varthabharthi


ಭೀಮ ಚಿಂತನೆ

ಇದುವರೆಗೂ ನಿಮ್ಮ ಅಧಿಕಾರದಡಿಯಲ್ಲಿ ನಮಗೆ ಅಪಮಾನವೇ ಆಗಿದೆ

ವಾರ್ತಾ ಭಾರತಿ : 1 Jun, 2018

ಭಾಗ- 2

  ಸ್ವರಾಜ್ಯ ಕೇಳುವಾಗ 6 ಕೋಟಿ ಪ್ರಜೆಗಳನ್ನು ಅದುಮಿ ಹಿಡಿದಿಡುವಾಗ ಯಾರಾದರೂ ದೋಷಾರೋಪಣೆ ಮಾಡಿಯಾರು ಎಂದು ಸ್ವಚ್ಛ ಮನಸ್ಸಿನಿಂದ ಸ್ವರಾಜ್ಯ ಬೇಡುವ ಹಾಗಿಲ್ಲ ಎಂದು ಕೆಲವು ಕಾಂಗ್ರೆಸಿಗರು 1917ನೇ ಇಸವಿ ಅಸ್ಪಶ್ಯತಾ ನಿವಾರಣೆಯ ಸೋಗು ಹಾಕಿ ಒಂದು ಠರಾವು ಪಾಸು ಮಾಡಿದರು. ಆದರೆ ಅದು ಅಲ್ಲೇ ಧೂಳು ತಿನ್ನುತ್ತಿದೆ. ಅದರ ನಂತರ ಮಹಾತ್ಮಾ ಗಾಂಧಿಯ ಅಲೆ ಎದ್ದು ಈ ಅಸ್ಪಶ್ಯತೆ ಹಿಂದೂ ಧರ್ಮದ ಮೇಲಿನ ಒಂದು ದೊಡ್ಡ ಕಳಂಕ ಎನ್ನುವ ಒಂದು ಸೂತ್ರ ಹುಟ್ಟಿಕೊಂಡಿತು. ಆದರೆ ಮಹಾತ್ಮ ಗಾಂಧಿ ‘‘ಯಾರ್ಯಾರು ಚರಕವನ್ನು ಸ್ವಇಚ್ಛೆಯಿಂದ ತಿರುಗಿಸುತ್ತಾರೋ ಅವರಿಗೆ ಅದರ ಸಾಮರ್ಥ್ಯ ತಿಳಿಯುತ್ತದೆ’’ ಎನ್ನುವ ಈ ಮಹಾ ಮಂತ್ರವೊಂದನ್ನು ಬಿಟ್ಟು, ಬೇರೆ ಯಾವುದೂ ತಥ್ಯವಲ್ಲ ಎಂದು ಅವರಿಗೆ ಅನಿಸಿದ್ದರಿಂದ ಅವರು ಅಸ್ಪಶ್ಯತಾ ನಿವಾರಣಾ ಕಾರ್ಯವನ್ನು ಎಂದೂ ಗಂಭೀರವಾಗಿ ಪರಿಗಣಿಸಲಿಲ್ಲ.

ಈ ಕಾರ್ಯಕ್ಕೆ ಅವರಿಗೆ ನಿಜವಾದ ಕಾಳಜಿ ಇತ್ತೋ ಇಲ್ಲವೋ ಎನ್ನುವುದೇ ನಮಗೂ ಅನುಮಾನವಿದೆ. ಹಿಂದೂ ಮುಸಲ್ಮಾನರ ಮಾರಾಮಾರಿಯಾದಾಗ ಅವರು 21 ದಿವಸ ಉಪವಾಸ ಮಾಡಿದ್ದರು. ಖಾದಿಯ ಪ್ರಚಾರಕ್ಕಾಗಿ ಎಂದು, ಯಾರು ಖಾದಿ ನೂಲುವರೋ ಅವರನ್ನು ಮಾತ್ರ ಕಾಂಗ್ರೆಸ್‌ನ ಸದಸ್ಯರನ್ನಾಗಿ ಮಾಡಬೇಕೆಂದು ಆಗ್ರಹ ಮಾಡಿದರು. ಆದರೆ ಸ್ಪಶ್ಯ ಮತ್ತು ಅಸ್ಪಶ್ಯರ ನಡುವಿನ ಕ್ರೌರ್ಯಕ್ಕಾಗಿ ತಮ್ಮ ವಿರೋಧವನ್ನು ಸೂಚಿಸಲು ಒಂದು ದಿವಸದ ದೇಹ ದಂಡನೆಯನ್ನೂ ಅವರು ಮಾಡಲಿಲ್ಲ ಅಥವಾ ಅಸ್ಪಶ್ಯತಾ ನಿವಾರಣೆಗಾಗಿ ಕಾಂಗ್ರೆಸ್‌ನ ಸದಸ್ಯರಾಗಿ ಎಂದು ಸಹ ಅವರು ಹೇಳಲಿಲ್ಲ. ಈಗ ಮಹಾತ್ಮಾ ಗಾಂಧಿಯೆಂದರೆ ಸಿಡಿದ ಗುಂಡಿನಂತೆ. ಯಾರಿಗೂ ಅವರ ಮೇಲೆ ಹೆಚ್ಚು ನಿರೀಕ್ಷೆ ಇಲ್ಲ. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಮುಂದಾಳೆಂದರೆ ಕುಟಿಲತೆಯ ರೂಪ. ಪಂಡಿತ ಜವಾಹರಲಾಲ್ ನೆಹರೂ ಅವರ ಹೇಳಿಕೆ ಪ್ರಕಾರ ರಾಜಕಾರಣ ಮತ್ತು ಧರ್ಮವನ್ನು ಬೇರೆ ಮಾಡಬೇಕಾಗಿತ್ತು. ಅವರ ಸರಳವಾದ ವಾಕ್ಯವನ್ನು ತಿರುಚಿ, ಬೇರೆ ಬಣ್ಣದ ಅರ್ಥವನ್ನೇ ಹಚ್ಚಿ, ಮೇ ತಿಂಗಳಲ್ಲಿ ಮಹಾರಾಷ್ಟ್ರ ಪ್ರಾಂತಿಕ ಪರಿಷದ್‌ನಲ್ಲಿ ಅನೇಕ ಪ್ರಕಾರದ ಕಣ್ಣು ಮುಚ್ಚಾಲೆಯಾಟವಾಡಿ, ಸಾದಾ ಅಸ್ಪಶ್ಯತಾ ನಿವಾರಣೆಯ ಗೊತ್ತುವಳಿಯನ್ನು ಪರಿಷತ್ತಿನ ಮುಂದೆ ಬರಲು ಬಿಡಲಿಲ್ಲ.

ಅದರಿಂದಲೇ ಬಂದ ತರುಣ ಪೀಳಿಗೆಯವರು, ಒಂದು ತರುಣ ಮಹಾರಾಷ್ಟ್ರ ಪರಿಷತ್ತು ಎಂದು ಮಾಡಿದರು. ನಾನಾ ತರಹದ ಸಾಮಾಜಿಕ ಗೊತ್ತುವಳಿ ಪಾಸು ಮಾಡಿ ಆ ತರುಣರು ತಮ್ಮ ತಮ್ಮ ತಂದೆತಾಯಿಯರನ್ನು ಭಯಭೀತರನ್ನಾಗಿ ಮಾಡಿದರು. ಆದರೆ ಅಸಹಾಯಕ ಅಸ್ಪಶ್ಯರು ಪೂರ್ತಿ ಭರವಸೆಯಿಂದ ಅವರ ಕಡೆ ನೋಡುತ್ತಿದ್ದರು. ಅಷ್ಟರಲ್ಲಿ ತಾವು ಮಾಡಿದ ಸಾಮಾಜಿಕ ಗೊತ್ತುವಳಿಯನ್ನು ಪೂರ್ತಿಗೊಳಿಸಲು ಆ ತರುಣರ ತಂಡ ಬಾರ್ಡೋಲಿಯ ಕಡೆಗೆ ವಾಲಿತು. ಈಗಂತೂ ಅದು ರಾಷ್ಟ್ರೀಯ ಸ್ವಾತಂತ್ರ ಹೇಗೆ ಸಿಗಲು ಸಾಧ್ಯ ಎನ್ನುವ ವಿಚಾರದಲ್ಲಿ ತಲ್ಲೀನವಾಗಿದೆ. ಬಾರ್ಡೋಲಿಯ ರಾಜಕೀಯ ಚಳವಳಿಯಲ್ಲಿ ಎಷ್ಟು ಆಸಕ್ತಿ ಇದೆಯೋ ಅಷ್ಟು ಮಹಾಡ್ ಸತ್ಯಾಗ್ರಹದಲ್ಲಿ ಅವರಿಗೆ ಆಸಕ್ತಿ ಇಲ್ಲ. ಸರಿ ಈ ಹಿಂದೂ ಜಾತಿ ಸ್ವತಃ ಏನೂ ಮಾಡಿಲ್ಲ. ಆದರೆ ಅಸ್ಪಶ್ಯರು ಏನು ಮಾಡುತ್ತಿದ್ದಾರೋ, ಅವರಿಗೆ ಅದಕ್ಕೆ ಯಾವ ಸಹಾಯ, ಉತ್ತೇಜನ ಯಾವುದೂ ಇಲ್ಲ. ಸೇವಾ ಸದನಕ್ಕೆ ಲಕ್ಷಾಂತರ ರೂಪಾಯಿ ಸಿಗುತ್ತದೆ, ಮಹಿಳಾ ವಿದ್ಯಾನಿಲಯಕ್ಕೆ ಲಕ್ಷಾಂತರ ರೂಪಾಯಿ ಸಿಗುತ್ತದೆ, ಆದರೆ ಅಸ್ಪಶ್ಯರಿಗಾಗಿ ತೆಗೆದ ಡಿಪ್ರೆಸ್ಸಡ್ ಕ್ಲಾಸ್ ಮಿಷನ್‌ಗಾಗಿ ಒಂದು ಪೈಸೆಯೂ ನೋಡಲು ಸಿಗುವುದಿಲ್ಲ. ಅದರ ಬಾಗಿಲು ಮುಚ್ಚಿದೆ. ಶಿಕ್ಷಣಕ್ಕಾಗಿ ಸಹಾಯ ಇಲ್ಲವೇ ಇಲ್ಲ. ಸಾಮಾಜಿಕ ಉನ್ನತಿಗಾಗಿ ಸಹಾಯ! ಅದೂ ಇಲ್ಲ.

ಅಸ್ಪಶ್ಯರು ತಮ್ಮ ಸಾಮಾಜಿಕ ಉನ್ನತಿಗಾಗಿ ದುಡಿದರೂ ಅವರನ್ನು ಕಾಡುವುದು!! ಕೆಲವರಂತೂ ಈ ವಿಷಯದ ಸತ್ಯತೆಯನ್ನು ಮಾನ್ಯ ಮಾಡಲೂ ತಯಾರಿಲ್ಲ. ಅಂಥವರಿಗೆ ನಾವು ಹೇಳುವುದೇನೆಂದರೆ, ಒಂದು ಸಲ ನೀವು ರತ್ನಗಿರಿ ಹಾಗೂ ಕುಲಾಬಾ ಜಿಲ್ಲೆಯಲ್ಲಿ ಪ್ರವಾಸ ಮಾಡಿ ನೋಡಿ, ಆಗ ನಿಮಗೆ ನಾವು ಹೇಳಿದ್ದು ಸುಳ್ಳೋ ನಿಜವೋ ಗೊತ್ತಾಗುತ್ತದೆ. ಎಲ್ಲಾದರೊಂದು ಕಡೆ ಒಂದೆರಡು ಹಳ್ಳಿಯಲ್ಲಾದರೂ ಗೌಡರು ಮಹಾರ್ ಕಡೆಯ ಜಮೀನನ್ನು ಕಿತ್ತುಕೊಂಡಿಲ್ಲದ, ಊರವರು ಅವರಿಗೆ ಪೇಟೆ ಬೀದಿಯನ್ನು ಮುಚ್ಚಿಲ್ಲದ, ಅವರ ಊರಿನಲ್ಲಿರುವ ಬಂಜರು ಭೂಮಿಯಲ್ಲಿ ಓಡಾಡಲು ಬಿಡದ, ಅವರ ದನಗಳನ್ನು ದೊಡ್ಡಿಯಲ್ಲಿ ಸೇರಿಸದಿರುವ ಮತ್ತು ಅವರ ಬಂಡವಾಳವನ್ನು ಸೇರಿಸಿಕೊಳ್ಳದೆ ಇರುವುದು ಇದೆಯೇ ಹೇಳಲಿ. ಇನ್ನೂ ಕೆಲವು ಕಡೆ ಈ ಹಿಂಸೆ ಎಷ್ಟು ಭಯಂಕರವಾಗಿ ನಡೆದಿದೆಯೆಂದರೆ ಯಾವ ರೀತಿ ಶತ್ರುವಿನ ಧಾಳಿಯಾಗುತ್ತದೋ, ಒಂದು ಸೈನ್ಯದವರು ಶತ್ರುವಿನ ಸೈನ್ಯದ ಮೇಲೆ ಹೇಗೆ ಎರಗುತ್ತಾರೋ ಹಾಗೆ ಇಡೀ ಊರಿಗೆ ಊರೇ ಆಕ್ರಮಿಸಿ ಹೆಂಗಸರು ಮಕ್ಕಳು ಎಲ್ಲರನ್ನೂ ಮಾರಣ ಹೋಮಮಾಡಿಬಿಡುತ್ತಾರೆ. ಅದೊಂದು ಪ್ರಾಣ ಹೋದ ರೀತಿಯೇ ಸರಿ. ಈ ಕ್ರೌರ್ಯತೆಯ ಕಾರಣವೇನೆಂದರೆ ಅಸ್ಪಶ್ಯರು ಗೋಮಾಂಸ ತಿನ್ನುವುದನ್ನು ಬಿಟ್ಟು, ಜನಿವಾರ ಹಾಕಿಕೊಂಡು ಸ್ಪಶ್ಯರಂತೆ ನಡೆದುಕೊಂಡರು!! ಅಸ್ಪಶ್ಯರು ತಮ್ಮ ಕಾಲ ಮೇಲೆ ನಿಂತು, ಸ್ವಚ್ಛತೆಯಿಂದ ಇದ್ದರೆ ನಿಮ್ಮ ಅಸ್ಪಶ್ಯತೆ ಸಹಜವಾಗಿ ನೀಗುತ್ತದೆ ಎಂದು ಕಂಠಶೋಷಣೆ ಮಾಡಿಕೊಂಡು ಹೇಳುವ ಸುಧಾರಿತರಿಗೆ ನಾವು ಕೇಳುವುದೇನೆಂದರೆ, ಇದೇನಾ ನಿಮ್ಮ ಕಾಳಜಿ ಮತ್ತು ಹೀಗೆ ನಮ್ಮ ಕತ್ತಿಗೆ ಉರುಳು ಹಾಕುವುದಕ್ಕೆ ನಮ್ಮನ್ನು ಯಾಕೆ ಅಪ್ಪಿಕೊಳ್ಳುತ್ತೀರಿ?

ಈ ಎಲ್ಲ ಹಕೀಕತ್ತಿನಿಂದ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಯಾವ ಸ್ಪಶ್ಯರನ್ನು ದಯಾಮಯರೆನ್ನುವರೋ, ಅವರು ಅಸ್ಪಶ್ಯರ ಹಿತಕ್ಕಾಗಿ ದಯೆ ತೋರಿಸಿಲ್ಲ. ಎಂದೂ ದಯೆ ತೋರದ ಇವರು ಇದ್ದಕಿದ್ದ ಹಾಗೇ ಇಷ್ಟು ದಯೆ ತೋರುವುದೆಂದರೆ ಖಂಡಿತ ಅಸ್ಪಶ್ಯರಿಗಾಗಿ ಅಲ್ಲ, ತನ್ನ ಸ್ವಂತಕ್ಕಾಗಿ ಮಾತ್ರ. ಅಸ್ಪಶ್ಯರು, ಹಿಂದೂ ಸಮಾಜದಿಂದ ಒಡೆದು ಬೇರೆಯಾದರೆ ಹಿಂದೂ ಸಮಾಜ ಅಶಕ್ತವಾಗುತ್ತದೆ. ಹಿಂದೂ ಮುಸಲ್ಮಾನರ ಸಂಸ್ಕೃತಿಯ ಸಂಘರ್ಷದಲ್ಲಿ ಹಿಂದೂಗಳ ನಾಶವಾಗುತ್ತದೆ ಎನ್ನುವುದು ನಮಗೆ ಕಾಣುತ್ತಿದೆ, ಆದರೆ ಹಿಂದೂ ಸಮಾಜಕ್ಕೆ ಏನಾಗುತ್ತದೆ ಎನ್ನುವುದನ್ನು ಅಸ್ಪಶ್ಯ ಸಮಾಜ ಚಿಂತಿಸಿ ಫಲವೇನು? ‘ಮಹಾರ್ ಸತ್ತ, ಮೈಲಿಗೆ ಹೋಯಿತು’ ಎಂದು ಸ್ಪಶ್ಯರು ಹೇಳಿದ ಹಾಗೆ, ‘ಹಿಂದೂ ಸತ್ತ, ಪಾಪ ಹೋಯಿತು’ ಎಂದು ಹೇಳಿ ಅಸ್ಪಶ್ಯರು ಯಾಕೆ ಸುಮ್ಮನೆ ಕೂಡುವುದಿಲ್ಲ? ಹಿಂದೂ ಸಮಾಜದ ನೀತಿ ಜಗತ್ತಿನೆಲ್ಲ ನೀತಿಗಿಂತ ವಿರುದ್ಧವಾಗಿದೆ. ಬೇರೆ ಸಮಾಜದಲ್ಲಿ ಮನುಷ್ಯ ಒಳಗೆ ಬಂದ ಎಂದರೆ ಅವನ ಅಂತಸ್ತು ಏರುತ್ತದೆ. ಹಿಂದೂ ಸಮಾಜದ ಒಳಗಿರುವ ಮನುಷ್ಯ ಹೊರಗೆ ಹೋಗುವ ತನಕ ಅವನು ಮೇಲೇರುವ ಹಾಗಿಲ್ಲ. ಅಸ್ಪಶ್ಯರು ಎಲ್ಲಿಯ ತನಕ ಹಿಂದೂವಾಗಿರುತ್ತಾನೋ ಅಲ್ಲಿಯ ತನಕ ಅವನು ಪಶು ಪಕ್ಷಿಗಳಿಗಿಂತ ಕಡೆಯಾಗಿರುತ್ತಾನೆ. ಅದೇ ಮುಸಲ್ಮಾನನಾಗಿದ್ದರೆ ಎಲ್ಲರಿಗಿಂತ ಶ್ರೇಷ್ಠನೆನಿಸುತ್ತಿದ್ದ. ಇದರಿಂದ ಸ್ಪಷ್ಟವಾಗುವುದೇನೆಂದರೆ
ಅಸ್ಪಶ್ಯರಿಗೆ ಹಿಂದುತ್ವ ಒಂದು ಶಾಪವೇ ಆಗಿದೆ.

ಅದು ಎಂದಿಗೂ ವರವಾಗಲಾರದು. ಯಾವ ಹಿಂದೂಗಳ, ಹಿಂದುತ್ವದ ಶಾಪವನ್ನು ಅಸ್ಪಶ್ಯರು ಭೋಗಿಸುತ್ತಿದ್ದಾರೋ, ಅವರು ಹಿಂದೂ ಜನರು ಸಾಯುತ್ತಾರೋ, ಬದುಕುತ್ತಾರೋ ಎನ್ನುವ ಚಿಂತೆ ಮಾಡುವ ಕಾರಣವಿಲ್ಲ. ಯಾವ ಹಿಂದೂ ಜಾತಿ ಅನೇಕ ಪ್ರಕಾರದ ಕಠೋರ ನಿರ್ಬಂಧಗಳನ್ನು ಹಾಕಿ ಮನುಷ್ಯರ ಮತ್ತು ಮನುಷ್ಯತ್ವವನ್ನು ಅಹರ್ನಿಶಿ ಅವಮಾನಿಸುತ್ತಿದೆಯೋ ಅದೇ ಜಾತಿ ಜಗತ್ತಿನಲ್ಲಿ ಇಲ್ಲವಾದರೂ ಸಹ ಯಾರು ಅವರಿಗಾಗಿ ಅಳುತ್ತಾರೆ? ಹಿಂದೂ ಜಾತಿ ತಮ್ಮ ಪಾಪವನ್ನು ತಮ್ಮ ಪ್ರಾಂತದೊಳಗೇ ಇಟ್ಟುಕೊಂಡರೆ ವಾಸಿ. ಆದರೆ ಹಾಗಲ್ಲ, ಅವರು ಎಲ್ಲಿ ಹೋದರೂ ಅವರ ಪಾಪವನ್ನು ಬಿತ್ತದೆ ಇರುವುದಿಲ್ಲ. ಹಿಂದೂ ಜಾತಿ ಎಷ್ಟು ಉಪದ್ರವಿಗಳು ಎಂದರೆ, ಅವರು ಸಿಂಧ್ ಪ್ರಾಂತಕ್ಕೆ ಹೋಗಲಿ, ದಕ್ಷಿಣ ಆಫ್ರಿಕಾಗೆ ಹೋಗಲಿ, ಎಲ್ಲಿ ಹೋದರೂ ತಮ್ಮ ಪಾಪವನ್ನು ಹರಡದೆ ಬಿಡುವುದಿಲ್ಲ. ಎಲ್ಲಿ ಹೋದರೂ ಜಗತ್ತಿನ ಸ್ವಚ್ಛಜೀವನದಲ್ಲಿ ತಮ್ಮ ಪಾತಕಿ ಜೀವನವನ್ನು ಬೆರೆಸಿ ಅಶುದ್ಧ ಮಾಡದೆ ಬಿಡುವುದಿಲ್ಲ. ಈ ಪತಿತ ಜಾತಿಗೆ ಜಗತ್ತಿನ ಆಶ್ರಯ ನೀಡುವುದೇ ಮಾನವ ಜಾತಿಯ ಹಿತದೃಷ್ಟಿಯಿಂದ ಒಂದು ದೊಡ್ಡ ಆಪತ್ತೆನಿಸುತ್ತದೆ. ಮನುಷ್ಯ ಮಾತ್ರರು ಇವರ ಹತ್ತಿರ ಇರುವುದೇ ಒಂದು ದೊಡ್ಡ ದೌರ್ಭಾಗ್ಯ. ಅವರಲ್ಲಿ ಬೆರೆಯುವುದು ಮತ್ತು ಅವರ ಪ್ರಭುತ್ವದಲ್ಲಿರುವುದು ಅಂದರೆ ಜೀವಂತವಾಗಿ ನರಕಯಾತನೆಯನ್ನು ಅನುಭವಿಸುವುದು. ಅಂಥ ಹಿಂದೂ ಜಾತಿಯ ಸಂಬಂಧ ಇಟ್ಟುಕೊಳ್ಳಲು ಯಾರು ತಯಾರಿರುತ್ತಾರೆ? ಅವರ ಸಹವಾಸವೇ ಬೇಡ, ಬೇರೆಯಾಗುವುದೇ ಹಿತ ಎಂದು ಈ ಮಾರ್ಗವನ್ನು ಅಸ್ಪಶ್ಯರ ಪ್ರತಿನಿಧಿಗಳು ಆರಿಸಿದ್ದಾರೆ.

ಸ್ಪಶ್ಯರ ಸಮಾಜದಿಂದ ಅಸ್ಪಶ್ಯರ ಸಮಾಜವನ್ನು ಬಿಡುಗಡೆ ಮಾಡಬೇಕು. ಈ ಪುರಾವೆಯ ವಿಷಯದಲ್ಲಿ ವಿರೋಧ ಬಂದರೆ ಅದು ಅಸ್ಪಶ್ಯರ ಕಡೆಗೇ ಆಗಬೇಕು. ಆದರೆ ಅವರಿಂದ ಅಂಥ ವಿರೋಧ ಬರುತ್ತದೆ ಎಂದು ನಮಗನಿಸುವುದಿಲ್ಲ. ಈಗ ಆಗಿರುವ ಪುರಾವೆಯ ಮೇಲೆ ಅವರ ಆಕ್ಷೇಪ ಇಲ್ಲವೆನ್ನುವಂತಿಲ್ಲ. ಆದರೆ ಆ ಆಕ್ಷೇಪ ಬೇರೆಯೇ ವಿಷಯದ ಮೇಲಿದೆ. ಅವರ ಮುಖ್ಯ ಆಕ್ಷೇಪ ಎಂದರೆ ಮುಂಬೈ ಇಲಾಖೆಗೆ ಸಂಪೂರ್ಣ ಸ್ವರಾಜ್ಯ ಸಿಗಬೇಕು ಎನ್ನುವ ಬೇಡಿಕೆಯನ್ನು ಅಸ್ಪಶ್ಯರ ಪ್ರತಿನಿಧಿಗಳು ಮಾಡಬಾರದಾಗಿತ್ತು. ಈ ಆಕ್ಷೇಪಕ್ಕೆ ಬಾಯಿ ಮಾತಿನಿಂದ ಹೇಳದಿದ್ದರೂ, ಅದರ ಸ್ಪಷ್ಟವಾದ ಧ್ವನಿ ಕೇಳಿಬರದಿದ್ದರೂ, ಅವರಲ್ಲಿ ಅಂತಹ ಆಕ್ಷೇಪ ಇದೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಅಥವಾ ನಮ್ಮ ಬಂಧುಗಳ ಈ ಮಹತ್ವದ ಮತಭೇದ ಇರುವುದರಿಂದ ಈ ಆಕ್ಷೇಪವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಸ್ಪಶ್ಯರ ಆಕ್ಷೇಪಕ್ಕೆ, ಅಸ್ಪಶ್ಯರೇ ಪರಿಹಾರ ಕಂಡುಹಿಡಿಯಲು ಇಂದು ನಾವು ಯೋಜಿಸಿದ್ದೇವೆ. ಈ ಆಕ್ಷೇಪಕ್ಕೆ ಮೂಲ ಕಾರಣ ಹಿಂದೂವಿಗಿಂತ ಬ್ರಿಟಿಷರು ವಾಸಿ.

ಈ ಭಾವನೆಯಲ್ಲಿರುವುದೇ ನಿರ್ವಿವಾದ. ಈ ಭಾವನೆ ಅಸ್ಪಶ್ಯ ವರ್ಗದಲ್ಲಿ ಎಷ್ಟು ಆಳವಾಗಿದೆ ಎಂದರೆ ಅದರ ಕಲ್ಪನೆ ಸ್ಪಶ್ಯರಿಗಾಗುವುದು ಸಾಧ್ಯವೇ ಇಲ್ಲ. ಬ್ರಿಟಿಷರ ರಾಜ್ಯವೆಂದರೆ ರಾಮರಾಜ್ಯವೆನ್ನುವಷ್ಟು ಬ್ರಿಟಿಷರ ಮೇಲೆ ಅವರ ನಿಷ್ಠೆ ಇದೆ ಮತ್ತು ಆ ನಿಷ್ಠೆ ಅವರ ಹೃದಯದಲ್ಲಿ ಸ್ಥಾನ ಸಿಗುವ ಹಾಗೆ ಆಗಲು ಒಂದು ಸಬಲವಾದ ಕಾರಣವಿದೆ. ಯಾವ ಪೇಶ್ವೆಯ ಕಾಲದಲ್ಲಿ ಅಸ್ಪಶ್ಯರು ರಸ್ತೆಯಲ್ಲಿ ಉಗಿದು ಅಪವಿತ್ರ ಮಾಡುತ್ತಾರೆಂದು ಕುತ್ತಿಗೆಗೆ ಮಡಕೆಯನ್ನು ತೂಗಿಹಾಕಿಕೊಳ್ಳುತ್ತಿದ್ದರೋ, ಅಸ್ಪಶ್ಯರ ಗುರುತು ಹಿಡಿಯಲು ಕೈಯಲ್ಲಿ ಕರೀದಾರವನ್ನು ಕಟ್ಟಿಕೊಳ್ಳಬೇಕಾಗಿತ್ತೋ, ನಡೆಯುತ್ತಾ ಅಪವಿತ್ರವಾದ ಧೂಳಿನಮೇಲೆ, ಹಿಂದೂ ಜಾತಿ ನಡೆಯುವ ಪ್ರಸಂಗ ಬರಬಾರದು ಎಂದು ಸೊಂಟದಲ್ಲಿ ಕಡ್ಡಿ ಪೊರಕೆಯನ್ನು ಕಟ್ಟಿಕೊಂಡಿರಬೇಕಾಗಿತ್ತೋ, ಆ ಪೇಶ್ವೆಯ ಮತ್ತು ಬ್ರಿಟಿಷರ ಕಾಲದ ಅಸ್ಪಶ್ಯರ ಸ್ಥಿತಿ ತುಲನೆಮಾಡಿದರೆ ಅವರಿಗೆ ಒಂದು ರೀತಿಯ ದ್ವೇಷ ಹಾಗೂ ಮತ್ತೊಂದು ಕಡೆ ಪ್ರೀತಿ ಹುಟ್ಟಿದರೆ ಆಶ್ಚರ್ಯವೇನಿಲ್ಲ.

ಪೇಶ್ವೆಯ ಮತ್ತು ಬ್ರಿಟಿಷರ ಸಂಕ್ರಮಣ ಸ್ಥಿತಿಯಲ್ಲಿದ್ದ ಅಸ್ಪಶ್ಯರ ಸ್ಥಿತಿ ಮಹಾಭಾರತದಲ್ಲಿ ಹೇಳುವ ಗಿಡುಗ ಪಕ್ಷಿ ಮತ್ತು ಪಾರಿವಾಳದ ಸ್ಥಿತಿಗೂ ಒಂದು ರೀತಿಯ ಸಾಮ್ಯ ಕಂಡು ಬರುತ್ತದೆ. ಗಿಡುಗ ಪಕ್ಷಿ ಹಿಂದೆ ಬಿದ್ದಾಗ, ಹೇಗೆ ಬಡಪಾಯಿ ಪಾರಿವಾಳವು ಜೀವವನ್ನು ಕೈಲಿ ಹಿಡಿದುಕೊಂಡು ಶಿಬಿ ರಾಜನ ಹತ್ತಿರ ‘ರಕ್ಷಿಸು ರಕ್ಷಿಸು’ ಎಂದು ಶರಣಾಯಿತೋ ಅದೇ ರೀತಿ ಅಸ್ಪಶ್ಯರು ಸ್ಪಶ್ಯರ ಅಮಾನುಷ ಕೃತ್ಯದಿಂದ ನೊಂದು ಬ್ರಿಟಿಷರಿಗೆ ಶರಣಾಗಿದ್ದರಿಂದ ಅವರ ಆಶ್ರಯದಲ್ಲಿ ಇಂದು ದಿನಗಳನ್ನು ಕಳೆಯುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿದ್ದ ಅಸ್ಪಶ್ಯರು, ಶಿಬಿಯ ಆಧಾರವಿಲ್ಲದಿದ್ದರೆ ಗಿಡುಗ ಪಕ್ಷಿ, ಹೇಗೆ ಪಾರಿವಾಳದ ಗತಿ ಕಾಣಿಸುತ್ತಿತ್ತೋ, ಹಾಗೆ ಬ್ರಿಟಿಷರ ಆಧಾರವಿಲ್ಲದಿದ್ದರೆ ತಮ್ಮ ಗತಿಯೂ ಮುಗಿದುಹೋಗುತ್ತಿತ್ತೆನ್ನುವ ಭಯದಿಂದ ಸ್ವರಾಜ್ಯ ಬೇಡಿಕೆಯನ್ನು ಇಟ್ಟರೆ, ಅವರನ್ನು ಯಾವ ವಿಚಾರವಂತ ಮನುಷ್ಯರೂ ದೂಷಿಸಲು ಸಾಧ್ಯವಿಲ್ಲ ಎಂದು ನಮಗೆ ಅನಿಸುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)