varthabharthi

ಸಿನಿಮಾ

ತಮಿಳು ಸಿನೆಮಾ

ಕಪ್ಪು-ಬಿಳುಪುಗಳ ನಡುವಿನ ರಾಜಕೀಯ ತಿಕ್ಕಾಟಗಳನ್ನು ಹೇಳುವ ‘ಕಾಲಾ’

ವಾರ್ತಾ ಭಾರತಿ : 10 Jun, 2018
ಮುಸಾಫಿರ್

ಸದ್ಯದ ರಾಜಕೀಯ ‘ಕಾಲ’ಕ್ಕೆ ಸವಾಲು ಒಡ್ಡುವಂತೆ ರಜನಿಕಾಂತ್ ಅವರ ‘ಕಾಲಾ’ ತೆರೆಗೆ ಅಪ್ಪಳಿಸಿದೆ. ವರ್ತಮಾನದ ಮೋದಿ ಅಭಿವೃದ್ಧಿ ಮತ್ತು ಶುಚಿತ್ವ ರಾಜಕಾರಣದ ವಿರುದ್ಧ ಈ ಚಿತ್ರ ನೇರ ದಾಳಿ ನಡೆಸಿದೆ. ಚಿತ್ರದಲ್ಲಿ ಕಪ್ಪು ಮತ್ತು ಬಿಳಿಗಳು ಮುಖಾಮುಖಿಯಾಗಿವೆ. ತಳಸ್ತರದ ಜನರ ದ್ರಾವಿಡ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸ ಚಿತ್ರದುದ್ದಕ್ಕೂ ಕಾಣಿಸುತ್ತದೆ. ಒಂದು ರೀತಿಯಲ್ಲಿ ಹರಿದಾದ(ನಾನಾ ಪಾಟೇಕರ್)ನ ಬಿಳಿ ಜುಬ್ಬಾ ಮತ್ತು ಕರಿಕಾಲನ ಕಪ್ಪು ಜುಬ್ಬಾಗಳ ನಡುವೆ ನಡೆಯುವ ತಿಕ್ಕಾಟ ಚಿತ್ರದ ಕೇಂದ್ರ ವಸ್ತು.

ಏಶ್ಯಾಖಂಡದ ಅತಿ ದೊಡ್ಡ ಕೊಳಗೇರಿಯೆಂದು ಹೆಸರಾಗಿರುವ ಧಾರಾವಿಯ ಶ್ರಮ ಸಂಸ್ಕೃತಿ ಮತ್ತು ಮುಂಬೈಯ ಐಶಾರಾಮಿ ನಗರ ಸಂಸ್ಕೃತಿಯ ನಡುವಿನ ಸಂಘರ್ಷವೂ ಹೌದು. ಕೊಳೆಗೇರಿಗಳನ್ನು ನಾಶ ಮಾಡಿ ಆ ಜಾಗದಲ್ಲಿ ಬೃಹತ್ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಪ್ರಕ್ರಿಯೆ ಈಗಾಗಲೇ ಧಾರಾವಿಯಲ್ಲಿ ಮುಂದುವರಿದಿದೆ.

ಧಾರಾವಿಯೆನ್ನುವ ನರಕದ ಗುಡಿಸಲುಗಳನ್ನು ಸಂಪೂರ್ಣ ಕಿತ್ತು ಹಾಕಿ ಅಲ್ಲಿ ‘ಸ್ವರ್ಗ’ವನ್ನು ನಿರ್ಮಿಸುವ ಮಾತುಗಳನ್ನಾಡುತ್ತಿದ್ದಾರೆ ರಾಜಕಾರಣಿಗಳು. ಅದರ ವಿರುದ್ಧ ಅಲ್ಲಲ್ಲಿ ಹೋರಾಟಗಳ ಕಿಚ್ಚು ಎದ್ದಿವೆ. ಅದೇ ಕಿಚ್ಚನ್ನು ವಸ್ತುವಾಗಿಟ್ಟುಕೊಂಡು ನಿರ್ದೇಶಕ ಪಿ.ರಂಜಿತ್ ಅವರು ‘ಕರಿಕಾಲ’ನನ್ನು ಸೃಷ್ಟಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ಇದೇ ಧಾರಾವಿಯ ತಿಕ್ಕಾಟಗಳನ್ನು ಇಟ್ಟುಕೊಂಡು ಮಣಿರತ್ನಂ ಅವರು ‘ನಾಯಗನ್’ ಚಿತ್ರವನ್ನು ಮಾಡಿದ್ದರು. ಆ ಚಿತ್ರದ ಕಮಲ್ ಹಾಸನ್ ಅಭಿನಯವನ್ನು ಈವರೆಗೆ ಯಾರೂ ಸರಿಗಟ್ಟಿಲ್ಲ. ಅಂದಿನ ಧಾರಾವಿಯ ರಾಜಕಾರಣವೇ ಬೇರೆ. ಇಂದಿನದೇ ಬೇರೆ. ‘ಕರಿಕಾಲ’ ನಾಯಗನ್ ಚಿತ್ರದ ಎರಡನೇ ಭಾಗದಂತಿದೆ. ಚಿತ್ರವನ್ನು ನಾಯಗನ್‌ಗೆ ಹೋಲಿಸುವಂತಿಲ್ಲವಾದರೂ, ವರ್ತಮಾನದ ಅಭಿವೃದ್ಧಿ ರಾಜಕಾರಣದ ಮರ್ಮವನ್ನು ತಿವಿಯುವ ಈ ಚಿತ್ರದ ಪ್ರಯತ್ನವನ್ನು ನಾವು ಮೆಚ್ಚಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಚಿತ್ರದಲ್ಲಿ ಸೂಪರ್ ಸ್ಟಾರ್ ವರ್ಚಸ್ಸಿನಿಂದ ರಜನಿಕಾಂತ್ ಅವರನ್ನು ಹೊರತರುವ ಪ್ರಯತ್ನ ಮಾಡಲಾಗಿದೆ. ಚಿತ್ರವನ್ನು ಸಾಧ್ಯವಾದಷ್ಟೂ, ವಾಸ್ತವ ನೆಲೆಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ಕೊಳೆಗೇರಿಯಲ್ಲಿ ಬದುಕುವವರೆಲ್ಲರೂ ಕ್ರಿಮಿನಲ್‌ಗಳು ಎಂಬ ನಗರದ ಜನರ ಮನಸ್ಥಿತಿಯನ್ನು ವ್ಯಂಗ್ಯವಾಡುವಂತೆ, ಇದರೊಳಗಿರುವ ಮಾನವೀಯ ಸಂಬಂಧಗಳನ್ನು ಎತ್ತಿ ತೋರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಧಾರಾವಿಯ ಗುಡಿಸಲುಗಳನ್ನು ಎಬ್ಬಿಸಿ, ಶುಚಿತ್ವ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿ ಬೃಹತ್ ಐಶಾರಾಮಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆಗಳು ಆರಂಭವಾಗುತ್ತವೆ. ಇದರ ಹಿಂದೆ ಮುಂಬೈಯ ಕುಖ್ಯಾತ ನಾಯಕ ಹರಿದಾದನ ಕೈವಾಡವಿರುತ್ತದೆ. ಆದರೆ ಅಲ್ಲಿರುವ ಗುಡಿಸಲ ಜನರು ‘‘ಧಾರಾವಿ ನಮ್ಮದು, ನಮಗೇನು ಬೇಕು ಎನ್ನುವುದನ್ನು ನಾವು ನಿರ್ಧರಿಸುತ್ತೇವೆ’’ ಎಂದು ಪ್ರತಿರೋಧ ಒಡ್ಡುತ್ತಾರೆ. ಧಾರಾವಿಯ ಜನರು ಕರಿಕಾಲನ ನೇತೃತ್ವದಲ್ಲಿ ಹರಿದಾದನಿಗೆ ಸವಾಲು ಹಾಕುತ್ತಾರೆ. ಈ ತಿಕ್ಕಾಟಗಳು ಅಂತಿಮವಾಗಿ ಎರಡು ಸಂಸ್ಕೃತಿಯ ನಡುವಿನ ತಿಕ್ಕಾಟವಾಗಿ ಬದಲಾಗುತದೆ.

ವಾಸ್ತವಕ್ಕೆ ತೀರಾ ಹತ್ತಿರವಾಗಿ ಚಿತ್ರ ತೆರೆದುಕೊಳ್ಳುತ್ತದೆ. ಧಾರಾವಿಯ ಗುಡಿಸಲ ಜನರೊಂದಿಗೆ ಕರಿಕಾಲನ ಆತ್ಮೀಯ ಸಂಬಂಧವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಲಾಗಿದೆ. ಕರಿಕಾಲನ ಪತ್ನಿ ಸೆಲ್ವಿಯಾಗಿ ಈಶ್ವರಿ ರಾವ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗ್ರಾಮೀಣ ತಮಿಳು ಮಹಿಳೆಯಾಗಿ ಆಕೆಯ ಅಭಿನಯ ಚಿತ್ರದ ಜೀವಾಳ. ಇದೇ ಸಂದರ್ಭದಲ್ಲಿ ಕರಿಕಾಲನ ಪುತ್ರ ಲೆನಿನ್‌ನ ಪಾತ್ರ, ಇಂದಿನ ಯುವ ತಲೆಮಾರಿನ ಆವೇಶಗಳಿಗೆ ಸರಿಹೊಂದುವಂತಹದು. ಕರಿಕಾಲನ ಹಳೆಯ ಪ್ರೇಯಸಿಯಾಗಿ ಹುಮಾ ಖುರೇಷಿ ಚಿತ್ರದ ಎಲ್ಲ ಅಬ್ಬರಗಳ ನಡುವೆಯೂ, ನಾಯಕನೊಳಗಿನ ನವಿರು ಭಾವನೆಗಳನ್ನು ಮಿಡಿಸುತ್ತಾರೆ. ಖುರೇಷಿ -ರಜನೀಕಾಂತ್ ನಡುವಿನ ಕೆಲ ಸಣ್ಣ ದೃಶ್ಯಗಳು ಮನಸ್ಸನ್ನು ತಟ್ಟುತ್ತವೆ. ಚಿತ್ರದ ಕ್ಲೈಮಾಕ್ಸ್‌ನ್ನು ಇನ್ನಷ್ಟು ಪರಿಣಾಕಾರಿಯಾಗಿ ನಿರ್ವಹಿಸಬಹುದಿತ್ತೇನೋ? ಆದರೆ ರಜನಿಕಾಂತ್ ಅಭಿಮಾನಿಗಳನ್ನು ನಿರಾಶೆಗೊಳಿಸಬಾರದು ಎನ್ನುವ ಅನಿವಾರ್ಯತೆ ನಿರ್ದೇಶಕರ ಕೈ ಕಟ್ಟಿರಬಹುದು.

ಕ್ಲೈಮಾಕ್ಸ್‌ನಲ್ಲಿ ಹರಿದಾದನ ದೇವರ ಕೋಣೆಯಲ್ಲಿ ವೈದಿಕ ಪುರೋಹಿತರ ರಾಮ-ರಾವಣರ ನಡುವಿನ ಯುದ್ಧದ ಬಣ್ಣನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಹರಿದಾದನ ಗೂಂಡಾಗಳು ಕೊಳೆಗೇರಿಯ ಮೇಲೆ ನಡೆಸುವ ದಾಳಿಯನ್ನು ನಿರೂಪಿಸಲಾಗಿದೆ. ವಿಶೇಷವೆಂದರೆ ಕರಿಕಾಲ ರಾವಣನನ್ನು ಪ್ರತಿನಿಧಿಸಿದರೆ, ಕೊಳೆಗೇರಿಯ ಮೇಲೆ ದಾಳಿ ನಡೆಸುವ ಗೂಂಡಾಗಳು ರಾಮನ ಪ್ರತಿನಿಧಿಗಳಾಗಿ ಕಾಣಿಸುತ್ತಾರೆ. ಕೊಳೆಗೇರಿಯ ನಾಯಕ ಕಾಲ ರಾವಣನಾಗುತ್ತಾನೆ. ಅಂತಿಮವಾಗಿ ರಾವಣನ ನೈತಿಕತೆಯನ್ನು ಚಿತ್ರ ಎತ್ತಿ ಹಿಡಿಯುತ್ತದೆ.

ಚಿತ್ರದ ಕೊನೆಯಲ್ಲಿ ಕೊಳೆಗೇರಿಗಳ ಜನರೆಲ್ಲ ಸೇರಿ ಹರಿದಾದನ ಬಿಳಿ ಜುಬ್ಬಾಕ್ಕೆ ಕರಿಬಣ್ಣ, ನೀಲಿಬಣ್ಣ, ಕೆಂಪುಬಣ್ಣವನ್ನು ಎಸೆಯುವ ದೃಶ್ಯವಿದೆ. ರಜನಿಕಾಂತ್ ಅವರ ಮುಂದಿನ ರಾಜಕೀಯ ನಡೆಯನ್ನು ಇದು ಸಂಕೇತಿಸುತ್ತಿದೆಯೇ? ಎಂಬ ಅನುಮಾನ ನಮ್ಮನ್ನು ಕಾಡುತ್ತದೆ. ಸಂಗೀತ, ಛಾಯಾಗ್ರಹಣ ಚಿತ್ರದ ನಿರೂಪಣೆಯ ಓಘಕ್ಕೆ ಪೂರಕವಾಗಿದೆ. ಪಿ. ರಂಜಿತ್ ಇನ್ನೂ ಒಂದಿಷ್ಟು ಪ್ರಯತ್ನ ಮಾಡಿದ್ದರೆ, ಚಿತ್ರವನ್ನು ನಾಯಗನ್‌ನ ಎರಡನೆ ಆಗಿ ಪರಿವರ್ತಿಸಬಹುದಿತ್ತು. ಇಂದಿನ ಕಪ್ಪು-ಬಿಳುಪು ರಾಜಕೀಯಗಳ ನಿಜ ಬಣ್ಣ ಅರಿಯುವುದಕ್ಕಾದರೂ ಈ ಚಿತ್ರವನ್ನು ಒಮ್ಮೆ ನೋಡಬೇಕು. ತಾರಾಗಣ: ರಜನಿಕಾಂತ್, ಈಶ್ವರಿ ರಾವ್

ನಿರ್ದೇಶನ: ಪಿ. ರಂಜಿತ್
ನಿರ್ಮಾಣ: ಧನುಶ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)