varthabharthi

ಬೆಂಗಳೂರು

ಕೊಲೆ ಬೆದರಿಕೆ ಆರೋಪ

ಅಗ್ನಿ ಶ್ರೀಧರ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

ವಾರ್ತಾ ಭಾರತಿ : 13 Jun, 2018

ಬೆಂಗಳೂರು, ಜೂ.13: ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ಕೊಲೆ ಬೆದರಿಕೆ ಆರೋಪದಡಿ ಯಲಹಂಕ ಠಾಣೆ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ದೂರುದಾರನ ಹೇಳಿಕೆ ಮೇರೆಗೆ ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸೇರಿಸಲಾಗಿದ್ದು, ಆರೋಪದಿಂದ ಕೈಬಿಡುವಂತೆ ಕೋರಿ ಅಗ್ನಿ ಶ್ರೀಧರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೆ.ಎನ್ ಫಣೀಂದ್ರ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಹಾಜರಿದ್ದ ದೂರುದಾರ ಟಾಟಾ ರಮೇಶ್ ತಾನು ತಪ್ಪು ಕಲ್ಪನೆಯಿಂದ ದೂರು ನೀಡಿದ್ದೆ. ಆರೋಪಿಸಿರುವ ವ್ಯಕ್ತಿಗಳಿಗೂ ತನಗೂ ಯಾವುದೇ ವೈಮನಸ್ಸಿಲ್ಲ ಎಂಬ ಲಿಖಿತ ಹೇಳಿಕೆಯನ್ನು ಪೀಠಕ್ಕೆ ಸಲ್ಲಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಅಗ್ನಿ ಶ್ರೀಧರ್, ಒಂಟೆ ರೋಹಿತ್ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಬೆಂಗಳೂರು ಉತ್ತರ ತಾಲೂಕಿನ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಕೊಲೆಯಾದ ಕೆಲ ದಿನಗಳ ಬಳಿಕ ಒಂಟೆ ರೋಹಿತ್ ಮತ್ತಿತರರು ತನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದ ಯಲಹಂಕ ನಿವಾಸಿ ಟಾಟಾ ರಮೇಶ್ ಎಂಬಾತ ಯಲಹಂಕ ಠಾಣೆ ಪೊಲೀಸರಿಗೆ ದೂರು ನೀಡಿದ್ದ. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.

ದೂರಿನ ವಿಚಾರಣೆಯ ಆರಂಭದಲ್ಲಿ ಅಗ್ನಿ ಶ್ರೀಧರ್ ಹೆಸರು ದಾಖಲಿಸಿಕೊಂಡಿಲ್ಲದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ ಅಗ್ನಿ ಶ್ರೀಧರ್ ಹೆಸರನ್ನೂ ದಾಖಲಿಸಿದ್ದರು. ಕೊಲೆ ಬೆದರಿಕೆ ಆರೋಪಕ್ಕೆ ಒಳಗಾಗಿದ್ದ ಒಂಟೆ ರೋಹಿತ್ ಮತ್ತಿತರರಿಗೆ ಆಶ್ರಯ ಕೊಟ್ಟಿದ್ದಾರೆಂಬ ಆರೋಪವನ್ನು ಅಗ್ನಿ ಶ್ರೀಧರ್ ಅವರ ಮೇಲೆ ಹೊರಿಸಲಾಗಿತ್ತು.

ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಅಗ್ನಿ ಶ್ರೀಧರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ದೂರುದಾರನ ಹೇಳಿಕೆ ಮೇರೆಗೆ ಪ್ರಕರಣವನ್ನು ವಜಾಗೊಳಿಸಿದೆ.

ತನ್ನನ್ನು ಕೊಲೆ ಮಾಡುವುದಾಗಿ ಅಗ್ನಿ ಶ್ರೀಧರ್ ಬೆಂಬಲಿಗರು ಬೆದರಿಸಿದ್ದಾರೆ ಎಂದು ದೂರು ನೀಡಿ, ಇದೀಗ ನ್ಯಾಯಾಲಯದಲ್ಲಿ ‘ತಪ್ಪು ಕಲ್ಪನೆಯಿಂದಾಗಿ ದೂರು ನೀಡಿದ್ದೆ’ ಎಂದು ಉಲ್ಟಾ ಹೊಡೆದಿರುವ ಟಾಟಾ ರಮೇಶ್ ಯಲಹಂಕ ಪೊಲೀಸ್ ಠಾಣೆಯ ರೌಡಿ ಶೀಟರ್. ಯಲಹಂಕದ ಕಾಮಾಕ್ಷಮ್ಮ ಲೇಔಟ್ ನಿವಾಸಿಯಾಗಿರುವ ರಮೇಶ್ ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಇದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ತನಗೆ ರೋಹಿತ್ ಮತ್ತಿತರರು ಕೊಲೆ ಬೆದರಿಕೆ ಹಾಕಿದ್ದಾರೆಂದು 2016ರ ಜನವರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದ. ಇದೀಗ ರಮೇಶ್ ಉಲ್ಟಾ ಹೊಡೆದಿರುವುದು ಅಪರಾಧ ಲೋಕದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)