ ದೃಷ್ಟಿ ದರ್ಶನಗಳ ವಿಕಾರಗಳ ಆಯಾಮ. ಒಂದು ವಿಪರ್ಯಾಸ.

ಭಾರತ ಗಣರಾಜ್ಯದಲ್ಲಿ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಗಳನ್ನು ದೊರಕಿಸಿಕೊಡಲಾಗುವುದೆಂದು ಸಂವಿಧಾನದ ಪೀಠಿಕಾ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ನ್ಯಾಯಗಳನ್ನು ದೊರಕಿಸಿಕೊಡುವುದರಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ರಾಜ್ಯಗಳ ನೀತಿ ಕುರಿತ ನಿರ್ದೇಶನ ಸೂತ್ರಗಳಲ್ಲೂ ಮಕ್ಕಳ ಶಿಕ್ಷಣ ಹಕ್ಕು ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿರುವುದು ನಮ್ಮ ಎದುರಿಗಿದೆ. 1990ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು ಜಾರಿಗೆ ತರಲಾಯಿತು.

ನಂತರ ಒಂದು ಕ್ರಾಂತಿಕಾರಕ ಕ್ರಮವಾಗಿ 2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತರಲಾಯಿತು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆಗಳು ನೀಗಬೇಕು ಎಂಬ ಘನ ಉದ್ದೇಶದಿಂದ ಜಾರಿಗೆ ತರಲಾದ ಈ ಕಾಯ್ದೆಯನ್ವಯ, ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 25ರಷ್ಟು ಸೀಟುಗಳನ್ನು 6-14ರ ವಯೋಮಾನದೊಳಗಣ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. ಹೀಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ವೆಚ್ಚವನ್ನು ಸರಕಾರಿ-ಖಾಸಗಿ ಸಹಭಾಗಿತ್ವ ಕಾರ್ಯಕ್ರಮದ ಅಡಿ ಸರಕಾರ ಭರಿಸಬೇಕು. ಆರ್ಥಿಕವಾಗಿ ಹಿಂದುಳಿದ ಹಾಗೂ ಮೀಸಲಾತಿ ಆಧಾರಿತ ಜಾತಿಗಳ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಓದಲು ಅವಕಾಶ ಕಲ್ಪಿಸುವ ಈ ಕಾಯ್ದೆ ವಿಶ್ವದಲ್ಲೇ ಪ್ರಪ್ರಥಮ. ಈ ಕಾಯ್ದೆಯನ್ವಯ ಈ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವುದು ಸಂಪೂರ್ಣವಾಗಿ ಸರಕಾರದ ಜವಾಬ್ದಾರಿ. ಅಮೆರಿಕ ಮೊದಲಾದ ರಾಷ್ಟ್ರಗಳಲ್ಲೂ ಮಕ್ಕಳ ಶಿಕ್ಷಣ ತಂದೆತಾಯಿಯರ ಜವಾಬ್ದಾರಿಯೇ ಹೊರತು ಸರಕಾರದ್ದಲ್ಲ.

ಈ ಕ್ರಾಂತಿಕಾರಿ ಶಾಸನವನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ತನಿಖೆ ಮಾಡಹೊರಟರೆ ನಿರಾಶೆಯೇ ಗತಿ. ಇದಕ್ಕೆ ನಿದರ್ಶನವಾಗಿ ಇತ್ತೀಚಿನ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಕಾಯ್ದೆ ಜಾರಿ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಾಖೆ ನೀಡಿರುವ ಉತ್ತರವನ್ನು ಗಮನಿಸಬಹುದು. ಒಂಬತ್ತು ವರ್ಷಗಳ ಹಿಂದೆ ಜಾರಿಗೆ ತರಲಾದ ಈ ಶಾಸನವನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ತಿಳಿಯಲು ಕಾಂಗ್ರೆಸ್‌ನ ಶಶಿ ತರೂರ್ ಅವರು ಕೇಳಿದ ಪ್ರಶ್ನೆಗೆ ದೊರೆತಿರುವ ಉತ್ತರ ನಿಜಕ್ಕೂ ಆಘಾತಕಾರಿಯಾದದ್ದು. ಗೋವಾ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ಶಿಕ್ಷಣ ಹಕ್ಕು ಶಾಸನದನ್ವಯ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಹರೆಂಬುದನ್ನು ಪ್ರಕಟಿಸಿಯೇ ಇಲ್ಲ. ಸಾರ್ವಜನಿಕ ಪ್ರಕಟನೆ ಮೂಲಕ ಜನತೆಗೆ ತಿಳಿಸುವ ಪ್ರಯತ್ನವೇ ನಡೆದಿಲ್ಲ. ಈ ಕಾಯ್ದೆಯ 12(1)(ಸಿ)ವಿಧಿಯ ಪ್ರಕಾರ ಖಾಸಗಿ ಶಾಲೆಗಳು ಶೇ.25ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಈ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಸರಕಾರ ಭರಿಸುತ್ತದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಜಾತಿವಾರು ಮೀಸಲು ವರ್ಗದ ವಿದ್ಯಾರ್ಥಿಗಳು ಸರಕಾರದ ವೆಚ್ಚದಲ್ಲಿ ಖಾಸಗಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಆದರೆ ಈ ಶಾಸನವನ್ನು ಜಾರಿಗೆ ತರಲು ಅಗತ್ಯವಾದ ಮೂಲಭೂತ ಕ್ರಮಗಳನ್ನು ಮೇಲಿನ ಐದು ರಾಜ್ಯಗಳ ಸರಕಾರಗಳು ಕೈಗೊಂಡಿಲ್ಲ ಎಂಬುದು ಈ ಶಾಸನದ ಅನುಷ್ಠಾನದಲ್ಲಿ ಸರಕಾರಗಳು ಎಂಥ ಉದಾಸೀನ ಧೋರಣೆ ತಾಳಿವೆ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಶಾಸನದನ್ವಯ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳ ತಲಾವಾರು ವೆಚ್ಚ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕಹಾಕಿ ರಾಜ್ಯ ಸರಕಾರಗಳು ಪ್ರಕಟಿಸಬೇಕು. ಸಂಸತ್ತಿನಲ್ಲಿ ಸಚಿವರು ಕೊಟ್ಟಿರುವ ಉತ್ತರದ ಪ್ರಕಾರ ಇಪ್ಪತ್ತೊಂಬತ್ತು ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಹದಿನಾಲ್ಕು ರಾಜ್ಯಗಳು ಮಾತ್ರ ಪ್ರತೀ ಮಗುವಿಗೆ ತಗಲುವ ವೆಚ್ಚವನ್ನು ಪ್ರಕಟಿಸಿವೆ. ಜಮ್ಮು ಕಾಶ್ಮೀರಕ್ಕೆ ಈ ಕಾನೂನು ಅನ್ವಯಿಸುವುದಿಲ್ಲ. ಲಕ್ಷದ್ವೀಪದಲ್ಲಿ ಖಾಸಗಿ ಶಾಲೆಗಳೇ ಇಲ್ಲ. ಅಂದರೆ ಇಪ್ಪತ್ತು ರಾಜ್ಯಗಳು ಈ ಶಾಸನವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾದ ಪ್ರತಿ ಮಗುವಿಗೆ ತಗಲಬಹುದಾದ ವೆಚ್ಚವನ್ನು ಪ್ರಕಟಿಸಿಯೇ ಇಲ್ಲ. ಇಂಥ ಪ್ರಕಟನೆೆಯ ನಂತರವೇ ಖಾಸಗಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಬೇಕು. ಇದು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹದಿನೈದು ರಾಜ್ಯಗಳು 2017-18ರ ಸಾಲಿನಲ್ಲಿ ಈ ಶಾಸನದನ್ವಯ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ತುಂಬಿಕೊಡುವಂತೆ ಕೇಂದ್ರ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದು, ಅವುಗಳಲ್ಲಿ ಆರು ರಾಜ್ಯಗಳ ಕೋರಿಕೆಯನ್ನು ಕೇಂದ್ರ ಸರಕಾರ ಮಂಜೂರು ಮಾಡಿದೆ. ಕೇಂದ್ರ ಸರಕಾರದ ನೆರವು ಕೇಳಿದ ಉಳಿದ ರಾಜ್ಯಗಳ ಕೋರಿಕೆಯನ್ನು ಪ್ರತೀ ಮಗುವಿನ ತಲಾವೆಚ್ಚ ಪ್ರಕಟಿಸಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ.

 ಈ ಶಾಸನದನ್ವಯ ಕಳೆದ ಮೂರು ವರ್ಷಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಎಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಸದಸ್ಯರು ಕೇಳಿದ ಪ್ರಶ್ನೆಗೆ ಸಚಿವರಿಂದ ಬಂದಿರುವ ಉತ್ತರ ಇನ್ನೂ ಆಘಾತಕಾರಿಯಾದದ್ದು. ಹದಿನೆಂಟು ರಾಜ್ಯಗಳು ಈ ಪ್ರಶ್ನೆ ತಮಗೆ ಅನ್ವಯಿಸುವುದಿಲ್ಲ ಎಂದು ಕೈಆಡಿಸಿವೆ. ಅಂದರೆ ಹದಿನೆಂಟು ರಾಜ್ಯಗಳ ಬಡ ಮಕ್ಕಳು ಈ ಶಾಸನದ ಅನುಕೂಲತೆಯಿಂದ ವಂಚಿತರಾಗಿದ್ದಾರೆ ಎಂದಾಯಿತು. ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದ ಮಕ್ಕಳ ಅಂಕಿಸಂಖ್ಯೆ ಇಲ್ಲ ಎಂದಾದಲ್ಲಿ ಈ ರಾಜ್ಯಗಳಿಗೆ ಕೇಂದ್ರ ಸರಕಾರ ಶಿಕ್ಷಣ ವೆಚ್ಚದ ಬಾಬತ್ತು ಹಣವನ್ನು ಹೇಗೆ ತುಂಬಿಕೊಟ್ಟಿತು? ಈ ರೊಕ್ಕ ಯಾರ ಜೇಬಿಗೆ ಹೋಗಿದೆ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಶಾಸನದನ್ವಯ ಖಾಸಗಿ ಶಿಕ್ಷಣ ಶಾಲೆಗಳಲ್ಲಿ ಪ್ರವೇಶ ಪಡೆಯುವ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣ ವೆಚ್ಚವನ್ನು ಸರಕಾರ ಭರಿಸಬೇಕು. ಇಲ್ಲವಾದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಈ ವೆಚ್ಚವನ್ನು ಭರಿಸ ಬೇಕಾಗುತ್ತದೆ. ಹೀಗಾಗಿ ಎಷ್ಟೋ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಶಾಸನದನ್ವಯ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ತಮ್ಮ ಶಾಲೆಗಳಿಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಿವೆ. ಕಾರಣ ಕೇಳಿದರೆ ರಾಜ್ಯ ಸರಕಾರಗಳು ವೆಚ್ಚಭರಿಸುತ್ತಿಲ್ಲ ಎನ್ನುತ್ತವೆ. ರಾಜ್ಯ ಸರಕಾರಗಳು ಕೇಂದ್ರದಿಂದ ಹಣ ಬಂದಿಲ್ಲ ಎನ್ನುತ್ತವೆ.

ಕೆಲವು ರಾಜ್ಯಗಳಲ್ಲಿ ಈ ಶಾಸನವನ್ನು ಜಾರಿಗೊಳಿಸಲಾಗಿದೆ ಯಾದರೂ ಅದು ತೃಪ್ತಿಕರವಾಗಿಲ್ಲ. ಸಚಿವರು ನೀಡಿರುವ ಉತ್ತರದ ಪ್ರಕಾರ 2014-15 ಮತ್ತು 2016-17ರಲ್ಲಿ ಈ ಶಾಸನದನ್ವಯ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ 6,12,053ರಷ್ಟು ಹೆಚ್ಚಿತ್ತು. ಅದೇ 2017ರಲ್ಲಿ ಈ ಏರಿಕೆ 5,02,880ಕ್ಕೆ ಕುಸಿದಿದೆ. ಅಹಮದಾಬಾದಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಡೆಸಿರುವ ಅಧ್ಯಯನದ ಪ್ರಕಾರ ಮುಂದಿನ ಎಂಟು ವರ್ಷಗಳಲ್ಲಿ 1.6 ಕೋಟಿಯಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣದ ಅವಕಾಶ ಲಭ್ಯವಾಗಬೇಕು. ಅಂದರೆ ಪ್ರತೀ ವರ್ಷ 20 ಲಕ್ಷ ಸೀಟುಗಳನ್ನು ಈ ವರ್ಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡಬೇಕು. ಆದರೆ ಸಚಿವರು ನೀಡಿರುವ ಉತ್ತರದ ಪ್ರಕಾರ, ಈಗ ಪ್ರತಿ ವರ್ಷ ಐದಾರು ಲಕ್ಷ ವಿದ್ಯಾರ್ಥಿಗಳು ಮಾತ್ರ ಖಾಸಗಿ ಶಾಲೆಗಳಲ್ಲಿ ಈ ಶಾಸನದನ್ವಯ ಪ್ರವೇಶ ಪಡೆಯುತ್ತಿದ್ದಾರೆ.

ಶಿಕ್ಷಣ ಹಕ್ಕು ಶಾಸನವನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಈ ವಿಷಯದಲ್ಲಿ ಕಾರ್ಯಾಂಗವನ್ನು ಉತ್ತರದಾಯಿಯಾಗಿ ಮಾಡಬೇಕಾದ ಹೊಣೆ ಶಾಸಕಾಂಗದ್ದು.ಸಚಿವರು ನೀಡಿರುವ ಉತ್ತರವನ್ನು ಗಮನಿಸಿದಾಗ ಈ ಎರಡೂ ಅಂಗಗಳು ಸರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದು ನಮ್ಮ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ್ದರಿಂದ ಶಾಸನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹೊರಬೇಕಾಗಿದೆ. ಆದರೆ ರಾಜ್ಯ ಸರಕಾರಗಳ ಪೂರ್ಣ ಸಹಕಾರವಿಲ್ಲದೆ ಇದು ಅಸಾಧ್ಯ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಅಷ್ಟೇನೂ ಹಿತಕರವಾಗಿಲ್ಲದ ಇಂದಿನ ಸಂದರ್ಭದಲ್ಲಿ ಇದು ಸುಲಭವಾದುದೇನಲ್ಲ. ಸರಕಾರಗಳ ನಿರುತ್ಸಾಹ ಮತ್ತು ಉದಾಸೀನ ಮನೋಭಾವದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ತೂಕಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಂತಾಗಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅವಕಾಶ ಕಲ್ಪಿಸುವುದರಲ್ಲಿ, ಸಾಮಾಜಿಕ ಹಿನ್ನೆಲೆ ಇತ್ಯಾದಿ ಹಲವಾರು ಕಾರಣಗಳಿಂದ ಉತ್ಸುಕವಾಗಿಲ್ಲ ಎಂಬುದು ಸರ್ವವಿಧಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)