varthabharthi

ರಾಷ್ಟ್ರೀಯ

ಮಧ್ಯ ಪ್ರದೇಶ ಸರಕಾರದಿಂದ ಮಂತ್ರಿ ಸ್ಥಾನಮಾನ ಪಡೆದಿದ್ದ ಭಯ್ಯೂಜಿ ಮಹಾರಾಜ್ ಗುಂಡಿಕ್ಕಿ ಆತ್ಮಹತ್ಯೆ

ವಾರ್ತಾ ಭಾರತಿ : 12 Jun, 2018

ಹೊಸದಿಲ್ಲಿ, ಜೂ.12: ಆಧ್ಯಾತ್ಮಿಕ ಗುರು ಭಯ್ಯೂಜಿ ಮಹಾರಾಜ್ ಇಂದು ಇಂದೋರ್ ನಗರದಲ್ಲಿ ಸ್ವಯಂ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರು ಅಲ್ಲಿ ಕೊನೆಯುಸಿರೆಳದಿದ್ದಾರೆ. ಮಧ್ಯ ಪ್ರದೇಶ ಸರಕಾರದಿಂದ ಮಂತ್ರಿ ಸ್ಥಾನಮಾನ ಪಡೆದಿದ್ದ ಐದು ಮಂದಿ ಧಾರ್ಮಿಕ ನಾಯಕರುಗಳಲ್ಲಿ ಒಬ್ಬರಾಗಿದ್ದ ಅವರು ತಮಗೆ ನೀಡಲಾಗಿದ್ದ ಕಾರು ಮತ್ತಿತರ ಸವಲತ್ತುಗಳನ್ನು ನಿರಾಕರಿಸಿದ್ದರು.

ಮಾಜಿ ರೂಪದರ್ಶಿಯಾಗಿದ್ದ ಭಯ್ಯೂಜಿ ಮಹಾರಾಜ್ ಖಿನ್ನತೆಯಿಂದ ಬಳಲುತ್ತಿದ್ದರೆಂದು ಶಂಕಿಸಲಾಗಿದೆ. ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಆಸ್ಪತ್ರೆಯ ಹೊರಗೆ ಜಮಾಯಿಸಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಮಧ್ಯ ಪ್ರದೇಶ ಸರಕಾರ ಮಂತ್ರಿ ಸ್ಥಾನಮಾನ ನೀಡಿತ್ತು.

ಭಯ್ಯೂಜಿ ಮಹಾರಾಜ್ ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಕೌಟುಂಬಿಕ ಕಲಹ ಇದಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಹೇಳುತ್ತಿದ್ದಾರೆ. ಜಮೀನ್ದಾರರೊಬ್ಬರ ಪುತ್ರನಾಗಿರುವ ಭಯ್ಯೂಜಿ ಮಹಾರಾಜ್ ಮೂಲ ಹೆಸರು ಉದಯಸಿಂಗ್ ದೇಶಮುಖ್ ಆಗಿದೆ. ತಮ್ಮ ವಿಲಾಸಿ ಜೀವನಕ್ಕೆ ಹೆಸರುವಾಸಿಯಾಗಿದ್ದ ಅವರು ಇಂದೋರ್ ನಲ್ಲಿ ದೊಡ್ಡ ಆಶ್ರಮವೊಂದನ್ನು ಹೊಂದಿದ್ದರಲ್ಲದೆ ಯಾವತ್ತೂ ತಮ್ಮ ಬಿಳಿ ಮರ್ಸಿಡಿಸ್ ಎಸ್‍ಯುವಿಯಲ್ಲೇ ಸಂಚರಿಸುತ್ತಿದ್ದರು. ಅವರೊಂದಿಗೆ ಸದಾ ಅವರ ಸಣ್ಣ ಅನುಯಾಯಿಗಳ ಗುಂಪು ಇರುತ್ತಿದ್ದು, ಅವರು ತಮ್ಮ ಪ್ರವಾಸ ಸಂದರ್ಭ ಯಾವತ್ತೂ ವಿಲಾಸಿ ರಿಸಾರ್ಟ್‍ಗಳಲ್ಲೇ ತಂಗುತ್ತಿದ್ದರು. ಹಲವಾರು ರಾಜಕಾರಣಿಗಳು ಹಾಗು ಉದ್ಯಮಿಗಳು ಅವರ ಬಳಿ ಆಧ್ಯಾತ್ಮಿಕ ಸಲಹೆಗಳಿಗಾಗಿ ಆಗಮಿಸುತ್ತಿದ್ದರು.

2011ರಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹಾಗೂ ಲೋಕಪಾಲ್ ಮಸೂದೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾಗ ಸತ್ಯಾಗ್ರಹ ಕೈಬಿಡುವಂತೆ ಅವರ ಮನವೊಲಿಸುವಲ್ಲಿ ಭಯ್ಯೂಜಿ ಮಹಾರಾಜ್ ಪ್ರಮುಖ ಪಾತ್ರ ವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)