varthabharthi

ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 28 May, 2018
ಪಿ.ಎ.ರೈ

ಕಾಂಗ್ರೆಸ್ - ಜೆಡಿಎಸ್ ಅನೈತಿಕ ಸಂಬಂಧವನ್ನು ಕರ್ನಾಟಕದ ಜನ ಒಪ್ಪುವುದಿಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಅನೈತಿಕ ಸಂಬಂಧ ಹೊಂದುವುದು ಕೇವಲ ಬಿಜೆಪಿಯ ಹಕ್ಕು ಎಂದು ಭಾವಿಸಿದ್ದೀರಾ?

---------------------

ನಾವೇನು ಬಳೆ ತೊಟ್ಟಿಲ್ಲ - ದ್ವೇಷದ ರಾಜಕಾರಣಕ್ಕೆ ಖಂಡಿತಾ ಉತ್ತರ ಕೊಡುತ್ತೇವೆ - ನಳಿನ್ ಕುಮಾರ್ ಕಟೀಲು, ಸಂಸದ

ಇಡೀ ದೇಶದ ಭವಿಷ್ಯವನ್ನು ಬಳೆ ತೊಟ್ಟವರೇ ಬದಲಿಸಲಿದ್ದಾರೆ ನೆನಪಿಡಿ.

---------------------

ಕರ್ನಾಟಕದ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಸಂದ ಜಯ - ರಜನಿಕಾಂತ್, ನಟ

ತಮಿಳುನಾಡಿನ ತೂತುಕುಡಿ ಬೆಳವಣಿಗೆಯ ಬಗ್ಗೆಯೂ ತುಸು ಮಾತನಾಡಿ.

---------------------

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಮೂರು ತಿಂಗಳಿಗಿಂತ ಹೆಚ್ಚು ನಡೆಯೋಕೆ ಸಾಧ್ಯವೇ ಇಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಅವರು ನಡೆಯುವ ಬದಲು ಕೂತು ಸರಕಾರ ನಡೆಸುವ ಬಗ್ಗೆ ಯೋಚಿಸುತ್ತಿದ್ದಾರೆ.

---------------------

ನಾನು ಲೋಕಸಭೆಗೆ ಗೆದ್ದ ಅಂದಿನ ಖುಷಿಗಿಂತ, ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ಇಂದಿನ ದುಃಖವೇ ನನಗೆ ಜಾಸ್ತಿ - ಪ್ರತಾಪ ಸಿಂಹ, ಸಂಸದ

ಯಡಿಯೂರಪ್ಪ ಕುರಿತು ನೀವೇ ಬರೆದ ನಿಮ್ಮ ಹಳೆಯ ಬರಹವನ್ನೊಮ್ಮೆ ಓದಿ, ಇನ್ನೊಮ್ಮೆ ಹೇಳಿಕೆ ನೀಡಿ.

---------------------
ಒಳ್ಳೆಯ ಕೆಲಸ ಮಾಡಲು ಅಧಿಕಾರ ಬೇಕೆಂದಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಐದು ವರ್ಷ ಅಧಿಕಾರ ಇಲ್ಲದೇ ಇದ್ದಾಗ ಮಾಡಿದ ಒಳ್ಳೆಯ ಕೆಲಸ ಏನು ಎನ್ನುವುದನ್ನಾದರೂ ವಿವರಿಸಿ.

---------------------

ನನ್ನ ಅದೃಷ್ಟಕ್ಕಿಂತ ಎಚ್.ಡಿ.ಕುಮಾರಸ್ವಾಮಿ ಅದೃಷ್ಟ ಚೆನ್ನಾಗಿದೆ - ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕ

ಸಿದ್ದರಾಮಯ್ಯ ಮೂಲೆಗುಂಪಾದುದು ನಿಮ್ಮ ಪಾಲಿಗೆ ಒಲಿದ ಅದೃಷ್ಟ ಎಂದು ಪರಮೇಶ್ವರ್ ಖುಷಿಯಿಂದ ಹೇಳುತ್ತಾ ಓಡಾಡುತ್ತಿದ್ದಾರೆ.

---------------------

ಕರ್ನಾಟಕ ಈಗ ‘ಕಾಂಗ್ರೆಸ್ ಮುಕ್ತ’ - ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ನಿಮ್ಮಿಂದ ದೇಶ ಯಾವಾಗ ಮುಕ್ತ?

---------------------

ಹೊಸದೊಂದು ಹಿಂದುತ್ವ ಅಭಿಯಾನಕ್ಕೆ ಸಿದ್ಧತೆ ನಡೆಯುತ್ತಿದೆ - ಪ್ರವೀಣ್ ತೊಗಾಡಿಯಾ,ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ

ಹಳೆಯ ಹಿಂದುತ್ವದ ಗತಿ ಏನು?

---------------------

ಗೋವುಗಳಿಗಾಗಿ ತಪಸ್ಸು ಅನಿವಾರ್ಯ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಅದರ ಹುಲ್ಲು, ಹಿಂಡಿಗಾಗಿ ಸರಕಾರ ನೀಡುತ್ತಿರುವ ಹಣವನ್ನು ಏನು ಮಾಡುತ್ತೀರಿ?

---------------------
ನಮ್ಮ ಯೋಧರ ಜೀವವನ್ನು ಪರಿಹಾರ ಮೊತ್ತದಿಂದ ಅಳೆಯಲು ಸಾಧ್ಯವಿಲ್ಲ -ರಾಜನಾಥ್ ಸಿಂಗ್, ಕೇಂದ್ರ ಸಚಿವ

ಆ ಕಾರಣಕ್ಕಾಗಿ ಸರಿಯಾದ ಪರಿಹಾರ ನೀಡುತ್ತಿಲ್ಲವೇ?

---------------------

ಮೈದಾನದ ಹೊರಗೆ ನನಗೆ ಅನುಷ್ಕಾ ಶರ್ಮಾ ಕ್ಯಾಪ್ಟನ್ ಆಗಿರುತ್ತಾಳೆ - ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ

ಅಂದರೆ ಮನೆಯಂಗಳದ ಹೊರಗೆ ಬೇರೆ ಕ್ಯಾಪ್ಟನ್ ಇದ್ದಾರೆ ಎಂದಾಯಿತು.

---------------------

ಹಾವು -ಮುಂಗುಸಿಯಂತಿದ್ದ ಕಾಂಗ್ರೆಸ್ - ಜೆಡಿಎಸ್ ಒಂದೇ ಮರ ಏರಿದೆ. ಇದು ಸಹಜ ಸ್ಥಿತಿಯಲ್ಲ - ಸಿ.ಟಿ.ರವಿ, ಶಾಸಕ

ಇದು ರಾಜ್ಯವನ್ನು ನುಂಗಲು ಕಾದಿರುವ ಹೆಬ್ಬಾವುಗಳ ವಿರಹಗೀತೆ.

---------------------

ನಮ್ಮ ದೇಶದಲ್ಲಿ ಹಗಲುಗನಸಿಗೆ ನಿಷೇಧವಿಲ್ಲ - ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ

ಯುವಕರು ಉದ್ಯೋಗದ ಕನಸು ಕಾಣುವುದನ್ನಷ್ಟೇ ನಿಷೇಧಿಸಿದ್ದೀರಿ.

---------------------

ನಮ್ಮದು ಒಂದು ಸಮುದಾಯದ ಓಲೈಕೆಯಲ್ಲ, ಅಭಿವೃದ್ಧಿಗೆ ಆದ್ಯತೆ - ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ

ಬೀದಿ ರೌಡಿಗಳು ಸಖತ್ ಅಭಿವೃದ್ಧಿಯಾಗಿದ್ದಾರೆ.

---------------------

ದೇವ ಮಾನವರು ರಾಜಕೀಯದಿಂದ ದೂರ ಉಳಿಯುವುದು ಒಳಿತು - ಕೆ.ಜೆ.ಅಲ್ಫೋನ್ಸ್, ಕೇಂದ್ರ ಸಚಿವ

ಮಾನವರಿಂದ ದೂರ ಉಳಿದರೆ ಇನ್ನಷ್ಟು ಒಳ್ಳೆಯದು.

---------------------

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಮತ್ತೆ ಯಾವುದನ್ನು ತೂರಿಸುತ್ತೀರಿ ಎನ್ನುವುದನ್ನಾದರೂ ಹೇಳಿ.

---------------------
ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದಿದ್ದರೆ ಬಿಜೆಪಿಗೆ ಖಂಡಿತಾ ಇನ್ನೂ ಹೆಚ್ಚಿನ ಸ್ಥಾನ ಸಿಗುತ್ತಿತ್ತು - ಸೋಮಶೇಖರ ರೆಡ್ಡಿ, ಬಿಜೆಪಿ ಶಾಸಕ

ಬಿಜೆಪಿಯ ದೈನೇಸಿ ಸ್ಥಿತಿಗೆ ಇನ್ನೇನು ಬೇಕು?

---------------------

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಒಟ್ಟಾಗಿದ್ದೇವೆ - ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ

ಸೋಲಿಸಿದ ಮರುಕ್ಷಣ ಬೇರೆ ಆಗುವ ಯೋಜನೆಯಿದೆಯೇ?

---------------------
ನಾನು ಯಾವುದೇ ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಅದನ್ನು ಸಾಬೀತುಪಡಿಸಲು ದೇವಸ್ಥಾನಗಳಿಗೆ ಪ್ರವಾಸವೇ?

---------------------
ಯಡಿಯೂರಪ್ಪ ಒರಟ, ಆದರೆ ಮೋಸಗಾರ ಅಲ್ಲ - ರಮೇಶ್‌ಕುಮಾರ್, ವಿಧಾನ ಸಭೆ ಅಧ್ಯಕ್ಷ

ಅಂದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಡಿಯೂರಪ್ಪರಿಗೆ ಮೋಸ ಮಾಡಿದ್ದಾರೆ ಎಂದರ್ಥವೇ?

---------------------

ಬಿಜೆಪಿಯ ಯುವ ನಾಯಕರಲ್ಲಿ ಹಿಂದುತ್ವದ ಮಾದರಿ ವ್ಯಕ್ತಿತ್ವ ಮರೆಯಾಗುತ್ತಿದೆ - ಉದ್ಧವ್ ಠಾಕ್ರೆ, ಶಿವಸೇನೆ ನಾಯಕ

ಆರೆಸ್ಸೆಸ್ ಮಾದರಿ ವ್ಯಕ್ತಿತ್ವಕ್ಕೀಗ ರಾಜಕೀಯ ಮಾರುಕಟ್ಟೆಯಲ್ಲಿ ಬೆಲೆ.

---------------------

ಭಾರತ - ಬಾಂಗ್ಲಾ ಬೇರೆ ಬೇರೆ ರಾಷ್ಟ್ರಗಳಾಗಿರಬಹುದು, ಆದರೆ ಗುರಿ, ಧ್ಯೇಯ ಒಂದೇ - ನರೇಂದ್ರ ಮೋದಿ, ಪ್ರಧಾನಿ

ಆದರೆ ನಿಮ್ಮ ಭಕ್ತರು ಇದನ್ನು ಒಪ್ಪಬೇಕಲ್ಲ?

---------------------
ಆಕಸ್ಮಿಕ ಶಿಶು (ಕಾಂಗ್ರೆಸ್ - ಜೆಡಿಎಸ್)ಗಳಿಗೆ ಬಾಲಗ್ರಹ ಪೀಡೆ ಜಾಸ್ತಿ - ಅನಂತಕುಮಾರ್, ಕೇಂದ್ರ ಸಚಿವ

ಆ ಪೀಡೆಯ ಹೆಸರು ಬಿಜೆಪಿ ಎಂದಾಗಿರಬಹುದೇ?

---------------------

ಜಾತ್ಯತೀತತೆ ಎಂಬುದು ಭಾರತದ ಡಿಎನ್‌ಎಯಲ್ಲೇ ಇದೆ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಅದೇ ದೊಡ್ಡ ಸಮಸ್ಯೆಯಾಗಿದೆ.

---------------------
ತೃತೀಯ ರಂಗ ಎನ್ನುವುದು ಮಳೆಗಾಲದಲ್ಲಿ ಹುಟ್ಟುವ ನಾಯಿಕೊಡೆಯಂತೆ - ಶ್ರೀರಾಮುಲು ,ಶಾಸಕ

ನಾಯಿಕೊಡೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರೀ ಪ್ರೀತಿಯಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು