ಬ್ರಿಟನ್ ವೀಸಾ ಪಡೆದ ಆಮಿರ್
ಕರಾಚಿ, ಎ.24: ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಆಮಿರ್ ಮಂಗಳವಾರ ಬ್ರಿಟನ್ ವೀಸಾ ಪಡೆದಿದ್ದಾರೆ.
ಪಾಕಿಸ್ತಾನ ತಂಡದ ಉಳಿದ ಆಟಗಾರರು ಐರ್ಲೆಂಡ್ ಹಾಗೂ ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡ ಮರುದಿನ ಆಮಿರ್ಗೆ ವೀಸಾ ಲಭಿಸಿದೆ.
‘‘ಆಮಿರ್ ಅಗತ್ಯವಿರುವ ವೀಸಾವನ್ನು ಪಡೆದಿದ್ದಾರೆ. ಅವರು ಬುಧವಾರ ಇಂಗ್ಲೆಂಡ್ಗೆ ತೆರಳಲಿದ್ದಾರೆ’’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ವಕ್ತಾರ ಅಮ್ಜಾದ್ ಭಟ್ಟಿ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ.
30 ಟೆಸ್ಟ್ ಪಂದ್ಯಗಳಲ್ಲಿ 95 ವಿಕೆಟ್ಗಳನ್ನು ಕಬಳಿಸಿರುವ ಆಮಿರ್ ಪಾಕಿಸ್ತಾನ ಟೆಸ್ಟ್ ತಂಡದ ಅತ್ಯಂತ ಅನುಭವಿ ವೇಗದ ಬೌಲರ್ ಆಗಿದ್ದಾರೆ. ಆಮಿರ್ ವಿಳಂಬವಾಗಿ ವೀಸಾ ಪಡೆಯುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಪಾಕಿಸ್ತಾನ ತಂಡ ಇಂಗ್ಲೆಂಡ್ಗೆ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದಾಗ ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಆಗ ಪಿಸಿಬಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ನೆರವು ಪಡೆದು ಸಮಸ್ಯೆ ಬಗೆಹರಿಸಿಕೊಂಡಿತ್ತು.
ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪದಲ್ಲಿ 2010ರಲ್ಲಿ ಆಮಿರ್ ಐದು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಸಮಯ ಇಂಗ್ಲೆಂಡ್ನಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರು.
ಪಾಕಿಸ್ತಾನ ತಂಡ ಡಬ್ಲಿನ್ನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ಆ ಬಳಿಕ ಇಂಗ್ಲೆಂಡ್ನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸ್ಕಾಟ್ಲೆಂಡ್ ವಿರುದ್ಧ 2 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡುವುದರೊಂದಿಗೆ ಜೂನ್ನಲ್ಲಿ ತನ್ನ ಪ್ರವಾಸವನ್ನು ಕೊನೆಗೊಳಿಸಲಿದೆ.