10ರ ಹರೆಯದ ಬಾಲಕಿಯ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ
ಭೋಪಾಲ, ಮೇ 16: ವಿವಾಹ ಸಮಾರಂಭದ ಸಂಭ್ರಮದಲ್ಲಿದ್ದ ಮನೆಯೊಂದರ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಉಮಾರಿಯ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯ ಸಂಬಂಧಿಕ ವ್ಯಕ್ತಿಗಳೇ ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ಯಪಡಿಸಿದ್ದಾರೆ. ತನ್ನ ಚಿಕ್ಕಮ್ಮನ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿ ತಾಯಿಯೊಂದಿಗೆ ಭೋಪಾಲ ಸಮೀಪದ ಸಮರ್ಕೊಯ್ನಿ ಗ್ರಾಮದಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ಕಳೆದ ಭಾನುವಾರ ರಾತ್ರಿ ಮಗಳಿಗೆ ಊಟ ಬಡಿಸಿದ ಬಳಿಕ ತಾಯಿ ವಿವಾಹದ ಸಿದ್ಧತೆಯಲ್ಲಿ ತೊಡಗಿದ್ದಳು. ಬಾಲಕಿ ಕಾಣೆಯಾಗಿರುವುದು
ಸೋಮವಾರ ಬೆಳಿಗ್ಗೆ ತಿಳಿದುಬಂದಿದೆ. ತಕ್ಷಣ ಕುಟುಂಬದ ಸದಸ್ಯರೆಲ್ಲಾ ಒಟ್ಟಾಗಿ ಬಾಲಕಿಯ ಶೋಧ ನಡೆಸಿದ್ದು, ಮಂಗಳವಾರ ಬಾಲಕಿಯ ಶವ, ಮನೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ಪೊದೆಯೊಂದರ ಬಳಿ ಕುತ್ತಿಗೆಯನ್ನು ಶಾಲ್ನಲ್ಲಿ ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಉಮಾರಿಯಾದ ಉಪವಿಭಾಗೀಯ ಅಧಿಕಾರಿ ಆರ್.ಕೆ.ಶುಕ್ಲ ತಿಳಿಸಿದ್ದಾರೆ. ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದು ಮರಣೋತ್ತರ ವರದಿಯಿಂದ ತಿಳಿದುಬಂದಿದ್ದು, ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ವ್ಯಕ್ತಿ ಈ ಕೃತ್ಯ ಎಸಗಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.