varthabharthi

ರಾಷ್ಟ್ರೀಯ

ಕುಮಾರಸ್ವಾಮಿಗೆ ಫಿಟ್ನೆಸ್ ಸವಾಲೆಸೆದ ಮೋದಿ: ಪ್ರಧಾನಿಗೆ ಚಾಣಾಕ್ಷ ಉತ್ತರ ನೀಡಿದ ಸಿಎಂ

ವಾರ್ತಾ ಭಾರತಿ : 13 Jun, 2018

ಹೊಸದಿಲ್ಲಿ, ಜೂ.13: ಇತ್ತೀಚೆಗೆ ವಿರಾಟ್ ಕೊಹ್ಲಿಯವರು ನೀಡಿದ್ದ ಫಿಟ್ನೆಸ್ ಚಾಲೆಂಜ್ ಒಪ್ಪಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದು, ಪ್ರಧಾನಿ ಚಾಲೆಂಜ್ ಗೆ ಕುಮಾರಸ್ವಾಮಿ ಜಾಣತನದಿಂದ ಉತ್ತರ ನೀಡಿದ್ದಾರೆ.

"ನನ್ನ ಆರೋಗ್ಯದ ಬಗ್ಗೆ ನೀವು ವಹಿಸಿರುವ ಕಾಳಜಿಗೆ ಧನ್ಯವಾದಗಳು.  ದೈಹಿಕ ಕ್ಷಮತೆಯ ಪ್ರಾಮುಖ್ಯತೆಯ ಮೇಲೆ ನನಗೆ ನಂಬಿಕೆಯಿದೆ ಹಾಗೂ ಈ ನಿಟ್ಟಿನಲ್ಲಿ ನನ್ನ ಬೆಂಬಲವೂ ಇದೆ.  ನನ್ನ ದೈನಂದಿನ ವ್ಯಾಯಾಮದಲ್ಲಿ ಯೋಗ-ಟ್ರೆಡ್ ಮಿಲ್ ಭಾಗವಾಗಿದೆ.  ಆದರೂ ನನ್ನ ರಾಜ್ಯದ ಅಭಿವೃದ್ಧಿ ಕ್ಷಮತೆಯ ಬಗ್ಗೆ ನನಗೆ ಹೆಚ್ಚು ಕಾಳಜಿಯಿದೆ ಹಾಗೂ ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ನಿರೀಕ್ಷಿಸುತ್ತೇನೆ'' ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿಯ ಹೊರತಾಗಿ  ಕಾಮನ್ವೆಲ್ತ್ ಪದಕ ವಿಜೇತರಾದ ಮಣಿಕ ಬಾತ್ರ ಹಾಗೂ 40ರ ಮೇಲ್ಪಟ್ಟ ಐಪಿಎಸ್ ಅಧಿಕಾರಿಗಳಿಗೆ ಮೋದಿ ಫಿಟ್ನೆಸ್ ಚಾಲೆಂಜ್ ಎಸೆದಿದ್ದಾರೆ.

ಮೋದಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ತಮ್ಮ ಫಿಟ್ನೆಸ್  ವೀಡಿಯೋದಲ್ಲಿ ಪ್ರಕೃತಿಯ  ಪಂಚತತ್ವಗಳಿಂದ ಪ್ರೇರಿತವಾದ ಟ್ರ್ಯಾಕ್ ಒಂದರಲ್ಲಿ ಅವರು ನಡೆಯುತ್ತಿರುವುದು ಕಾಣಿಸುತ್ತದೆ.

"ಇಲ್ಲಿದೆ ನನ್ನ ಬೆಳಗ್ಗಿನ ವ್ಯಾಯಾಮದ ಕ್ಷಣಗಳು. ಯೋಗದ ಹೊರತಾಗಿ, ಪಂಚತತ್ವಗಳಾದ ಪೃಥ್ವಿ, ಜಲ,ಅಗ್ನಿ, ವಾಯು ಹಾಗೂ ಆಕಾಶಗಳಿಂದ ಪ್ರೇರಿತವಾದ ಟ್ರ್ಯಾಕ್ ನಲ್ಲಿ ನಡೆಯುತ್ತೇನೆ. ಇದು ನನ್ನನ್ನು ಉಲ್ಲಸಿತಗೊಳಿಸುತ್ತದೆ. ನಾನು ಉಸಿರಾಟದ ವ್ಯಾಯಾಮವನ್ನೂ ಮಾಡುತ್ತೇನೆ'' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)