varthabharthi

ಪ್ರಚಲಿತ

ಕಗ್ಗತ್ತಲಲ್ಲಿ ಕಂಡ ಬೆಳಕು ‘ಮೇ ಸಾಹಿತ್ಯ ಮೇಳ’

ವಾರ್ತಾ ಭಾರತಿ : 4 Jun, 2018
ಸನತ್ ಕುಮಾರ್ ಬೆಳಗಲಿ

ವರ್ಗರಹಿತ, ಜಾತಿರಹಿತ ಸಮಾಜದ ಕನಸು ಕಾಣುವವರಿಗೆ ಇದು ಅತ್ಯಂತ ಕೆಟ್ಟ ಕಾಲ. ಇಂಥ ಕಾಲಘಟ್ಟದಲ್ಲಿ ನಾವು ಸೈದ್ಧಾಂತಿಕ ಶತ್ರುಗಳೊಂದಿಗೆ ಮಾತ್ರವಲ್ಲ ನಮ್ಮನಮ್ಮಾಳಗೆ ಹೊಡೆದಾಡುವ, ಕೆಸರೆರಚುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ದಟ್ಟ ನಿರಾಸೆಯ ಕಾಲದಲ್ಲೂ ಅಲ್ಲೊಂದು ಮಿಂಚು ಹುಳುವಿನಂತಹ ಬೆಳಕಿನ ಕಿರಣಗಳು ಮೂಡುತ್ತಿವೆ. ಅಂಥ ಕೆಲವೇ ಬೆಳಕಿನ ಕಿರಣಗಳಲ್ಲಿ ಮೇ 26 ಮತ್ತು 27ರಂದು ಧಾರವಾಡದಲ್ಲಿ ನಡೆದ 5ನೇ ಮೇ ಸಾಹಿತ್ಯ ಮೇಳವೂ ಒಂದು. ಎರಡು ದಿನ ನಡೆದ ಈ ಮೇಳವು ಹೊಸ ಆಶಾಭಾವಕ್ಕೆ ಕಾರಣವಾಯಿತು ಅಲ್ಲದೇ ನೆಮ್ಮದಿಯ ನಾಳೆ ನಮ್ಮದು ಎಂಬ ಭರವಸೆ ಮೂಡಿಸಿತು.

ಬಸವರಾಜ ಸೂಳಿಬಾವಿ ಅವರ ಲಡಾಯಿ ಪ್ರಕಾಶನ, ಕವಲಕ್ಕಿಯ ಡಾ. ಎಚ್.ಎಸ್.ಅನುಪಮಾ ಅವರ ಕವಿ ಪ್ರಕಾಶನ ಮತ್ತು ಚಿತ್ರಕಲಾ ಬಳಗದ ಕಲಾವಿದರು ಜೊತೆಗೂಡಿ ಧಾರವಾಡದ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಮೇಳವು ಹೊಸ ತೆರನಾದ ದಾಖಲೆ ಸೃಷ್ಟಿಸಿತು ಅಲ್ಲದೇ ಸಮಾನ ಮನಸ್ಕರನ್ನು ಒಂದೆಡೆ ಸೇರುವಂತೆ ಮಾಡಿತು. ಸಣ್ಣಪುಟ್ಟ ಬಿಡುವುಗಳ ಹೊರತುಪಡಿಸಿ ನಿರಂತರವಾಗಿ ನಡೆದ ವಿಚಾರಗೋಷ್ಠಿ ಮತ್ತು ಸಂವಾದಗಳು ವಿಚಾರಪ್ರೇರಕವಾಗಿದ್ದವು ಮತ್ತು ಹೊಸ ಆಲೋಚನೆಯತ್ತ ಕರೆದೊಯ್ದವು. ರಾಜ್ಯ ವಿವಿಧ ಭಾಗಗಳಿಂದ ಅಲ್ಲದೇ ದೇಶದ ಬೇರೆ ಬೇರೆ ರಾಜ್ಯ ಗಳಿಂದ ಭಾರೀ ಸಂಖ್ಯೆಯಲ್ಲಿ ಯುವಜನರು ಸೇರಿದ್ದು ವಿಶೇಷವಾಗಿತ್ತು.

ಪ್ರತಿ ವರ್ಷ ಪ್ರಚಲಿತ ವಿದ್ಯಮಾನಗಳ ಅನುಸಾರ ಬೇರೆ ಬೇರೆ ವಿಷಯಗಳನ್ನು ಮುಖ್ಯವಾಗಿಸಿಕೊಂಡು ನಡೆಯುವ ಮೇಳದಲ್ಲಿ ಈ ಬಾರಿ ಬಹುತ್ವ ಭಾರತ ಇಂದು ಮತ್ತು ನಾಳೆ ಎಂಬ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಭಾರತದ ವೈವಿಧ್ಯತೆ, ಬಹುಸಂಸ್ಕೃತಿ, ಸೌಹಾರ್ದ, ಸಹಬಾಳ್ವೆ, ಜಾತ್ಯತೀತತೆ ಕುರಿತು ಚಿಂತಕರು, ಸಾಹಿತಿಗಳು, ಯುವಜನರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ವಿಷಯ ಮಂಡಿಸಿದರು. ಕೋಮುವಾದ, ಜಾತಿವಾದ, ಫ್ಯಾಶಿಸಂ ಮತ್ತು ಹಿಂಸಾಚಾರ ಎಷ್ಟೇ ಪ್ರಮಾಣದಲ್ಲಿ ವ್ಯಾಪಿಸಲು ಯತ್ನಿಸಿದರೂ ಒಗ್ಗಟ್ಟು ಮತ್ತು ಸೌಹಾರ್ದದ ಮೂಲಕ ದಿಟ್ಟ ಪ್ರತಿರೋಧ ವ್ಯಕ್ತಪಡಿಸಬೇಕು ಎಂಬ ಸಂದೇಶವನ್ನು ಅವರು ನೀಡಿದರು. ಕೋಮುವಾದದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವವರಿಗೆ ಬಹುಸಂಸ್ಕೃತಿ ಮತ್ತು ಸಹಬಾಳ್ವೆ ಮೂಲಕ ಸ್ಪಷ್ಟ ಉತ್ತರ ನೀಡಬೇಕು ಎಂದು ಸಲಹೆ ನೀಡಿದರು.

ಆಂಧ್ರ ಪ್ರದೇಶದ ಪ್ರಗತಿಪರ ಲೇಖಕಿ ಓಲ್ಗಾ ಅವರು ಕೋಮುವಾದಿಗಳಿಂದ ಸಂವಿಧಾನಕ್ಕೆ ಧಕ್ಕೆಯಾಗುವುದನ್ನು ತಡೆಯಬೇಕೆಂದು ಹೇಳಿದರೆ, ಹಿರಿಯ ವಕೀಲರಾದ ಪ್ರೊ. ರವಿವರ್ಮಕುಮಾರ್ ಅಂಬೇಡ್ಕರ್‌ರ ಸಂವಿಧಾನವಿಲ್ಲದೇ ಭಾರತದ ಕಲ್ಪನೆ ಮಾಡಿಕೊಳ್ಳಲು ಸಹ ಆಗುವುದಿಲ್ಲ ಎಂದರು. ಕಮ್ಯುನಿಸ್ಟ್ ನಾಯಕ ಡಾ. ಸಿದ್ದನಗೌಡ ಪಾಟೀಲ, ರೈತರ ಸಂಕಷ್ಟ ಬದುಕು ಮತ್ತು ಆತ್ಮಹತ್ಯೆಗೆ ಕೇಂದ್ರ ಸರಕಾರದ ಕೃಷಿ ವಿರೋಧಿ ನೀತಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಕಾರಣ ಎಂದು ಆರೋಪಿಸಿದರೆ, ಚಿಂತಕ ದಿನೇಶ ಅಮೀನ್ ಮಟ್ಟು, ಯುವಜನರಿಗೆ ಸರಿಯಾದ ಮಾರ್ಗದರ್ಶನ ತೋರಿಸದಿದ್ದರೆ, ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತಪಡಿಸಿದರು. ಇತಿಹಾಸ ತಜ್ಞ ಪ್ರೊ. ಅಶೋಕ ಶೆಟ್ಟರ ಚಿಂತಕ ಪ್ರೊ. ಎಂ.ಎಂ.ಕಲಬುರ್ಗಿಯವರ ಜೀವನಗಾಥೆಯನ್ನು ಹೇಳಿದರೆ, ವಿಚಾರವಾದಿ ಶಿವಸುಂದರ್ ಗೌರಿ ಲಂಕೇಶ್‌ರ ಹೋರಾಟ ಮತ್ತು ರಾಜಿರಹಿತ ಬದುಕನ್ನು ಸ್ಮರಿಸಿದರು.

ವಿಚಾರ ಮಂಡನೆಯಲ್ಲಿ ಹಲವಾರು ಉಪಯುಕ್ತ ವಿಚಾರಗಳು ಬೆಳಕಿಗೆ ಬಂದವು. ಅಲ್ಲದೇ ಸಂವಾದದ ವೇಳೆ ನಡೆದ ಪ್ರಶ್ನೋತ್ತರಗಳಲ್ಲಿ ಗತಕಾಲದ ಸಂಗತಿಗಳು ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತಾಗಿನ ಹಲವು ಮಾಹಿತಿ ಸ್ಪಷ್ಟವಾದವು. ಅಂಬೇಡ್ಕರ್ ರಚಿತ ಸಂವಿಧಾನ ಕುರಿತು ಉಪನ್ಯಾಸ ನೀಡಿದ ಪ್ರೊ. ರವಿವರ್ಮ ಕುಮಾರ್ ಸಂವಿಧಾನದಲ್ಲಿನ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ಭಾರತೀಯ ರಾಜಕೀಯ ವ್ಯವಸ್ಥೆ ಸುಧಾರಣೆ, ಚುನಾವಣೆಯ ಮಹತ್ವ, ಜನಪ್ರತಿನಿಧಿಗಳ ಬದ್ಧತೆ ಮತ್ತು ನಾಗರಿಕರ ಬದ್ಧತೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು. ಬಿಜೆಪಿಯ ಅಜೆಂಡಾ ಆಗಿರುವ ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತದ ಬಗ್ಗೆ ಕಟುವಾಗಿ ಟೀಕಿಸಿದರು. ಈ ರೀತಿಯ ವಿಕೃತ ಭಾಷೆ ಜರ್ಮನಿಯ ಅಡಾಲ್ಫ್ ಹಿಟ್ಲರ್‌ನದ್ದೇ ಹೊರತು ಭಾರತ ದೇಶದ್ದು ಖಂಡಿತ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಎಷ್ಟೇ ಭಿನ್ನಾಭಿಪ್ರಾಯ, ವಿರೋಧಾಬಾಸ ಮತ್ತು ಅಪಸ್ವರಗಳಿದ್ದರೂ ಜೊತೆಗೂಡಿ ಹೊಂದಾಣಿಕೆ ಮಾಡಿಕೊಂಡು ಬಾಳುವಂತಹ ಗುಣ ಈ ದೇಶದ ಮಣ್ಣಿನಲ್ಲಿದೆ. ಈ ಕಾರಣಕ್ಕಾಗಿಯೇ ದೇಶವು ಬಹುಸಂಸ್ಕೃತಿ, ಬಹುಭಾಷೆ ಮತ್ತು ವೈವಿಧ್ಯದಿಂದ ಕೂಡಿದೆ. ಮನುವಾದಿಗಳು ಎಷ್ಟೇ ಪ್ರಯತ್ನಿಸಿದರೂ ದೇಶದ ಶತಮಾನಗಳ ಸೌಹಾರ್ದ ಪರಂಪರೆಯಲ್ಲಿ ಬಿರುಕು ಮೂಡಿಸಲು ಆಗುವುದಿಲ್ಲ ಎಂದು ಹೇಳಿದರು.

ಬಹುಮುಖಿ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಯತ್ನಿಸುತ್ತಿರುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಬೇರೆ ಬೇರೆ ಸ್ವರೂಪದ ಹೋರಾಟ, ಪ್ರತಿರೋಧ ಅನಿವಾರ್ಯ ಎಂಬ ಮಹತ್ವದ ಸಂದೇಶ ಮೇಳವು ನೀಡಿತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಮನುವಾದದ ಮೂಲಕ ಕೋಮುವಾದಿ ಶಕ್ತಿಗಳು ಜೀವನಶೈಲಿ ಮತ್ತು ಆಹಾರ ಪದ್ಧತಿಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿವೆ. ಬಹುತ್ವ ಎಂಬುದನ್ನು ನಾಶಪಡಿಸಿ, ಏಕಮೇವ ಹಿಂದೂ ರಾಷ್ಟ್ರ ನಿರ್ಮಿಸಲು ಯತ್ನಿಸುತ್ತಿವೆ. ಇದು ಅತ್ಯಂತ ಅಪಾಯಕಾರಿ ಕಾಲವಾಗಿದ್ದು, ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯ ನಡೆ ಇಡಬೇಕು. ಎಷ್ಟೇ ಮಸಲತ್ತು ನಡೆಸಿದರೂ ಮತ್ತು ಸಂಚು ರೂಪಿಸಿದರೂ ದೇಶದ ಬಹುತ್ವವನ್ನು ನಾಶಪಡಿಸಲು ನಾವು ಯಾರೂ ಅವಕಾಶ ನೀಡಬಾರದು ಎಂದು ತಿಳಿಸಿದರು. ಸಾಹಿತಿ ಪ್ರೊ. ಚಂಪಾ, ಎಚ್.ಎಸ್. ಶಿವಪ್ರಕಾಶ, ಕಾಳೇಗೌಡ ನಾಗವಾರ, ರಂಜಾನ ದರ್ಗಾ ಮುಂತಾದವರು ದೇಶವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಒಂದೆಡೆ ವಿಚಾರಗೋಷ್ಠಿಗಳು ಅಚ್ಚುಕಟ್ಟಾಗಿ ನಡೆದರೆ, ಮತ್ತೊಂದೆಡೆ ಮೇಳದಲ್ಲಿ ಪಾಲ್ಗೊಂಡವರಿಗೆ ಊಟ ಮತ್ತು ವಸತಿಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಯಾರಿಗೂ ತಿಂಡಿ ಮತ್ತು ಊಟದ ಕೊರತೆ ತಲೆದೋರದಂತೆ ಮತ್ತು ವಸತಿ ಸಮಸ್ಯೆ ಕಾಡದಂತೆ ಮೇಳದ ಆಯೋಜಕರು ಒಟ್ಟಾರೆ ಪರಿಸ್ಥಿತಿ ನಿಭಾಯಿಸಿದರು. ಮೇಳದ ಪ್ರತಿನಿಧಿಗಳನ್ನು ಸಭಾಂಗಣಕ್ಕೆ ಕರೆತರಲು ಮತ್ತು ವಸತಿ ಸ್ಥಳಕ್ಕೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಸಣ್ಣಪುಟ್ಟ ಸಮಸ್ಯೆಯೂ ಉಂಟಾಗದಂತೆ ಯಶಸ್ವಿಯಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಮೇಳದ ಆಯೋಜಕರು ನಡೆಸಿಕೊಟ್ಟರು. ಯಾವುದೇ ಕಾರ್ಯಕ್ರಮದಲ್ಲಿ ಗಂಭೀರ ವಿಚಾರಗೋಷ್ಠಿ ಅಥವಾ ಚರ್ಚೆ ನಡೆಯುತ್ತಿದ್ದರೆ, ಬಹುತೇಕ ಸಭಿಕರು ಕೂರಲು ಇಚ್ಛಿಸುವುದಿಲ್ಲ. ಆದರೆ ಇಲ್ಲಿ ಪ್ರತಿಯೊಂದು ಗೋಷ್ಠಿಗೂ ಬಹುತೇಕ ಮಂದಿ ಸಭಿಕರು ಕೂತಿದ್ದು ಅಲ್ಲದೇ ಸಂವಾದದಲ್ಲಿ ಪಾಲ್ಗೊಂಡರು. ವಿವಿಧೆಡೆಯಿಂದ ಬಂದಿದ್ದ ಯುವಜನರು ಆಸಕ್ತಿಯಿಂದ ಭಾಗವಹಿಸಿದರು. ಗೋಷ್ಠಿಯ ಸಂವಾದದಲ್ಲಿ ಅಲ್ಲದೇ ಹೊರಗಡೆಯೂ ಚಿಂತಕರು, ಸಾಹಿತಿಗಳು ಮತ್ತು ವಿಚಾರವಾದಿಗಳ ಜೊತೆ ಚರ್ಚಿಸಿದರು. ಚಿತ್ರಕಲಾ ಕಲಾವಿದರು ಬಹುತ್ವ ಭಾರತದ ಕುರಿತು ಕಲಾಕೃತಿಗಳನ್ನು ರಚಿಸಿ, ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಕಾಲೇಜು ವಿದ್ಯಾರ್ಥಿನಿಯರಾದ ನವ್ಯಾ ಕಡಮೆ ಮತ್ತು ನಬಾ ಒಕ್ಕುಂದ್ ಮೇಳದ ಪ್ರತಿಯೊಂದು ಘಟನಾವಳಿಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದರು. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹೊಸ ಕಳೆ ತಂದಿತು. ಒಟ್ಟಿನಲ್ಲಿ ಯುವಜನರು ಸೇರಿದಂತೆ ಎಲ್ಲರ ಮೇಲೆ ಗಾಢ ಪ್ರಭಾವ ಬೀರಿತು.

ಬರಗಾಲ ಆವರಿಸಿದ ವೇಳೆ ತುಂತುರು ಮಳೆಯಾದಂತೆ, ಸುಡು ಬಿಸಿಲಿನ ನಡಿಗೆ ಮಧ್ಯೆ ಮರದ ನೆರಳು ಸಿಕ್ಕಿದಂತೆ,
ನಿರಾಸೆಯಿಂದ ಇನ್ನೇನೂ ಸಾಕೆನ್ನಿಸುವ ವೇಳೆಗೆ,
ಮತ್ತೆ ಆಶಾಭಾವ ನಿಧಾನವಾಗಿ ಪುಟಿದು ಮೊಳಕೆಯೊಡೆದಂತೆ,
ಕ್ರೌರ್ಯ, ದಮನ, ಶೋಷಣೆ ಕಾರ್ಮೋಡ ಅಬ್ಬರಿಸುವಾಗ

ಬಹುತ್ವ, ಜೀವಪರ, ಸಹಬಾಳ್ವೆ ಕಾಳಜಿಯನ್ನು ಮೇ ಸಾಹಿತ್ಯ ಮೇಳವು ಗಟ್ಟಿಯಾಗಿ ಪ್ರತಿಪಾದಿಸಿದಂತೆ ಭಾಸವಾಯಿತು.
ಇನ್ನೊಂದು ಮಾತು. ಈ ಮೇಳದ ಯಶಸ್ಸಿಗೆ ಹಲವು ಜನರು ಶ್ರಮಿಸಿದ್ದಾರೆ ಮತ್ತು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆ ಅನನ್ಯವಾದದ್ದು. ಆದರೆ ಇದರ ಮುಖ್ಯ ರೂವಾರಿ ಬಸವರಾಜ ಸೂಳಿಬಾವಿಯವರ ಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಲೇಬೇಕು. ಇಡೀ ಮೇಳದಲ್ಲಿ ಅವರು ವೇದಿಕೆಯನ್ನು ಏರಲು ಇಚ್ಛಿಸಲಿಲ್ಲ. ಭಾಷಣ ಮಾಡಲು ಬಯಸಲಿಲ್ಲ. ಕವಿ ಲಕ್ಷ್ಮೀನಾರಾಯಣ ಮತ್ತು ಹೋರಾಟಗಾರ್ತಿ ಕೆ. ನೀಲಾರಿಗೆ ಪ್ರಶಸ್ತಿ ವಿತರಿಸುವಾಗ ಕೆಲವೇ ನಿಮಿಷ ವೇದಿಕೆಯನ್ನೇರಿದ್ದು ಹೊರತುಪಡಿಸಿದರೆ, ಅವರು ವೇದಿಕೆಯತ್ತ ಸುಳಿಯಲಿಲ್ಲ.

ಪ್ರಚಾರಪ್ರಿಯತೆ ಬಯಸದೆ, ಏಕಾಧಿಪತ್ಯ-ಹಿಡಿತ ಸಾಧಿಸಲು ಹಾತೊರೆಯದೆ ನೂರಾರು ಕಾರ್ಯಕರ್ತರಲ್ಲಿ ತಾವೂ ಒಬ್ಬರು ಎಂಬದಂತೆ ಬಸವರಾಜ ಸೂಳಿಬಾವಿಯವರು ಮೇಳದ ಯಶಸ್ಸಿಗೆ ದುಡಿದರು. ಕಳೆದ ಐದು ವರ್ಷಗಳಿಂದ ಇದೇ ಕಾಯಕದಲ್ಲಿ ಅವರು ತೊಡಗಿದ್ದಾರೆ. ಪ್ರಾಮಾಣಿಕತೆ ಮತ್ತು ಲೆಕ್ಕಾಚಾರದ ವಿಷಯದಲ್ಲೂ ಅಷ್ಟೇ ಸ್ಪಷ್ಟ. ಮೇಳ ಮುಗಿದ ಕೆಲವೇ ದಿನಗಳಲ್ಲಿ ಇಡೀ ಖರ್ಚು ವೆಚ್ಚದ ವಿವರಣೆ ನೀಡುತ್ತಾರೆ. ಬಹುತ್ವ ಭಾರತ ರಕ್ಷಣೆ ಮತ್ತು ಜನಪರ ಭಾರತ ಉಳಿವಿಗೆ ಬೀದಿಗಿಳಿದು ಹೋರಾಟ ಮಾಡುವುದು ಒಂದು ಮಾರ್ಗವಾದರೆ, ಮೇ ಸಾಹಿತ್ಯ ಮೇಳದಂತಹ ಕಾರ್ಯಕ್ರಮ ಆಯೋಜಿಸುವುದು ಕೂಡ ಮತ್ತೊಂದು ಮಾರ್ಗ. ಇಂದಿನ ಸಂದರ್ಭದಲ್ಲಿ ಇದು ಅಗತ್ಯ ಮತ್ತು ಅನಿವಾರ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)