varthabharthi

ಬುಡಬುಡಿಕೆ

ಅಧಿಕಾರಕ್ಕೆ ಬಂದರೆ ‘ಇಕ್ರಲಾ ವದೀರ್ಲಾ’ ನಾಡಗೀತೆ!

ವಾರ್ತಾ ಭಾರತಿ : 22 Apr, 2018
-ಚೇಳಯ್ಯ chelayya@gmail.com

ವಿ ಬಿದ್ದಲಿಂಗಯ್ಯ ಅವರನ್ನು ಬಿಜೆಪಿಯ ರಾಷ್ಟ್ರೀಯ ನಾಯಕ ಅಮಿತ್ ಶಾ ಭೇಟಿಯಾಗುತ್ತಾರೆ ಎನ್ನುವುದು ಗೊತ್ತಾಗಿ ಪತ್ರಕರ್ತ ಎಂಜಲು ಕಾಸಿ ಬಿದ್ದಲಿಂಗಯ್ಯ ಅವರ ನಿವಾಸಕ್ಕೆ ಧಾವಿಸಿದರೆ, ಅಲ್ಲಿ ಗುರು ದ್ರೋಣಾಚಾರ್ಯರ ಮುಂದೆ ತಲೆ ಬಾಗಿ ನಿಂತ ಏಕಲವ್ಯನಂತೆ ಬಿದ್ದಲಿಂಗಯ್ಯ ನಿಂತಿದ್ದರು. ‘‘ಗುರುಗಳೇ...ನಿಮ್ಮ ಪ್ರತಿಮೆಯನ್ನು ಇಟ್ಟುಕೊಂಡು ನಾನು ಕವಿತೆಗಳನ್ನು ಬರೆದೆ. ನೀವು ನನ್ನ ಮಾನಸ ಗುರುಗಳು....’’ ಎಂದು ಬಿದ್ದಲಿಂಗಯ್ಯ ಅಡ್ಡ ಬಿದ್ದರು.

ಅಮಿತ್ ಶಾ ಅವರು ಕೂಡ ಸಂತೋಷಗೊಂಡರು. ಅವರಿಗಾಗಿಯೇ ಕಲಿತು ಬಂದ ಕನ್ನಡದಲ್ಲಿ ಮಾತನಾಡತೊಡಗಿದರು. ಅದನ್ನು ಅನಂತಕುಮಾರ್ ಅನುವಾದಿಸಿದರು.
ಬಿದ್ದಲಿಂಗಯ್ಯ ಅವರ ಬೆನ್ನು ಸವರುತ್ತಾ ಹೇಳಿದರು ‘‘ನಿಮ್ಮ ಹಲವು ಕವಿತೆಗಳನ್ನು ಓದಿದ್ದೇನೆ....ನಿಮ್ಮ ಕವಿತೆಗಳೇ ನನ್ನ ರಾಜಕೀಯಕ್ಕೆ ಸ್ಫೂರ್ತಿ...’’
ಆ ಮಾತನ್ನು ಕೇಳಿದ ಬಿದ್ದಲಿಂಗಯ್ಯ ಹನುಮಂತನಂತೆ ಎತ್ತರವಾಗುತ್ತಾ ಹೋದರು.
‘‘ಇಕ್ರಲಾ ವದೀರ್ಲಾ ಕವಿತೆಯಿಂದ ಸ್ಫೂರ್ತಿ ಪಡೆದು ನಾನು ಗುಜರಾತ್ ಗಲಭೆಯನ್ನು ನಡೆಸಿದೆ....ಇಂದಿಗೂ ಆ ಕವಿತೆಯ ಸ್ಫೂರ್ತಿಯಿಂದ ನಮ್ಮ ಕಾರ್ಯಕರ್ತರು ನಡು ಬೀದಿಯಲ್ಲಿ ಇಕ್ಕುತ್ತಾ, ವದಿಯುತ್ತಾ ಬದುಕು ಸವೆಸುತ್ತಿದ್ದಾರೆ....’’ ಅಮಿತ್ ಶಾ ಹೇಳಿದರು.
‘‘ಏನೋ ನಿಮ್ಮ ಶಿಷ್ಯನಾಗಿ ನನ್ನ ಅಲ್ಪ ಕಾಣಿಕೆಯನ್ನು ಆ ಪದ್ಯಗಳ ಮೂಲಕ ನೀಡಿದ್ದೇನೆ....’’ ಬಿದ್ದಲಿಂಗಯ್ಯ ಅವರು ಸಂಕೋಚದಿಂದ ಒಪ್ಪಿಸಿದರು.
‘‘ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನಿಮ್ಮ ಇಕೃಲಾ ವದೀರ್ಲಾ ಕವಿತೆಯನ್ನೇ ರಾಜ್ಯದ ನಾಡಗೀತೆಯಾಗಿ ಮಾಡುತ್ತೇವೆ....’’ ಅಮಿತ್ ಶಾ ಭರವಸೆ ನೀಡಿದರು. ಬಿದ್ದಲಿಂಗಯ್ಯ ಸಂತೋಷ ತಾಳಲಾರದೆ ಉದ್ದಂಡ ನಮಸ್ಕಾರ ಮಾಡಿದರು.
‘‘ಈ ಬಾರಿ ನಾವು ನಿಮ್ಮ ಕವಿತೆಯನ್ನು ನಾಡಗೀತೆಯಾಗಿ ಮಾಡುವುದನ್ನೇ ಪ್ರಣಾಳಿಕೆಯ ಮುಖ್ಯ ವಿಷಯವಾಗಿ ಇಟ್ಟಿದ್ದೇವೆ. ಹಾಗೆಯೇ, ವಿವಿಧ ಪ್ರಾಧಿಕಾರಗಳನ್ನು ಹುಟ್ಟು ಹಾಕಿ ಅದರಲ್ಲಿ ನಿಮ್ಮನ್ನು ಶಾಶ್ವತವಾಗಿ ಸ್ಥಾಪಿಸುವ ಉದ್ದೇಶವೂ ಇದೆ...’’ ಅಮಿತ್ ಶಾ ಅಮಿತ ಆಶ್ವಾಸನೆಗಳನ್ನು ಒಂದೊಂದಾಗಿ ಬಿದ್ದಲಿಂಗಯ್ಯ ಅವರಿಗೆ ಒಪ್ಪಿಸಿದರು.
‘‘ಧನ್ಯ ಧನ್ಯ’’ ಬಿದ್ದಲಿಂಗಯ್ಯ ಮತ್ತೊಮ್ಮೆ ಅಡ್ಡ ಬಿದ್ದರು.
‘‘ನೀವು ಯಾವುದಾದರೂ ದೇವಸ್ಥಾನದ ಅರ್ಚರಾಗುವುದಾದರೆ ಹೇಳಿ...’’ ಕ್ರಾಂತಿಕಾರಿ ಮತ್ತೊಂದು ಆಶ್ವಾಸನೆಯನ್ನು ಅಮಿತ್ ಶಾ ನೀಡಿದರು.
‘‘ಬೇಡ ಬೇಡ. ನನಗೆ ಪ್ರಾಧಿಕಾರಗಳ ಅರ್ಚಕ ಸ್ಥಾನಗಳೇ ಸಾಕು....’’ ಎಂದು ಬಿದ್ದಲಿಂಗಯ್ಯ ನಿರಾಕರಿಸಿದರು.
‘‘ನೋಡಿ ದಡ್ಡ ಗೌಡರು ಎಂಬ ಹಿರಿಯ ಪದ್ಮಶ್ರೀ ಸಾಹಿತಿಗಳು ಮೋದಿಯ ಬಗ್ಗೆ ಅದೇನೋ ಬರೆದು ದೊಡ್ಡ ಕವಿಯಾಗಿದ್ದಾರೆ. ನೀವು ಕೂಡ ಅಂತಹದೇ ಮೋದಿಯ ಕುರಿತಂತೆ ಇನ್ನೊಂದು ಕಾವ್ಯವನ್ನು ಯಾಕೆ ಬರೆಯಬಾರದು...’’ ಅಮಿತ್ ಶಾ ಸಲಹೆ ನೀಡಿದರು.

ಬಿದ್ದಲಿಂಗಯ್ಯ ಅತ್ಯುತ್ಸಾಹದಿಂದ ಹೇಳಿದರು. ‘‘ಸಾರ್...ಒಂದು ಕವಿತೆ ಈಗಲೇ ವಾಚಿಸುವೆ....
ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು
ಅಚ್ಛೇ ದಿನ್ ಅಚ್ಛೇ ದಿನ್ ನನ್ನ ಮನೆಗೆ ತಂದರು....’’
‘‘ಕ್ಯಾ ಬಾತ್ ಹೇ....ಕ್ಯಾ ಬಾತ್ ಹೇ....’’ ಅಮಿತ್ ಕಾವ್ಯದಿಂದ ಸಂತೃಪ್ತಿಯಾದರು.
‘‘ಇನ್ನೊಂದು ಕವಿತೆ ವಾಚಿಸುತ್ತೇನೆ ಸಾರ್....’’ ಎಂದ ಬಿದ್ದಲಿಂಗಯ್ಯ ‘‘ ಮೋದಿಯ ಮಕ್ಕಳು ನಾವುಗಳು ಮೋದಿಯ ಮಕ್ಕಳು ನಾವುಗಳು... ಅವರು ಮಾಡಿದ ಚಹಾವ ಕುಡಿದು ಕವಿತೆಯ ಬರೆಯುವ ಸಾಹಿತಿಗಳು...ಮೋದಿಯ ಮಕ್ಕಳು ನಾವೆಲ್ಲ...’’

 ಅಮಿತ್ ಶಾ ರೋಮಾಂಚನಗೊಂಡರು. ‘‘ಸಾರ್...ನನ್ನ ಹಿಂದಿನ ಕವಿತೆಗಳನ್ನೆಲ್ಲ ಮತ್ತೊಮ್ಮೆ ಶುರುವಿನಿಂದ ಬರೆಯಬೇಕು ಎಂದಿದ್ದೇನೆ. ಅದನ್ನು ದಲಿತ ಕಾವ್ಯ ಎಂದು ಜನರು ತಪ್ಪು ತಿಳಿದಿದ್ದಾರೆ. ಆದುದರಿಂದ ಅವುಗಳನ್ನು ಪುನರ್ರಚಿಸಿ ಮೋದಿಯ ಕೈಗಳಿಂದ ಬಿಡುಗಡೆಗೊಳಿಸಬೇಕು ಎನ್ನುವ ಆಸೆ ನನ್ನದು....’’
‘‘ಖಂಡಿತ ಮಾಡೋಣ. ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಪುಸ್ತಕ ಪ್ರಾಧಿಕಾರದ ಅಷ್ಟೂ ಅನುದಾನವನ್ನು ಬಳಸಿಕೊಂಡು ನಿಮ್ಮ ಕವಿತೆಗಳನ್ನೆಲ್ಲ ತಿದ್ದೋಣ. ಬೇಕಾದರೆ ನಮ್ಮ ಆರೆಸ್ಸೆಸ್ ಕಚೇರಿಯಲ್ಲಿ ಹಲವು ವಿದ್ವಾಂಸರಿದ್ದಾರೆ. ಅವರ ಸಹಾಯವನ್ನು ತೆಗೆದುಕೊಳ್ಳಿ....’’ ಅಮಿತ್ ಶಾ ಹೇಳಿದರು.

ಬಿದ್ದಲಿಂಗಯ್ಯ ಅವರು ಇನ್ನಷ್ಟು ಖುಷಿಯಾದರು. ಕೊನೆಯದಾಗಿ ಅಮಿತ್ ಶಾ ವಿಷಯಕ್ಕೆ ಬಂದರು ‘‘ನನ್ನನ್ನು ಗುರುಗಳೇ ಎಂದು ಕರೆದಿದ್ದೀರಿ. ತುಂಬಾ ಸಂತೋಷ. ಆದರೆ ನನಗೆ ಏನು ಗುರುದಕ್ಷಿಣೆ ಕೊಡುವಿರಿ?’’
ಬಿದ್ದ ಲಿಂಗಯ್ಯ ರೋಮಾಂಚಿತರಾಗಿ ‘‘ಏನು ಕೇಳಿದರೂ ಕೊಡುತ್ತೇನೆ ಗುರುಗಳೇ...’’ ಎಂದು ಮತ್ತೊಮ್ಮೆ ಅಡ್ಡ ಬಿದ್ದರು.
ಅಮಿತ್ ಅವರು ಬಿದ್ದಲಿಂಗಯ್ಯರನ್ನು ಎಬ್ಬಿಸಿ ‘‘ತುಂಬಾ ದೊಡ್ಡದೇನೂ ಬೇಡ. ನಿಮ್ಮ ಬಲಗೈಯ ಹೆಬ್ಬೆರಳನ್ನು ಕೊಡಿ....’’ ಕೇಳಿದರು.

ಬಿದ್ದಲಿಂಗಯ್ಯ ಕಂಗಾಲಾದರು. ‘‘ಯಾಕೆ...ಕೊಡುವುದಿಲ್ಲ ಎಂದರೆ ತೊಂದರೆ ಇಲ್ಲ...ಈಗಾಗಲೇ ಕರ್ನಾಟಕದಲ್ಲಿ ಬೇರೆ ಹಲವು ದಲಿತ ಕವಿಗಳು ತಮ್ಮ ತಮ್ಮ ಹೆಬ್ಬೆರಳುಗಳ ಜೊತೆಗೆ ನಮ್ಮ ಭೇಟಿಗಾಗಿ ಕಾದು ಕೂತಿದ್ದಾರೆ...’’ ಅಮಿತ್ ಶಾ ಸಣ್ಣದಾಗಿ ಬೆದರಿಸಿದರು.
‘‘ಗುರುಗಳೇ...ಸಮಸ್ಯೆ ಅದಲ್ಲ....ವಿವಿಧ ಪ್ರಾಧಿಕಾರಗಳ ಸ್ಥಾನಗಳಿಗಾಗಿ ಈಗಾಗಲೇ ಎಲ್ಲಾ ಬೆರಳುಗಳನ್ನೂ ಸಂಬಂಧಪಟ್ಟವರಿಗೆಲ್ಲ ಕತ್ತರಿಸಿ ಕೊಟ್ಟಾಗಿದೆ. ಇದೀಗ ಉಳಿದಿರುವುದು ಒಂದೇ ಬೆರಳು...ಅದನ್ನು ಹೀಗೆ ಸಾರ್ವಜನಿಕವಾಗಿ ಕತ್ತರಿಸಿ ಕೊಡಲು ನನಗೆ ನಾಚಿಕೆಯಾಗುತ್ತಿದೆ...’’ ಎಂದು ನೆಲ ನೋಡತೊಡಗಿದರು.
‘‘ಪರವಾಗಿಲ್ಲ, ಖಾಸಗಿಯಾಗಿಯೇ ಅದನ್ನು ಕತ್ತರಿಸಿ ಕೊಡಿ....’’ ಅಮಿತ್ ಹೇಳಿದರು.
ಒಳಹೋದ ಬಿದ್ದಲಿಂಗಯ್ಯ ಅದು ಏನನ್ನು ಕತ್ತರಿಸಿಕೊಟ್ಟರೋ, ಅಮಿತ್ ಶಾ ಮಾತ್ರ ಅದನ್ನು ಸ್ವೀಕರಿಸಿ ಸಂತೃಪ್ತಾಗಿ ದಿಲ್ಲಿ ಕಡೆಗೆ ಪ್ರಯಾಣ ಹೊರಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)