ನೊಬೆಲ್ ಪ್ರಶಸ್ತಿಯ ವಿಶ್ವಾಸಾರ್ಹತೆ ಮರು ಸ್ಥಾಪನೆಯಾಗಲಿ
ನೊಬೆಲ್ ಪ್ರಶಸ್ತಿ ಬೇರೆ ಬೇರೆ ಕಾರಣಗಳಿಗಾಗಿ ವಿವಾದಕ್ಕೊಳಗಾಗುತ್ತಾ ಬಂದಿದೆ. ವಿಶ್ವದ ಶ್ರೇಷ್ಠ ಸಾಧಕರನ್ನು ಗುರುತಿಸುವ ಉದ್ದೇಶವನ್ನು ನೊಬೆಲ್ ಪ್ರಶಸ್ತಿ ಹೊಂದಿದೆಯಾದರೂ, ಪ್ರಶಸ್ತಿಯ ಹಿಂದೆ ಜಾಗತಿಕ ರಾಜಕೀಯ ಶಕ್ತಿಗಳು ಕೆಲಸ ಮಾಡುತ್ತಾ ಬಂದಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಹಲವು ಶ್ರೇಷ್ಠ ಸಾಧಕರು ನೊಬೆಲ್ನ್ನು ತಿರಸ್ಕರಿಸಿದ್ದೂ ಇದೆ. ನೊಬೆಲ್ ಪ್ರಶಸ್ತಿಗಳು ಸಾಮ್ರಾಜ್ಯಶಾಹಿ ಶಕ್ತಿಗಳ ಹಿಡಿತದಲ್ಲಿದೆ ಎಂಬ ಆರೋಪದಲ್ಲಿ ಒಂದಿಷ್ಟು ಸತ್ಯವಿದೆ. ಸೂಕಿ, ಒಬಾಮ ಅವರಿಗೆ ಶಾಂತಿ ನೊಬೆಲ್ ದೊರಕಿದಾಗ ಅದು ಭಾರೀ ಚರ್ಚೆಯನ್ನು ಹುಟ್ಟಿಸಿ ಹಾಕಿತ್ತು. ಮಹಾತ್ಮಾ ಗಾಂಧಿಗೆ ನೊಬೆಲ್ ಪ್ರಶಸ್ತಿ ಸಿಗದೇ ಇದ್ದುದು, ನೊಬೆಲ್ ಪ್ರಶಸ್ತಿಗೆ ಒಂದು ಕೊರತೆಯೇ ಆಗಿದೆ. ಇವೆಲ್ಲವುಗಳ ನಡುವೆಯೂ ನೊಬೆಲ್ ತನ್ನ ಅಲ್ಪಸ್ವಲ್ಪ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಈ ಬಾರಿ ನೊಬೆಲ್ ಪ್ರಶಸ್ತಿ ಮತ್ತೆ ಸುದ್ದಿಯಲ್ಲಿದೆ. ಪ್ರಶಸ್ತಿ ನೀಡಿದ ಕಾರಣಕ್ಕಾಗಿಯಲ್ಲ, ನೀಡದ ಕಾರಣಕ್ಕಾಗಿ. 2018ರಲ್ಲಿ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ ಎಂದು ಸ್ವೀಡನ್ ಮೂಲದ ಅಕಾಡಮಿ ಘೋಷಿಸಿದೆ. ಬದಲಿಗೆ 2019ರಲ್ಲಿ ಇಬ್ಬರು ಸಾಹಿತಿಗಳನ್ನು ನೊಬೆಲ್ಗಾಗಿ ಆಯ್ಕೆ ಮಾಡಲಾಗುವುದು ಎಂದೂ ಅದು ಸ್ಪಷ್ಟೀಕರಣ ನೀಡಿದೆ. ನೊಬೆಲ್ ಪ್ರಶಸ್ತಿಯನ್ನು ಈ ಹಿಂದೆಯೂ ಏಳು ಬಾರಿ ತಡೆಹಿಡಿಯಲಾಗಿತ್ತು. ಹಾಗೆಯೇ ಐದು ಬಾರಿ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಈ ಬಾರಿಯ ಕಾರಣ ತುಸು ಭಿನ್ನವಾದುದು ಮತ್ತು ಅಕಾಡಮಿಯೊಳಗಿನ ಖಾಸಗಿ ಕಾರಣ ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದೆ. ಇಲ್ಲಿ ನೊಬೆಲ್ ಪ್ರಶಸ್ತಿ ಆಯ್ಕೆಯ ವೈಫಲ್ಯ ಕಾರಣವಲ್ಲ. ಬದಲಿಗೆ ಅಕಾಡಮಿಯೊಳಗಿನ ಸದಸ್ಯರೊಳಗಿನ ಬಿಕ್ಕಟ್ಟು ಇಂತಹದೊಂದು ಇಕ್ಕಟ್ಟನ್ನು ಸೃಷ್ಟಿಸಿದೆ.
ಅಕಾಡಮಿಯ ಸದಸ್ಯೆಯೊಬ್ಬರ ಪತಿಯಿಂದ ನಡೆದಿರುವ ಲೈಂಗಿಕ ಶೋಷಣೆಯೇ ಪ್ರಶಸ್ತಿ ತಡೆ ಹಿಡಿದಿರುವ ಹಿಂದಿನ ಮುಖ್ಯ ಕಾರಣವಾಗಿದೆ. ಇದನ್ನು ವಿರೋಧಿಸಿ 18 ಸದಸ್ಯರ ಪೈಕಿ ಎಂಟು ಸದಸ್ಯರು ಅಕಾಡಮಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಹಲವು ತಿಂಗಳುಗಳಿಂದ ಹಗರಣ ಮತ್ತು ಆರೋಪಗಳಿಂದ ಸುತ್ತುವರಿದಿರುವ ಅಕಾಡಮಿಯ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಮರುಸ್ಥಾಪಿಸುವ ಅಗತ್ಯವಿರುವ ಕಾರಣ ಪ್ರಶಸ್ತಿ ಆಯ್ಕೆಯನ್ನು ಮುಂದೂಡಲಾಗಿದೆ ಎಂದೂ ಅಕಾಡಮಿ ತಿಳಿಸಿದೆ. ಸದಸ್ಯರ ವೈಯಕ್ತಿಕ ವಿವಾದಗಳನ್ನು ಅಕಾಡಮಿ ಗಂಭೀರವಾಗಿ ತೆಗೆದುಕೊಂಡು, ಅದನ್ನು ಮೈಮೇಲೆ ಎಳೆದುಕೊಂಡು ಪ್ರಶಸ್ತಿಯನ್ನು ತಡೆ ಹಿಡಿದಿರುವುದು ಎಷ್ಟು ಸರಿ ಎನ್ನುವುದು ಇದೀಗ ಜಾಗತಿಕವಾಗಿ ಚರ್ಚೆಗೊಳಗಾಗುತ್ತಿದೆ.
1914ರಲ್ಲಿ ಮೊದಲ ಜಾಗತಿಕ ಯುದ್ಧದಿಂದ ವಿಷಮ ಸ್ಥಿತಿ ಎದುರಾಗಿದ್ದ ಸಂದರ್ಭದಲ್ಲಿ ನೊಬೆಲ್ ಪ್ರಶಸ್ತಿಯನ್ನು ತಡೆಹಿಡಿಯಲಾಗಿತ್ತು. ಅದರ ಮುಂದಿನ ವರ್ಷ 1915ರಲ್ಲಿ ಪ್ರಶಸ್ತಿ ಸಮಾರಂಭವನ್ನು ಮುಂದೂಡಲಾಗಿ 1916ರಲ್ಲಿ ಫ್ರೆಂಚ್ ಲೇಖಕ ರೊಮೈನ್ ರೊಲಾಂಡ್ಗೆ ಪ್ರಶಸ್ತಿ ನೀಡಲಾಯಿತು. ಇದೇ ರೀತಿ 1918ರಲ್ಲೂ ನಡೆಯಿತು. ಆ ನಂತರ 1919ರಲ್ಲಿ ಸ್ವಿಸ್ ಲೇಖಕ ಕಾರ್ಲ್ ಸ್ಪಿಟಲೆರ್ರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರೂ ಸಮಾರಂಭವನ್ನು ಒಂದು ವರ್ಷ ಕಾಲ ಮುಂದೂಡಲಾಯಿತು. ಯುದ್ಧ ಮುಗಿದು ಜನರು ಸಂತೋಷವಾಗಿದ್ದ ಸಂದರ್ಭದಲ್ಲಿ ತಮ್ಮದೇ ದೇಶದ ಲೇಖಕರಿಗೆ ಪ್ರಶಸ್ತಿಯನ್ನು ನೀಡುವುದು ಉತ್ತಮ ಎಂದು ಆಯ್ಕೆ ಮಂಡಳಿ ಭಾವಿಸಿರಬಹುದು. 1935ರಲ್ಲಿ ಯಾವುದೇ ಪ್ರಶಸ್ತಿಯನ್ನು ನೀಡಲಾಗಿಲ್ಲ ಮತ್ತು 1936ರಲ್ಲಿ ಪ್ರಶಸ್ತಿ ಆಯ್ಕೆಯನ್ನು ಮುಂದೂಡಲಾಗಿತ್ತು. ಅದಕ್ಕೆ ಅಕಾಡಮಿಯು ನೀಡಿದ ಕಾರಣವೆಂದರೆ, ಅಲ್ಫ್ರೆಡ್ ನೊಬೆಲ್ ನಿಗದಿಪಡಿಸಿರುವ ಮಾನದಂಡವನ್ನು ಈ ವರ್ಷ ನಾಮಕರಣಗೊಂಡಿರುವ ಯಾವ ಅಭ್ಯರ್ಥಿ ಕೂಡಾ ತಲುಪದಿರುವ ಕಾರಣ ನೊಬೆಲ್ ಸಾಹಿತ್ಯ ಸಮಿತಿಯು ಈ ವರ್ಷ ಯಾರಿಗೂ ಪ್ರಶಸ್ತಿ ನೀಡದಿರಲು ನಿರ್ಧರಿಸಿದೆ.
1936ರಲ್ಲಿ ಯುಜೀನ್ ಒನೀಲ್ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎರಡನೇ ಜಾಗತಿಕ ಯುದ್ಧದ ಸಮಯದಲ್ಲೂ 1940 ಮತ್ತು 1943ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಸ್ಥಗಿತಗೊಳಿಸಲಾಗಿತ್ತು. 1944ರಲ್ಲಿ ಪ್ರಶಸ್ತಿಯನ್ನು ಮುಂದೂಡಲಾಗಿ 1945ರಲ್ಲಿ ಡ್ಯಾನಿಶ್ ಲೇಖಕ ಜೊಹನ್ನೆಸ್ ಜೆನ್ಸೆನ್ರಿಗೆ ನೊಬೆಲ್ ನೀಡಲಾಯಿತು. 1945ರ ಸಾಲಿನ ಪ್ರಶಸ್ತಿಯನ್ನು ಚಿಲಿ ಕವಿ ಗ್ಯಾಬ್ರಿಯಲ್ ಮಿಸ್ಟ್ರಲ್ಗೆ ನೀಡಲಾಯಿತು. 1949ರಲ್ಲಿ ಉತ್ತಮ ಸಾಹಿತಿ ಸಿಗದಿದ್ದ ಕಾರಣಕ್ಕೆ ಪ್ರಶಸ್ತಿಯನ್ನು ಒಂದು ವರ್ಷ ಮುಂದೂಡಲಾಯಿತು. 1950ರಲ್ಲಿ 1949ರ ಸಾಲಿನ ಪ್ರಶಸ್ತಿಯನ್ನು ವಿಲಿಯಂ ಫಾಕ್ನರ್ಗೆ ನೀಡಲಾಯಿತು. ಅಂದಿನಿಂದ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ನಿಯಮಿತವಾಗಿ ನೀಡುತ್ತಾ ಬರಲಾಗುತ್ತಿತ್ತು. ಆದರೆ ಈಗ ಮತ್ತೆ ಮುಂದೂಡಲಾಗಿದೆ.
ಈ ಬಾರಿ ನೊಬೆಲ್ ಪ್ರಶಸ್ತಿಯನ್ನು ನೀಡದೇ ಇರಲು ಅಕಾಡಮಿಗೆ ಕಾರಣಗಳು ಬೇಕಿದ್ದರೆ, ಹಲವು ದುರಂತಗಳನ್ನು ಮುಂದಿಟ್ಟು ಅದು ಪ್ರಶಸ್ತಿಯನ್ನು ಮುಂದೆ ಹಾಕಬಹುದಿತ್ತು. ಸಿರಿಯದಲ್ಲಿ ನಡೆಯುತ್ತಿರುವ ಮಾನವ ಹತ್ಯಾಕಾಂಡವನ್ನು ವಿರೋಧಿಸಿ ನೊಬೆಲ್ ಪ್ರಶಸ್ತಿಯನ್ನು ಮುಂದೆ ಹಾಕಿದ್ದರೆ, ಅದು ಜಗತ್ತಿನ ಬಲಾಢ್ಯ ರಾಷ್ಟ್ರಗಳಿಗೆ ಒಂದು ಸಂದೇಶವನ್ನಾದರೂ ನೀಡಿದಂತಾಗುತ್ತಿತ್ತು. ರೊಹಿಂಗ್ಯಾ ಹತ್ಯಾಕಾಂಡದ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಿದ್ದರೆ ಅದು ಶಾಂತಿ ನೊಬೆಲ್ ಪಡೆದ ಸೂಕಿಯ ಆತ್ಮವಿಮರ್ಶೆಗೆ ಅನುಕೂಲ ಮಾಡಿಕೊಡುತ್ತಿತ್ತೇನೋ? ದಿನದಿಂದ ದಿನಕ್ಕೆ ವಿಶ್ವ ಮೂರನೇ ಮಹಾಯುದ್ಧದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಿವೆ. ವಿಶ್ವಾದ್ಯಂತ ಫ್ಯಾಶಿಸ್ಟ್ ಶಕ್ತಿಗಳು ಬೇರೆ ಬೇರೆ ರೂಪಗಳಲ್ಲಿ ಬಲವಾಗುತ್ತಿದೆ. ಪತ್ರಿಕಾ ಸ್ವಾತಂತ್ರ ಹರಣವಾಗುತ್ತಿದೆ. ಇವೆಲ್ಲವುಗಳಿಗೆ ಸ್ಪಂದಿಸಿ ನೊಬೆಲ್ ಪ್ರಶಸ್ತಿಯನ್ನು ತಡೆದಿದ್ದರೆ ಅದು ಅಕಾಡಮಿಯ ಘನತೆಯನ್ನು ಎತ್ತಿ ಹಿಡಿಯುತ್ತಿತ್ತು. ಈಗಿನ ಬೆಳವಣಿಗೆಗಳು ನೊಬೆಲ್ ಪ್ರಶಸ್ತಿ ನೀಡುವ ಅಕಾಡಮಿಯೊಳಗಿನ ಬಿರುಕುಗಳನ್ನು ಎತ್ತಿ ಹಿಡಿದಿದೆ ಮತ್ತು ಅದು ನೊಬೆಲ್ ಪ್ರಶಸ್ತಿಯ ಹಿರಿಮೆಯನ್ನು ಇನ್ನಷ್ಟು ಕುಗ್ಗಿಸಿದೆ.