varthabharthi

ರಾಷ್ಟ್ರೀಯ

ಕಾವೇರಿ ಯೋಜನೆ ಕರಡು ಅಂತಿಮಗೊಳಿಸುವುದನ್ನು ತಡೆಯುವಂತೆ ಕೋರಿದ ಕರ್ನಾಟಕದ ಮನವಿ ತಿರಸ್ಕರಿಸಿದ ಸುಪ್ರೀಂ

ವಾರ್ತಾ ಭಾರತಿ : 16 May, 2018

ಹೊಸದಿಲ್ಲಿ, ಮೇ 16: ಕರ್ನಾಟಕದಲ್ಲಿ ನೂತನ ಸರಕಾರದ ರಚನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಾವೇರಿ ನೀರು ಹಂಚಿಕೆ ಯೋಜನೆ ಕರಡನ್ನು ಅಂತಿಮಗೊಳಿಸುವುದಕ್ಕೆ ತಡೆ ನೀಡುವಂತೆ ಕೋರಿ ಕರ್ನಾಟಕ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ದಕ್ಷಿಣದ ನಾಲ್ಕು ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪುದುಚೇರಿಗೆ ಕಾವೇರಿ ನೀರು ಹಂಚುವ ಕುರಿತು ಕಾಲ ಕಾಲಕ್ಕೆ ನಿರ್ದೇಶನ ನೀಡಲು ಕೇಂದ್ರ ಸರಕಾರಕ್ಕೆ ನೀಡುವ ಅಧಿಕಾರದ ಕುರಿತು ಕಾವೇರಿ ನಿರ್ವಹಣಾ ಯೋಜನೆ ಕರಡಿನಲ್ಲಿ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. 

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಯೋಜನೆಯ ಕರಡಿನ ನಿಬಂಧನೆಗಳನ್ನು ತಿದ್ದುಪಡಿ ಮಾಡುವಂತೆ ಹಾಗೂ ಮೇ 17ರಂದು ಸಲ್ಲಿಸುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸೂಚಿಸಿದೆ. ರಾಜ್ಯದಲ್ಲಿ ನೂತನ ಸರಕಾರ ರಚನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಜುಲೈ ಮೊದಲ ವಾರದ ವರೆಗೆ ಕಾವೇರಿ ಯೋಜನೆ ಕರಡು ಅಂತಿಮಗೊಳಿಸುವುದನ್ನು ತಡೆ ಹಿಡಿಯುವಂತೆ ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರ ಭಾವನಾತ್ಮಕ ಪ್ರತಿಪಾದನೆಯನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡ ಎ.ಎಂ. ಖಾನ್ವಿಲ್ಕರ್ ತಿರಸ್ಕರಿಸಿದೆ.

ಕರ್ನಾಟಕ ಸಚಿವರ ಮಂಡಳಿಯಿಂದ ತನಗೆ ನೆರವು ಹಾಗೂ ಮಾರ್ಗದರ್ಶನ ಇಲ್ಲದೆ ಇರುವುದರಿಂದ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡುವಂತೆ ಮನವಿ ಮಾಡುತ್ತೇನೆ ಎಂದು ದೀವಾನ್ ಹೇಳಿದರು. ಇದು ಕೇಂದ್ರ ಸರಕಾರ ರೂಪಿಸಿದ ಕರಡು ಯೋಜನೆ. ರಾಜ್ಯ ಸರಕಾರ ರೂಪಿಸದ್ದಲ್ಲ ಎಂದು ಹೇಳಿ ಕರ್ನಾಟಕದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)