varthabharthi

ನೇಸರ ನೋಡು

ಕೆಂಪು ಕೋಟೆಯಲ್ಲಿ ಖಾಸಗಿ ಕಾರುಬಾರು

ವಾರ್ತಾ ಭಾರತಿ : 6 May, 2018
ಜಿ.ಎನ್. ರಂಗನಾಥ ರಾವ್

ಕೇಂದ್ರ ಸರಕಾರದ ಪುರಾತತ್ವ ಇಲಾಖೆ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು, ಪ್ರಾಚ್ಯವಸ್ತು ತಾಣಗಳನ್ನು ಕಾಪಾಡುವುದರಲ್ಲಿ ವಿಫಲವಾಗಿರುವುದರಿದಲೇ ದತ್ತುಕೊಡುವ ಆಲೋಚನೆ ಕೇಂದ್ರದ ಮಹಾತಲೆಗಳಿಗೆ ಹೊಳೆದಿದೆ. ಅದಕ್ಷತೆ, ಹಣದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೇಂದ್ರ ಪುರಾತತ್ವ ಇಲಾಖೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ರಾಷ್ಟ್ರದಲ್ಲಿ ಎಲ್ಲಿ, ಎಷ್ಟು ಸಾಂಸ್ಕೃತಿಕ ಪರಂಪರೆಯ ಮಹತ್ವದ ಸ್ಮಾರಕಗಳಿವೆ ಎಂಬುದೇ ಇನ್ನೂ ಇಲಾಖೆಗೆ ಪತ್ತೆಯಾಗಿಲ್ಲವಂತೆ. ಇನ್ನು ಈ ಸ್ಥಳಗಳಲ್ಲಿನ ಪುರಾತತ್ವ ಸ್ಮಾರಕಗಳು ಮತ್ತು ಅವಶೇಷಗಳ ಲೂಟಿಯಾಗಿರುವುದು ಹೇಗೆ ತಾನೇ ಇಲಾಖೆ ಕಣ್ಣಿಗೆ ಬಿದ್ದಿರಬೇಕು?

ಈಚೀಚೆಗೆ ನಾವು ಬಡಾಯಿ ಶೂರ ರಾಷ್ಟ್ರವಾಗುತ್ತಿದ್ದೇವೇನೋ ಎಂದು ಭಾಸವಾಗುತ್ತದೆ. ವಿಮಾನದಿಂದ ಹಿಡಿದು ಇಂಟರ್‌ನೆಟ್‌ವರೆಗೆ ಆಧುನಿಕ ಯುಗದ ಎಲ್ಲ ಆವಿಷ್ಕಾರಗಳೂ ತ್ರೇತಾಯುಗ/ದ್ವಾಪರ ಯುಗಗಳ ಭಾರತದಲ್ಲಿದ್ದವೆಂಬ ಮುಕ್ತಾಫಲಗಳನ್ನು ನಾವು ಕೇಳುತ್ತಿದ್ದೇವೆ. ಇರಲಿ ಇವೆಲ್ಲ ನಿಜವಾದಲ್ಲಿ ನಾವು ಸಂತೋಷಪಡುವುದರಲ್ಲಿ, ಅಭಿಮಾನ ಪಡುವುದರಲ್ಲಿ ತಪ್ಪಿಲ್ಲ. ಉತ್ಪ್ರೇಕ್ಷೆಯ ಮಾತು ಬಿಟ್ಟು ವಸ್ತನಿಷ್ಠವಾಗಿ ನೋಡಿದರೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ನಾವು ಹೆಮ್ಮೆ ಪಡಬಹುದಾದಷ್ಟು ವೈವಿಧ್ಯಮಯವೂ ಶ್ರೀಮಂತವೂ ಆದುದು.

ನಮ್ಮ ಸಾಂಸ್ಕೃತಿಕ ಸಂಪತ್ತು ಶಿಲ್ಪಕಲೆ, ಚಿತ್ರಕಲೆ, ಸ್ಮಾರಕಗಳು, ಅವಶೇಷಗಳು, ಸಂಗೀತ, ಸಾಹಿತ್ಯ, ರಂಗಭೂಮಿ ಹೀಗೆ ಹಲವಾರು ರೂಪಪ್ರಭೇದಗಳಲ್ಲಿ ಅಡಗಿದೆ. ಶಿಲ್ಪಕಲೆ ವಿಜೃಂಭಿಸುವ ದೇವಾಲಯಗಳು, ಗುಹಾಂತರ ದೇವಾಲಯಗಳು, ಚರ್ಚು ಮಸೀದಿಗಳು, ಕೋಟೆಕೊತ್ತಲಗಳು, ಸ್ಮಾರಕಗಳು ನಮ್ಮ ಭವ್ಯ ಪರಂಪರೆಯ ಸಾಕ್ಷಿ ತಾಣಗಳಾಗಿವೆ. ಈ ಪಾರಂಪರಿಕ ಮಹತ್ವದ ತಾಣಗಳನ್ನು ಉಳಿಸಿಕೊಳ್ಳುವುದರಲ್ಲಿ ನಮ್ಮ ಜವಾಬ್ದಾರಿ ಏನು? ನಮ್ಮ ಕಾಳಜಿ ಏನು?

ನಮ್ಮೀ ಪಾರಂಪರಿಕ ತಾಣಗಳು ಪರಕೀಯರ ದಾಳಿಯಿಂದ ಭಿನ್ನಗೊಂಡಿರುವುದು ಎಷ್ಟು ನಿಜವೋ ಅಷ್ಟೇ ದಿಟ ನಮ್ಮವರ ಕೈಯಲ್ಲೂ ಹಾನಿಗೀಡಾಗಿರುವುದು. ನಮ್ಮ ನಾಡಿನ ದೇವಾಲಯಗಳನ್ನು, ಸ್ಮಾರಕಗಳನ್ನು, ಸಾರ್ವಜನಿಕ ಸ್ಥಳಗಳನ್ನು ನೋಡಿದವರಿಗೆ ಈ ಮಾತು ಸತ್ಯ ಎಂಬುದು ಅರಿವಾಗುತ್ತದೆ. ಯಾವ ದುರುದ್ದೇಶವೂ ಇಲ್ಲದೆ ಒಂದು ಬಗೆಯ ಮನರಂಜನೆಯಾಗಿಯೋ ಅಹಮಿಕೆಯ ಗೀಳಿನಿಂದಾಗಿಯೋ ಜನರು ನಮ್ಮ ಪ್ರಾಚೀನ ಕಲಾಕೃತಿಗಳನ್ನು ವಿರೂಪಗೊಳಿಸಿಕೊಂಡು ಬಂದಿದ್ದಾರೆ. ಸೊಗಸಾದ ಮೂರ್ತಿಗಳನ್ನು ಹಾಳುಮಾಡಿದ್ದಾರೆ, ಅಂಗವಿಕಲವನ್ನಾಗಿ ಮಾಡಿದ್ದಾರೆ. ತಮ್ಮ ಹೆಸರುಗಳನ್ನು ಕೆತ್ತುವ ಅವಸರದಲ್ಲಿ ದೇವಾಲಯಗಳ ಪ್ರಾಕಾರವನ್ನಾಗಲೀ ಮೂರ್ತಿಶಿಲ್ಪಗಳನ್ನಾಗಲೀ, ಗೋಡೆಚಿತ್ರಗಳನ್ನಾಗಲೀ, ಶಿಲಾಸ್ಥಾವರಗಳನ್ನಾಗಲೀ ಹಾಳುಮಾಡುತ್ತಿದ್ದೇವೆಂಬ ಅರಿವಿಲ್ಲದೆಯೇ ಕೆಡಿಸಿದ್ದಾರೆ. ಇನ್ನು ಈ ಪಾರಂಪರಿಕ ತಾಣಗಳ ಪರಿಸರವನ್ನು ತಿಂಡಿತಿಂದೆಸೆದ ಪ್ಲಾಸ್ಟಿಕ್ ಕಸಗಳಿಂದ, ಬಿಯರ್‌ಬಾಟಲು/ನೀರಿನ ಬಾಟಲುಗಳಿಂದ, ಬೀಡಿ ಸಿಗರೇಟು ತುಂಡುಗಳಿಂದ ಮಲಿನಗೊಳಿಸುತ್ತಿರುವುದು ನಿತ್ಯನೋಟದ ಸಂಗತಿಯಾಗಿದೆ.

ಪ್ರಾಚೀನ ಅವಶೇಷಗಳನ್ನು, ಪಾರಂಪರಿಕ ಮಹತ್ವದ ತಾಣಗಳನ್ನು ರಕ್ಷಿಸುವ ಸಲುವಾಗಿ ಒಂದು ಇಲಾಖೆಯೇ ಇದೆ. ಈ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಅಥವಾ ಪುರಾತತ್ವ ಇಲಾಖೆಗೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಪರಂಪರೆಯ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ಈ ಇಲಾಖೆಯದು. ನಮ್ಮ ಪ್ರಾಚೀನ ಅವಶೇಷಗಳನ್ನು ರಕ್ಷಿಸುವ, ಕೋಟೆಗಳ ಕಲ್ಲುಗಳನ್ನು, ದೇವಾಲಯದ ವಿಗ್ರಹಗಳನ್ನು ಕದ್ದೊಯ್ಯುವ ಖದೀಮರಿಂದ ಉಳಿಸುವ ಕೆಲಸ ಈ ಇಲಾಖೆಯದು. ಇಂಥ ಘನವಾದ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಹೊಂದಿರುವ ಕೇಂದ್ರ ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಅಸ್ತಿತ್ವದಲ್ಲಿದೆಯೇ ಎಂದು ಕೇಳುವಂತಾಗಿದೆ ಈಗ. ಸಾರ್ವಜನಿಕರಲ್ಲಿ ಇಂಥದೊಂದು ಸಂಶಯ ಮೂಡಲು ಮುಖ್ಯಕಾರಣ ಇತ್ತೀಚಿನ ಕೆಲವು ವಿದ್ಯಮಾನಗಳು ಮತ್ತು ಕೇಂದ್ರ ಸರಕಾರದ ನಿರ್ಧಾರಗಳು. ಹೊಸದಿಲ್ಲಿಯ ಐತಿಹಾಸಿಕ ಮಹತ್ವದ ಕೆಂಪು ಕೋಟೆಯೂ ಸೇರಿದಂತೆ ಇಪ್ಪತ್ತೆರಡು ಚಾರಿತ್ರಿಕ ಸ್ಮಾರಕಗಳನ್ನು ಖಾಸಗಿ ಸಂಸ್ಥೆಗಳ ನಿರ್ವಹಣೆಗೆ ಒಪ್ಪಿಸುವ ಕೇಂದ್ರ ಸರಕಾರದ ಕ್ರಮ ಇಂಥ ನಿರ್ಧಾರಗಳಲ್ಲಿ ಒಂದು.

ಕೆಂಪು ಕೋಟೆ ಸೇರಿದಂತೆ ರಾಷ್ಟ್ರದ ತೊಂಬತ್ಮೂರು ಪಾರಂಪರಿಕ ಮಹತ್ವದ ಸ್ಮಾರಕಗಳನ್ನು ಖಾಸಗಿ ಕಂಪೆನಿಗಳ ಆಡಳಿತಕ್ಕೆ ಒಪ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಈಗಾಗಲೇ ಇಪ್ಪತ್ತೆರಡು ಸ್ಮಾರಕಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಕೆಂಪು ಕೋಟೆಯನ್ನು ‘ದಾಲ್ಮಿಯಾ ಭಾರತ್ ಗ್ರೂಪ್’ ಎಂಬ ಸಂಸ್ಥ್ಥೆಗೆ ವಹಿಸಲಾಗಿದೆ. ಸ್ಮಾರಕವೊಂದನ್ನು ದತ್ತು ತೆಗೆದುಕೊಳ್ಳಿ ಎನ್ನುವುದು ಕೇಂದ್ರ ಸರಕಾರದ ಒಂದು ಹೊಸ ಕಾರ್ಯಕ್ರಮ. ಈ ಕಾರ್ಯಕ್ರಮದನ್ವಯ ಖಾಸಗಿ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬಹುದಾಗಿದೆ. ಸರಕಾರಿ-ಖಾಸಗಿ ಸಹಭಾಗಿತ್ವ ಎಂಬ ಇತ್ತೀಚಿನ ಹೊಸ ಪರಿಕಲ್ಪಪನೆಯ ಹೊಸ ಆಯಾಮವಿದು. ಖಾಸಗಿ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಸಲು ಇಂಥದೊಂದು ಹೊಸ ಅವಕಾಶವನ್ನು ಸರಕಾರ ಕಲ್ಪಿಸಿದೆ. ಪ್ರಾಚೀನ ಸ್ಮಾರಕ ಸ್ಥಳಗಳನ್ನು ದತ್ತುತೆಗೆದುಕೊಂಡು ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳು ರಾಷ್ಟ್ರೀಯ ಉದ್ದೇಶಗಳ ಪ್ರಚಾರಕ್ಕೆ ಒತ್ತಾಸೆ ನೀಡಬೇಕೆಂಬುದು ಕೇಂದ್ರ ಸರಕಾರದ ನಿರೀಕ್ಷೆ. ಇದರಿಂದಾಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ತಮ್ಮ ವ್ಯಾಪಾರಿ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳಬಹುದು ಹಾಗೂ ಪ್ರಸಿದ್ಧ ನಾಮಾಂಕಿತ ವಾಣಿಜ್ಯ ಛಾಪನ್ನು ವಿಸ್ತರಿಸಿಕೊಳ್ಳಲೂ ಸುವರ್ಣಾವಕಾಶ. ಲಾಭದಾಯಕವಾದ ಇಂತಹ ಸುವರ್ಣಾವಕಾಶವನ್ನು ಯಾವ ವಾಣಿಜ್ಯೋದ್ಯಮ ಸಂಸ್ಥೆ ತಾನೇ ಬಿಟ್ಟೀತು. ಸರಕಾರ ಈಗಾಗಲೇ ಒಂಬತ್ತು ಕಂಪೆನಿಗಳಿಗೆ ಪ್ರಮುಖ ಪಾರಂಪರಿಕ ತಾಣಗಳ ನಿರ್ವಹಣೆಯನ್ನು ಒಪ್ಪಿಸಿದೆ. ಸದ್ಯದಲ್ಲೇ ಇನ್ನೂ ತೊಂಬತ್ಮೂರು ಸಾಂಸ್ಕೃತಿಕ ಪರಂಪರೆಯ ಮಹತ್ವದ ಪುರಾತತ್ವ ಸ್ಮಾರಕ ಸ್ಥಳಗಳನ್ನು ಖಾಸಗಿ ಆಡಳಿತಕ್ಕೆ ವಹಿಸಿಕೊಡುವ ಕಾರ್ಯ ಭರದಿಂದ ಸಾಗಿದೆಯೆಂದು ವರದಿಯಾಗಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನಾಲ್ಕು ಸಾವಿರ ಪ್ರಾಚೀನ ಸ್ಮಾರಕಗಳಿದ್ದು ಇವೆಲ್ಲ ಈಗ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿವೆ. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವುದು ಸರಕಾರದ ಜವಾಬ್ದಾರಿ. ಸರಕಾರ ತನ್ನ ಈ ಹೊಣೆಗಾರಿಕೆಯನ್ನು ಖಾಸಗಿಯವರ ಹೆಗಲಿಗೆ ವರ್ಗಾಯಿಸುವುದು ಅಪೇಕ್ಷಣಿಯವಲ್ಲ. ಸಂಸ್ಕೃತಿ, ಪರಂಪರೆಯಂಥ ವಿಷಯಗಳಲ್ಲಿ ರಾಷ್ಟ್ರೀಯ ಗುರಿ-ಘನೋದ್ದೇಶಗಳು ಮತ್ತು ಖಾಸಗಿ ಹಿತಾಸಕ್ತಿಗಳು ಪರಸ್ಪರ ಪೂರಕವಾಗಿ ಕೈಕೈ ಹಿಡಿದು ನಡೆಯುತ್ತವೆ ಎಂದು ನಿರೀಕ್ಷಿಸಲಾಗದು. ಪಾರಂಪರಿಕ ಮಹತ್ವದ ಪುರಾತತ್ವ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಪರಿಕಲ್ಪನೆಯಲ್ಲೇ ಲಾಭ ಮಾಡಿಕೊಳ್ಳುವ ಹುನ್ನಾರವಿದೆ. ಇನ್ನು ಇಂಥ ಕೆಲಸವನ್ನು ಖಾಸಗಿ ಸಂಸ್ಥೆಗಳು ಅಥವಾ ಖಾಸಗಿ ವ್ಯಕ್ತಿಗಳಿಗೆ ವಹಿಸಿದಾಗ ಅಖೈರಿನಲ್ಲಿ ಸಂಸ್ಕೃತಿ ಪ್ರಚಾರ, ರಾಷ್ಟ್ರೀಯ ಉದ್ದೇಶಗಳು ಹಿಂದೆ ಬಿದ್ದು ಲಾಭದ ಲಾಬಿ ಮೇಲುಗೈ ಪಡೆದಲ್ಲಿ ಆಶ್ಚರ್ಯವೇನಿಲ್ಲ. ಕೆಂಪು ಕೋಟೆಯ ಉದಾಹರಣೆಯನ್ನೇ ನೋಡಬಹುದು. ಇಲ್ಲಿ ಖಾಸಗಿ ಕಂಪೆನಿ ಕೋಟೆಯ ಕೆಲವು ತಾಣಗಳನ್ನು ಮಾತ್ರ ಪ್ರವಾಸಿ ಆಕರ್ಷಣೆಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದಂತೆ. ಕೋಟೆಯ ಮಹತ್ವದ ತಾಣಗಳಲ್ಲಿ ಖಾಸಗಿ ಸಂಸ್ಥೆಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎನ್ನುತ್ತದೆ ಸರಕಾರ. ಮನೆವಾರ್ತೆ ನೋಡಿಕೊಳ್ಳಲು ಹೊರಗಿನವರನ್ನು ಆಮಂತ್ರಿಸಿ, ಅಲ್ಲಿ ಇಲ್ಲಿ ಹೋಗ ಬೇಡ ಎಂದು ನಿರ್ಬಂಧಿಸಲಾದೀತೇ? ಅದು ಎಷ್ಟರಮಟ್ಟಿಗೆ ಕಾರ್ಯಸಾಧುವಾದೀತು?ಗುಡಾರದ ಒಳಹೊಕ್ಕ ಒಂಟೆ ಸುಮ್ಮನಿದ್ದೀತೇ? ಅಲ್ಲದೆ ಒಮ್ಮೆ ಒಂದು ಸ್ಥಳವನ್ನ್ನು ಖಾಸಗಿಯವರ ಸುಪರ್ದಿಗೆ ಕೊಟ್ಟ ನಂತರ ಅಲ್ಲಿ ಸರಕಾರದ ಮೇಲುಸ್ತುವಾರಿ ನಡೆಸುವುದು ಕಷ್ಟದ ಕೆಲಸವೇ. ಖಾಸಗಿ ವಾಣಿಜ್ಯೋದ್ಯಮ ಕಂಪೆನಿಗಳ ಆಶಯ ಚಟುವಟಿಕೆಗಳು ಲಾಭಕೇಂದ್ರಿತವಾಗಿದ್ದು ಸ್ಮಾರಕಗಳ ಐತಿಹಾಸಿಕ ಮಹತ್ವ ಮತ್ತು ಸಾಂಸ್ಕೃತಿಕ ಮೌಲ್ಯಗಳು ಅಲಕ್ಷಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು.

ಸಂಸ್ಕೃತಿಕ ಮಹತ್ವದ ಪುರಾತತ್ವ ತಾಣಗಳನ್ನು ನಮ್ಮ ಸಂಸ್ಕೃತಿ ಪ್ರಚಾರ ಮತ್ತು ಅಧ್ಯಯನದಂಥ ಘನವಾದ ರಾಷ್ಟ್ರೀಯ ಉದ್ದೇಶಗಳಿಂದ ಪ್ರವಾಸಿ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರವಾಸ, ಪರ್ಯಟನ ಎಂದರೆ ಜ್ಞಾನಾನ್ವೇಷಣೆ, ಅಧ್ಯಯನ ಎಂಬ ಹಳೆಯ ಮನೋಗತ ಈಗಿಲ್ಲ. ಈಗ ಪ್ರವಾಸ ಎಂದರೆ ಕುಡಿದು, ಕುಣಿದು, ತಿಂದು ಮೋಜುಮಾಡುವುದು. ಎಂದೇ ಈಗಿನ ಪ್ರವಾಸಿಕೇಂದ್ರಗಳೆಲ್ಲ ಕುಡಿತ ಕುಣಿತಗಳ, ಖಾಸಗಿ ಅಂತಃಪುರಗಳ ಮೋಜಿನ ತಾಣಗಳಾಗಿವೆ. ಇನ್ನು ಈಗ ಪ್ರವಾಸೋದ್ಯಮವು ವಿದೇಶಿಗರನ್ನು ಪ್ರವಾಸಿ ಕೇಂದ್ರಗಳಿಗೆ ಆಕರ್ಷಿಸಿ ದುಡ್ಡುಮಾಡುವ ದಂಧೆಯಾಗಿ ಪರಿಣಮಿಸಿರುವಾಗ ಖಾಸಗಿಯವರು ಈ ಆಮಿಷಗಳನ್ನು ಬಿಟ್ಟು ನಮ್ಮ ಪುರಾತತ್ವ ತಾಣಗಳ ಪಾವಿತ್ರ್ಯವನ್ನು ಉಳಿಸುವರೆಂಬುದು ಅತಿಯಾದ ನಿರೀಕ್ಷೆಗಳೇ ಆಗುತ್ತವೆ. ಸರಕಾರದಲ್ಲಿ ಪ್ರಾಚೀನ ಸಂಸ್ಕೃತಿ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಪುರಾತತ್ವ ಇಲಾಖೆ ಇರುವಾಗ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಇರುವಾಗ ಇವೆರಡನ್ನು ಖಾಸಗಿಯವರಿಗೆ ವಹಿಸಿಕೊಡುವ ಆಲೋಚನೆ ಏಕೆ ಬಂತು? ಸರಕಾರಿ-ಖಾಸಗಿ ಸಹಭಾಗಿತ್ವದ ಪರಿಕಲ್ಪನೆಯಲ್ಲಿ ಖಾಸಗಿಯವರಿಗೆ ದತ್ತು ಕೊಡುವ ವಿಚಾರ ಏಕೆ ಬಂತು ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಉತ್ತರವೂ ನಮ್ಮ ಊಹೆಗೆ ಎಟುಕುವಂಥದ್ದೇ.

ಭಾರತದ ರಾಜ್ಯಗಳಲ್ಲಿ ಮೊದಲು ಸ್ಥಾಪಿತವಾದ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯೆಂದರೆ ಹಳೆಯ ಮೈಸೂರು ರಾಜ್ಯದ ಇಲಾಖೆ. ಕೇಂದ್ರ ಸರಕಾರದ ಪುರಾತತ್ವ ಇಲಾಖೆ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು, ಪ್ರಾಚ್ಯವಸ್ತು ತಾಣಗಳನ್ನು ಕಾಪಾಡುವುದರಲ್ಲಿ ವಿಫಲವಾಗಿರುವುದರಿದಲೇ ದತ್ತುಕೊಡುವ ಆಲೋಚನೆ ಕೇಂದ್ರದ ಮಹಾತಲೆಗಳಿಗೆ ಹೊಳೆದಿದೆ. ಅದಕ್ಷತೆ, ಹಣದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೇಂದ್ರ ಪುರಾತತ್ವ ಇಲಾಖೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ರಾಷ್ಟ್ರದಲ್ಲಿ ಎಲ್ಲಿ, ಎಷ್ಟು ಸಾಂಸ್ಕೃತಿಕ ಪರಂಪರೆಯ ಮಹತ್ವದ ಸ್ಮಾರಕಗಳಿವೆ ಎಂಬುದೇ ಇನ್ನೂ ಇಲಾಖೆಗೆ ಪತ್ತೆಯಾಗಿಲ್ಲವಂತೆ. ಇನ್ನು ಈ ಸ್ಥಳಗಳಲ್ಲಿನ ಪುರಾತತ್ವ ಸ್ಮಾರಕಗಳು ಮತ್ತು ಅವಶೇಷಗಳ ಲೂಟಿಯಾಗಿರುವುದು ಹೇಗೆ ತಾನೇ ಇಲಾಖೆ ಕಣ್ಣಿಗೆ ಬಿದ್ದಿರಬೇಕು? ಪರಿಸ್ಥಿತಿ ಹೀಗಿರುವಾಗ ಲಾಭವನ್ನೇ ಮುಖ್ಯ ಧ್ಯೇಯವಾಗಿರಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ನಮ್ಮ ಸಾಂಸ್ಕೃತಿಕ ಸಂಪತ್ತನ್ನು ಉಳಿಸುತ್ತವೆ ಎನ್ನುವುದಕ್ಕೆ ಭರವಸೆ ಏನು? ಅವರಿಂದ ಯಾವ ರಾಷ್ಟ್ರೀಯ ಘನ ಉದ್ದೇಶ ಈಡೇರೀತು? ಕೇಂದ್ರದ ಬಿಜೆಪಿ ಸರಕಾರದ ಅವಿವೇಕತನದ ನಿರ್ದಾರ ಇದು. ಖಾಸಗಿ ಸಂಸ್ಥೆಗಳಿಗೆ ವಹಿಸುವ ಬದಲು ಪುರಾತತ್ವ ಇಲಾಖೆಗೆ ಅಗತ್ಯವಿರುವ ಹಣ ಮತ್ತು ಸಿಬ್ಬಂದಿ ನೀಡುವ ಮೂಲಕ ಬಲಗೊಳಿಸಬೇಕು. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ಖಾಸಗಿಯವರಿಗೊಪ್ಪಿಸಿ ಕೈತೊಳೆದುಕೊಳ್ಳುವ ಕೇಂದ್ರದ ಹೊಣೆಗೇಡಿತನವನ್ನು ಪ್ರಜೆಗಳು ಕ್ಷಮಿಸುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)