varthabharthi

ಪ್ರಚಲಿತ

ಆರೆಸ್ಸೆಸ್ ಬದಲಾದೀತೇ?

ವಾರ್ತಾ ಭಾರತಿ : 11 Jun, 2018
ಸನತ್ ಕುಮಾರ್ ಬೆಳಗಲಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಉದಾಯವಾದಿಯಂತೆ ಕಾಣಿಸಿಕೊಳ್ಳಲು ಯತ್ನಿಸುತ್ತದೆ. ಅದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಾಮಾಜಿಕ ಮಾನ್ಯತೆ ಗಳಿಸಲು ಯತ್ನಿಸುತ್ತಲೇ ಇದೆ. ಆದರೆ, ಅದು ನಡೆದು ಬಂದ ದಾರಿ ದ್ರೋಹದ ದಾರಿಯಾದುದರಿಂದ ಭಾರತದ ಪ್ರಜ್ಞಾವಂತರು ಅದನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. 1925ರಲ್ಲಿ ಅದು ಅಸ್ತಿತ್ವಕ್ಕೆ ಬಂದರೂ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಅಷ್ಟೇ ಅಲ್ಲ ಸ್ವಾತಂತ್ರ ಹೋರಾಟಗಾರರಿಗೂ ದ್ರೋಹ ಬಗೆಯಿತು.

ಸ್ವಾತಂತ್ರ ನಂತರ ಗಾಂಧೀಜಿ ಹತ್ಯೆಯ ನೆತ್ತರು ಅದರ ಕೈಗೆ ಅಂಟಿಕೊಂಡಿತು. ಈ ನೆತ್ತರಿನ ಕಲೆಯನ್ನು ತೊಳೆದುಕೊಳ್ಳಲು ಅದು ಇಂದಿಗೂ ಯತ್ನಿಸುತ್ತಿದೆ. ಆರೆಸ್ಸೆಸ್ ಸ್ವಯಂ ಸೇವಕನಾಗಿದ್ದ ನಾಥೂರಾಂ ಗೋಡ್ಸೆ, ಗಾಂಧಿ ಎದೆಗೆ ಗುಂಡು ಹಾರಿಸುವ ಕೆಲ ತಿಂಗಳ ಮೊದಲು ಸಂಘದಿಂದ ದೂರಾಗಿದ್ದ. (ಬೇಕೆಂತಲೇ ದೂರ ಮಾಡಿರಲೂಬಹುದು). ಇದೇ ತಾಂತ್ರಿಕ ನೆಪವನ್ನಿಟ್ಟುಕೊಂಡು ಅದು ಗೋಡ್ಸೆಗೂ ಸಂಘಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಲೇ ಇದೆ. ಗಾಂಧಿ ಹತ್ಯೆಯಾದ ಆ ದಿನ ಸಂಘದ ಕಾರ್ಯಕರ್ತರು ದೇಶದ ಎಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಿದ್ದರು. ಗಾಂಧಿ ಹತ್ಯೆ ಆನಂತರ ಆರೆಸ್ಸೆಸ್ ಇನ್ನು ಮುಂದೆ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘದ ಅಂದಿನ ಸರಸಂಘಚಾಲಕ ರಾಗಿದ್ದ ಎಂ.ಎಸ್.ಗೋಳ್ವಾಲ್ಕರ್ ಅಂದಿನ ಗೃಹ ಮಂತ್ರಿ ವಲ್ಲಭಭಾಯಿ ಪಟೇಲರಿಗೆ ಪತ್ರ ಬರೆದಿದ್ದರು. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಸ್ವಾತಂತ್ರಾ ನಂತರ ಮೂರು ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೇ ಆರೆಸ್ಸೆಸ್ ನಿಷೇಧಿಸಲ್ಪಟ್ಟಿದೆ.

ಗಾಂಧಿ ಹತ್ಯೆ ನಡೆದಾಗ ಮೊದಲ ಬಾರಿ ನಿಷೇಧಿಸಲ್ಪ ಟ್ಟಿತ್ತು. ಕಳೆದ ಗುರುವಾರ ನಾಗಪುರದ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಮ್ಮ ಭಾಷಣದಲ್ಲಿ ಆರೆಸ್ಸೆಸ್‌ನ ದ್ರೋಹದ ಚರಿತ್ರೆಯನ್ನು ಎಲ್ಲೂ ಉಲ್ಲೇಖಿಸದೇ ಎದುರಿಗೆ ಕುಳಿತ ಕಲ್ಲು ಬಂಡೆಗಳಿಗೆ ಸಹಿಷ್ಣುತೆಯ ಪಾಠ ಮಾಡಿದರು. ಆ ದಿನ ಭಗವಾಧ್ವಜಕ್ಕೆ ವಂದನೆ ಸಲ್ಲಿಸುವಾಗ ಸರಸಂಘಚಾಲಕ ಮೋಹನ ಭಾಗವತ್ ವಂದನೆ ಸಲ್ಲಿಸಿದರು. ಆದರೆ, ಪ್ರಣವ್ ಸುಮ್ಮನೆ ನಿಂತಿದ್ದರು. ಆನಂತರ ಭಕ್ತರು ಫೋಟೊ ಶಾಪ್‌ನಲ್ಲಿ ಪ್ರಣವ್ ಮುಖರ್ಜಿ ತಲೆಗೆ ಕರಿ ಟೋಪಿ ಹಾಕಿ, ಎದೆಯ ಮೇಲೆ ಕೈಯಿಟ್ಟು ವಂದನೆ ಸಲ್ಲಿಸುವ ಫೇಕ್ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು.

ಇಂತಹ ಫೋಟೊ ಶಾಪ್‌ನಲ್ಲಿ ಭಕ್ತರು ಎಷ್ಟು ನುರಿತಿದ್ದಾರೆಂದರೆ ನರೇಂದ್ರ ಮೋದಿ ಫೋಟೊವನ್ನು ಗಾಂಧಿ ಫೋಟೊ ಪಕ್ಕಕ್ಕಿಟ್ಟು ಜಾಲತಾಣದಲ್ಲಿ ಹರಿಯಬಿಡುತ್ತಾರೆ. ಆರೆಸ್ಸೆಸ್ ಭಾರತದ ಸಂವಿಧಾನವನ್ನು ಒಪ್ಪುವುದಿಲ್ಲ. ಅವರ ಸಂವಿಧಾನ ಮನುಸ್ಮತಿ. ಆರೆಸ್ಸೆಸ್ ಭಾರತದ ರಾಷ್ಟ್ರಧ್ವಜವನ್ನು ಮನ್ನಿಸುವುದಿಲ್ಲ. ಅವರ ಧ್ವಜ ಭಗವಾಧ್ವಜ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರೆಸ್ಸೆಸ್ ಒಪ್ಪುವುದಿಲ್ಲ. ಅದು ಬಯಸಿದ್ದು ಪ್ರಜಾಪ್ರಭುತ್ವವನ್ನಲ್ಲ. ಮನುವಾದಿ ಹಿಂದೂ ರಾಷ್ಟ್ರವನ್ನು. ಹಾಗಾಗಿ ಭಾರತದ ಜನ ತನ್ನನ್ನು ಮನ್ನಿಸಬೇಕೆಂದು ಅದು ಹಾತೊರೆಯುತ್ತಿದೆ. ಸಾಮಾಜಿಕ ಮನ್ನಣೆ ಗಳಿಸಲು ಪ್ರಣವ್ ಮುಖರ್ಜಿ ಅಂಥವರನ್ನು ಅದು ತನ್ನ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದೆ. ಸಂಘದ ವೇದಿಕೆಗೆ ಬಂದು ನಿಮಗೇನು ಅನಿಸುತ್ತದೋ ಅದನ್ನು ಹೇಳಿ ಎಂದು ಅದು ದುಂಬಾಲು ಬೀಳುತ್ತದೆ. ಕಳೆದ ವರ್ಷ ದಾವಣಗೆರೆಯ ಸಂಘ ಶಿಕ್ಷಾ ವರ್ಗದಲ್ಲಿ ಮಾತಾಡಲು ಚಿತ್ರದುರ್ಗದ ಮುರುಘಾ ಶರಣರನ್ನೂ ಅದು ಆಹ್ವಾನಿಸಿತ್ತು. ಶರಣರು ಮೊದಲು ನಿರಾಕರಿಸಿದರೂ ಅಲ್ಲಿ ಬಂದು ನಿಮ್ಮ ಅಭಿಪ್ರಾಯ ಹೇಳಿ ಹೋಗಿ ಎಂದು ಒತ್ತಾಯಿಸಿತು. ಈ ಕಿರಿಕಿರಿ ತಡೆಯಲಾಗದೆ ಶರಣರು ಅಲ್ಲಿ ಹೋಗಿ ಸೌಹಾರ್ದ ಸಂದೇಶ ನೀಡಿದರು.

 ಈ ಬಾರಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಿದ ಸಂದರ್ಭದಲ್ಲಿ ಸರಸಂಘ ಚಾಲಕ ಮೋಹನ್ ಭಾಗವತ್‌ಮಾತಾಡಿದರು. ಗಾಂಧಿ ಬದುಕಿದ್ದಾಗ ವರ್ಧಾದ ಬಳಿ ಸಂಘದ ಶಾಖೆಗೆ ಭೇಟಿ ನೀಡಿದ್ದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ಅಂದಿನ ಸರಸಂಘಚಾಲಕ ಗೊಳ್ವಾಲ್ಕರ್ ಜೊತೆ ಸಮಾಲೋಚಿಸುತ್ತಿದ್ದರು. ನೆಹರೂ ಪ್ರಧಾನಿಯಾಗಿದ್ದಾಗ ದಿಲ್ಲಿಯ ಗಣರಾಜ್ಯ ದಿನದ ಪರೇಡ್‌ನಲ್ಲಿ ಭಾಗವಹಿಸಲು ಸಂಘದ ಸ್ವಯಂ ಸೇವಕರಿಗೆ ಅವಕಾಶ ನೀಡಿದ್ದರು ಎಂದು ಹೇಳಿದರು. ಸಂಘದ ಸರಸಂಘಚಾಲಕರು ಹೇಳಿದ್ದನ್ನು ಕನ್ನಡದ ಎರಡು ಪ್ರತಿಕೆಗಳಲ್ಲಿ ಪ್ರಕಟವಾದ ಲೇಖನಗಳಲ್ಲಿ ಉಲ್ಲೇಖಿಸಲಾಗಿತ್ತು. ಆ ಎರಡೂ ಲೇಖನಗಳಲ್ಲೂ ಇದೇ ಕತೆಯನ್ನು ಹೆಣೆಯಲಾಗಿತ್ತು. ಆರೆಸ್ಸೆಸ್ ತನ್ನ ದೇಶಭಕ್ತಿಯನ್ನು ಸಾಬೀತುಪಡಿಸಲು ವಿಶ್ವಾಸಾರ್ಹತೆಯನ್ನು ಮೂಡಿಸಲು ಆಗಾಗ ಈ ಘಟನೆಗಳು ಉಲ್ಲೇಖವಾಗುತ್ತವೆ. ಆದರೆ ಗಾಂಧಿ ಸಂಘದ ಶಾಖೆಗೆ ಹೋಗಿ ಏನು ಹೇಳಿದರು ಎಂಬ ಬಗ್ಗೆ ಖಚಿತ ದಾಖಲೆಗಳಿಲ್ಲ.

ಒತ್ತಾಯದಿಂದ ಕರೆದಾಗ ಗಾಂಧಿ ಹೋಗಿರಬಹುದು. ಆಗ ಗಾಂಧಿಜೀಗೆ ಗೋಳ್ವಾಲ್ಕರ್ ಇನ್ನು ಮುಂದೆ ಕೋಮುವಾದಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ ಆನಂತರ ಗಾಂಧೀಜಿ ಹೋಗಿದ್ದರೆಂದು ಕೆಲವರು ಹೇಳುತ್ತಾರೆ. ಆದರೆ ಗೋಳ್ವಾಲ್ಕರ್ ಮುಂದೆ ಒಂದೇ ತಿಂಗಳಲ್ಲಿ ತನ್ನ ಮಾತನ್ನು ಬದಲಿಸಿ ಮುಸಲ್ಮಾನರು ದೇಶದಿಂದ ಹೊರಗೆ ಹೋಗಬೇಕೆಂಬ ಅರ್ಥದಲ್ಲಿ ಮಾತಾಡಿದ್ದರು. ಆದರೆ ಇಂಥ ಒಂದೆರಡು ಘಟನೆಗಳು ಹೇಳುವುದರಿಂದ ಗಾಂಧಿ ಹತ್ಯೆಯ ಕಳಂಕ, ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ ದಂಥ ಘಟನೆಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಇಂಥ ದುಷ್ಕೃತ್ಯಗಳನ್ನು ಪದೇ ಪದೇ ಮಾಡುವ ಮೂಲಕ ಆರೆಸ್ಸೆಸ್ ಇಂದು ಬದಲಾಗಿಲ್ಲ ಎಂದು ತೋರಿಸುತ್ತಲೇ ಬಂದಿದೆ.

 ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಗೋರಕ್ಷಣೆ ಹೆಸರಿನಲ್ಲಿ ನಡೆದ ಹಿಂಸೆ, ಹತ್ಯೆಗಳು, ದಲಿತರ ಮೇಲೆ ನಡೆದ ದಾಳಿಗಳು, ಜಮ್ಮುವಿನ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಭಾರತ ಮಾತಾ ಕಿ ಜೈ ಎಂದು ಹೇಳಿದ್ದು, ಅಖ್ಲಾಕ್ ಹತ್ಯೆ ಇವೆಲ್ಲ ಕ್ರೋರ ಕೃತ್ಯಗಳು ಪ್ರಣವ್ ಭಾಷಣ ದಿಂದ ಅಳಿಸಿ ಹೋಗುವುದಿಲ್ಲ.

ಲವ್ ಜಿಹಾದ್ ಹೆಸರಿನಲ್ಲಿ ನಡೆಸಿದ ದುಷ್ಕೃತ್ಯಗಳು, ಮತಾಂತರ ತಡೆಯುವ ನೆಪದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿ, ದಾದಿಯರ ಮೇಲೆ ನಡೆದ ಅತ್ಯಾಚಾರ, ಕ್ರೈಸ್ತ ಧರ್ಮ ಪ್ರಚಾರಕ ಗ್ರಹಾಂ ಸ್ಪೈನ್ ಮತ್ತು ಅವರ ಇಬ್ಬರು ಪುಟ್ಟ ಮ್ಕಕಳ ಜೀವಂತ ದಹನ, ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಎರಡು ಸಾವಿರ ಕೊಲೆಗಳು, ಗರ್ಭಿಣಿಯರ ಹೊಟ್ಟೆಗೆ ತ್ರಿಶೂಲ ಚುಚ್ಚಿ ಭ್ರೂಣ ಹೊರಗೆಳೆದ ಪೈಶಾಚಿಕ ಕೃತ್ಯ ಇವೆಲ್ಲವನ್ನು ಜನ ಮರೆಯುವುದಿಲ್ಲ.

ಇವೆಲ್ಲವುಗಳ ಜೊತೆ ಮೋದಿ ಆಡಳಿತದಲ್ಲಿ ಜನ ಸಾಮಾನ್ಯರು ಅನುಭವಿಸುತ್ತಿರುವ ಸಂಕಟ, ಬೆಲೆ ಏರಿಕೆ, ನೋಟು ಅಮಾನ್ಯೀಕರಣ ಇವೆಲ್ಲವುಗಳ ಪರಿಣಾಮವಾಗಿ ಪ್ರತಿಪಕ್ಷಗಳು ಒಂದಾಗಿದ್ದರಿಂದ ಇತ್ತೀಚೆಗೆ ನಡೆದ ಉಪ ಚುನಾವ ಣೆಗಳಲ್ಲಿ ಬಿಜೆಪಿ ಸೋಲು ಇವುಗಳನ್ನೆಲ್ಲ ಮುಚ್ಚಿಕೊಂಡು ತಾನು ಮತ್ತೆ ಮಹಾ ಸಂಪನ್ನು, ರಾಷ್ಟ್ರವಾದಿ ಸಂಘಟನೆ ಎಂದು ಬಿಂಬಿಸಲು ಆರೆಸ್ಸೆಸ್ ಪ್ರಣವ್ ಭಾಷಣಕ್ಕೆ ಅವಕಾಶ ನೀಡಿದೆ.

 ರಾವಣನಿಗೆ ಹತ್ತು ಮುಖಗಳಿದ್ದರೆ ಆರೆಸ್ಸೆಸ್‌ಗೆ ನೂರಾರು ಮುಖಗಳಿವೆ. ಎಬಿವಿಪಿ ಹೆಸರಿನಲ್ಲಿ ಅದು ನಮ್ಮ ಶಿಕ್ಷಣ ರಂಗದಲ್ಲಿ ಕೋಮುವಾದದ ವಿಷ ತುಂಬುತ್ತಿದೆ. ಬಿಜೆಪಿ ಮೂಲಕ ರಾಜಕೀಯ ಅಧಿಕಾರ ವಶಪಡಿಸಿಕೊಂಡು ಜನತಂತ್ರದ ಎಲ್ಲ ಅಂಗ ಗಳನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ. ವನವಾಸಿ ಕಲ್ಯಾಣದ ಹೆಸರಿನಲ್ಲಿ ಆದಿವಾಸಿಗಳನ್ನು ತನ್ನ ಹಿಂಸೆಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ.

ಒಂದೆಡೆ ಗಾಂಧಿ ಸಂಘದ ಶಾಖೆಗೆ ಭೇಟಿ ನೀಡಿದ್ದರು ಎಂದು ಹೇಳುತ್ತಲೇ ಇನ್ನೊಂದೆಡೆ ಗಾಂಧಿ ಹಂತಕ ಗೋಡ್ಸೆಯನ್ನು ಆರಾಧಿಸುತ್ತದೆ. ಸಾಮಾಜಿಕ ಜಾಲ ತಾಣದಲ್ಲಿ ಗಾಂಧಿ, ನೆಹರೂ ಅವರನ್ನು ತೇಜೋವಧೆ ಮಾಡುವ ಪೋಟೊ ಶಾಪ್‌ನಲ್ಲಿ ಪೋಟೊಗಳನ್ನು ಹರಿಯ ಬಿಡುತ್ತದೆ.

ಪ್ರಣವ್ ಮುಖರ್ಜಿಯನ್ನು ಕರೆಯಿಸಿ ಭಾಷಣ ಮಾಡಿದ ಆರೆಸ್ಸೆಸ್ ಬದಲಾಗಿದೆ ಎಂದು ಅನೇಕರು ನಂಬುವಂತೆ ಮಾತನಾಡುತ್ತಾರೆ ಆದರೆ ವಾಸ್ತವವಾಗಿ ಅದು ಬದಲಾಗದೇ ಆಗಾಗ ಸಾಮಾಜಿಕ ಮಾನ್ಯತೆ ಗಳಿಸಲು ಬಣ್ಣ ಬದಲಿಸುತ್ತದೆ.ಇಂಥ ಫ್ಯಾಶಿಸ್ಟ್ ಆರೆಸ್ಸೆಸ್‌ಗೆ ಜೆಪಿ ಚಳವಳಿಯಲ್ಲಿ ಸಾಮಾಜಿಕ ಮಾನ್ಯತೆ ದೊರಕಿತು. ಜೆಪಿಯವರು ಇಂದನ್ನು ನಂಬಿ ಮುಂದಿನ ಅನಾಹುತಗಳಿಗೆಲ್ಲ ಕಾರಣವಾದರು..

 ಆರೆಸ್ಸೆಸ್ ಸಭೆಗಳಲ್ಲಿ ಮುಂಚೆ ಬರೀ ಹಿಂದೂ ರಾಷ್ಟ್ರ ಎನ್ನಲಾಗುತ್ತಿತ್ತು. ಈಗ ಸನಾತನ ಹಿಂದೂ ರಾಷ್ಟ್ರ ಎಂಬ ಘೋಷಣೆ ಕೂಗಲಾಗುತ್ತದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮೆರವಣಿಗೆಯಲ್ಲಿ ಸನಾತನ ಹಿಂದೂ ಧರ್ಮದ ಘೋಷಣೆ ಕೇಳಿ ಬಂದಿದೆ. ಈ ಸನಾತನ ಅಂದರೆ ಏನು? ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ದೇಶದ ಮೇಲೆ ಹೇರುವ ಹುನ್ನಾರ ಇದಾಗಿದೆ.

ನಮ್ಮ ಅನೇಕ ಶೂದ್ರ ಯುವಕರನ್ನು ಆರೆಸ್ಸೆಸ್ ದಾರಿ ತಪ್ಪಿಸಿದೆ. ಬಸವ, ಬುದ್ಧ, ಗಾಂಧಿ, ಅಂಬೇಡ್ಕರ್ ಅರಿವಿಲ್ಲದ ಈ ಯುವಕರು ಹಿಂದುತ್ವದ ಅಮಲೇರಿಸಿಕೊಂಡಿದ್ದಾರೆೆ. ಇಂಥ ದಾರಿ ತಪ್ಪಿದ ಯುವಕರಿಂದಲೇ ಮಾನವತಾವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಳ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶರ ಹತ್ಯೆ ನಡೆಯಿತು. ಈ ಯುವಕರನ್ನು ಪೋಷಿಸಿ, ಬೆಳೆಸಿ, ಪ್ರಚೋದಿಸಿದ ಸಂಘಟನೆ ಯಾವುದು ಎಂಬುದು ಈಗಾಗಲೇ ಮಾಧ್ಯಮಗಳಲ್ಲಿ ಬಂದಿದೆ

   ಈ ಸಂಘಟನೆಗಳು ಹಿಂದೂ ರಾಷ್ಟ್ರ ನಿರ್ಮಾಣ ತಮ್ಮ ಗುರಿ ಎಂದು ಹೇಳಿಕೊಳ್ಳುತ್ತವೆ. ಆರೆಸ್ಸೆಸ್ ರಹಸ್ಯವಾಗಿ ಈ ಸಂಘಟನೆಗಳ ಜೊತೆ ಸಂಪರ್ಕವಿರಿಸಿಕೊಂಡಿ ರುತ್ತದೆ. ಮೇಲ್ನೋಟಕ್ಕೆ ಪ್ರತ್ಯೇಕ ಎಂದು ತೋರಿಸಿಕೊಳ್ಳುತ್ತದೆ. ಆದರೆ ಈ ಹತ್ಯೆಗಳು ನಡೆದಾಗೆಲ್ಲ ಸಂಭ್ರಮಿಸಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ.

ಈ ರಾಷ್ಟ್ರೀಯ ಸರ್ವನಾಶಕ ಸಂಘ ಪರಿವಾರ ದೇಶಕ್ಕೆ ಗಂಡಾಂತರ ಎದುರಾ ಗಿರುವಾಗ ಪ್ರಣವ್ ಮುಖರ್ಜಿ ಅಲ್ಲಿ ಹೋಗಬಾರದಿತ್ತು. ‘‘ಪ್ರಣವ್ ಸಂಘದ ಕಾರ್ಯಕ್ರಮಕ್ಕೆ ಬಂದಿರುವುದೇ ನಮ್ಮ ಗೆಲುವು’’ ಎಂದು ಸಂಘದ ಮಿತ್ರರೊಬ್ಬರು ನನಗೆ ಹೇಳಿದರು. ಹಿಂದೆ ಗಾಂಧಿ ಭೇಟಿ ನೀಡಿದ್ದರು ಎಂದು ಹೇಳುತ್ತಾ ಬಂದಂತೆ ಮುಂದೆ ಪ್ರಣವ್ ಬಂದಿದ್ದಾರೆಂದು ತನ್ನ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ಅದು ಯತ್ನಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂವಾದ ಅಗತ್ಯ ಆರೆಸ್ಸೆಸ್ ಜೊತೆ ಸಂವಾದ ನಡೆಯಲಿ ಎಂದು ಕೆಲವರು ವಾದಿಸುತ್ತಾರೆ. ಆದರೆ ಸಂವಾದ ಸಂಸ್ಕೃತಿಯಲ್ಲಿ ಆರೆಸ್ಸೆಸ್‌ಗೆ ನಂಬಿಕೆಯಿದೆಯೇ? ತನ್ನ ಅಭಿಪ್ರಾಯವನ್ನು ವಿರೋಧಿಸುವ ಭಾಷಣಗಳನ್ನು ಮಾಡಲು ಅದು ಬಿಡುವುದಿಲ್ಲ. ನಾನು ಚಿಕ್ಕಂದಿನಿಂದ ಅದನ್ನು ನೋಡುತ್ತಾ ಬಂದಿದ್ದೇನೆ.
ಕಳೆದ ವರ್ಷ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಉಪಾನ್ಯಾಸಕ್ಕೆ ಹೋಗಿದ್ದ ಹಿರಿಯ ಪತ್ರಕರ್ತ ಸಿದ್ಧಾರ್ಥ ವರದರಾಜ ಅವರನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ. ಎಬಿವಿಪಿ ಗೂಂಡಾಗಳು ಅವರ ಮೇಲೆ ಹಲ್ಲೆ ಮಾಡಿದ್ದರು. ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಹೋದ ಕಡೆಗಳಲ್ಲೆಲ್ಲ ಸಂಘ ಪರಿವಾರ ಗೂಂಡಾಗಿರಿ ನಡೆಸಿ ಸಭೆ ನಡೆಯದಂತೆ ಮಾಡುತ್ತದೆ.

ಸಂವಾದ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲದ ಫ್ಯಾಶಿಸ್ಟ್ ಸಂಘಟನೆ ಆರೆಸ್ಸೆಸ್ ಅದೀಗ ನಮ್ಮ ಯುವ ಜನರ ನಡುವೆ ಪಿಡುಗಿನಂತೆ ಬೆಳೆಯುತ್ತಿದೆ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸಂಘ ಪರಿವಾರದ ಹುನ್ನಾರದ ವಿರುದ್ಧ ಎಲ್ಲಾ ಸಮಾನ ಮನಸ್ಕ ಶಕ್ತಿಗಳು ಒಂದಾಗಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)