ಲಂಡನ್ ಮ್ಯಾರಥಾನ್: ಕಿಪ್ಚೊಗ್, ಚೆರುಯೊಟ್ ಚಾಂಪಿಯನ್
ಲಂಡನ್, ಎ.22: ಲಂಡನ್ ಮ್ಯಾರಥಾನ್ನ ಪುರುಷರ ವಿಭಾಗದಲ್ಲಿ ಕೀನ್ಯದ ಇಲಿಯುಡ್ ಕಿಪ್ಚೊಗ್ ಬ್ರಿಟನ್ನ ಮೊ ಫರ್ಹಾ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಫರ್ಹಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಈ ವೇಳೆ ಅವರು ಬ್ರಿಟನ್ ಓಟಗಾರನ ದಾಖಲೆ ಮುರಿದಿದ್ದಾರೆ.
2:04:27 ಸೆಕೆಂಡ್ನಲ್ಲಿ ಗುರಿ ತಲುಪಿದ ಕಿಪ್ಚೊಗ್ ಮೊದಲ ಸ್ಥಾನ ಪಡೆದರು. 2:06:32 ಸೆಕೆಂಡ್ನಲ್ಲಿ ಗುರಿ ತಲುಪಿದ ಫರ್ಹಾ 1985ರಲ್ಲಿ ಬ್ರಿಟನ್ನ ಸ್ಟೀವ್ ಜೋನ್ಸ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕಳೆದ ವರ್ಷದ ಲಂಡನ್ ಮ್ಯಾರಥಾನ್ನಿಂದ ಹೊರಗುಳಿದಿದ್ದ ಕಿಪ್ಚೊಗ್ ಮೂರನೇ ಬಾರಿ ಪ್ರಶಸ್ತಿ ಜಯಿಸಿದರು. ಕಿಪ್ಚೊಗ್ 2015 ಹಾಗೂ 2016ರ ಲಂಡನ್ ಮ್ಯಾರಥಾನ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ಮಹಿಳೆಯರ ಮ್ಯಾರಥಾನ್ನಲ್ಲಿ ತನ್ನದೇ ದೇಶದ ಮೇರಿ ಕೀಟಾನಿ ಅವರನ್ನು ಹಿಂದಿಕ್ಕಿದ ಕೀನ್ಯದ ವಿವಿಯನ್ ಚೆರುಯೊಟ್ ಮೊದಲ ಬಾರಿ ಲಂಡನ್ ಮ್ಯಾರಥಾನ್ ಗೆದ್ದುಕೊಂಡರು. ಆದರೆ, ಪೌಲಾ ರಾಡ್ಕ್ಲಿಫ್ ವಿಶ್ವ ದಾಖಲೆ (2:15:25)ಮುರಿಯಲು ಸಾಧ್ಯವಾಗಲಿಲ್ಲ. 5,000 ಹಾಗೂ 10,000 ಮೀ. ಓಟದಲ್ಲಿ ಮೂರನೇ ವೇಗದ ಓಟಗಾರ್ತಿ ಎನಿಸಿಕೊಂಡಿರುವ ಚೆರುಯೊಟ್ 2:18:31 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ ಮೊದಲ ಸ್ಥಾನ ಪಡೆದರು. ಕೀನ್ಯದ ಇನ್ನೋರ್ವ ಓಟಗಾರ್ತಿ ಬ್ರಿಗಿಡ್ ಕೊಸ್ಗಿ 2:20:13 ಸೆಕೆಂಡ್ನಲ್ಲಿ ಗುರಿ ಮುಟ್ಟುವುದರೊಂದಿಗೆ 2ನೇ ಸ್ಥಾನಪಡೆದಿದ್ದಾರೆ.