varthabharthi

ಪ್ರಚಲಿತ

ಸಿಪಿಎಂ: ಫ್ಯಾಶಿಸಂ ವಿರುದ್ಧ ಮೂಡಿದ ಒಮ್ಮತ

ವಾರ್ತಾ ಭಾರತಿ : 23 Apr, 2018
ಸನತ್ ಕುಮಾರ ಬೆಳಗಲಿ

ದೇಶದ ಭವಿಷ್ಯದ ದೃಷ್ಟಿಯಿಂದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಕೈಗೊಂಡ ಒಮ್ಮತದ ತೀರ್ಮಾನ ಆಶಾದಾಯಕವಾಗಿದೆ. ಇದರ ಜೊತೆಗೆ ಈ ದೇಶ ಕಂಡ ಮಹಾನ್ ರಾಜಕೀಯ ಮುತ್ಸದ್ದಿ, ಸಂಸದೀಯ ಪಟು ಹಾಗೂ ಎಲ್ಲ ಸಮು ದಾಯಗಳ ಗೌರವಕ್ಕೆ ಪಾತ್ರರಾದ ಸೀತಾರಾಮ್ ಯೆಚೂರಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದು ಸ್ವಾಗತಾರ್ಹವಾಗಿದೆ.

ಈಗ ದೇಶ ಎದುರಿಸುತ್ತಿರುವುದು ಅಂತಿಂಥ ಬಿಕ್ಕಟ್ಟು ಅಲ್ಲ. ಇದು ಸ್ವಾತಂತ್ರ ನಂತರ ಹಿಂದೆಂದೂ ಕಂಡರಿಯದ ಅಳಿವು ಉಳಿವಿನ ಬಿಕ್ಕಟ್ಟು. ಸ್ವಾತಂತ್ರಾ ಹೋರಾಟದಲ್ಲಿ ಭಾಗವಹಿಸದ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ, ಸಂವಿಧಾನ ವಿರೋಧಿಯಾದ ಫ್ಯಾಶಿಸ್ಟ್ ಶಕ್ತಿಗಳು ಇದೇ ಪ್ರಜಾಪ್ರಭುತ್ವ ನೀಡಿದ ಚುನಾವಣೆ ಎಂಬ ಏಣಿಯನ್ನು ಏರಿ ಅಧಿಕಾರಕ್ಕೆ ಬಂದು ಅದೇ ಏಣಿಯನ್ನು ಒದೆಯಲು ಸಜ್ಜಾಗಿ ನಿಂತಿವೆ. ಸಂವಿಧಾನವನ್ನು ಬುಡಮೇಲು, ಮನುವಾದವನ್ನು ದೇಶದ ಮೇಲೆ ಹೇರಲು ಸಕಲ ಸಿದ್ಧತೆ ನಡೆಸಿವೆ. ಎರಡನೇ ಮಹಾಯುದ್ಧ ಕಾಲದಲ್ಲಿ ಜರ್ಮನಿ ಯಾವ ಸನ್ನಿವೇಶ ಎದುರಿಸುತ್ತಿತ್ತೋ, ಅದೇ ಸನ್ನಿವೇಶ ಭಾರತ ಇಂದು ಎದುರಿಸುತ್ತಿದೆ. ಭಾರತದಲ್ಲಿ ರಾಜ್ಯಾಧಿಕಾರವನ್ನು ಸ್ವಾಧೀನಪಡಿಸಿಕೊಂಡಿರುವುದು ಮನುವಾದಿ ಫ್ಯಾಶಿಸ್ಟ್ ಶಕ್ತಿಗಳು. ಸರ್ವರಿಗೂ ಸಮಾನಾವಕಾಶ ನೀಡಿದ ಸಂವಿಧಾನವನ್ನು ಬುಡಮೇಲು ಮಾಡಿ, ಶ್ರೇಣೀಕೃತ ಜಾತಿ ಪದ್ಧತಿಯನ್ನು ದೇಶದ ಮೇಲೆ ಹೇರಲು ಹುನ್ನಾರ ನಡೆಸಿವೆ. ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು ಹೀಗೆ ಎಲ್ಲ ಸಮುದಾಯಗಳ ಮೇಲೆ ಈ ಶಕ್ತಿಗಳು ಪ್ರಾಣಾಂತಿಕ ದಾಳಿಯನ್ನು ಆರಂಭಿಸಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾನೂನು ದುರ್ಬಲಗೊಳಿಸಲು ನಡೆಸಿರುವ ಸಂಚು ಹಾಗೂ ಸುಪ್ರೀಂ ಕೋರ್ಟನ್ನು ಬಳಸಿಕೊಂಡು ಕೋಮುವಾದಿ ಕ್ರಿಮಿನಲ್‌ಗಳಿಗೆ ನೀಡುತ್ತಿರುವ ರಕ್ಷಣೆ ಆತಂಕಕಾರಿ ಬೆಳವಣಿಗೆಯಾಗಿವೆ.

ಇಂಥ ಆತಂಕದ ಸನ್ನಿವೇಶದಲ್ಲಿ ಈ ಕರಾಳ ಶಕ್ತಿಗಳ ಎದುರು ಪುಟಿದೆದ್ದು ಬರಬೇಕಾದ ಪ್ರತಿರೋಧ ನಮ್ಮ ದೇಶದಲ್ಲಿ ಇನ್ನೂ ಕಂಡು ಬರುತ್ತಿಲ್ಲ. ಸ್ವಾತಂತ್ರ ಹೋರಾಟದ ಹಿನ್ನೆಲೆ ಹೊಂದಿರುವ ಕಾಂಗ್ರೆಸ್ ದುರ್ಬಲಗೊಂಡಿದೆ. ಕಾಂಗ್ರೆಸೇತರ ಸೆಕ್ಯೂಲರ್ ಪಕ್ಷಗಳು ಕೂಡ ಮುಂಚಿನ ಪ್ರಾಬಲ್ಯ ಉಳಿಸಿಕೊಂಡಿಲ್ಲ. ಹಿಂದೆ ಭರವಸೆ ಮೂಡಿಸಿದ್ದ ಜನತಾ ಪರಿವಾರ ಈಗ ಹಲವಾರು ಗುಂಪುಗಳಾಗಿ ಒಡೆದು ಹೋಗಿದೆ. ಇಂಥ ಸನ್ನಿವೇಶದಲ್ಲಿ ಫ್ಯಾಶಿಸಂ ಬಗ್ಗೆ ಸ್ಪಷ್ಟ ಅರಿವು ಇರುವ ಜನ, ಸಮುದಾಯದ ಬಗ್ಗೆ ಕಾಳಜಿ ಹೊಂದಿರುವ ಎಡಪಕ್ಷಗಳು ಮಾತ್ರ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಸುತ್ತಲೂ ಕಗ್ಗತ್ತಲು ಕವಿದಿರುವ ಈ ಸನ್ನಿವೇಶದಲ್ಲಿ ಹೈದರಾಬಾದ್‌ನಲ್ಲಿ ನಡೆದ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಮಹಾ ಅಧಿವೇಶನ ಭರವಸೆಯ ಬೆಳಕನ್ನು ತೋರಿಸಿದೆ. ಐದು ದಿನಗಳ ಸುದೀರ್ಘ ಚರ್ಚೆಯ ನಂತರ ಸಂಘ ಪರಿವಾರದ ಫ್ಯಾಶಿಸ್ಟ್ ಶಕ್ತಿಗಳೇ ಪ್ರಧಾನ ಶತ್ರುಗಳೆಂದು ಪರಿಗಣಿಸಿ, ಆ ಶಕ್ತಿಗಳ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಸೇರಿದಂತೆ ಯಾವುದೇ ಸೆಕ್ಯೂಲರ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಈ ಮಹಾ ಅಧಿವೇಶನ ಒಮ್ಮತಕ್ಕೆ ಬಂದಿದೆ.

ಫ್ಯಾಶಿಸ್ಟ್ ಸಂಘ ಪರಿವಾರ ಎದುರಿಸಲು ಮತ್ತು ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಯಾವ ರೀತಿ ಹೋರಾಟ ರೂಪಿಸಬೇಕು, ಎಂಥ ರಣ ನೀತಿ ಅನುಸರಿಸಬೇಕು, ಕಾರ್ಯತಂತ್ರ ಯಾವುದಾಗಿರಬೇಕು ಎಂಬುದರ ಬಗ್ಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದಲ್ಲಿ ಕೆಲ ವರ್ಷಗಳಿಂದ ತೀವ್ರ ಸ್ವರೂಪದ ಭಿನ್ನಾಭಿಪ್ರಾಯಗಳು ಉಂಟಾಗಿದ್ದು ನಿಜ. ಒಂದು ಹಂತದಲ್ಲಿ ಪಕ್ಷ ಒಡೆದು ಹೋಗುತ್ತೇನೋ ಎಂಬ ವದಂತಿಗಳು ಹರಡಿದ್ದವು. ಆದರೆ ಈ ಭಿನ್ನಾಭಿಪ್ರಾಯಗಳನ್ನು ಆಂತರಿಕ ಚರ್ಚೆಗಳ ಮೂಲಕ ಪ್ರಜಾಪ್ರಭುತ್ವ ವಿಧಾನದಲ್ಲಿ ಬಗೆಹರಿಸಿಕೊಂಡ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕ್ರಮ ಶ್ಲಾಘನೀಯವಾಗಿದೆ. ಒಮ್ಮತ ರೂಪಿಸಲಾಗದೆ ಅನೇಕ ಪಕ್ಷಗಳು ಒಡೆದು ಹೋಗುತ್ತಿರುವಾಗ, ಈ ಪಕ್ಷ ಜನತಂತ್ರದ ರಕ್ಷಣೆಗೆ ಒಮ್ಮತದ ಹೆಜ್ಜೆ ಹಾಕುತ್ತಿರುವುದು ಪ್ರಶಂಸನೀಯವಾಗಿದೆ. ಭಿನ್ನಾಭಿಪ್ರಾಯ ಅತಿರೇಕಕ್ಕೆ ಹೋದಾಗಲೂ ಸಮಾಧಾನದಿಂದ ಕುಳಿತು ಬಗೆಹರಿಸಿಕೊಂಡ ಸಿಪಿಎಂ ಸಾರಥ್ಯ ವಹಿಸಿದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಯಾಗಿ ಪುನರಾಯ್ಕೆಗೊಂಡ ಕಾಮ್ರೇಡ್ ಸೀತಾರಾಂ ಯೆಚೂರಿ ಅವರನ್ನು ನಾವು ಅಭಿನಂದಿಸಬೇಕಿದೆ.

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಹಿಂದಿನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರ ನಡುವೆ ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ಅದರಲ್ಲೂ ಮುಖ್ಯವಾಗಿ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದರ ಕುರಿತಂತೆ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಎರಡು ತಿಂಗಳ ಹಿಂದೆ ಕೋಲ್ಕತಾದಲ್ಲಿ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆೆಯಲ್ಲಿ ಈ ಭಿನ್ನಾಭಿಪ್ರಾಯದ ಎರಡು ಪ್ರಸ್ತಾವನೆಗಳ ಬಗ್ಗೆ ಮತದಾನ ಕೂಡ ನಡೆದಿತ್ತು. ಪಕ್ಷ ಬಲಿಷ್ಠವಾಗಿರುವ ಕೇರಳ ಘಟಕದ ಬೆಂಬಲದೊಂದಿಗೆ ಕಾರಟ್ ನಿಲುವಿಗೆ ಬಹುಮತ ವ್ಯಕ್ತವಾಗಿತ್ತು. ಇಂಥ ಭಿನ್ನಾಭಿಪ್ರಾಯ ಉಂಟಾದಾಗ, ಪಕ್ಷದ ಮಹಾ ಅಧಿವೇಶನದ ಮುಂದೆ ಚರ್ಚೆಗೆ ಈ ಎರಡು ಅಭಿಪ್ರಾಯಗಳನ್ನು ಇಡಲಾಗುತ್ತದೆ. ಹಿಂದೆ ಜ್ಯೋತಿ ಬಸು ಪ್ರಧಾನ ಮಂತ್ರಿ ಆಗಬೇಕು ಎಂಬ ಪ್ರಸ್ತಾವನೆಯನ್ನು ಪಕ್ಷದ ಕೇಂದ್ರ ಸಮಿತಿ ಬಹುಮತದಿಂದ ತಿರಸ್ಕರಿಸಿದಾಗ, ಪಕ್ಷದ ಮಹಾ ಅಧಿವೇಶನ ಈ ಬಗ್ಗೆ ಕುಲಂಕುಷವಾಗಿ ಚರ್ಚಿಸಿ, ಪ್ರಧಾನಿಯಾಗಬೇಕು ಎಂಬ ಪ್ರಸ್ತಾವನೆಯನ್ನು ಪುರಸ್ಕರಿಸಿತ್ತು.

ಈ ಬಾರಿ ಕೂಡ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲವೇ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಪಕ್ಷದ ಕೇಂದ್ರ ಸಮಿತಿ ಗೊತ್ತುವಳಿ ಸ್ವೀಕರಿಸಿತ್ತು. ಇದಕ್ಕೆ ಭಿನ್ನವಾದ ಅಭಿಪ್ರಾಯವನ್ನು ಯೆಚೂರಿ ಮಂಡಿಸಿದ್ದರು. ಈ ಎರಡೂ ಪ್ರಸ್ತಾವನೆಗಳ ಬಗ್ಗೆ ಮಹಾ ಅಧಿವೇಶ ಸುದೀರ್ಘವಾಗಿ ಚರ್ಚಿಸಿತು. ಚರ್ಚೆಯ ಒಂದು ಹಂತದಲ್ಲಿ ಈ ಪ್ರಸ್ತಾವನೆಗಳ ಬಗ್ಗೆ ಮತದಾನ ನಡೆಯಬೇಕು ಎಂಬ ಬೇಡಿಕೆಯನ್ನು ಕೆಲ ಪ್ರತಿನಿಧಿಗಳು ಮುಂದಿಟ್ಟರು. ಆದರೆ, ಇಂಥ ವಿಷಯಗಳ ಬಗ್ಗೆ ಮತದಾನ ನಡೆಸುವ ಪ್ರಕ್ರಿಯೆ ಪಕ್ಷದಲ್ಲಿ ಇಲ್ಲ ಎಂದು ಹೇಳಿದ ಸೀತಾರಾಂ ಯೆಚೂರಿ ಮತ್ತು ಪ್ರಕಾಶ್ ಕಾರಟ್ ಒಮ್ಮತದ ನಿಲುವನ್ನು ರೂಪಿಸೋಣ ಎಂದು ಪ್ರತಿನಿಧಿಗಳ ಮನವೊಲಿಸಿದರು. ಈ ಒಮ್ಮತದ ಪ್ರಕಾರ, ಹಿಂದೆ ಕೇಂದ್ರ ಸಮಿತಿ ಅಂಗೀಕರಿಸಿದ ನಿರ್ಣಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲವೇ ಹೊಂದಾಣಿಕೆ ಸಾಧ್ಯವಿಲ್ಲ ಎಂಬ ವಾಕ್ಯದಲ್ಲಿ ‘ಹೊಂದಾಣಿಕೆ’ ಎಂಬ ಪದವನ್ನು ತೆಗೆದು ಹಾಕಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ. ಆದರೆ ಕೋಮುವಾದಿ ವಿರೋಧಿ ಹೋರಾಟದಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಒಮ್ಮತದ ನಿಲುವಿಗೆ ಬರಲಾಯಿತು. ಹೀಗಾಗಿ ಬಿಕ್ಕಟ್ಟು ಸುಲಭವಾಗಿ ಬಗೆಹರಿಯಿತು.

ಕಮ್ಯುನಿಸ್ಟ್ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಷ್ಟು ಜೀವಂತವಾಗಿರುತ್ತದೆ ಮತ್ತು ಸತ್ವಪೂರ್ಣವಾಗಿರುತ್ತದೆ ಎಂಬುದಕ್ಕೆ ಸಿಪಿಎಂನ ಹೈದರಾಬಾದ್ ಮಹಾ ಅಧಿವೇಶನ ಒಂದು ಉದಾಹರಣೆಯಾಗಿದೆ. ಮೈತ್ರಿ ಮತ್ತು ಹೊಂದಾಣಿಕೆ ಎಂಬ ಪದಗಳ ಬಗ್ಗೆ ಐದು ದಿನಗಳ ಕಾಲ ಚರ್ಚಿಸಿ, ಒಮ್ಮತ ರೂಪಿಸಿದ್ದು ಸಣ್ಣ ಸಾಧನೆಯಲ್ಲ. ಇದು ಆ ಪಕ್ಷದ ಪ್ರಬುದ್ಧತೆ ತೋರಿಸಿಕೊಡುತ್ತದೆ.

ಒಂದು ರಾಜಕೀಯ ನಿಲುವಿನ ಬಗ್ಗೆ ಅತ್ಯಂತ ಕೆಳ ಹಂತದವರೆಗೆ ಚರ್ಚೆ ನಡೆಸುವ ಈ ಪ್ರಕ್ರಿಯೆಯೇ ಅದ್ಭುತವಾಗಿದೆ. ಪಕ್ಷದ ಕೇಂದ್ರ ಸಮಿತಿ ನಿರ್ಣಯವನ್ನು ದೇಶದ ಮೂಲೆಮೂಲೆಗಳಲ್ಲಿ ಇರುವ ಪಕ್ಷದ ಸಣ್ಣ ಶಾಖೆಗಳಿಗೂ ಕಳುಹಿಸಿ, ಅಲ್ಲಿನ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಮಹಾ ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚಿಸಿ ಒಮ್ಮತ ರೂಪಿಸುವುದು ಸಾಮಾನ್ಯ ಸಂಗತಿಯಲ್ಲ.

ಕಾಂಗ್ರೆಸ್ ಜೊತೆ ಮೈತ್ರಿ ಕುರಿತಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳ ಅನುಭವ ವಿಭಿನ್ನವಾಗಿರುತ್ತದೆ. ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಎಂಗೆ ಕಾಂಗ್ರೆಸ್ ಪ್ರಧಾನ ಶತ್ರು. ಹೀಗಾಗಿ ಅಲ್ಲಿನ ಪ್ರತಿನಿಧಿಗಳು ಕಾಂಗ್ರೆಸ್ ಜೊತೆ ಮೈತ್ರಿಯನ್ನು ವಿರೋಧಿಸುತ್ತಾರೆ. ಆದರೆ, ದೇಶದ ಇತರ ರಾಜ್ಯಗಳ ಪ್ರತಿನಿಧಿಗಳ ಅಭಿಪ್ರಾಯವೇ ಬೇರೆ. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಭಯಾನಕ ಸ್ವರೂಪ ತಾಳಿದ ಬಿಜೆಪಿ ಕೋಮುವಾದವೇ ಅವರಿಗೆ ಪ್ರಧಾನ ಶತ್ರು. ಹೀಗಾಗಿ ದೇಶದ ಬಹುತೇಕ ರಾಜ್ಯಗಳ ಪ್ರತಿನಿಧಿಗಳು ಕಾರಟ್‌ನಿಲುವನ್ನು ಒಪ್ಪಿಕೊಳ್ಳಲಿಲ್ಲ. ಹೀಗೆ ಚಿಂತನ-ಮಂಥನ ನಡೆದು, ಕೊನೆಗೆ ಒಮ್ಮತಕ್ಕೆ ಬರಲಾಯಿತು.

ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಯನ್ನು ವಿರೋಧಿಸುವ ಅಭಿಪ್ರಾಯವನ್ನು ತಮ್ಮ ಸಮರ್ಥ ಪ್ರತಿಪಾದನೆ ಮೂಲಕ ತಳ್ಳಿ ಹಾಕಿದ ಸೀತಾರಾಂ ಯೆಚೂರಿ ದೇಶದಲ್ಲಿ ಎಡ ಪ್ರಜಾಪ್ರಭುತ್ವ ಶಕ್ತಿಗಳು ಬೆಳೆಯಬೇಕಾದರೆ, ಜನರ ಚಳವಳಿ ಉಳಿಯಬೇಕಾದರೆ ಇಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿರಬೇಕು. ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ. ಆದ್ದರಿಂದ ಅದನ್ನು ಮೊದಲು ಪ್ರಭುತ್ವದಿಂದ ಪ್ರತ್ಯೇಕಗೊಳಿಸಬೇಕೆಂದು ಹೇಳಿದರು.

ಫ್ಯಾಶಿಸ್ಟ್ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಬಗ್ಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಸಂಘ ಪರಿವಾರವೇ ಪ್ರಧಾನ ಶತ್ರು ಎಂಬುದರ ಬಗ್ಗೆ ಪಕ್ಷದಲ್ಲಿ ಒಮ್ಮತವಿತ್ತು. ಆದರೆ, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಸೇರಿದಂತೆ ಸೆಕ್ಯೂಲರ್ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಭಿನ್ನಾಭಿಪ್ರಾಯ ಇತ್ತು. ಈ ಭಿನ್ನಾಭಿಪ್ರಾಯವನ್ನು ಹೈದರಾಬಾದ್ ಮಹಾ ಅಧಿವೇಶನ ನಿವಾರಿಸಿತು.

ದೇಶದ ಭವಿಷ್ಯದ ದೃಷ್ಟಿಯಿಂದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಕೈಗೊಂಡ ಒಮ್ಮತದ ತೀರ್ಮಾನ ಆಶಾದಾಯಕವಾಗಿದೆ. ಇದರ ಜೊತೆಗೆ ಈ ದೇಶ ಕಂಡ ಮಹಾನ್ ರಾಜಕೀಯ ಮುತ್ಸದ್ದಿ, ಸಂಸದೀಯ ಪಟು ಹಾಗೂ ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರರಾದ ಸೀತಾರಾಮ್ ಯೆಚೂರಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದು ಸ್ವಾಗತಾರ್ಹವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)