varthabharthi

ಕರಾವಳಿ

ಬಂಟ್ವಾಳ: ಹಲ್ಲೆ ಪ್ರಕರಣ; ನಾಲ್ಕು ಮಂದಿ ಆರೋಪಿಗಳು ಸೆರೆ

ವಾರ್ತಾ ಭಾರತಿ : 13 Jun, 2018

ಬಂಟ್ವಾಳ, ಜೂ. 13: ಎರಡು ದಿನಗಳ ಹಿಂದೆ ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪಂಜಿಕಲ್ಲಿನ ಕಜೆಬೈಲ್ ನಿವಾಸಿ ದೀಪಕ್ (27), ಬಿ.ಸಿ.ರೋಡ್ ಅಗ್ರಬೈಲ್ ನಿವಾಸಿ ಪವನ್ (26), ಬಂಟ್ವಾಳ ನಿವಾಸಿಗಳಾದ ಶೈಲೇಶ್ (26), ರಂಜೀತ್ (25) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನುಳಿದಂತೆ ಪ್ರಮುಖ ಆರೋಪಿಗಳಾಗಿ ಸುರೇಂದ್ರ ಬಂಟ್ವಾಳ, ತಿಲಕ್, ಮನೋಹರ್, ಪ್ರದೀಪ್, ಸತೀಶ ಎಂಬವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಳ್ಳಲು ಹಣಕಾಸು ಸಹಿತ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಆರೋಪದಲ್ಲಿ ಈ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ ಮಧ್ಯಾಹ್ನ ಬಡ್ಡಕಟ್ಟಿಯಲ್ಲಿರುವ ಹೊಟೇಲೊಂದಕ್ಕೆ ಊಟಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ ಮಾಣಿ ಹಾಗೂ ಪುಪ್ಷರಾಜ್ ಎಂಬವರಿಗೆ ಸುರೇಂದ್ರ ಬಂಟ್ವಾಳ ಮತ್ತಿತರರು ಹಲ್ಲೆಗೈದು, ಕೊಲೆಗೆ ಯತ್ನಿಸಿದ್ದರು ಎಂದು ದೂರಲಾಗಿತ್ತು. ಸುರೇಂದ್ರ ಬಂಟ್ವಾಳ ನಡುರಸ್ತೆಯಲ್ಲಿ ತಲವಾರು ಝಳಪಿಸಿ ಅವಾಚ್ಯ ಶಬ್ದಗಳಿಮದ ನಿಂದಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರವಿವಾರ ರಾತ್ರಿ ಬಂಟ್ವಾಳ ಬೈಪಾಸ್‌ನಲ್ಲಿರುವ ಸೆಲೂನ್‌ಗೆ ನುಗ್ಗಿ ದೀಕ್ಷಿತ್ ಎಂಬವರಿಗೆ ಭುವಿತ್ ಮತ್ತಿತರರು ಹಲ್ಲೆಗೈದಿದ್ದರು ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಮರದಿನ ಬಿಜೆಪಿ ಕಾರ್ಯಕರ್ತರ ಕೊಲೆಯತ್ನ ನಡೆದಿತ್ತು ಎಂದು ದೂರಲಾಗಿದೆ.

ಈ ಎರಡು ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದು, ಇದೀಗ ಘಟನೆಯ ಬಳಿಕ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ನಾಲ್ವರನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)