ಇಸ್ಲಾಂ ದ್ವೇಷಿ ಟ್ವೀಟ್: ಚೆಫ್ ಅತುಲ್ ಕೊಚ್ಚಾರ್ ಜತೆ ಸಂಬಂಧ ಕಡಿದುಕೊಂಡ ದುಬೈಯ ಖ್ಯಾತ ಹೋಟೆಲ್
ದುಬೈ, ಜೂ.13: ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ದ್ವೇಷಿ ಟ್ವೀಟ್ ಮಾಡಿದ್ದ ಪ್ರಸಿದ್ಧ ಮಿಚೆಲಿನ್ ಸ್ಟಾರ್ಡ್ ಸೆಲೆಬ್ರಿಟಿ ಚೆಫ್ ಅತುಲ್ ಕೊಚ್ಚಾರ್ ಅವರೊಂದಿಗಿನ ಸಂಬಂಧವನ್ನು ದುಬೈಯ ಖ್ಯಾತ ಜೆಡಬ್ಲ್ಯು ಮಾರಿಯಟ್ ಮಾರ್ಖಿಸ್ ಹೋಟೆಲ್ ಕಡಿದುಕೊಂಡಿದೆ. ಕೊಚ್ಚಾರ್ ಅವರು ದುಬೈಯ ಈ ಹೋಟೆಲ್ ನ ಪ್ರಶಸ್ತಿ ವಿಜೇತ ರಂಗ್ ಮಹಲ್ ಇಂಡಿಯನ್ ರೆಸ್ಟೋರೆಂಟ್ ನಡೆಸುತ್ತಿದ್ದರು.
"ಅವರ ಇತ್ತೀಚಿಗಿನ ಟ್ವೀಟ್ ಹಿನ್ನೆಲೆಯಲ್ಲಿ ಅವರ ಜತೆಗಿನ ಒಪ್ಪಂದವನ್ನು ಅಂತ್ಯಗೊಳಿಸುತ್ತಿದ್ದೇವೆ. ಅವರು ನಮ್ಮ ರೆಸ್ಟೋರೆಂಟ್ ಜತೆ ಯಾವುದೇ ಸಂಬಂಧವನ್ನು ಇನ್ನು ಹೊಂದಿರುವುದಿಲ್ಲ. ನಮ್ಮ ಜೆಡಬ್ಲ್ಯು ಮಾರಿಯಟ್ ಮಾರ್ಝಿಸ್ ಹೋಟೆಲ್ ನಲ್ಲಿ ನಾವು ವೈವಿಧ್ಯತೆಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತೇವೆ. ರಂಗಮಂಚ್ ತನ್ನ ಅತ್ಯುತ್ತಮ ಗುಣಮಟ್ಟವನ್ನು ಇನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗಲು ಬದ್ಧವಾಗಿದೆ'' ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಬಿಲ್ ಕೆಫ್ರ್ ತಮ್ಮ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ತಮ್ಮ ಟಿವಿ ಶೋ ಕ್ವಾಂಟಿಕೋ ವಿವಾದಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ್ದ ಕೊಚ್ಚಾರ್ ``ಇಸ್ಲಾಂನಿಂದ 2000 ವರ್ಷಗಳಷ್ಟು ಹಿಂದಿನಿಂದಲೂ ಬೆದರಿಕೆಗೊಳಗಾಗಿರುವ ಹಿಂದುಗಳ ಭಾವನೆಗಳನ್ನು ನೀವು ಗೌರವಿಸಿಲ್ಲ ಎಂಬುದು ವಿಷಾದನೀಯ, ಶೇಮ್ ಆನ್ ಯೂ,'' ಎಂದು ಟ್ವೀಟ್ ಮಾಡಿದ್ದರು.
ಆದರೆ ಇದಕ್ಕೆ ಟ್ವಿಟ್ಟರಿಗರು ತೀವ್ರ ವಿರೋಧ ವ್ಯಕ್ತಪಡಿಸಿದಾಗ ತಮ್ಮ ಮಾತುಗಳಿಂದ ಹಿಂದೆ ಸರಿದಿದ್ದ ಕೊಚ್ಚಾರ್ "ಉದ್ವೇಗದ ಭರದಲ್ಲಿ ದೊಡ್ಡ ತಪ್ಪು ಮಾಡಿದೆ ಹಾಗೂ ಇಸ್ಲಾಂ 1,400 ವರ್ಷಗಳ ಹಿಂದೆ ಆರಂಭಗೊಂಡಿತ್ತು. ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಕ್ಷಮೆ ಕೋರುತ್ತೇನೆ, ನಾನು ಇಸ್ಲಾಮೋಫೋಬಿಕ್ ಅಲ್ಲ'' ಎಂದು ಬರೆದಿದ್ದರು.
ಆದರೆ ಕೊಚ್ಚಾರ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸದೆ ಕೇವಲ ಇಸ್ಲಾಂ ಯಾವಾಗ ಆರಂಭಗೊಂಡಿತ್ತೆಂಬ ಮಾಹಿತಿ ತಪ್ಪಾಗಿತ್ತು ಎಂಬ ಬಗ್ಗೆ ಮಾತ್ರ ಹೇಳಿದ್ದರಿಂದ ಅವರ ಟ್ವೀಟ್ ಮತ್ತಷ್ಟು ಟೀಕೆಗೆ ಗುರಿಯಾಗಿದ್ದರು.
ಮಂಗಳವಾರ ಇನ್ನೊಂದು ಟ್ವೀಟ್ ಮಾಡಿದ ಕೊಚ್ಚಾರ್ ``ನನ್ನ ಮುಸ್ಲಿಂ ಸ್ನೇಹಿತರು ಹಾಗೂ ಇಸ್ಲಾಮಿಕ್ ಸಮುದಾಯದ ಮಂದಿಯಿಂದ ಬೇಷರತ್ ಕ್ಷಮೆ ಕೋರುತ್ತೇನೆ. ನನ್ನ ಟ್ವೀಟ್ ನಿಂದ ಅವಮಾನ ಮಾಡಿದ್ದೇನೆ. ಅವು ತಪ್ಪು ಹಾಗೂ ಸಂವೇದನಾರಹಿತವಾಗಿತ್ತು,'' ಎಂದು ತಪ್ಪೊಪ್ಪಿಕೊಂಡಿದ್ದಾರೆ.