varthabharthi

ರಾಷ್ಟ್ರೀಯ

ತ್ರಿಪುರಾದಲ್ಲಿ ಭಾರೀ ಮಳೆ: 3,000 ಮಂದಿ ನಿರ್ವಸಿತರು

ವಾರ್ತಾ ಭಾರತಿ : 13 Jun, 2018

ಅಗರ್ತಲಾ, ಜೂ. 13: ತ್ರಿಪುರಾದಲ್ಲಿ ಕಳೆದ 24 ಗಂಟೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 3000ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡಿವೆ. ಕಳೆದ 24 ಗಂಟೆಯಲ್ಲಿ 86 ಎಂಎಂ ಮಳೆ ಸುರಿದಿರುವುದಕ್ಕೆ ರಾಜ್ಯ ಸಾಕ್ಷಿಯಾಯಿತು. ಮುಂದಿನ 24 ಗಂಟೆಯೂ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.

ಮನೆ ಕಳೆದುಕೊಂಡ 3472 ಕುಟುಂಬಗಳು ರಾಜ್ಯ ಸರಕಾರ ರಾಜ್ಯಾದ್ಯಂತ ಸಿದ್ಧಪಡಿಸಿದ 64 ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ನೆರೆಯಿಂದ ಸುಮಾರು 41ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ವರದಿ ತಿಳಿಸಿದೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಆತ ದಕ್ಷಿಣ ಸಬ್ರೂಮ್‌ನಲ್ಲಿ ನೆರೆಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಧಲಾಯಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಭಾರೀ ಮಳೆಯಿಂದ 17 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಖೊವಾಯಿ ಜಿಲ್ಲೆ 11 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಗೋಮತಿಯಲ್ಲಿ ಒಂದು ಕಡೆ ಹಾಗೂ ಧಲಾಯಿಯಲ್ಲಿ 5 ಕಡೆ ಭೂಕುಸಿತ ಉಂಟಾಗಿದೆ ಎಂದು ಅದು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)