varthabharthi

ವಿಶೇಷ-ವರದಿಗಳು

ಅರ್ಧ ಸಂಪತ್ತು ದಾನ ಮಾಡಲು ನಿರ್ಧರಿಸಿದ ಉದ್ಯಮಿಗೆ ಉಪವಾಸದ ತಿಂಗಳ ಜೊತೆ ಅವಿನಾಭಾವ ಸಂಬಂಧ

ನನ್ನ ಸೇವಾ ಚಟುವಟಿಕೆಗಳಿಗೆ ಪ್ರೇರಣೆ ರಮಝಾನ್: ಬಿ.ಆರ್. ಶೆಟ್ಟಿ

ವಾರ್ತಾ ಭಾರತಿ : 13 Jun, 2018
ತುಫೈಲ್ ಮುಹಮ್ಮದ್

"ಕೆಲ ಸಮಯದ ಹಿಂದೆ ನಾನು "ದ ಗಿವಿಂಗ್ ಪ್ಲೆಜ್” ಪ್ರತಿಜ್ಞಾಪತ್ರಕ್ಕೆ ಸಹಿ ಮಾಡಿದಾಗ, ಅದು ರಮಝಾನ್ ತಿಂಗಳಲ್ಲಿ ಅಧಿಕೃತಗೊಳ್ಳಬಹುದು ಎಂದು ನನಗೆ ತಿಳಿದಿರಲಿಲ್ಲ. ಸಹಜವಾಗಿಯೇ ನನಗೆ ಇದು ಅತೀವ ಸಂತಸವಾಗಿದೆ. ಅದು ಅಲ್ಲಾಹನ ಕೃಪೆ ಎಂದು ನಾನು ಭಾವಿಸಿದ್ದೇನೆ"… ಇದು ಖ್ಯಾತ ಅನಿವಾಸಿ ಉದ್ಯಮಿ, ಎನ್‍ಎಂಸಿ ಹೆಲ್ತ್ ಕಂಪೆನಿಯ ಸ್ಥಾಪಕ ಬಿ.ಆರ್.ಶೆಟ್ಟಿಯವರ ಮಾತು.

ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಪತ್ನಿ ಮೆಲಿಂಡಾ ಮತ್ತು ವಾರೆನ್ ಬಫೆಟ್ 2010ರಲ್ಲಿ ಆರಂಭಿಸಿದ ವಿನೂತನ ಯೋಜನೆ "ದ ಗಿವಿಂಗ್ ಪ್ಲೆಜ್” ಸೇರಿದ ಬಗ್ಗೆ ಬಿ.ಆರ್. ಶೆಟ್ಟಿಯವರು ಈ ಮಾತುಗಳನ್ನಾಡಿದರು. ಇದು ವಿಶ್ವದ ಅತಿ ಶ್ರೀಮಂತರು ಹಾಗೂ ಅವರ ಕುಟುಂಬದವರು ತಮ್ಮ ಸಂಪತ್ತಿನ ದೊಡ್ಡಭಾಗವನ್ನು ಸೇವಾ ಚಟುವಟಿಕೆಗಳಿಗಾಗಿ ವಿನಿಯೋಜಿಸುವ ಬದ್ಧತೆಯ ಕುರಿತ ಪ್ರತಿಜ್ಞಾಪತ್ರ.

“ನನ್ನ ಅರ್ಜಿ ರಮಝಾನ್ ವೇಳೆ ಅಧಿಕೃತಗೊಂಡದ್ದು ವಿಶೇಷವೆನಿಸಿದೆ. ರಮಝಾನ್ ತಿಂಗಳಲ್ಲಿ ಅಂದರೆ ದಾನದ ತಿಂಗಳಲ್ಲಿ ನಡೆದ ಈ ಬೆಳವಣಿಗೆ ಅತೀವ ಹರ್ಷ ತಂದಿದೆ" ಎಂದು ಬಿ.ಆರ್.ಶೆಟ್ಟಿ ಹೇಳುತ್ತಾರೆ.

ವಿಶ್ವದೆಲ್ಲೆಡೆ ಹಲವು ಸೇವಾ ಕಾರ್ಯಕ್ಕಾಗಿ ತಮ್ಮ ಸಂಪತ್ತಿನ ಅರ್ಧದಷ್ಟು ಭಾಗವನ್ನು ನೀಡುವ ಪ್ರತಿಜ್ಞೆ ಕೈಗೊಂಡ 14 ಮಂದಿ ಯುಎಇ ದಾನಿಗಳ ಪೈಕಿ ಇವರೂ ಒಬ್ಬರು. ಇವರಂತೆಯೇ ವಿಪಿಎಸ್ ಹೆಲ್ತ್‍ಕೇರ್‍ನ ಡಾ.ಶಂಶೀರ್ ವಾಯಲಿಲ್ ಕೂಡಾ ಈ ದಾನಿಗಳ ಪಟ್ಟಿಯಲ್ಲಿದ್ದಾರೆ.

"ನನ್ನದು ಇಸ್ಲಾಮ್ ಧರ್ಮವಾಗದಿದ್ದರೂ, ಉಪವಾಸದ ಮೌಲ್ಯ ನನಗೆ ಗೊತ್ತು. ಹಿಂದೂಗಳಲ್ಲಿ ನಮ್ಮದೇ ಆದ ಉಪವಾಸದ ಸಂಪ್ರದಾಯಗಳಿವೆ. ನನ್ನ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರೆ. ಇದು ಹಸಿದ ಜನರ ಮತ್ತು ಬಡವರ ಬಗೆಗಿನ ನಮ್ಮ ಅನುಭೂತಿಗೆ ಕೂಡಾ ನೆರವಾಗುತ್ತದೆ" ಎನ್ನುತ್ತಾರೆ ಬಿ.ಆರ್.ಶೆಟ್ಟಿ.

"ನಾನು ರಮಝಾನ್ ಉಪವಾಸ ಆಚರಿಸುತ್ತಿದ್ದೆ. ಕಳೆದ ಎರಡು ದಶಕಗಳ ಹಿಂದೆ ಉಪವಾಸ ಕೈಗೊಳ್ಳುತ್ತಿದ್ದೆ. ಈ ಬಗ್ಗೆ ನನಗೆ ಅತೀವ ಸಂತಸವಿದೆ. ಉಪವಾಸದ ವೇಳೆ ನನಗೆ ಆರೋಗ್ಯವಂತನಾಗಿದ್ದೇನೆ ಎಂಬ ಭಾವನೆ ಬರುತ್ತದೆ. ಆದರೆ ಕಳೆದ ಹತ್ತು ವರ್ಷಗಳಿಂದ ನನಗೆ ಮಧುಮೇಹವಿದೆ. ಆದ್ದರಿಂದ ಇನ್ನು ಮೇಲೆ ನನಗೆ ಉಪವಾಸ ಸಾಧ್ಯವಿಲ್ಲ. ಆದರೆ ಆಹಾರ ನಿಯಂತ್ರಿಸುತ್ತೇನೆ. ಉಪವಾಸ ದೇಹ ಹಾಗೂ ಮನಸ್ಸಿಗೆ ಒಳ್ಳೆಯದು ಎಂಬ ಭಾವನೆ ನನ್ನದು" ಎಂದವರು ವಿವರಿಸುತ್ತಾರೆ.

"ನೀವು ಉಪವಾಸ ಮಾಡಿದಾಗ, ನಿಮಗೆ ನೀರು ಕುಡಿಯಬೇಕು ಎನಿಸುವುದಿಲ್ಲ. ನೀವು ಹೆಚ್ಚುವರಿ ಶಕ್ತಿ ಹಾಗೂ ಬಲ ಪಡೆಯುತ್ತೀರಿ. ಆದ್ದರಿಂದ ಧರ್ಮಗಳು ಉಪವಾಸವನ್ನು ಸೂಚಿಸಿವೆ. ನಾನು ಉಪವಾಸವನ್ನು ಆಸ್ವಾದಿಸುತ್ತೇನೆ. ಇದು ದೇಹವನ್ನು ವಿಷಮುಕ್ತಗೊಳಿಸುತ್ತದೆ. ನಾನು ನಿರಂತರ ಉಪವಾಸದಲ್ಲಿದ್ದಾಗ ಚರ್ಮ ಕಾಂತಿಯುತವಾಗಿರುತ್ತದೆ" ಎಂದು ಭಾರತೀಯ ಮೂಲದ ಸಮುದಾಯಗಳು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶೆಟ್ಟಿ ತಮ್ಮ ಅನುಭವವನ್ನು ಹಂಚಿಕೊಂಡರು.

"ನಾನು ನಿಯಮಿತವಾಗಿ ಇಫ್ತಾರ್‍ನಲ್ಲಿ ಭಾಗವಹಿಸುತ್ತೇನೆ. ಪ್ರತಿ ದಿನ ರಾತ್ರಿ ನಾನು ಕ್ರೌನ್ ಪ್ರಿನ್ಸ್ ಕೋರ್ಟ್‍ಗೆ ಹೋಗುತ್ತೇನೆ. ಭ್ರಾತೃತ್ವ ಹಾಗೂ ಶಿಸ್ತು ನನಗೆ ಹೆಚ್ಚು ಇಷ್ಟವಾಗಿದೆ. ನೀವು ಇತರ ಯಾವುದೇ ಸಮುದಾಯದಲ್ಲಿ ಇಂಥ ಶಿಸ್ತು ಕಾಣಲು ಸಾಧ್ಯವೇ?, ಯಾರೂ ನಿಮ್ಮನ್ನು ಗಮನಿಸುವುದಿಲ್ಲ. ಆದರೂ ನೀವು ಉಪವಾಸ ಮಾಡುತ್ತೀರಿ. ಯಾರೂ ನಿಮ್ಮನ್ನು ಬಲವಂತ ಮಾಡುವುದಿಲ್ಲ. ಆದರೂ ನೀವು ಉಪವಾಸ ಮಾಡುತ್ತೀರಿ. ಇದು ರಮಝಾನ್ ನ ಸೊಬಗು. ಇದು ನಿಮ್ಮನ್ನು ಸ್ವಯಂಶಿಸ್ತಿನ ಹಾಗೂ ಸ್ವಯಂ ಬದ್ಧತೆಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ" ಎಂದು ಅವರು ವಿವರಿಸುತ್ತಾರೆ.

“ಈ ಪವಿತ್ರ ತಿಂಗಳಲ್ಲಿ ನನಗೆ ಶೇಖ್ ಝಾಯೆದ್ ಅವರ ನೆನಪಾಗುತ್ತದೆ. ಅವರು ಕಾಲವಾದ ದಿನ ಇಂದಿಗೂ ನನಗೆ ನೆನಪಿದೆ. ಅದು ರಮಝಾನ್ ನ 19ನೇ ದಿನ. ಅವರು ಮೃತಪಟ್ಟ ದಿನ ಜಗತ್ತಿನಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ. ಅವರು ವಿಶ್ವನಾಯಕ. ಅವರು ನಿಧನರಾದಾಗ ನಾವೆಲ್ಲ ಸ್ತಂಭೀಭೂತರಾಗಿದ್ದೆವು. ಅವರಷ್ಟು ದಯಾಳು ಯಾರೂ ಇರಲಾರರು. ಒಂದು ದಿನ ತಮ್ಮ ಬಳಿಗೆ ನನ್ನನ್ನು ಕರೆದ ಶೇಖ್ ಝಾಯೆದ್, ಪಾಸ್‍ಪೋರ್ಟ್ ನೀಡುವುದಾಗಿ ಹೇಳಿದರು. ಈ ದೇಶಕ್ಕೆ ನಾನು ನೀಡಿದ, ಅದರಲ್ಲೂ ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಧನ್ಯವಾದ ಹೇಳಿದರು. ಶೇಕ್ ಝಾಯೆದ್ ನಮ್ಮ ಔಷಧ ಉದ್ಯಮಕ್ಕೆ ಅಡಿಗಲ್ಲು ಹಾಕಿದವರಲ್ಲೊಬ್ಬರು. ಮುಸಾಫಾದಲ್ಲಿರುವ ನಮ್ಮ ಫ್ಯಾಕ್ಟರಿ ಸ್ಥಳಕ್ಕೆ ಮೂರು ಬಾರಿ ಬಂದಿದ್ದರು. ಅಬುಧಾಬಿಯ ಮೊಟ್ಟಮೊದಲ ಔಷಧ ಕೈಗಾರಿಕಾ ಘಟಕ ನಿಯೋಫಾರ್ಮಾವನ್ನು ನಿರ್ಮಿಸುತ್ತಿದ್ದಾಗ, ನನ್ನನ್ನು ಅರಮನೆಗೆ ಕರೆದಿದ್ದರು. ಯಾರೂ ಕನಸಿನಲ್ಲೂ ಕಾಣದಂತಹ ಕಟ್ಟಡವನ್ನು ನೀವು ನಿರ್ಮಿಸಿದ್ದೀರಿ ಎಂದು ಹೊಗಳಿದರು" ಎಂದು ಬಿ.ಆರ್.ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ನೆನಪುಗಳ ಬುತ್ತಿ ಮತ್ತಷ್ಟು ಹಿಂದಕ್ಕೆ ಹೋದಾಗ ಅವರು ಭಾವುಕರಾದರು. "ನಾಲ್ಕು ದಶಕಗಳ ಹಿಂದೆ ನಾನು ಅಬುಧಾಬಿಗೆ ಬಂದದ್ದು ನನ್ನ ಸಹೋದರಿಯ ಮದುವೆಗಾಗಿ ಮಾಡಿದ್ದ ಸಾಲ ತೀರಿಸುವ ಉದ್ದೇಶದಿಂದ. ನನ್ನ ಶ್ರಮ ಬಿಟ್ಟರೆ ಉಳಿದಂತೆ ಏನೂ ಇರಲಿಲ್ಲ. ಔಷಧ ಮಾರಾಟ ಪ್ರತಿನಿಧಿಯಾಗಿ ನಾನು ಕೆಲಸ ಆರಂಭಿಸಿದೆ. ಆಗ ನಮ್ಮ ದೇಶದಲ್ಲಿ ಫಾರ್ಮಸಿಸ್ಟ್‍ಗಳಿಗೆ ಕೆಲಸ ಇರಲಿಲ್ಲ. ಬಹುಶಃ ನಾನು ದೇಶದ ಮೊಟ್ಟಮೊದಲ ಹೊರದೇಶದ ಮಾರಾಟ ಪ್ರತಿನಿಧಿ. ಬಟರ್ ಕೂಕಿಸ್, ನಿಡೊ (ಇನ್‍ಸ್ಟಂಟ್ ಕ್ರೀಮ್) ಪೌಡರ್, ಟೆಲಿಫೋನ್ ಡೈರೆಕ್ಟರಿ, ಜಾಹೀರಾತು ಸ್ತಂಭ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೆ" ಎಂದು ನೆನಪಿಸಿಕೊಂಡರು.

"ನಾನು ಸಾಲ ತೀರಿಸಿದ ಬಳಿಕ ನಾನು ಸಂಸ್ಥಾಪಕರ ಕನಸು ನನಸುಗೊಳಿಸುವ ಪ್ರಯತ್ನ ಮಾಡಿದೆ. ಒಂದು ದಿನ ಶೇಖ್ ಝಾಯೆದ್ ಅವರು ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಬಗ್ಗೆ ಕಪ್ಪು ಬಿಳುಪು ಟಿವಿ ಮೂಲಕ ಮಾತನಾಡುತ್ತಿದ್ದರು. ಅವರು ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದರು. ಆದರೆ ಈ ಕ್ಷೇತ್ರದಲ್ಲಿ ಮತ್ತಷ್ಟು ಮಾಡುವ ಅಗತ್ಯವಿತ್ತು. ನಾನು ದೇಶ ಬಿಟ್ಟಾಗ ನನ್ನ ತಾಯಿ ಕೂಡಾ, ಸೇವಾ ವಹಿವಾಟು ಕೈಗೊಳ್ಳುವಂತೆ ಸೂಚಿಸಿದ್ದರು. ಈ ಬಗ್ಗೆ ಏನಾದರೂ ಮಾಡಬೇಕು ಎಂಬ ದೃಢ ನಿರ್ಧಾರ ನನ್ನದಾಗಿತ್ತು. ಹೀಗೆ ಮೊಟ್ಟಮೊದಲ ಖಾಸಗಿ ವೈದ್ಯಕೀಯ ಕೇಂದ್ರ ಎನ್‍ಎಂಸಿ ಆರಂಭವಾಯಿತು" ಎಂದು ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

Courtesy: www.thenational.ae

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)