varthabharthi

ನೇಸರ ನೋಡು

ಬಣ್ಣಗೆಡುತ್ತಿರುವ ಪ್ರೀತಿಯ ಸ್ಮಾರಕ

ವಾರ್ತಾ ಭಾರತಿ : 13 May, 2018
ಜಿ.ಎನ್.ರಂಗನಾಥ ರಾವ್

ಭಾರತದ ಅನುಪಮ ಸೌಂದರ್ಯದ ಸ್ಮಾರಕವೊಂದು, ರಾಷ್ಟ್ರೀಯ ಸಂಪದವೊಂದು ಈ ರೀತಿ ಸರಕಾರಗಳ ನಿರ್ಲಕ್ಷದಿಂದಾಗಿ ಕ್ಷಯಿಸಿಹೋಗುತ್ತಿರುವುದು ನಿಜಕ್ಕೂ ಒಂದು ಶೋಚನೀಯ ಸಂಗತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಪೂರ್ವಾಗ್ರಹಗಳನ್ನು ತೊರೆದು ತಾಜ್ ಮಹಲ್‌ನ್ನು ಉಳಿಸಲು ತ್ವರಿತವಾಗಿ ಕಾರ್ಯೋನ್ಮುಖವಾಗಬೇಕು. ಇಲ್ಲವಾದಲ್ಲಿ ಭವಿಷ್ಯದ ಜನಾಂಗಕ್ಕೆ ತಾಜ್ ಮಹಲ್ ಚರಿತ್ರೆಯ ಪುಸ್ತಕಗಳಲ್ಲಿ ಪೂರ್ವಾಗ್ರಹಪೀಡಿತ ವರದಿಯಾಗಷ್ಟೆ ಉಳಿದೀತು.


ಭಾರತದಲ್ಲಿನ ಮುಸ್ಲಿಮ್ ಶಿಲ್ಪಕಲೆಯ ಅನರ್ಘ್ಯ ರತ್ನ ಎಂದು ವಿಶ್ವ ವಿಖ್ಯಾತಿ ಗಳಿಸಿರುವ ತಾಜ್ ಮಹಲ್ ಈಚಿನ ವರ್ಷಗಳಲ್ಲಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದೆ. ಆಗ್ರಾದಲ್ಲಿ ಯಮುನಾ ನದಿಯ ದಂಡೆಯಲ್ಲಿರುವ ಈ ಅಮೋಘ ಶಿಲ್ಪಹೆಚ್ಚಾಗಿ ಸುದ್ದಿಯಲ್ಲಿರುವುದು ಅದರ ನಿರ್ವಹಣೆಗೆ ಸಂಬಂಧಿಸಿದಂತೆ. ಮೊಗಲ್ ಚರ್ಕವರ್ತಿ ಶಹಜಹಾನ್ ತನ್ನ ಮೂರನೆಯ ಪತ್ನಿ ಮುಮ್ತಾಝ್ ಮಹಲ್‌ಳ ಸ್ಮಾರಕವಾಗಿ 1632ರಲ್ಲಿ ನಿರ್ಮಿಸಿದ, ಅಮರ ಪ್ರೇಮದ ಸಂಕೇತವಾಗಿ ಜಗತ್ತಿನ ಮಾನ್ಯತೆ ಗಳಿಸಿರುವ ಅಮೃತ ಶಿಲೆಯ ಈ ಭವ್ಯ ಶಿಲ್ಪಈಗ ಬಣ್ಣಗೆಡುತ್ತಿದೆಯಂತೆ. ಇದಕ್ಕೆ ಕಾರಣ ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರಗಳ ದಿವ್ಯ ನಿರ್ಲಕ್ಷ. ಈ ದಿವ್ಯ ನಿರ್ಲಕ್ಷ ಕುರಿತು ಪರಿಸರವಾದಿ ವಕೀಲ ಎಂ. ಸಿ. ಮೆಹ್ತಾ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಕಾಲದಲ್ಲಿ, ಕೇಂದ್ರ ಪುರಾತತ್ವ ಇಲಾಖೆಯು ತಾಜ್ ಮಹಲ್ ಶುಭ್ರ ಶ್ವೇತ ವರ್ಣದಿಂದ ಹಳದಿ, ಹಸಿರು ಮತ್ತು ಕಂದು ಬಣ್ಣಗಳ ಛಾಯೆ ಪಡೆದುಕೊಳ್ಳುತ್ತಿರುವುದಕ್ಕೆ ಹೆಚ್ಚುತ್ತಿರುವ ಹಾವಸೆ ಮತ್ತು ಸಂದರ್ಶಕರ ಕೊಳಕು ಕಾಲುಚೀಲಗಳೇ ಕಾರಣವೆಂಬ ವಾದವನ್ನು ಮಂಡಿಸಿದೆ.

ಪ್ರತಿದಿನ ಮೂಡುತ್ತಿರುವ ಸಂದರ್ಶಕರ ಹೆಜ್ಜೆಗಳ ಕೊಳಕು ಹಾಗೂ ಹಾವಸೆ ತಾಜ್ ಮಹಲನ್ನು ಬಣ್ಣಗೆಡಿಸುತ್ತಿದೆ. ಎಲ್ಲ ಸಂದರ್ಶಕರಿಗೂ ಇಲಾಖೆ ವತಿಯಿಂದ ಶುಭ್ರ ಕಾಲುಚೀಲಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಸಂದರ್ಶಕರು ತಮ್ಮ ಕೊಳಕು ಕಾಲುಚೀಲಗಳನ್ನು ಧರಿಸಿಯೇ ಓಡಾಡುವುದರಿಂದ ಬಣ್ಣಗೆಡುತ್ತಿರುವ ಸಮಸ್ಯೆ ಉಲ್ಬಣಿಸಿದೆ ಎನ್ನುವ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ ಹಾವಸೆ ಇತ್ಯಾದಿ ಸಮಸ್ಯೆಗಳಿಗಿಂತ ಹೆಚ್ಚಾಗಿ ಪುರಾತತ್ವ ಇಲಾಖೆ ಈ ಸ್ಮಾರಕವನ್ನು ಸಂರಕ್ಷಿಸುವಲ್ಲಿ ಸರಿಯಾಗಿ ಕೆಲಸಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವುದು ಕೇಂದ್ರ ಸರಕಾರದ ಈ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಢಾಳಾಗಿ ತೋರಿಸುತ್ತದೆ. 1983ರಲ್ಲಿ ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಮಾನ್ಯತೆಗೆ ಪಾತ್ರವಾಗಿರುವ ತಾಜ್ ಮಹಲ್ ತನ್ನ ಮೂಲ ಅಮೃತಶಿಲೆಯ ಹಾಲು ಬಿಳುಪಿನ ಬಣ್ಣದಿಂದ ಮೊದಲು ಹಳದಿಗೆ, ನಂತರ ಕಂದು ಹಾಗೂ ಹಸಿರು ಬಣ್ಣಗಳಿಗೆ ತಿರುಗುತ್ತಿರುವುದಕ್ಕೆ ಕೇಂದ್ರ ಸರಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಇರುವುದೇ ಕಾರಣವೆಂದು ನ್ಯಾಯಾಲಯ ಖಂಡತುಂಡವಾಗಿ ತಿಳಿಸಿದೆ. ಅಮೃತ ಶಿಲೆಯ ಈ ಭವ್ಯ ಸ್ತೂಪದ ಗೋಡೆಗಳು ಕಂದು ಬಣ್ಣಕ್ಕೆ ತಿರುಗುತ್ತಿರುವುದಕ್ಕೆ ಮುಖ್ಯ ಕಾರಣ ವಾಯು ಮಾಲಿನ್ಯ ಮತ್ತು ಕ್ರಿಮಿಕೀಟಗಳ ಹೊಲಸು ಸೃಷ್ಟಿಸುತ್ತಿರುವ ಸಮಸ್ಯೆಗಳು.

ಈ ಸಮಸ್ಯೆ ನಿವಾರಣೆಗೆ ತಜ್ಞರ ನೆರವು ಪಡೆದುಕೊಳ್ಳದಿರುವ ಸರಕಾರದ ಉದಾಸೀನ ಮನೋಭಾವವನ್ನು ತೀವ್ರವಾಗಿ ಖಂಡಿಸಿರುವ ನ್ಯಾಯಾಲಯ ಬಣ್ಣಗೆಡುತ್ತಿರುವುದನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಿದೇಶಗಳಲ್ಲಿನ ತಜ್ಞರ ಸಲಹೆ ಸೇವೆಯನ್ನು ಪಡೆದುಕೊಳ್ಳುವಂತೆ ತಾಕೀತು ಮಾಡಿದೆ. ಸುಪ್ರೀಂ ಕೋರ್ಟಿನ ಕಟುಟೀಕೆ ವಾಸ್ತು ಶಿಲ್ಪದ ಪವಾಡದಂತಿರುವ ಪ್ರೀತಿಯ ಈ ಸ್ಮಾರಕ ಅಂಗುಲಂಗುಲವಾಗಿ ವಿರೂಪಗೊಳ್ಳುತ್ತಿರುವ ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ. ತಾಜ್ ಮಹಲ್ ವಿವರ್ಣಗೊಳ್ಳುತ್ತಿರುವ ಸಮಸ್ಯೆ ಇವತ್ತು -ನಿನ್ನೆಯದಲ್ಲ. ಇಲ್ಲಿನ ಅಮೃತ ಶಿಲೆ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಪ್ರಕ್ರಿಯೆ ಶುರುವಾಗಿ ಹಲವು ದಶಕಗಳೇ ಕಳೆದಿವೆ. ಮೂರು ಶತಮಾನಗಳಿಗೂ ಹೆಚ್ಚುಕಾಲದಿಂದ ಈ ಭವ್ಯ ಸ್ಮಾರಕ ನೈಸರ್ಗಿಕ ಧಾತು-ದ್ರವ್ಯಗಳಿಗೆ ತೆರೆದುಕೊಂಡಿರುವುದು ಬಣ್ಣಗೆಡುತ್ತಿರುವ ಸಮಸ್ಯೆಯ ಹಲವು ಮುಖಗಳಲ್ಲಿ ಒಂದು. ಆದರೆ ಮುಖ್ಯ ಕಾರಣವೆಂದರೆ ಪರಿಸರ ಮಾಲಿನ್ಯ. ಭಾರಿ ವಾಹನಗಳ ಸಂಚಾರದಿಂದ ಉಂಟಾಗುತ್ತ್ತಿರುವ ಪರಿಸರ ಮಾಲಿನ್ಯ ಹಾಗೂ ತಾಜ್ ಮಹಲ್ ಆಸುಪಾಸಿನಲ್ಲಿ ತಲೆ ಎತ್ತಿರುವ ನೂರಾರು ಕೈಗಾರಿಕೆಗಳು ಹೊರಸೂಸುತ್ತಿರುವ ಮಾಲಿನ್ಯ ತಾಜ್ ಮಹಲ್‌ನ ಅಂದಗೆಡಿಸುತ್ತಿದೆ, ವಿವರ್ಣಗೊಳಿಸುತ್ತಿದೆ ಎಂಬ ಪರಿಸರವಾದಿಗಳ ಸೊಲ್ಲು ಇವತ್ತು ನಿನ್ನೆಯದಲ್ಲ. ಮಥುರಾ ತೈಲಶುದ್ಧೀಕರಣ ಸ್ಥಾವರ ಹೊರಸೂಸುತ್ತಿರುವ ದಟ್ಟ ಹೊಗೆ ತಾಜ್ ಮಹಲ್ ಮುಖಕ್ಕೆ ಅಪ್ಪಳಿಸುತ್ತಿದ್ದು ಅಮೃತ ಶಿಲೆಗೆ ಹಾನಿಯುಂಟು ಮಾಡುತ್ತಿದೆ.

ತಾಜ್ ಮಹಲ್ ಪರಿಸರದಲ್ಲಿನ ವಾಯು ಮತ್ತು ಜಲಮಾಲಿನ್ಯಕ್ಕೆ ಕಾರಣವಾಗಿರುವ ಕೈಗಾರಿಕೆಗಳನ್ನು ಮುಚ್ಚಿಸುವಂತೆ ಕೋರಿ ಪರಿಸರವಾದಿ ವಕೀಲ ಎಂ. ಸಿ. ಮೆಹ್ತಾ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ತಾಜ್ ಮಹಲ್ ಸೌಂದರ್ಯಕ್ಕೆ ಹಾನಿಯುಂಟುಮಾಡುತ್ತಿರುವ ಕೈಗಾರಿಕೆಗಳನ್ನು ಮುಚ್ಚುವಂತೆ ನ್ಯಾಯಾಲಯಗಳು ಆಗಿಂದಾಗ್ಗ್ಯೆ ತೀರ್ಪು ನೀಡಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾದ ನೂರಾರು ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಆದಾಗ್ಯೂ ಅಮೃತಶಿಲೆ ಬಣ್ಣಗೆಡುತ್ತಿರುವುದು ನಿಂತಿಲ್ಲ. ಈಗ ವಿವರ್ಣತೆಯ ಸಮಸ್ಯೆ ಉಲ್ಬಣಿಸಿದೆ. ತಾಜ್ ಮಹಲನ್ನು ಉಳಿಸಲು ಮೆಹ್ತಾ ಅವರು ನ್ಯಾಯಾಲಯದ ಮೆಟ್ಟಿಲು ಹತ್ತಿ ನಡೆಸಿರುವ ಹೋರಾಟ ಇಂದು ನಿನ್ನೆಯದಲ್ಲ. ಅವರ ಬಹುಕಾಲದ ಹೋರಾಟದಲ್ಲಿ ಸುಪ್ರೀಂ ಕೋರ್ಟೂ ಕೈಜೋಡಿಸಿದೆಯೆಂದರೆ ತಪ್ಪಾಗಲಾರದು. ಅಮೃತ ಶಿಲೆಯ ಈ ಸ್ಮಾರಕದ ರಕ್ಷಣೆಗಾಗಿ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಆದೇಶ ನೀಡುವ, ಹಲವಾರು ತೀರ್ಪುಗಳನ್ನು ನೀಡುವ ಮೂಲಕ ಸುಪ್ರೀಂ ಕೋರ್ಟೂ ಈ ಹೋರಾಟದಲ್ಲಿ ಭಾಗಿಯಾಗಿದೆ. ಪರಿಸರ ಮಾಲಿನ್ಯದಿಂದ ಆಗುತ್ತಿರುವ ಹಾನಿಯಿಂದ ತಾಜ್ ಮಹಲನ್ನು ರಕ್ಷಿಸುವಂತೆ ಮೆಹ್ತಾ ಹಲವಾರು ಅರ್ಜಿಗಳನ್ನು ಕೋರ್ಟಿಗೆ ಸಲ್ಲಿಸಿದ್ದಾರೆ. ನ್ಯಾಯಾಲಯವೂ ಸ್ಮಾರಕವನ್ನು ಮಾಲಿನ್ಯದಿಂದ ರಕ್ಷಿಸುವಂತೆ ಸರಕಾರಕ್ಕೆ ಡಜನ್ ಗಟ್ಟಳೆ ಆದೇಶಗಳನ್ನು ನೀಡಿದೆ. ಆದರೆ ಇವೆಲ್ಲವೂ ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿದೆ.

ಆಯಾ ಕಾಲಘಟ್ಟಗಳಲ್ಲಿದ್ದ ಉತ್ತರ ಪ್ರದೇಶ ಸರಕಾರಗಳು ತಾಜ್ ಮಹಲ್ ರಕ್ಷಣೆಗೆ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ತಾಜ್ ಮಹಲ್ ಸುತ್ತಮುತ್ತ ಕೈಗಾರಿಕೆಗಳನ್ನು ಬೆಳೆಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾ ಬಂದಿವೆ. ಅಭಿವೃದ್ಧಿಯ ಪಥ ಸುಗಮವಲ್ಲ. ಅಭಿವೃದ್ಧಿ ಎಂದರೆ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳು, ಕೈಗಾರಿಕೆಗಳು, ಯಂತ್ರ ಸ್ಥಾವರಗಳು, ಪ್ರಕೃತಿಯನ್ನು ವಿರೂಪಗಳಿಸುವ ವೃಕ್ಷ ನಿರ್ಮೂಲನಾದಿ ಕಾರ್ಯಗಳು, ಇವೆಲ್ಲ ಇದ್ದೇ ಇರುತ್ತವೆ. ಈ ನಿರ್ಮಾಣಗಳು ಹಾಗೂ ಇವೆಲ್ಲದರ ತ್ಯಾಜ್ಯಗಳು ಪರಿಸರವನ್ನು ಮಾಲಿನ್ಯಗೊಳಿಸುತ್ತಲೇ ಇರುತ್ತವೆ. ಕಳೆದ ವರ್ಷವಷ್ಟೆ ಸ್ಥಳೀಯ ಸರಕಾರ ತಾಜ್‌ಗೆ ಒಂದು ಕಿಲೊಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ಬಹುಮಹಡಿಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿತು. ಮತ್ತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನಿರ್ಮಾಣ ಕಾರ್ಯಕ್ಕೆ ತಡೆ ನೀಡಿತು. ಇದಕ್ಕೂ ಮೊದಲು ತಾಜ್ ಪರಿಸರದಲ್ಲಿ ರೈಲು ಮಾರ್ಗ ನಿರ್ಮಾಣಕ್ಕಾಗಿ ನಾಲ್ಕುನೂರು ಮರಗಳನ್ನು ಕಡಿಯುವ ಸರಕಾರದ ನಿರ್ಧಾರಕ್ಕೆ ತಡೆನೀಡಿತ್ತು. ಉತ್ತರ ಪ್ರದೇಶ ಸರಕಾರ ತಾಜ್ ಮಹಲ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಉಲ್ಲಂಘಿಸುತ್ತಲೇ ಬಂದಿದೆ. ತಾಜ್ ಮಹಲ್ ಸುತ್ತ 10,400 ಚದರ ಮೀಟರ್ ಪ್ರದೇಶವನ್ನು ಸುಪ್ರೀಂ ಕೋರ್ಟ್ ವಿಷಮ ಸಮಾನಾಂತರ ಚತುರ್ಭುಜ ಪ್ರದೇಶವೆಂದು ಘೋಷಿಸಿದ್ದು ಅಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಕಾರ್ಖಾನೆಗಳನ್ನು ಪ್ರಾರಂಭಿಸುವಂತಿಲ್ಲ ಅಥವಾ ಯಾವುದೇ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತಿಲ್ಲ ಎಂದು ತೀರ್ಪು ನೀಡಿದೆ. ಆದಾಗ್ಯೂ ಈ ಪ್ರದೇಶದಲ್ಲಿ ಕೈಗಾರಿಕೋದ್ಯಮ ಕಾನೂನುಬಾಹಿರವಾಗಿ ನಡೆದೇ ಇದೆ. ಹೀಗಿರುವಾಗ ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟೀನ ಇತ್ತೀಚಿನ ಆದೇಶವನ್ನು ಪಾಲಿಸುತ್ತದೆ ಎನ್ನುವ ಖಾತ್ರಿ ಇಲ್ಲ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಅವರು ಈ ವರ್ಷದ ಆಯವ್ಯಯ ಮುಂಗಡ ಪತ್ರದಲ್ಲಿ ತಾಜ್ ಮಹಲ್‌ಗೆ ಹಣವನ್ನೇ ನಿಗದಿ ಮಾಡಿಲ್ಲ ಎಂದು ವರದಿಯಾಗಿತ್ತು. ತಾಜ್ ಮಹಲ್ ಬಗ್ಗೆ ಇಂಥ ಪೂರ್ವಾಗ್ರಹವುಳ್ಳ ಸರಕಾರ ಅದರ ರಕ್ಷಣೆಗೆ ವಿಶೇಷ ಕಾಳಜಿ ವಹಿಸುತ್ತದೆ ಎನ್ನುವುದು ಅತಿಯಾದ ನಿರೀಕ್ಷೆಯಾದೀತು.

ಭಾರತದ ಅನುಪಮ ಸೌಂದರ್ಯದ ಸ್ಮಾರಕವೊಂದು, ರಾಷ್ಟ್ರೀಯ ಸಂಪದವೊಂದು ಈ ರೀತಿ ಸರಕಾರಗಳ ನಿರ್ಲಕ್ಷದಿಂದಾಗಿ ಕ್ಷಯಿಸಿಹೋಗುತ್ತಿರುವುದು ನಿಜಕ್ಕೂ ಒಂದು ಶೋಚನೀಯ ಸಂಗತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಪೂರ್ವಾಗ್ರಹಗಳನ್ನು ತೊರೆದು ತಾಜ್ ಮಹಲನ್ನು ಉಳಿಸಲು ತ್ವರಿತವಾಗಿ ಕಾರ್ಯೋನ್ಮುಖವಾಗಬೇಕು. ಇಲ್ಲವಾದಲ್ಲಿ ಭವಿಷ್ಯದ ಜನಾಂಗಕ್ಕೆ ತಾಜ್ ಮಹಲ್ ಚರಿತ್ರೆಯ ಪುಸ್ತಕಗಳಲ್ಲಿ ಪೂರ್ವಾಗ್ರಹಪೀಡಿತ ವರದಿಯಾಗಷ್ಟೆ ಉಳಿದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)